ಕಲಬುರಗಿ: ರಾಯಚೂರ ಉಪವಿಭಾಗದ ಸಹಾಯಕ ಆಯುಕ್ತರಾಗಿದ್ದು, ಹಾಗೂ ಪ್ರಸ್ತುತ ಚಿಕ್ಕೋಡಿಯ ಉಪವಿಭಾಗದ ದಂಡಾಧಿಕಾರಿ ಶ್ರೀಮತಿ ಮಹಿಬೂಬಿ ಎಂ.ಕಾರಟಗಿ (ಕೆ.ಎ.ಎಸ್) ಅವರು ಪ್ರತಿಷ್ಠಿತ “ಶ್ರೀಮಂತ್ರಾಲಯ ಪರಿಮಳ” ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.
ಮಂತ್ರಾಲಯ ಶ್ರೀರಾಘವೇಂದ್ರ ಸ್ವಾಮಿಗಳ ಶ್ರೀಕ್ಷೇತ್ರದಲ್ಲಿ ಇದೇ ಮಾರ್ಚ 17 ರ ಸಂಜೆ ಜರುಗುವ ಕಾರ್ಯಕ್ರಮದಲ್ಲಿ ಮಹಿಬೂಬಿ ಎಂ.ಕಾರಟಗಿ ಅವರಿಗೆ ಪರಮಪೂಜ್ಯ ಶ್ರೀಶ್ರೀಪಾದಂಗಳವರು ಪ್ರಶಸ್ತಿ ಪ್ರದಾನಮಾಡಿ, ಸನ್ಮಾನಿಸಿ ಆಶೀರ್ವದಿಸಲಿದ್ದಾರೆ.
ಪ್ರತಿಷ್ಠಿತ ಪ್ರಶಸ್ತಿಗೆ ಆಯ್ಕೆಯಾದ ಎಂ.ಎಂ.ಕಾರಟಗಿ ಅವರಿಗೆ ಸಹೋದರ ಕಲಬುರಗಿಯ ಹಿರಿಯ ಪತ್ರಕರ್ತ ನಜೀರಮಿಯಾನ್ ಹಟ್ಟಿ ಸೇರಿದಂತೆ ಅರಕೇರ, ಹಟ್ಟಿಚಿನ್ನದ ಗಣಿ ಮತ್ತು ಕಾರಟಗಿಯ ಬಂಧು ಮಿತ್ರರು ಹರ್ಷ ವ್ಯಕ್ತಪಡಿಸಿ ಶುಭ ಹಾರೈಸಿದ್ದಾರೆ.
ಪ್ರಶಸ್ತಿ ಸಮರ್ಪಣೆ: ಇದೇ 2024ನೇ ಸಾಲಿನ ಜಗತ್ಪ್ರಸಿದ್ಧ “ಮಂತ್ರಾಲಯಂ ಪರಿಮಳ” ಪ್ರಶಸ್ತಿಗೆ ತಮ್ಮನ್ನು ಆಯ್ಕೆ ಮಾಡಿದ್ದನ್ನು ಕೇಳಿ ಅತಿವ ಸಂತೋಷವಾಯಿತು ಎಂದು ಶ್ರೀಮತಿ ಮಹಿಬೂಬಿ ಎಂ.ಕಾರಟಗಿ ಅವರು ತಿಳಿಸಿದ್ದಾರೆ.
ನಿಜವಾಗಲೂ ಇದು ಕನಸು ನೆನಸೋ ನಂಬಲಾಗುತ್ತಿಲ್ಲ. ಈ ಪ್ರಶಸ್ತಿಯನ್ನು ನನ್ನ ತಂದೆಯವರಾದ ದಿವಂಗತ ಅಬ್ದುಲ್ ಸಾಬ್ ಅರಕೆರರವರಿಗೆ ಹಾಗೂ ನನ್ನ ಕುಟುಂಬ ಪರಿವಾರದವರಿಗೆ ಅರ್ಪಿಸುತ್ತೇನೆ ಎಂದು ಹೇಳಿದ್ದಾರೆ.
ತಾವು ಈ ಹಿಂದೆ ಸಹ ಕುಟುಂಬ ಪರಿವಾರ ಸಮೇತ ಸ್ವಾಮಿಯವರ ಶ್ರೀಮಠಕ್ಕೆ ಭೇಟಿ ನೀಡಿ ಆಶೀರ್ವಾದ ಪಡೆಯುತ್ತಾ ಬಂದಿದ್ದೇನೆ ಮಠದ ರಾಯರಾದ ಶ್ರೀ ರಾಘವೇಂದ್ರ ಸ್ವಾಮೀಜಿಯವರು ಸ್ವಯಂ ಖುದ್ದಾಗಿ ಆಶೀರ್ವಾದ ಮಾಡಿದ್ದಾರೆ ಎಂದು ಭಾವಿಸುತ್ತೇನೆ.
ಈ ಪ್ರಶಸ್ತಿಯಿಂದ ನನ್ನ ಜವಾಬ್ದಾರಿ ಹೆಚ್ಚಾಗಿದ್ದು, ಯಾವುದೇ ಭೇದ ಭಾವವಿಲ್ಲದೆ ಮನುಕುಲದ ಶ್ರೇಯಾಭಿವೃದ್ಧಿಗೆ ಕೆಲಸ ಮಾಡಲು ಹುಮ್ಮಸ್ಸು ಹೆಚ್ಚಾದಂತಾಗಿದೆ. ತಮ್ಮ ಹಾಗೂ ಕುಟುಂಬದವರ ಮೇಲೆ ಶ್ರೀರಾಯರ ಆಶೀರ್ವಾದ ಸದಾ ಇರಲಿ ಎಂದು ಪ್ರಾರ್ಥಿಸುತ್ತೇನೆ ಎಂದು ಅವರು ಹೇಳಿದ್ದಾರೆ.