ಸೋಶಿಯಲ್ ಮೀಡಿಯಾದಲ್ಲಿನ ತಪ್ಪು ಆರೋಗ್ಯ ಮಾಹಿತಿ ನಂಬಬೇಡಿ

0
236

ಕಲಬುರಗಿ : ಇಂದಿನ ಡಿಜಿಟಲ್ ತಂತ್ರಜ್ಞಾನದ ಸಾಮಾಜಿಕ ಮಾಧ್ಯಮಗಳಲ್ಲಿ ಕೆಲವರು ಸ್ವಯಂ ವೈದ್ಯರಾಗಿ ಆರೋಗ್ಯದ ಕುರಿತು ತಪ್ಪು ಮಾಹಿತಿಯನ್ನು ಹಂಚುತ್ತಿದ್ದಾರೆ. ಇದು ತುಂಬಾ ಅಪಾಯಕಾರಿ ಬೆಳವಣಿಗೆ. ಆದರಿಂದ ಮಹಿಳೆಯರು ಸಾಮಾಜಿಕ ಮಾಧ್ಯಮಗಳಲ್ಲಿನ ಅನಧಿಕೃತ ಆರೋಗ್ಯ ಮಾಹಿತಿಗಳನ್ನು ನಂಬಿ ಆರೋಗ್ಯ ಕೆಡಿಸಿಕೊಳ್ಳಬೇಡಿ ಎಂದು ಖ್ಯಾತ ಮಕ್ಕಳ ವೈದ್ಯೆ ಹಾಗೂ ಸಮಾಜ ಕಾರ್ಯಕರ್ತೆ ಡಾ. ಅರುಂಧದತಿ ಪಾಟೀಲ್ ಹೇಳಿದರು.

ಗುಲಬರ್ಗಾ ವಿಶ್ವವಿದ್ಯಾಲಯದ ಮಹಾತ್ಮಾ ಗಾಂಧಿ ಸಭಾಂಗಣದಲ್ಲಿ ಆಯೋಜಿಸಿದ ‘ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ’ಯಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿ ದೈಹಿಕ ಅರೋಗ್ಯ ಎಷ್ಟು ಮುಖ್ಯವೋ ಮಾನಸಿಕ ಆರೋಗ್ಯ ಕೂಡ ತುಂಬಾ ಮುಖ್ಯ.ಅದರ ಕುರಿತು ಗಮನವಹಿಸಿ ಎಂದ ಅವರು ಸ್ವಾಸ್ಥ ಸಮಾಜದ ಅರೋಗ್ಯ ಪರಿಸರ ಕಾಪಾಡಲು ಸಾಮಾಜಿಕ ತಾಣಗಳಲ್ಲಿ ಹಂಚಿಕೆಯಾಗುತ್ತಿರುವ ಮಾಹಿತಿಗಳನ್ನು ನಿಯಂತ್ರಣ ಮಾಡುವ ಅವಶ್ಯಕತೆ ಇದೆ ಎಂದರು.

Contact Your\'s Advertisement; 9902492681

ಉತ್ತಮ ಆರೋಗ್ಯಕರ ಸಮಾಜ ನಿರ್ಮಿಸಲು
ಆರೋಗ್ಯ ಸಮಸ್ಯೆಗಳ ಬಗೆ ತಜ್ಞ ವೈದ್ಯರಿಂದ
ವೈಜ್ಞಾನಿಕ ಸಲಹೆಗಳನ್ನು ಪಡೆದು ಕಾಳಜಿ ವಹಿಸುವುದು ಸೂಕ್ತ. ಒತ್ತಡದ ಬದುಕಿನಿಂದ ಹಲವು ಸಮಸ್ಯೆಗಳು ಎದುರಾಗುತ್ತಿವೆ. ತಕ್ಷಣ ವೈದ್ಯರನ್ನು ಸಂಪರ್ಕಿಸಿ ಪರಿಹಾರ ಪಡೆದುಕೊಳ್ಳಿರಿ ಎಂದ ಅವರು ಬ್ರೂಣ ಹತ್ಯೆ ಹೇಯ ಕೃತ್ಯ. ರಾಜ್ಯದಲ್ಲಿ ಇದರಿಂದ ಲಿಂಗ ಅಸಮಾನತೆ ಹೆಚ್ಚಾಗಿದೆ.ಹೆಣ್ಣು ಹುಣ್ಣಲ್ಲ. ಜೀವನದ ಕಣ್ಣು. ಸಮಾನತೆ ಬರಬೇಕು ಇನ್ನು ನಮ್ಮ ಸಮಾಜದಲ್ಲಿ.ಹೆಣ್ಣು ಮಕ್ಕಳು ಸಂಘಟಿತರಾಗಬೇಕು. ನಾನು ಎನ್ನುವ ಅಹಂಕಾರ ಬಿಟ್ಟು ಮಹಿಳೆಯರು ಒಗ್ಗಟ್ಟಾಗಿ ಜೀವನದಲ್ಲಿ ಸಾಧನೆ ಮಾಡಲು ಸಾಧ್ಯ ಎಂದು ಮಾರ್ಮಿಕವಾಗಿ ಹೇಳಿದರು.

ಖ್ಯಾತ ಸಾಹಿತಿ ಹಾಗೂ ಸಂಗಮೇಶ್ವರ ಮಹಿಳಾ ಮಂಡಲದ ಕಾರ್ಯದರ್ಶಿ ಶ್ರೀಮತಿ. ಸಂಧ್ಯಾ ಹೋನಗುಂಟಿಕರ್ ಮಾತನಾಡಿ, ಸಮಾಜದಲ್ಲಿ ಅಸಮಾನತೆ ಇನ್ನೂ ಇದೆ. ಮಹಿಳೆ ಸಾಮಾಜಿಕ ಮತ್ತು ಶೈಕ್ಷಣಿಕ ಕ್ಷೇತ್ರದಲ್ಲಿ ಅಭಿವೃದ್ಧಿ ಹೊಂದಾಬೇಕಾದ ಅವಶ್ಯಕತೆ ಇದೆ. ಮಹಿಳೆಗೆ ಶಿಕ್ಷಣ ವಂಚಿತರನ್ನಾಗಿಸುವ ವ್ಯವಸ್ಥೆ ಬದಲಾಗಬೇಕು. ಇಂದಿನ ಆಧುನಿಕ ಯುಗದಲ್ಲಿ ಮಹಿಳೆಯರು ವೈದ್ಯಕೀಯ ಕ್ಷೇತ್ರದಲ್ಲಿ ತಮ್ಮ ಕೊಡುಗೆ ನೀಡುತ್ತಿರುವದು ಒಳ್ಳೆಯ ಬೆಳವಣಿಗೆ. ಮಹಿಳೆಯನ್ನು ದೇವರು ಅನ್ನುವ ಮೊದಲು ಮಹಿಳೆಯರನ್ನು ಗೌರವ ಹಾಗೂ ಸಮಾನತೆಯಿಂದ ಕಾಣಬೇಕು ಎಂದು ಪ್ರತಿಪಾದಿಸಿದರು. ಪತ್ರಿಕೆಗಳಲ್ಲಿ ನಿತ್ಯ ಒಂದಲ್ಲ ಒಂದು ರೀತಿಯ ಮಹಿಳಾ ವಿರೋಧಿ ಕೃತ್ಯಗಳು ಹಾಗೂ ಮಹಿಳೆಯರ ಮೇಲೆ ದೌರ್ಜನ್ಯಗಳು ಕುರಿತು ವರದಿಯಾಗುತ್ತಿವೆ ಇದು ಮಾನವೀಯ ಸಮಾಜದ ಲಕ್ಷಣವಲ್ಲ. ಅವಳನ್ನು ಅವಳಾಗಿ ಇರಲು ಬದುಕಲು ಬಿಡಿ. ಪುರುಷ ಪ್ರಧಾನ ಆಲೋಚನೆ ಹಾಗೂ ಧೋರಣೆಗಳಲ್ಲಿ ಬದಲಾವಣೆ ಬರಬೇಕು. ಎಷ್ಟೋ ಕಡೆ ಮಹಿಳೆಯರಿಗೆ ಸೂಕ್ತ ಸೌಲಭ್ಯಗಳಿಲ್ಲ, ಸುರಕ್ಷತೆಯೂ ಇಲ್ಲ ಎಂದು ಕಳವಳ ವ್ಯಕ್ತಪಡಿಸಿದರು. ಗುಲಬರ್ಗಾ ವಿಶ್ವವಿದ್ಯಾಲಯದ ಸಿಂಡಿಕೆಟ್ ಸದಸ್ಯೆ ರೇಷ್ಮಾ ಕೌರ್ ಮಾತನಾಡಿದರು.

ಕುಲಪತಿ ಪ್ರೊ ದಯಾನಂದ ಅಗಸರ್ ಅಧ್ಯಕ್ಷತೆ ವಹಿಸಿ ಮಾತನಾಡಿ, ಮಹಿಳೆ ಕುಟುಂಬ ಹಾಗೂ ಸಮಾಜಕ್ಕೆ ಉಪಕಾರಿಗಳಾಗಿದ್ದಾರೆ. ಮಹಿಳೆ ಮನೆಯಲ್ಲಿ ಇರುವುದರಿಂದ ನಮ್ಮೆಲ್ಲರ ಮನೆ ಮನಸ್ಸುಗಳು ನೆಮ್ಮದಿಯಾಗಿವೆ. ಕಿತ್ತೂರು ರಾಣಿ ಚೆನ್ನಮ್ಮ, ಝಾನ್ಸಿ ರಾಣಿ ಲಕ್ಷ್ಮೀ ಬಾಯಿ, ಅಕ್ಕಮಹಾದೇವಿ, ಇಂದಿಗೂ ಮಹಿಳಾ ಲೋಕದಲ್ಲಿ ನಕ್ಷತ್ರಗಳಾಗಿ ಮಿನುಗುತ್ತಿದ್ದಾರೆ. ಸತ್ಯ ಹರಿಶ್ಚಂದ್ರನ ಜೀವನದಲ್ಲಿ ನಡೆದ ತ್ಯಾಗದ ಘಟನೆಯ ಹಿಂದೆ ಅವರ ಹೆಂಡತಿ ಚಂದ್ರಮತಿ ಅವರ ಸಹನೆ ಸಹಕಾರ ಅಪಾರವಾಗಿದೆ. ನನ್ನ ತಾಯಿ ಹಾಗೂ ಮಡದಿ ನನ್ನ ಜೀವನದಲ್ಲಿ ಸಾಧನೆ ಮಾಡಲು ಅಪಾರ ಶಕ್ತಿ ನೀಡಿದ್ದಾರೆ.ಅವರು ಮನೆಯಲ್ಲಿ ಎಲ್ಲವನ್ನು ಸರಿಯಾಗಿ ನಿಭಾಯಿಸಿಕೊಂಡು ಹೋಗಿದ್ದರಿಂದಲೇ ನಾನು ವಿಶ್ವವಿದ್ಯಾಲಯದ ಕೆಲಸಗಳಿಗೆ ಚ್ಯುತಿ ಬರದಂತೆ ಕಾರ್ಯನಿರ್ವಹಿಸಲು ಸಾಧ್ಯವಾಗಿದೆ ಎಂದು ಭಾವುಕರಾಗಿ ನುಡಿದರು.

ಕಾರ್ಯಕ್ರಮ ಸಂಚಾಲಕಿ ಪ್ರೊ ಪರಿಮಳ ಅಂಬೇಕರ್ ಅತಿಥಿಗಣ್ಯರನ್ನು ಸ್ವಾಗತಿಸಿ ಪ್ರಸ್ತಾವಿಕ ಮಾತುಗಳನ್ನಾಡಿದರು. ವಿದ್ಯಾ ವಿಷಯಕ ಪರಿಷತ್ ಸದಸ್ಯ ಪ್ರೊ. ಆರ್. ಎಲ್. ರಾಯಬಾಗಕರ್ ಕುಲಸಚಿವ ಡಾ. ಬಿ. ಶರಣಪ್ಪ, ಕುಲಪತಿಗಳ ಧರ್ಮಪತ್ನಿ ಶ್ರೀಮತಿ. ನಿರ್ಮಲ ದಯಾನಂದ ಅಗಸರ್, ಮೌಲ್ಯಮಾಪನ ಕುಲಸಚಿವೆ ಪ್ರೊ. ಮೇಧಾವಿನಿ ಕಟ್ಟಿ ಉಪಸ್ಥಿತರಿದ್ದರು.

ಕಾರ್ಯಕ್ರಮದಲ್ಲಿ ವಿವಿಧ ವಿಭಾಗಗಳ ಮುಖ್ಯಸ್ಥರು, ಡೀನರು, ಪ್ರಾಧ್ಯಾಪಕರು,ಶಿಕ್ಷಕೇತರ ಸಿಬ್ಬಂದಿ, ಅತಿಥಿ ಉಪನ್ಯಾಸಕರು, ಸ್ನಾತಕೋತ್ತರ ಹಾಗೂ ಸಂಶೋಧನಾ ವಿದ್ಯಾರ್ಥಿಗಳು ಭಾಗವಹಿಸಿದ್ದರು.

ಸಂಗೀತ ವಿಭಾಗದ ಅತಿಥಿ ಪ್ರಾಧ್ಯಾಪಕಿ ಡಾ. ಲಕ್ಷ್ಮಿ ಶಂಕರ್ ಜೋಷಿ ಅತಿಥಿಗಳನ್ನು ಪರಿಚಯಿಸಿದರು. ಸಂಗೀತ ವಿಭಾಗದ ಉಪನ್ಯಾಸಕಿ ಡಾ. ಜಯ ದಾನಮ್ಮನವರ್ ವಚನ ಪ್ರಸ್ತುತಪಡಿಸಿದರು. ಸಂಗೀತ ವಿಭಾಗದ ವಿದ್ಯಾರ್ಥಿಗಳು ನಾಡಗೀತೆ ಹಾಡಿದರು. ಡಾ. ಕರುಣಾ ಜಮಾದರ್ಖಾನೆ
ವಂದಿಸಿದರು. ಡಾ. ಶುಲಾಬಾಯಿ ಹಿತವಂತ ನಿರೂಪಿಸಿದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here