ಆಳಂದ: ಉಮರ್ಗಾ ತಾಲೂಕಿನ ಗುಂಜೋಟಿಯಲ್ಲಿರುವುದು ಚೈತನ್ಯ ಪ್ರಭು ಮಹಾರಾಜರ ಸಮಾಧಿಯಾಗಿದೆ ಜನಸಾಮಾನ್ಯರು ಅವರನ್ನು ಸಾತಲಿಂಗಪ್ಪ ಮಹಾರಾಜ ಎಂದು ಕರೆಯುತ್ತಾರೆ. ಅಲ್ಲಿರುವುದು ಅದು ರಾಘವ ಚೈತನ್ಯರ ಸಮಾಧಿಯಲ್ಲ, ಆಳಂದ ದರ್ಗಾದ ಆವರಣದಲ್ಲಿರುವ ಸಮಾಧಿಯೇ ರಾಘವ ಚೈತನ್ಯರ ಸಮಾಧಿಯಾಗಿದೆ ಎನ್ನುವುದು ಆಳಂದ ಹಿಂದೂಗಳ ನಂಬಿಕೆಯಾಗಿದೆ ಎಂದು ಹಿಂದೂ ಜಾಗರಣ ವೇದಿಕೆಯ ಜಿಲ್ಲಾ ಸಂಚಾಲಕ ನಾಗೇಂದ್ರ ಕಾಬಡೆ ಹೇಳಿದ್ದಾರೆ.
ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು, ಸಮಾಧಿ ವಿಷಯದ ಕುರಿತು ವ್ಯಾಜ್ಯ ಈಗಾಗಲೇ ನ್ಯಾಯಾಲಯದ ಅಂಗಳದಲ್ಲಿದೆ ಅಲ್ಲದೇ ವಾದ ವಿವಾದಗಳು ಜರುಗಿ ನ್ಯಾಯಾಲಯಕ್ಕೆ ಬೇಕಾದ ದಾಖಲೆಗಳನ್ನು, ಸಾಕ್ಷಿಗಳನ್ನು ಸಲ್ಲಿಸಲಾಗಿದೆ. ಶಾಸಕ ಬಿ ಆರ್ ಪಾಟೀಲ ಒಂದು ಧರ್ಮವನ್ನು ಸಂತುಷ್ಟಗೊಳಿಸುವುದಕೋಸ್ಕರ, ಅಲ್ಪ ಸಂಖ್ಯಾತರ ತುಷ್ಟೀಕರಣಕ್ಕಾಗಿ ಶಿವರಾತ್ರಿಯ ದಿನ ಗುಂಜೋಟಿಗೆ ಹೋಗಿ ಅಲ್ಲಿರುವ ಸಾತಲಿಂಗಪ್ಪ ಮಹಾರಾಜರ ಸಮಾಧಿಯನ್ನು ರಾಘವ ಚೈತನ್ಯರ ಸಮಾಧಿ ಎಂದು ಸುಳ್ಳು ಹೇಳಿ ಹಿಂದೂಗಳ ಮಧ್ಯದಲ್ಲಿ ಬಿರುಕು ಮೂಡಿಸಲು ಯತ್ನಿಸುತ್ತಿದ್ದಾರೆ ಅವರ ಈ ಹೇಳಿಕೆಯ ಹಿಂದೆ ರಾಜಕೀಯವಿದೆ ಎಂದು ಆರೋಪಿಸಿದ್ದಾರೆ.
ಆಳಂದದಲ್ಲಿರುವುದು ರಾಘವ ಚೈತನ್ಯರ ಸಮಾಧಿ ಅಲ್ಲ ಎಂದ ಮೇಲೆ ಶಾಸಕ ಬಿ ಆರ್ ಪಾಟೀಲರು ಚುನಾವಣೆ ಗೆದ್ದ ಮೇಲೆ ದರ್ಗಾದ ಆವರಣದಲ್ಲಿರುವ ಶಿವಲಿಂಗಕ್ಕೆ ಪೂಜೆ ಸಲ್ಲಿಸಿರುವುದು ಏತಕ್ಕೆ?. ಅವರ ಮಗ ಕೆಎಂಎಫ್ ಅಧ್ಯಕ್ಷ ಆರ್ ಕೆ ಪಾಟೀಲ 2022ರಲ್ಲಿ ಮುಸ್ಲಿಂರ ಜೊತೆ ಬಂದು ಶಿವಲಿಂಗ ಪೂಜೆಯಲ್ಲಿ ಭಾಗವಹಿಸಿರುವುದು ಯಾವ ಕಾರಣಕ್ಕೆ?. ಇದು ಬಿ ಆರ್ ಪಾಟೀಲರ ದ್ವಂದ್ವ ಮನಸ್ಸಿನ ಹಾಗೂ ಇತಿಹಾಸ ತಿರುಚುವ ಮನಸ್ಸಿನ ಪ್ರತಿಬಿಂಬವಾಗಿದೆ ಎಂದು ಆರೋಪಿಸಿದ್ದಾರೆ.
ಆಳಂದ ಶಾಸಕ ಬಿ ಆರ್ ಪಾಟೀಲ ಗುಂಜೋಟಿಯಲ್ಲಿ ವಾಸವಾಗಿರುವ ಎಡಪಂಥೀಯ ವಿಚಾರಧಾರೆಯ ಅರುಣ ರೇಣುಕೆ ಅವರನ್ನು ಕರೆದುಕೊಂಡು ಮುಕುಂದ ದೇಶಪಾಂಡೆಯವರ ಮನೆಗೆ ಹೋಗಿ ಇದು ರಾಘವ ಚೈತನ್ಯರ ಸಮಾಧಿ ಎಂದು ಸುಳ್ಳು ಹೇಳಿದ್ದಾರೆ. ವಾಸ್ತವದಲ್ಲಿ ಅರುಣ ರೇಣುಕೆಯವರ ಪತ್ನಿ ಗುಂಜೋಟಿಯಲ್ಲಿರುವ ಕೃಷ್ಣ ವಿದ್ಯಾಲಯದಲ್ಲಿ ಅಧ್ಯಾಪಕಿಯಾಗಿ ಸೇವೆ ಸಲ್ಲಿಸಿ ನಿವೃತ್ತರಾಗಿದ್ದಾರೆ.
ನಾವು ಕೂಡ ಗುಂಜೋಟಿಗೆ ಭೇಟಿ ನೀಡಿ ದೇಶಪಾಂಡೆ ಕುಟುಂಬದವರ ಜೊತೆ ಗ್ರಾಮಸ್ಥರ ಮಾತನಾಡಿದ್ದೇವೆ ಅವರು ನೀಡಿರುವ ಮಾಹಿತಿಯನ್ನು ಶಾಸಕ ಬಿ ಆರ್ ಪಾಟೀಲ ಮುಚ್ಚಿಟ್ಟು ಅದಕ್ಕೆ ತದ್ವಿರುದ್ಧವಾದ ಮಾಹಿತಿಯನ್ನು ಮಾಧ್ಯಮಗಳಿಗೆ ನೀಡಿ ಮಾಧ್ಯಮಗಳ ದಿಕ್ಕು ತಪ್ಪಿಸುವ ಕೆಲಸ ಮಾಡಿದ್ದಾರೆ ಎಂದು ದೂರಿದ್ದಾರೆ.