ಕಲಬುರಗಿ: ಕೇಂದ್ರೀಯ ವಿಶ್ವ ವಿದ್ಯಾಲಯದಲ್ಲಿ ಯುಜಿಸಿ ನಿಯಮಾವಳಿಗಳನ್ನು ಮೀರಿ ದಲಿತ ಎಂಬ ಕಾರಣಕ್ಕೆ ವಿವಿ ಆಡಳಿತ ಮಂಡಳಿ ಏಕ ಪಕ್ಷೀಯವಾಗಿ ಪಿಎಚ್‌ಡಿ ಸಂಶೋಧನೆ ಕಾರ್ಯ ರದ್ದುಗೊಳಿಸಿದೆ ಎಂದು ಸಂಶೋಧನಾ ವಿದ್ಯಾರ್ಥಿ ನಂದಪ್ಪ ಆರೋಪಿಸಿದರು.
2018ರಲ್ಲಿ ಪಿಎಚ್‌ಡಿ ಪ್ರವೇಶ ಪಡೆಯಲಾಗಿದೆ, ಯುಜಿಸಿ ನಿಯಮಗಳ ಪ್ರಕಾರ ಕನಿಷ್ಠ 3 ವರ್ಷ ಹಾಗೂ ಗರಿಷ್ಠ 6 ರ್ವಗಳಲ್ಲಿ ಪಿಎಚ್‌ಡಿ ಸಂಶೋಧನೆ ಮುಗಿಸಬೇಕು ಎಂದು ನಿಯಮವಿದೆ. ಆದರೆ ಇದೀಗ ಯಾವುದೇ ಕಾರಣ ನೀಡದೆ ಮತ್ತು ವಿವಿಯ ಸಿಎಎಸ್‌ಆರ್ ಸಮಿತಿ ಆದೇಶ ಧಿಕ್ಕರಿಸಿ ನನ್ನ ಸಂಶೋಧನೆ ರದ್ದು ಮಾಡಲಾಗಿದೆ. ಜು.15ರವರೆಗೆ ನಾಲ್ವರು ಪ್ರಾಧ್ಯಾಕರ ಸಿಎಎಸ್‌ಆರ್ ತಂಡ ನನ್ನ ಸಂಶೋಧನೆಗೆ ದಿನಾಂಕ ವಿಸ್ತರಣೆ ಮಾಡುವಂತೆ ವಿವಿಗೆ ವರದಿ ನೀಡಿದ್ದರು. ಆದರೆ ಅದನ್ನು ಕೂಡ ಪರಿಗಣನೆಗೆ ತೆಗೆದುಕೊಂಡಿಲ್ಲ ಎಂದು ನೊಂದು ನುಡಿದರು.
ಸುಮಾರು 12 ವಿದ್ಯಾರ್ಥಿಗಳ ಪಿಎಚ್‌ಡಿ ರದ್ದು ಮಾಡಲಾಗಿದೆ ಎಂದು ಹೇಳಲಾಗುತ್ತಿದೆ. ಆದರೆ ಅವರೆಲ್ಲರಿಗೂ ವಿವಿ ಕ್ಯಾಂಪಸ್‌ನಲ್ಲಿ ಓಡಾಡಲು ಹಾಗೂ ವಿವಿ ಲೈಬ್ರರಿ ಬಳಸಿಕೊಳ್ಳಲು ಅನುಮತಿ ನೀಡಿದೆ. ನನಗೆ ವಿವಿ ಪ್ರವೇಶಕ್ಕೆ ಅನುಮತಿ ನೀಡಲಾಗುತ್ತಿಲ್ಲ. ವಿವಿ ಗೇಟ್ ಬಳಿ ನನ್ನನ್ನು ಭದ್ರತಾ ಸಿಬ್ಬಂದಿ ತಡೆಯುತ್ತಿದ್ದಾರೆ. ಈ ಬಗ್ಗೆ ಕುಲಪತಿಗಳಿಗೆ ಮೇಲ್ ಮುಖಾಂತರ ಪತ್ರ ಬರೆದರೂ ಕೂಡ ಯಾವುದೇ ಪ್ರಯೋಜನ ಆಗಿಲ್ಲ ಎಂದು ಅವರು ಬೇಸರ ವ್ಯಕ್ತಪಡಿಸಿದರು.
ದಲಿತ ಎನ್ನುವುದಕ್ಕೆ ಟಾರ್ಗೆಟ್: ಕಳೆದ ಮೂರು ವರ್ಷಗಳಿಂದ ವಿವಿ ಹಲವು ಕಾರಣಗಳಿಂದ ನನ್ನನ್ನು ಟಾರ್ಗೆಟ್ ಮಾಡುತ್ತಿದೆ. ನನ್ನ ವಿರುದ್ಧ ಪೊಲೀಸ್ ಠಾಣೆಯಲ್ಲಿ ದೂರು ಕೂಡ ದಾಖಲಾಗಿದೆ. ನಾನು ದಲಿತ ವಿದ್ಯಾರ್ಥಿಗಳಿಗೆ ಅವರ ಹಕ್ಕುಗಳನ್ನು ನೀಡುವಂತೆ ಸಂವಿಧಾನ ಬದ್ಧವಾಗಿ ಹೋರಾಟ ಮಾಡುತ್ತಿದ್ದೇನೆ. ಇದು ಅಲ್ಲಿನ ಆಡಳಿತ ಮಂಡಳಿಯೂ ನನ್ನನು ದ್ವೇಷಿಸಲು ಮಖ್ಯ ಕಾರಣವಾಗಿದೆ ಎಂದು ಹೇಳಿದರು.
ವಿವಿಯ ಸಧ್ಯದ ಕೆಲಸದಿಂದ ನನ್ನ ಮುಂದಿನ ಭವಿಷ್ಯದ ಮೇಲೆ ಕರಿ ನೆರಳು ಬಿದ್ದಿದೆ. ಕೂಡಲೇ ಕುಲಪತಿಗಳು ಈ ಬಗ್ಗೆ ಪ್ರತಿಕ್ರಿಯೆ ನೀಡಬೇಕು ಎಂದು ಆಗ್ರಹಿಸಿದರು.ವಿದ್ಯಾರ್ಥಿಗಳಾದ ಕೃಷ್ಣವಂಶಿ, ಪ್ರದೀಪ್ ಚಂದ್ರು, ರಮೇಶ ಇತರರಿದ್ದರು.