ಶರಣಬಸವೇಶ್ವರರ ಜಾತ್ರೆ ಉಚ್ಛಾಯಿಗೆ ಸಿಲುಕಿ ಗೃಹ ರಕ್ಷಕದಳದ ಸಿಬ್ಬಂದಿ ಸಾವು

0
132

ಕಲಬುರಗಿ: ನಗರದ ಐತಿಹಾಸಿಕ ಶ್ರೀ ಶರಣಬಸವೇಶ್ವರರ ಜಾತ್ರಾ ಮಹೋತ್ಸವದ ನಿಮಿತ್ಯ ಶುಕ್ರವಾರ ಸಂಜೆ ಜರುಗಿದ ಉಚ್ಛಾಯಿ ಎಳೆಯುವ ಕಾಲಕ್ಕೆ ಚಕ್ರಕ್ಕೆ ಸಿಲುಕಿ ಓರ್ವ ಗೃಹರಕ್ಷಕದಳದ ಸಿಬ್ಬಂದಿ ಮೃತಪಟ್ಟು, ಇನ್ನೋರ್ವ ಗೃಹರಕ್ಷಕದಳದ ಸಿಬ್ಬಂದಿ ಗಾಯಗೊಂಡ ಘಟನೆ ಸಂಭವಿಸಿದೆ.

ಮೃತನಿಗೆ ಬೀದರ್ ಜಿಲ್ಲೆಯ ಚಿಟಗುಪ್ಪಾ ತಾಲ್ಲೂಕಿನ ಇಟಗಾದ ನಿವಾಸಿ ರಾಮು ತಂದೆ ಸಿದ್ದಪ್ಪ ವಾಲಿ, ಗಾಯಾಳುವನ್ನು ಚಿಟಗುಪ್ಪಾ ಘಟಕದ ಗೃಹ ರಕ್ಷಕ ದಳದ ಸಿಬ್ಬಂದಿ ಅಶೋಕರೆಡ್ಡಿ ಎಂದು ಗುರುತಿಸಲಾಗಿದೆ.

Contact Your\'s Advertisement; 9902492681

ಸಂಜೆ ಸಾಂಪ್ರದಾಯಿಕ ರೀತಿಯಲ್ಲಿ ಉಚ್ಛಾಯಿ ಎಳೆಯುವಾಗ ಅಪಾರ ಸಂಖ್ಯೆಯ ಭಕ್ತರು ಇಕ್ಕೆಲಗಳಲ್ಲಿ ಸೇರಿದ್ದರು. ಉಚ್ಛಾಯಿ ಎಳೆಯುವಾಗ ಉಚ್ಛಾಯಿ ಸರಾಗವಾಗಿ ಹಾಗೂ ಸುಗಮವಾಗಿ ಎಳೆಯಲು ಗೃಹ ರಕ್ಷಕ ದಳದ ಸಿಬ್ಬಂದಿಯವರು ಭಕ್ತರನ್ನು ಬದಿಗೆ ಸರಿಸುತ್ತ ಹೋಗುತ್ತಿದ್ದರು.

ಆ ಸಂದರ್ಭದಲ್ಲಿ ಉಚ್ಛಾಯಿ ಎಳೆಯುವ ಮಾರ್ಗದಲ್ಲಿ ಖಟಕ್ ಹಾಕಿದ್ದು, ಒಂದು ಖಟಕ್ ಕಲ್ಲಿಗೆ ಗೃಹರಕ್ಷಕದಳದ ಸಿಬ್ಬಂದಿ ರಾಮು ತಂದೆ ಸಿದ್ದಪ್ಪ ವಾಲಿ ಕಾಲು ಜಾರಿ ಕೆಳಗೆ ಬಿದ್ದ. ಆಗ ಆತನ ಮೇಲೆ ಉಚ್ಛಾಯಿಯ ಚಕ್ರಗಳು ಹರಿದ ಪರಿಣಾಮ ಆತ ಗಂಭೀರವಾಗಿ ಗಾಯಗೊಂಡು ಮೃತಪಟ್ಟ ಎನ್ನಲಾಗಿದೆ. ಅದೇ ಉಚ್ಛಾಯಿ ಚಕ್ರಕ್ಕೆ ಇನ್ನೋರ್ವ ಗೃಹ ರಕ್ಷಕದಳದ ಸಿಬ್ಬಂದಿ ಚಿಟಗುಪ್ಪಾ ಘಟಕದ ಅಶೋಕರೆಡ್ಡಿ ಎಂಬಾತನ ಕಾಲು ಸಿಲುಕಿದ್ದು ಗಂಭೀರವಾಗಿ ಗಾಯಗೊಂಡಿದ್ದಾನೆ. ಆತನಿಗೆ ಆಸ್ಪತ್ರೆಗೆ ಸೇರಿಸಲಾಗಿದೆ.

ಉಚ್ಛಾಯಿ ಸುಗಮವಾಗಿ ಜರುಗಲು ಬೀದರ್ ಜಿಲ್ಲೆಯ ಗೃಹರಕ್ಷಕದಳದ ಸುಮಾರು 100 ಸಿಬ್ಬಂದಿಗಳನ್ನು ಭದ್ರತಾ ವ್ಯವಸ್ಥೆಗೆ ನಿಯೋಜಿಸಲಾಗಿತ್ತು. ಅವರಲ್ಲಿ ಒಬ್ಬಾತ ಮೃತಪಟ್ಟು, ಇನ್ನೋರ್ವ ಗಾಯಗೊಂಡಿದ್ದು, ಭಕ್ತ ವಲಯದಲ್ಲಿ ತೀವ್ರ ಆತಂಕಕ್ಕೆ ಕಾರಣವಾಗಿದೆ. ಸಾವು ನೋವಿನಿಂದ ಸಡಗರ, ಸಂಭ್ರಮದಲ್ಲಿದ್ದ ಉಚ್ಛಾಯಿ ಎಳೆಯುವ ಕಾರ್ಯದಲ್ಲಿ ಅಪಮಂಗಲ ಕಾರ್ಯ ಆಗಿದ್ದರಿಂದ ಶೋಕ ಮಡುಗಟ್ಟಿತ್ತು.

ವೈಫಲ್ಯವೇ ಕಾರಣ: ಶ್ರೀ ಶರಣಬಸವೇಶ್ವರರ ಜಾತ್ರೆಯಲ್ಲಿ ಸೂಕ್ತ ಜೀವ ರಕ್ಷಕ ಕ್ರಮಗಳನ್ನು ಕೈಗೊಳ್ಳಬೇಕು ಎಂದು ನಾನು ಈಗಾಗಲೇ ಸಂಬಂಧಪಟ್ಟ ಅಗ್ನಿಶಾಮಕದಳದ ಅಧಿಕಾರಿಗಳಿಗೆ ಹಾಗೂ ಸಂಬಂಧಪಟ್ಟ ಪೋಲಿಸ್ ಅಧಿಕಾರಿಗಳಿಗೆ ಹಾಗೂ ಜಿಲ್ಲಾಧಿಕಾರಿಗಳಿಗೂ ಸಹ ಮನವಿ ಮಾಡಿಕೊಂಡಿದ್ದೆ. ಆದಾಗ್ಯೂ, ಜಾತ್ರೋತ್ಸವ ಸಮಿತಿಯು ಸೂಕ್ತ ಕ್ರಮಗಳನ್ನು ಕೈಗೊಳ್ಳದೇ ಇದ್ದುದರಿಂದ ಅವರ ವೈಫಲ್ಯದಿಂದಾಗಿ ಒಂದು ಜೀವ ಹೋಗಿದೆ. ಇನ್ನೊಂದು ಜೀವ ಗಾಯಗೊಂಡಿದೆ ಎಂದು ಶ್ರೀ ಶರಣಬಸವೇಶ್ವರರ ಜಾತ್ರಾ ವ್ಯಾಪಾರಿಗಳ ಸಂಘದ ಅಧ್ಯಕ್ಷ ಹಾಗೂ ಮಹಾನಗರ ಪಾಲಿಕೆಯ ವಿರೋಧ ಪಕ್ಷದ ಮಾಜಿ ನಾಯಕ ಪ್ರಕಾಶ್ ಬೆನಕನಳ್ಳಿ ಅವರು ಗಂಭೀರ ಆರೋಪ ಮಾಡಿದರು.

ನಮ್ಮ ಪ್ರತಿನಿಧಿಯೊಂದಿಗೆ ಮಾತನಾಡಿದ ಅವರು, ನಾನು ಜಾತ್ರೆ ಪ್ರಾರಂಭವಾಗುವುದಿಕ್ಕಿಂತಲೂ ಮೊದಲು ಸಂಬಂಧಪಟ್ಟ ಎಲ್ಲ ಅಧಿಕಾರಿಗಳಿಗೆ ಮನವಿ ಪತ್ರ ಸಲ್ಲಿಸಿದೆ. ಈ ಕುರಿತು ಪತ್ರಿಕೆಗಳಲ್ಲಿಯೂ ಸಹ ಪ್ರಕಟಗೊಂಡರೂ ಸಹ ಯಾವುದೇ ಕ್ರಮಗಳನ್ನು ಕೈಗೊಳ್ಳಲಿಲ್ಲ ಎಂದು ಅಸಮಾಧಾನ ಹೊರಹಾಕಿದರು.

ಈಗ ಜಾತ್ರಾ ಮೈದಾನದಲ್ಲಿ ಎಲ್ಲಿ ಬೇಕೆಂದರಲ್ಲಿ ಅಂಗಡಿ, ಮಳಿಗೆಗಳನ್ನು ಹಾಕಲಾಗಿದೆ. ಜನಸಾಮಾನ್ಯರು ಸುಗಮವಾಗಿ ಸಂಚರಿಸಲು ಆಗದ ರೀತಿಯಲ್ಲಿ ಸ್ಥಿತಿ ನಿರ್ಮಾಣವಾಗಿದೆ. ಏನಾದರೂ ಹೆಚ್ಚು ಕಡಿಮೆಯಾದಲ್ಲಿ ಜೀವ ಉಳಿಸಲು ಗೃಹ ರಕ್ಷಕದಳದವರು ಸಹ ಸ್ಥಳಕ್ಕೆ ಆಗಮಿಸಲಾರದಂತಹ ಸ್ಥಿತಿ ಉದ್ಭವಿಸಿದೆ. ಹಾಗಾಗಿ ಜೀವ ರಕ್ಷಕ ಕ್ರಮಗಳನ್ನು ಕೂಡಲೇ ಜಾತ್ರೆಯಲ್ಲಿ ಕೈಗೊಳ್ಳಬೇಕು. ಎಷ್ಟೋ ಮನೋರಂಜಕ ಅಪಾಯಕಾರಿ ಆಟಗಳನ್ನು ಹಾಕಲಾಗಿದೆ. ಸುರಕ್ಷತಾ ಕ್ರಮಗಳನ್ನು ಕೈಗೊಳ್ಳದೇ ಇದ್ದರೂ ಸಹ ಅವರಿಗೆ ಅನುಮತಿ ನೀಡಲಾಗಿದೆ. ಏನಾದರೂ ಜೀವ ಹಾನಿಯಾದರೆ ಯಾರು ಹೊಣೆ? ಎಂದು ಅವರು ಖಾರವಾಗಿ ಪ್ರಶ್ನಿಸಿದರು.

ಸ್ವತ: ಅಗ್ನಿಶಾಮಕದಳದ ಅಧಿಕಾರಿಗಳು ಜಾತ್ರಾ ಮೈದಾನದಲ್ಲಿ ಅಪಾಯಕಾರಿ ಮನೋರಂಜನಾ ಆಟಗಳ ಮೇಲೆ ನಿಗಾ ವಹಿಸಬೇಕು. ಜೀವ ರಕ್ಷಕ ಕ್ರಮಗಳ ಕುರಿತು ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಂಡು ಭಕ್ತರ ಜೀವ ಕಾಪಾಡಬೇಕು ಎಂದು ಅವರು ಮನವಿ ಮಾಡಿದರು.
ಘಟನೆಯಲ್ಲಿ ಓರ್ವ ಗೃಹರಕ್ಷಕದಳದ ಸಿಬ್ಬಂದಿ ಮೃತಪಟ್ಟಿದ್ದು, ಇನ್ನೋರ್ವ ಗಾಯಗೊಂಡಿದ್ದು, ಜಾತ್ರಾ ಮಹೋತ್ಸವ ಸಮಿತಿಯವರೇ ಆ ಎರಡೂ ಸಂತ್ರಸ್ತ ಕುಟುಂಬಗಳಿಗೆ ಸೂಕ್ತ ಪರಿಹಾರ ಕೊಡಬೇಕು ಎಂದು ಒತ್ತಾಯಿಸಿದ ಅವರು, ಸರ್ಕಾರವೂ ಸಹ ಎರಡೂ ಸಂತ್ರಸ್ತ ಕುಟುಂಬಗಳ ನೆರವಿಗೆ ಧಾವಿಸಬೇಕು ಎಂದು ಮನವಿ ಮಾಡಿದರು.

ಶನಿವಾರದಂದು ರಥೋತ್ಸವ ಇದೆ. ರಥೋತ್ಸವ ಎಳೆಯಲು ಹೊಸ ಹಗ್ಗ ಬೇಕು. ಅದನ್ನು ಸ್ವತ: ಲೋಕೋಪಯೋಗಿ ಇಲಾಖೆಯ ಕಾರ್ಯನಿರ್ವಾಹಕ ಅಭಿಯಂತರರೇ ಪರಿಶೀಲಿಸಬೇಕು. ಕೂಡಲೇ ಆ ಕೆಲಸವನ್ನಾದರೂ ಅಧಿಕಾರಿಗಳು ಪ್ರಾಮಾಣಿಕತೆಯಿಂದ ಮಾಡುವ ಮೂಲಕ ಭಕ್ತರ ಜೀವ ರಕ್ಷಿಸಬೇಕು ಎಂದು ಅವರು ಕೋರಿದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here