- ಪತ್ರಕರ್ತರಿಗೆ ಎಂ.ಸಿ.ಎಂ.ಸಿ. ತರಬೇತಿ ಕಾರ್ಯಾಗಾರ
ಕಲಬುರಗಿ: ಲೋಕಸಭೆ ಚುನಾವಣೆ ಘೋಷಣೆಯಾಗಿ ಮಾದರಿ ನೀತಿ ಸಂಹಿತೆ ಜಾರಿಯಲ್ಲಿರುವ ಕಾರಣ ಮುದ್ರಣ, ವಿದ್ಯುನ್ಮಾನ, ಸಾಮಾಜಿಕ ಜಾಲತಾಣದಲ್ಲಿ ಬರುವ ಕಾಸಿಗಾಗಿ ಸುದ್ದಿ ಮೇಲೆ ತೀವ್ರ ನಿಗಾ ವಹಿಸಿದ್ದು, ರಾಜಕೀಯ ಜಾಹೀರಾತುಗಳಿಗೆ ಅಭ್ಯರ್ಥಿ ಜಾಹೀರಾತು ಪೂರ್ವಾನುಮತಿ ಪಡೆಯುವುದು ಅಗತ್ಯ ಎಂದು ಜಿಲ್ಲಾಧಿಕಾರಿ ಮತ್ತು ಜಿಲ್ಲಾ ಚುನಾವಣಾಧಿಕಾರಿ ಬಿ.ಫೌಜಿಯಾ ತರನ್ನುಮ್ ಮುದ್ರಕರಿಗೆ ಹೇಳಿದರು.
ಗುರುವಾರ ತಮ್ಮ ಕಚೇರಿ ಸಭಾಂಗಣದಲ್ಲಿ ಜಿಲ್ಲೆಯ ಪತ್ರಕರ್ತರಿಗೆ ಆಯೋಜಿಸಿದ ಎಂ.ಸಿ.ಎಂ.ಸಿ. ಸಮಿತಿ ಕಾರ್ಯನಿರ್ವಹಣೆ ಕುರಿತ ತರಬೇತಿ ಕಾರ್ಯಗಾರದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಈಗಾಗಲೆ ಜಿಲ್ಲಾ ಮಾಧ್ಯಮ ಪ್ರಮಾಣೀಕರಣ ಮತ್ತು ಕಣ್ಗಾವಲು ಸಮಿತಿ ರಚಿಸಿದೆ. ಸದರಿ ಸಮಿತಿಗೆ ಪೂರಕವಾಗಿ ಜಾಹೀರಾತು ಪೂರ್ವಾನುಮತಿ ಸೆಲ್, ಮೀಡಿಯಾ ಮಾನಿಟರಿಂಗ್ ಸೆಲ್, ಸೋಷಿಯಲ್ ಮೀಡಿಯಾ ಮಾನಿಟರಿಂಗ್ ಸೆಲ್ ರಚಿಸಿ 24 ಗಂಟೆಗಳ ಕಾಲ ಕಾಸಿಗಾಗಿ ಸುದ್ದಿ/ ಜಾಹೀರಾತು ಮೇಲೆ ನಿಗಾ ವಹಿಸಲಾಗುತ್ತಿದೆ ಎಂದರು.
ಚುನಾವಣೆ ಮಾದರಿ ನೀತಿ ಸಂಹಿತೆ ಈ ಅವಧಿಯಲ್ಲಿ ಚುನಾವಣಾ ಸುದ್ದಿ ಪ್ರಕಟ/ ಪ್ರಸಾರ ಮಾಡುವ ಸಂದರ್ಭದಲ್ಲಿ ಅನುಸರಿಸಬೇಕಾದ ಕ್ರಮಗಳ ಕುರಿತು ಪ್ರೆಸ್ ಕೌನ್ಸಿಲ್ ಆಫ್ ಇಂಡಿಯಾ, ನ್ಯೂಸ್ ಬ್ರಾಡಕಾಸ್ಟಿಂಗ್ ಸ್ಟ್ಯಾಂಡರ್ಡ್ ಅಥಾರಿಟಿ ಹಾಗೂ ಭಾರತ ಚುನಾವಣಾ ಆಯೋಗದ ಮಾರ್ಗಸೂಚಿಗಳಿದ್ದು, ಇದನ್ನು ಪತ್ರಕರ್ತರು ಮತತು ಮಾಧ್ಯಮ ಸಂಸ್ಥೆಗಳು ಪಾಲಿಸುವ ಮೂಲಕ ಮುಕ್ತ, ನ್ಯಾಯಸಮ್ಮತ ಚುನಾವಣೆಗೆ ಸಹಕರಿಸಬೇಕು ಎಂದು ಕೋರಿದರು.
ಒಂದೇ ಸಮಯದಲ್ಲಿ ವಿವಿಧ ಪ್ರಕಟಣೆಗಳಲ್ಲಿ ಭಾವಚಿತ್ರದೊಂದಿಗೆ ಲೇಖನ ರೂಪದಲ್ಲಿ ಸ್ಪರ್ಧಾತ್ಮಕವಾಗಿ ಪ್ರಕಟಗೊಳ್ಳುವ ಬೈಲೈನ್ ಸುದ್ದಿಗಳು, ವೃತ್ತಪತ್ರಿಕೆಯ ಒಂದೇ ಪುಟದಲ್ಲಿ ಸ್ಪರ್ಧಾತ್ಮಕ ಅಭ್ಯರ್ಥಿಗಳನ್ನು ಶ್ಲಾಘಿಸುವ ರೀತಿಯಲ್ಲಿ ಮತ್ತು ಜಯಗಳಿಸುವ ಸಾಧ್ಯತೆ ಇರುವ ಬಗ್ಗೆ ಲೇಖನ ಪ್ರಕಟಗೊಳ್ಳುವುದು, ಓರ್ವ ಅಭ್ಯರ್ಥಿ ಸಮಾಜದ ಪ್ರತಿಯೊಂದು ವರ್ಗದಿಂದ ಬೆಂಬಲ ಪಡೆಯುತ್ತಿದ್ದು ಮತ್ತು ಕ್ಷೇತ್ರದಿಂದ ಚುನಾವಣೆಯಲ್ಲಿ ಗೆಲ್ಲುತ್ತಾನೆ ಎಂಬ ಸುದ್ದಿಗಳು, ಯಾವುದೇ ಸುದ್ದಿಯನ್ನು ಒಳಗೊಳ್ಳದೆ ರಾಜ್ಯ/ ಕ್ಷೇತ್ರದಲ್ಲಿ ಇತಿಹಾಸ ಸೃಷ್ಠಿಸಲು ಅಭ್ಯರ್ಥಿ ಅಥವಾ ಪಕ್ಷ ಸಿದ್ಧವಾಗಿದೆ ಎಂದು ಪತ್ರಿಕೆಯಲ್ಲಿ ಕೇವಲ ಶಿರೋನಾಮೆ ಪ್ರಕಟಿಸುವುದು, ಯಾವುದೋ ಪಕ್ಷ ಅಥವಾ ಅಭ್ಯರ್ಥಿ ಉತ್ತಮ ಕೆಲಸಗಳನ್ನು ಮಾಡಿದ್ದಾರೆ ಎಂದು ಸುದ್ದಿಯ ಪ್ರತಿ ವಾಕ್ಯದಲ್ಲಿ ತಿಳಿಸುತ್ತಾ ಚುನಾವಣೆ ಕಣದಲ್ಲಿರುವ ಇನ್ನುಳಿದ ಪಕ್ಷ ಅಥವಾ ಅಭ್ಯರ್ಥಿ ಮೇಲೆ ಪ್ರತಿಕೂಲ ಪರಿಣಾಮ ಬೀರುವಂತಹ ಸುದ್ದಿ, 125-150 ಪದಗಳುಳ್ಳ ಸ್ಥಿರ ಗಾತ್ರದ ಕಠಿಣ ರೂಪದ ಬರವಣಿಗೆ ಹಾಗೂ ಡಬಲ್ ಕಾಲಂನಲ್ಲಿ ಭಾವಚಿತ್ರವಿದ್ದು, ಜಾಹೀರಾತಿನಂತೆ ಬಿಂಬಿಸುವ ಸುದ್ದಿ, ಸ್ಲಾಟ್ ಅಧಾರದ ಮೇಲೆ ಪಾವತಿ ಸುದ್ದಿಯಾಗಿ ಅಭ್ಯರ್ಥಿಯಿಂದ ಪಡೆಯಲಾದ ಅನೇಕ ಪ್ರಕಾರದ ಫಾಂಟ್‍ಗಳು ಹಾಗೂ ಮಲ್ಟಿಪಲ್ ಡ್ರಾಪ್ ಕೇಸ್ ಶೈಲಿಗಳನ್ನು, ಛಾಯಾಚಿತ್ರಗಳನ್ನು ನಿರ್ದಿಷ್ಠ ಪತ್ರಿಕೆಯ ಒಂದೇ ಪುಟದಲ್ಲಿ ಎಲ್ಲವನ್ನು ಮುದ್ರಿಸುವುದನ್ನು “ಪೇಡ್ ನ್ಯೂಸ್” ಎಂದು ಪರಿಗಣಿಸಲಾಗುತ್ತದೆ. ಕಾಸಿಗಾಗಿ ಸುದ್ದಿ ಪ್ರಕಟಗೊಂಡಲ್ಲಿ ಎಂ.ಸಿ.ಎಂ.ಸಿ. ಸಮಿತಿ ವರದಿಯಂತೆ ಚುನಾವಣಾಧಿಕಾರಿಗಳು ಅಭ್ಯರ್ಥಿಗೆ ನೋಟಿಸ್ ಜಾರಿಗೊಳಿಸಿ ಉತ್ತರ ಪಡೆದು ಮುಂದಿನ ಕಾನೂನು ಕ್ರಮ ಕೈಗೊಳ್ಳಲಿದ್ದಾರೆ ಎಂದು ವಿವರಿಸಿದರು.
ಲೋಕಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿನ ಯಾವುದೇ ಅಭ್ಯರ್ಥಿ ಇ-ಪೇಪರ್, ವಿದ್ಯುನ್ಮಾನ ಮಾಧ್ಯಮ, ಕೇಬಲ್ ಟಿ.ವಿ., ಸಾಮಾಜಿಕ ಜಾಲತಾಣ, ಎಫ್.ಎಂ.ರೇಡಿಯೋ, ಸಿನೆಮಾ ಹಾಲ್, ಧ್ವನಿ ಮತ್ತು ದೃಶ್ಯ ಒಳಗೊಂಡ ಎಲ್.ಇ.ಡಿ. ವಾಲ್ ವಾಹನಗಳು, ವಾಣಿಜ್ಯ ಮಳಿಗೆಯಲ್ಲಿರುವ ಎಲ್.ಇ.ಡಿ. ವಾಲ್‍ಗಳು, ಧ್ವನಿ ಮತ್ತು ಶ್ರವ್ಯ, ಬಲ್ಸ್ ಎಸ್.ಎಂ.ಎಸ್., ಬಲ್ಸ್ ಆಡಿಯೋ ಕಾಲ್ ಮೂಲಕ ಕೈಗೊಳ್ಳುವ ಚುನಾವಣಾ ಜಾಹೀರಾತಿಗೆ ಜಿಲ್ಲಾ ಎಂ.ಸಿ.ಎಂ.ಸಿ. ಸಮಿತಿಯಿಂದ ಪೂರ್ವಾನುಮತಿ ಪಡೆಯುವುದು ಅಗತ್ಯವಾಗಿದೆ. ದಿನಪತ್ರಿಕೆಯಲ್ಲಿ ಪ್ರಕಟವಾಗುವ ಜಾಹೀರಾತಿಗೆ ಅನುಮತಿ ಬೇಕಿಲ್ಲವಾದರು, ಮತದಾನ ಮುಕ್ತಾಯದ ಪೂರ್ವ 48 ಗಂಟೆ ಅವಧಿಯಲ್ಲಿ ಮುದ್ರಣ ಮಾಧ್ಯಮದಲ್ಲಿ ಪ್ರಕಟವಾಗುವ ಚುನಾವಣಾ ಜಾಹೀರಾತಿಗೂ ಪೂರ್ವಾನುಮತಿ ಪಡೆಯಬೇಕಿದೆ ಎಂದರು.
*ಎಕ್ಸಿಟ್ ಪೋಲ್ ಭಿತ್ತರಿಸುವಂತಿಲ್ಲ:*
ಸಾರ್ವತ್ರಿಕ ಲೋಕಸಭಾ ಚುನಾವಣೆ-2024 ಒಟ್ಟು 7 ಹಂತದಲ್ಲಿ ನಡೆಯುತ್ತಿದ್ದು, ಕಲಬುರಗಿ ಲೋಕಸಭಾ ಕ್ಷೇತದ ಚುನಾವಣೆ ಮೂರನೇ ಹಂತದಲ್ಲಿ ಅಂದರೆ ಮೇ 7 ರಂದು ಮತದಾನ ನಡೆಯಲಿದೆ. ಚುನಾವಣಾ ಆಯೋಗದ ಮಾರ್ಗಸೂಚಿಯಂತೆ ಏಪ್ರಿಲ್ 19ರ ಬೆಳಿಗ್ಗೆ 7 ಗಂಟೆಯಿಂದ ಜೂನ್ 1ರ ಸಾಯಂಕಾಲ 6.30 ಗಂಟೆ ವರೆಗೆ ಎಕ್ಸಿಟ್ ಪೋಲ್ ಭಿತ್ತರಿಸುವಂತಿಲ್ಲ ಎಂದು ಡಿ.ಸಿ. ಸ್ಪಷ್ಟಪಡಿಸಿದರು.
*ಹೆಸರು ನೋಂದಣಿಗೆ ಇನ್ನು ಅವಕಾಶ:*
ಇದೂವರೆಗೆ ಮತದಾರರ ಪಟ್ಟಿಯಲ್ಲಿ ಹೆಸರು ನೊಂದಾಯಿಸಿದವರು ಏಪ್ರಿಲ್ 10ರ ವರೆಗೆ ಹೆಸರು ಸೇರ್ಪಡೆಗೆ ನಮೂನೆ 6ರಲ್ಲಿ ಮತ್ತು ತಿದ್ದುಪಡಿಗೆ ನಮೂನೆ-8ರಲ್ಲಿ ಭೌತಿಕ ಮತು ಆನ್‍ಲೈನ್ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ ಎಂದು ಡಿ.ಸಿ. ಬಿ.ಫೌಜಿಯಾ ತರನ್ನುಮ್ ಮಾಹಿತಿ ನೀಡಿದರು.
*ಸಿ-ವಿಜಿಲ್‍ನಲ್ಲಿ ದೂರು ಕೊಡಿ:*
ಚುನಾವಣಾ ಅಕ್ರಮ, ಎಂ.ಸಿ.ಸಿ. ಉಲ್ಲಂಘನೆ ಸೇರಿದಂತೆ ಚುನಾವಣೆಗೆ ಸಂಬಂಧಿಸಿದ ಏನೇ ದೂರುಗಳಿದಲ್ಲಿ ಸಿ-ವಿಜಿಲ್ ತಂತ್ರಾಂಶ ಮತ್ತು 1950 ಟೋಲ್ ಫ್ರೀ ಸಂಖ್ಯೆಗೆ ಕರೆ ಮಾಡಿ ಮುಕ್ತವಾಗಿ ದೂರು ಸಲ್ಲಿಸಬಹುದು ಎಂದು ಡಿ.ಸಿ. ಬಿ.ಫೌಜಿಯಾ ತರನ್ನುಮ್ ತಿಳಿಸಿದರು.
*27.32 ಲಕ್ಷ ಹಣ, 57.14 ಲಕ್ಷ ಮೌಲ್ಯದ ವಸ್ತುಗಳು ಜಪ್ತಿ:*
ಮಾದರಿ ನೀತಿ ಸಂಹಿತೆ ಕಟ್ಟುನಿಟಾಗಿ ಪಾಲಿಸುವ ನಿಟ್ಟಿನಲ್ಲಿ ಜಿಲ್ಲೆಯಲ್ಲಿ 39 ಕಡೆ ಚೆಕ್ ಪೋಸ್ಟ್ ಸ್ಥಾಪಿಸಿ ಪೊಲೀಸ್, ಎಸ್.ಎಸ್.ಟಿ., ಎಫ್.ಎಸ್.ಟಿ ತಂಡದಿಂದ ತೀವ್ರ ತಪಾಸಣೆ ಕೈಗೊಂಡ ಪರಿಣಾಮ ಇದೂವರೆಗೆ ದಾಖಲೆ ಇಲ್ಲದ 27,32,000 ರೂ. ಹಣ ವಶಕ್ಕೆ ಪಡೆಯಲಾಗಿದೆ. ಅಕ್ರಮವಾಗಿ ಸಾಗಿಸುತ್ತಿದ್ದ 7,72,999 ರೂ. ಮೌಲ್ಯದ 2,997 ಲೀಟರ್ ಮದ್ಯ, 97,580 ರೂ. ಮೌಲ್ಯದ 4.204 ಕೆ.ಜಿ. ಡ್ರಗ್ಸ್/ ನಾಕೋಟಿಕ್ಸ್, 637670 ಮೌಲ್ಯದ 114.71 ಗ್ರಾಂ ಚಿನ್ನ ಮತ್ತು 3.289 ಕೆ.ಜಿ. ಬೆಳ್ಳಿ, 7,55,050 ರೂ. ಮೌಲ್ಯದ 25,680 ಕೆ.ಜಿ. ಪಿ.ಡಿ.ಎಸ್. ಅಕ್ಕಿ, ಕೃತ್ಯದಲ್ಲಿ ಭಾಗಿಯಾದ 30,35,000 ರೂ. ಮೌಲ್ಯದ 14 ದ್ವಿಚಕ್ರ, 8 ಆಟೋ ಹಾಗೂ 2 ನಾಲ್ಕು ಚಕ್ರ ವಾಹನ ವಶಕ್ಕೆ ಪಡೆದು ಒಟ್ಟಾರೆ 57,14,565 ರೂ. ಮೌಲ್ಯದ ವಸ್ತುಗಳು ವಶಕ್ಕೆ ಪಡೆಯಲಾಗಿದೆ ಎಂದು ಮಾಹಿತಿ ನೀಡಿದರು.
ರಾಷ್ಟ್ರ ಮಟ್ಟದ ಮಾಸ್ಟರ್ ಟ್ರೇನರ್ ಡಾ.ಶಶಿಶೇಖರ ರೆಡ್ಡಿ ಅವರು ಸವಿಸ್ತಾರವಾಗಿ ಜಿಲ್ಲಾ ಮಾಧ್ಯಮ ಮತ್ತು ಪ್ರಾಣೀಕರಣ ಕಣ್ಗಾವಲು ಸಮಿತಿ ಕಾರ್ಯನಿರ್ವಹಣೆ, ಕಾಸಿಗಾಗಿ ಸುದ್ದಿ, ಜಾಹೀರಾತು ಪೂರ್ವಾನುಮತಿ ಕುರಿತು ಪಿ.ಪಿ.ಟಿ. ಪ್ರಾತ್ಯಕ್ಷಿಕೆ ಮೂಲಕ ಮಾಹಿತಿ ನೀಡಿದರು.
ಜಿಲ್ಲಾ ಪಂಚಾಯತ್ ಸಿ.ಇ.ಓ ಭಂವರ್ ಸಿಂಗ್ ಮೀನಾ, ಡಿ.ಸಿ.ಪಿ ಕನಿಕಾ ಸಿಕ್ರಿವಾಲ್, ಅಪರ ಜಿಲ್ಲಾಧಿಕಾರಿ ರಾಯಪ್ಪ ಹುಣಸಗಿ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಉಪನಿರ್ದೇಶಕ ಸಿದ್ದೇಶ್ವರಪ್ಪ ಜಿ.ಬಿ. ಸೇರಿದಂತೆ ಪತ್ರಕರ್ತರು ಭಾಗವಹಿಸಿದ್ದರು.