ಶಹಾಬಾದ: ಮನುಷ್ಯನ ಒಳ ಮನಸ್ಸಿನಲ್ಲಿ ಅಡಗಿರುವ ಅಹಂಕಾರ, ಅಜ್ಞಾನ, ಸ್ವಾರ್ಥ ಮೊದಲಾದ ಶತ್ರುಗಳನ್ನು ದಮನಿಸಲು ಗುರು ನೆರವಾಗುತ್ತಾನೆ ಎಂದು ಉಜ್ಜಯಿನಿಯ ಜಗದ್ಗುರು ಸಿದ್ದಲಿಂಗರಾಜದೇಶಿಕೇಂದ್ರ ಶಿವಾಚಾರ್ಯರು ಹೇಳಿದರು.
ಅವರು ತಾಲೂಕಿನ ಮರತೂರ ಗ್ರಾಮದ ಕಾಶಿ ವಿಶ್ವನಾಥ ದೇವಸ್ಥಾನದಲ್ಲಿ ಶುಕ್ರವಾರದಂದು ಆಯೋಜಿಸಲಾದ ಧಾರ್ಮಿಕ ಕಾರ್ಯಕ್ರಮ ಹಾಗೂ ಧರ್ಮಸಭೆ ಕಾರ್ಯಕ್ರಮದಲ್ಲಿ ಸಾನ್ನಿಧ್ಯ ವಹಿಸಿ ಮಾತನಾಡಿದರು.
ಗುರುವಿನ ಕರುಣೆಯೇ ಸಂಸ್ಕಾರವಾಗಿದ್ದು ಸಂಸ್ಕಾರದಿಂದ ಮನುಷ್ಯನ ಮೌಲ್ಯ ಹೆಚ್ಚುತ್ತದೆ. ಸಂಸ್ಕಾರ ಧರ್ಮದಿಂದ ಬದುಕಿದ ಮಾನವ ಮಹದೇವನಾಗುತ್ತಾನೆ. ಅವನ ಉನ್ನತಿಯ ಜತೆಗೆ ಧರ್ಮದ ಚಲನಶೀಲತೆಗೂ ವೇಗ ದೊರೆಯುತ್ತದೆ. ನಾವು ಸಂಸ್ಕಾರವಂತರಾಗಿ ನಮ್ಮ ಮುಂದಿನ ಪೀಳಿಗೆಯನ್ನು ಸನ್ಮಾರ್ಗದಲ್ಲಿ ನಡೆಯುವಂತೆ ಪ್ರೇರೇಪಿಸಬೇಕು ಎಂದರು.
ಬದುಕಿಗೆ ಭಗವಂತ ಕೊಟ್ಟ ಕೊಡುಗೆ ಅಪಾರ ಅಮೂಲ್ಯ. ಏನೆಲ್ಲವನ್ನು ಕೊಟ್ಟ ಭಗವಂತನನ್ನು ಬದುಕಿನಲ್ಲಿ ನೆನಪಿಸಿಕೊಳ್ಳುವುದು ಮುಖ್ಯ. ಹುಟ್ಟು ಸಾವು ಯಾರನ್ನು ಬಿಟ್ಟಿಲ್ಲ. ಜೀವನ ತೆರೆದಿಟ್ಟ ಪುಸ್ತಕ. ಅದರ ಮೊದಲ ಪುಟದಲ್ಲಿ ಹುಟ್ಟು ಕೊನೆ ಪುಟದಲ್ಲಿ ಸಾವು ಭಗವಂತ ಬರೆದು ಕಳಿಸಿದ್ದಾನೆ. ಈ ಹುಟ್ಟು ಸಾವುಗಳ ಮಧ್ಯದ ಬದುಕು ಶ್ರೀಮಂತ ಮತ್ತು ಸಮೃದ್ಧಗೊಳಿಸಿಕೊಳ್ಳಬೇಕಾದದ್ದು ಅವರವರ ಜವಾಬ್ದಾರಿ. ಅರಿವಿನ ಜನ್ಮದಲ್ಲಿ ಹುಟ್ಟಿ ಪರಮ ಗುರುವಿನ ಕಾರುಣ್ಯದಿಂದ ಸಂಸ್ಕಾರವಂತನಾಗಿ ಬಾಳಿದರೆ ಬದುಕು ಸಾರ್ಥಕಗೊಳ್ಳುತ್ತದೆ.
ಪಾಳಾದ ಗುರುಮೂರ್ತಿ ಶಿವಾಚಾರ್ಯರು ಮಾತನಾಡಿ, ಧರ್ಮಗಳು ಹಲವು. ಆಚರಣೆಗಳು ಹಲವು. ಆದರೆ ಎಲ್ಲ ಧರ್ಮಗಳ ಧ್ಯೇಯ ಮಾನವ ಕಲ್ಯಾಣ. ಸಮೃದ್ಧ ಸಾರ್ಥಕ ಬದುಕಿಗೆ ಧರ್ಮ ಪರಿಪಾಲನೆ ಅವಶ್ಯಕ. ಅಂತರಂಗ ಬಹಿರಂಗ ಶುದ್ಧಿ ವೀರಶೈವ ಧರ್ಮದ ಪರಮ ಗುರಿಯಾಗಿದೆ. ಆಕಾಶದಿಂದ ಬಿದ್ದ ನೀರು ಜಗದ ಕೊಳೆ ತೊಳೆದು, ಲಕ್ಷಾಂತರ ಜೀವ ಜಂತುಗಳ ಅವಶ್ಯಕತೆ ಪೂರೈಸಿ ಸಮುದ್ರ ಸೇರುವಂತೆ ಗುರುವಿನ ನುಡಿಗಳು ನಮ್ಮ ಅಂಧಕಾರ, ಅಜ್ಞಾನ ತೊಡೆದು ಜ್ಞಾನಸಾಗರಕ್ಕೆ ನಮ್ಮನ್ನು ತಲುಪಿಸಲಿ ಎಂದು ಆಶಿಸಿದರು.
ಜಿಪಂ ಮಾಜಿ ಸದಸ್ಯ ಶಿವಾನಂದ ಪಾಟೀಲ ಮರತೂರ,ಬಾಸಾಬ ದೇಶಮುಖ,ಅಜೀತಕುಮಾರ ಪೊಲೀಸ್ ಪಾಟೀಲ,ಡಾ.ಬಸವರಾಜ ಪಾಟೀಲ,ಅಪ್ಪಾಸಾಬ ಪಾಟೀಲ,ಕರಬಸಪ್ಪ ರಾಯನಾಡ,ಶ್ಯಾಮರಾಯಗೌಡ ಮಾಲಿ ಪಾಟೀಲ,ಸಿದ್ದರಾಮಗೌಡ ಮಾಲಿಪಾಟೀಲ,ನೀಲಕಂಠ ಕೊಂಡಗೂಳ,ಶರಣಯ್ಯ ಮಠಪತಿ,ಗೌರಿಶಂಕರ ಪಾಟೀಲ,ಸಿದ್ದರಾಮಗೌಡ ಅಫಜಲಪೂರ, ಭೀಮಾಶಂಕರ ಖೇಣಿ, ವಿದ್ಯಾಸಾಗರ ಕುಲಕರ್ಣಿ,ಬಸವರಾಜ ಪಾಳಾ, ಮುದಗಲ್ ಸೇರಿದಂತೆ ಅನೇಕರು ಇದ್ದರು.
ಶಶೀಧರ್ ಶಾಸ್ತ್ರಿ ನಿರೂಪಿಸಿದರು, ಡಾ.ರವೀಂದ್ರ ನರೋಣಿ ಸ್ವಾಗತಿಸಿದರು,ಶಿವಾನಂದ ಪಾಟೀಲ ನುಡಿಸೇವೆ ಸಲ್ಲಿಸಿದರು.