ರಾಜಕೀಯ ಬಂಡವಾಳಿಗರ ನಾಟಕ ರಂಗ; ಎಸ್‍ಯುಸಿಐ ಪಕ್ಷದಿಂದ ಎಸ್.ಎಂ.ಶರ್ಮಾ ಸ್ಪರ್ಧೆ

0
32

ವಾಡಿ: ಸ್ವಾತಂತ್ರ್ಯಾ ನಂತರದ ಸರ್ಕಾರಗಳ ಆಡಳಿತ ಸೌಧಗಳಾದ ವಿಧಾನಸಭೆ ಮತ್ತು ಲೋಕಸಭೆಗಳು ಬಂಡವಾಳಿಗರ ನಾಟಕರಂಗಗಾಳಾಗಿ ಪರಿವರ್ತನೆಯಾಗಿವೆ. ರಾಜಕೀಯ ಎಂಬುದು ಶೋಷಕರ ಕೈಗೊಂಬೆಯಾಗಿದೆ ಎಂದು ಸೋಷಲಿಸ್ಟ್ ಯುನಿಟಿ ಸೆಂಟರ್ ಆಫ್ ಇಂಡಿಯಾ (ಎಸ್‍ಯುಸಿಐ) ಕಮ್ಯುನಿಸ್ಟ್ ಪಕ್ಷದ ರಾಜ್ಯ ಸೆಕ್ರೆಟೇರಿಯೇಟ್ ಸದಸ್ಯ ಕಾಮ್ರೇಡ್ ಎಂ.ಶಶಿಧರ್ ಆರೋಪಿಸಿದರು.

ಕಲಬುರಗಿ ಲೋಕಸಭೆ ಸಭೆ ಚುನಾವಣೆಯ ಎಸ್‍ಯುಸಿಐ (ಕಮ್ಯುನಿಸ್ಟ್) ಪಕ್ಷದ ಅಭ್ಯರ್ಥಿ ಕಾಮ್ರೇಡ್ ಎಸ್.ಎಂ.ಶರ್ಮಾ ಪರ ಪ್ರಚಾರ ನಿಮಿತ್ತ ಮಂಗಳವಾರ ಚಿತ್ತಾಪುರ ತಾಲೂಕಿನ ವಾಡಿ ಪಟ್ಟಣದಲ್ಲಿ ಏರ್ಪಡಿಸಲಾಗಿದ್ದ ಸುದ್ದಿಗೋಷ್ಠಿ ಉದ್ದೇಶಿಸಿ ಅವರು ಮಾತನಾಡಿದರು. ಏಳು ದಶಕಗಳ ಕಾಲ ಕಾಂಗ್ರೆಸ್ ಆಡಳಿತ ನಡೆಸಿ ಟಾಟಾ, ಬಿರ್ಲಾ, ಅಂಬಾನಿಗಳ ಪಾದ ಸೇವೆ ಮಾಡಿದರೆ, ಕಳೆದ ಹತ್ತು ವರ್ಷಗಳಿಂದ ಅಧಿಕಾರದಲ್ಲಿರುವ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರ್ಕಾರ ಅದಾನಿ ಎಂಬ ಮಹಾ ಶೋಷಕನಿಗೆ ಸರ್ಕಾರಿ ಸಂಸ್ಥೆಗಳನ್ನು ಒತ್ತೆಯಿಟ್ಟಿದೆ. ಬೆಲೆ ಏರಿಕೆ, ನಿರುದ್ಯೋಗ, ಭ್ರಷ್ಟಾಚಾರದಂತ ಸಮಸ್ಯೆಗಳನ್ನು ಜೀವಂತವಾಗಿಟ್ಟು ದೇಶದ ಜನರ ಬದುಕು ಮೂರಾಬಟ್ಟೆ ಮಾಡಿದೆ ಎಂದು ಹರಿಹಾಯ್ದರು.

Contact Your\'s Advertisement; 9902492681

ಕಾಂಗ್ರೆಸ್ ಸರ್ಕಾರದ ಗ್ಯಾರಂಟಿಗಳು ಮತ್ತು ಬಿಜೆಪಿ ಸರ್ಕಾರದ ಅಚ್ಚೇ ದಿನಗಳ ಭ್ರಮೆಗಳು ಜನರನ್ನು ಮತ್ತಷ್ಟು ಪಾತಾಳಕ್ಕೆ ತುಳಿದು ಹಾಕಿವೆ. ಜನರ ಮತವನ್ನು ಕೋಮುವಾದದ ಮೂಲಕ ಧ್ರುವೀಕರಣ ಮಾಡಲು ಮಂದಿರ, ಮಸೀದಿ, ಬಾವುಟ, ಸಿಎಎ ಮುಂತಾದ ಬಗೆಬಗೆಯ ದಾರಿಗಳನ್ನು ಬಿಜೆಪಿ ಹುಡುಕುತ್ತಿದೆ. ಚುನಾವಣಾ ಆಯೋಗವನ್ನೇ ತನ್ನ ಹಿಡಿತದಲ್ಲಿ ಇಟ್ಟುಕೊಳ್ಳಲು ಕಾನೂನಿಗೆ ತಿದ್ದುಪಡಿ ತಂದಿದೆ ಎಂದು ಗಂಭೀರ ಆರೋಪ ಮಾಡಿದ ಶಶಿಧರ್, ಪ್ರಸಕ್ತವಾಗಿ ನಡೆಯುತ್ತಿರುವ ಚುನಾವಣೆ ಬಂಡವಾಳಶಾಹಿ ಮತ್ತು ಕಾರ್ಮಿಕರ ನಡುವಿನ ಹಾಗೂ ಶೋಷಕರು ಮತ್ತು ಶೋಷಿತರ ನಡುವಿನ ಸಮರವಾಗಿದೆ. ಪ್ರಸಕ್ತ ಹದಗೆಟ್ಟ ಸಾಮಾಜಿಕ ವ್ಯವಸ್ಥೆ ಸರಿಪಡಿಸಲು ಚುನಾವಣೆಗಳು ಪರಿಹಾರವಲ್ಲ. ಸಮಾಜವಾದವೇ ಇದಕ್ಕೆ ನೈಜ ಪರಿಹಾರ. ಪರಿಣಾಮ ಉದಾತ್ತ ಚಿಂತನೆಗಳನ್ನು ಎತ್ತಿ ಹಿಡಿದಿರುವ ಎಸ್‍ಯುಸಿಐ ಪಕ್ಷದ ಅಭ್ಯರ್ಥಿಯನ್ನು ಜನರು ಗೆಲ್ಲಿಸಬೇಕು ಎಂದು ಮನವಿ ಮಾಡಿದರು.

ಎಸ್‍ಯುಸಿಐ ಅಭ್ಯರ್ಥಿ ಕಾಮ್ರೇಡ್ ಎಸ್.ಎಂ.ಶರ್ಮಾ ಮಾತನಾಡಿ, ಚುನಾವಣೆಗಳು ಎಂದರೆ ಪ್ರಜಾಪ್ರಭುತ್ವ ವ್ಯವಸ್ಥೆಯ ಬಹುದೊಡ್ಡ ಹಬ್ಬ ಎನ್ನಲಾಗುತ್ತದೆ. ಆದರೆ ಈ ಹಬ್ಬವನ್ನು ಕಾಂಗ್ರೆಸ್ ಮತ್ತು ಬಿಜೆಪಿ ಪಕ್ಷಗಳು ಮತದಾರರಿಗೆ ಹಣ ಹೆಂಡ ಹಂಚುವ ಮೂಲಕ ಆಚರಿಸುತ್ತಿವೆ. ಹಿಂದೆ ಮಾಡಿದ ಅಭಿವೃದ್ಧಿ ಕುರಿತು ಅಥವ ಮುಂದೆ ಮಾಡುವ ಜನಪರ ಕೆಲಸಗಳ ಬಗ್ಗೆ ತುಟಿಬಿಚ್ಚಲ್ಲ. ಧರ್ಮ, ದೇವರು, ವಿಶ್ವಗುರು, ಪಾಕೀಸ್ತಾನ, ಮುಸಲ್ಮಾನರು, ಭಯೋತ್ಪಾದಕರು, ಗಡಿ ಯುದ್ಧಗಳನ್ನು ಮುನ್ನೆಲೆಗೆ ತಂದು ಜನರನ್ನು ದಿಕ್ಕುತಪ್ಪಿಸಲು ಇಲ್ಲಸಲ್ಲದ ನಾಟಕಗಳನ್ನು ಮಾಡುತ್ತಾರೆ ಎಂದು ದೂರಿದರು. ಜನರು ಮತಗಳನ್ನು ಬಂವಾಳಿಗರ ಪಕ್ಷಗಳಿಗೆ ಮಾರಿಕೊಳ್ಳದೆ ಪ್ರಾಮಾಣಿಕರಿಗೆ ನೀಡಲು ಮನಸ್ಸು ಮಾಡಿದರೆ ದೇಶದಲ್ಲಿ ಎಸ್‍ಯುಸಿಐ ಅಭ್ಯರ್ಥಿಗಳು ಗೆಲ್ಲುವುದು ಗ್ಯಾರಂಟಿ ಎಂದರು.

ಎಸ್‍ಯುಸಿಐ ಪಕ್ಷದ ಕಾರ್ಯದರ್ಶಿ ಕಾಮ್ರೇಡ್ ವೀರಭದ್ರಪ್ಪ ಆರ್.ಕೆ, ಸದಸ್ಯರಾದ ಶರಣು ಹೇರೂರ, ಗೌತಮ ಪರ್ತೂರಕರ, ವೆಂಕಟೇಶ ದೇವದುರ್ಗಾ ಉಪಸ್ಥಿತರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here