ಕಲಬುರಗಿ: ಕೋಲಿ ಕಬ್ಬಲಿಗ ಸಮಾಜವನ್ನು ಎಸ್ ಟಿ ಗೆ ಸೇರಿಸುವ ರಾಜ್ಯದ ಪ್ರಸ್ತಾವನೆಯನ್ನು ಕೇಂದ್ರ ತಿರಸ್ಕರಿಸಿದೆ. ಆದರೆ ಸಮಾಜದ ಮುಖಂಡರೊಂದಿಗೆ ಚರ್ಚಿಸಿ ಮತ್ತೊಮ್ಮೆ ಪ್ರಸ್ತಾವನೆಯನ್ನು ಖುದ್ದಾಗಿ ಕೇಂದ್ರಕ್ಕೆ ಸಲ್ಲಿಸಲಾಗುವುದು ಎಂದು ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಸಚಿವ ಪ್ರಿಯಾಂಕ್ ಖರ್ಗೆ ಹೇಳಿದರು
ಕಲಬುರಗಿ ಯಾದಗಿರಿ ಜಿಲ್ಲೆಗಳ ಕೋಲಿ ಕಬ್ಬಲಿಗ ಸಮಾಜದ ಮುಖಂಡರ ಸಭೆಯಲ್ಲಿ ಭಾಗವಹಿಸಿ ಅವರು ಮಾತನಾಡುತ್ತಿದ್ದರು.
ಸಮಾಜವನ್ನು ಎಸ್ ಟಿ ಗೆ ಸೇರಿಸುವುದಾಗಿ ಭರವಸೆ ನೀಡಿ ನಿಮ್ಮಿಂದ ಮತ ಪಡೆದವರು ಈಗ ಎಲ್ಲಿದ್ದಾರೆ?
ಎಂದು ಪ್ರಶ್ನಿಸಿದ ಸಚಿವರು, ಸಮಾಜವನ್ನು ದಾರಿ ತಪ್ಪಿಸಿ ಮತ ಪಡೆದ ಸಂಸದ ಉಮೇಶ್ ಜಾಧವ ಯಾವುದೇ ಕ್ರಮ ಕೈಗೊಂಡಿಲ್ಲ. ಅವರು ಕೇವಲ ಮನವಿ ಪತ್ರ ( MP ) ಸಲ್ಲಿಸಿ ಫೋಟೋ ತೆಗೆಸಿಕೊಳ್ಳುವುದರಲ್ಲೇ ನಿಸ್ಸಿಮರು ಎಂದು ತಿವಿದರು.
ಕಾಂಗ್ರೆಸ್ ಪಕ್ಷ ಕೋಲಿ ಕಬ್ಬಲಿಗ ಸಮಾಜ ಸೇರಿದಂತೆ ಹಿಂದುಳಿದ ವರ್ಗದ ಸಾಮಾಜಿಕ ಹಾಗೂ ಆರ್ಥಿಕ ಸುಭದ್ರತೆಗೆ ಕ್ರಮ ಕೈಗೊಂಡಿದೆ.” ನೀವು ಅಂಬಿಗರು ನಂಬಿಕಸ್ಥರು. ನಿಮ್ಮನ್ನು ನಂಬಿ ನಿಮ್ಮ ದೋಣೆಯಲ್ಲೇ ಕುಳಿತಿದ್ದೇವೆ. ನಮ್ಮನ್ನು ದಂಡೆಗೆ ಮುಟ್ಟಿಸಿ ” ಎಂದು ಮಾರ್ಮಿಕವಾಗಿ ಹೇಳುವ ಮೂಲಕ ಕಾಂಗ್ರೆಸ್ ಅಭ್ಯರ್ಥಿ ರಾಧಾಕೃಷ್ಣ ಅವರಿಗೆ ಮತ ನೀಡುವಂತೆ ಮನವಿ ಮಾಡಿದರು.
ನಿಜ ಶರಣ ಅಂಬಿಗರ ಚೌಡಯ್ಯನವರ ಪ್ರತಿಮೆಯನ್ನು ಬೆಂಗಳೂರು ಹಾಗೂ ಕಲಬುರಗಿ ಯಲ್ಲಿ ಸ್ಥಾಪಿಸುವುದಾಗಿ ಭರವಸೆ ನೀಡಿದ ಸಚಿವರು, ಕೇವಲ ಪ್ರತಿಮೆ ಮಾತ್ರ ಸ್ಥಾಪನೆ ಮಾಡಿದರೆ ಸಾಲದು ಚೌಡಯ್ಯನವರ ವಚನಗಳನ್ನು ಪಾಲನೆ ಮಾಡಬೇಕು ಎಂದು ಮನವಿ ಮಾಡಿದರು.
ವೈದ್ಯಕೀಯ ಶಿಕ್ಷಣ ಸಚಿವರಾದ ಶರಣಪ್ರಕಾಶ ಪಾಟೀಲ ಮಾತನಾಡಿ ಸಮಾಜದ ನ್ಯಾಯಯುತ ಬೇಡಿಕೆ ಈಡೇರಿಕೆಗೆ ಕಾಂಗ್ರೆಸ್ ಅವಧಿಯಲ್ಲಿ ಕೇಂದ್ರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿತ್ತು. ಆದರೆ ಕೆಲ ಕಾನೂನು ತೊಡಕುಗಳಿಂದಾಗಿ ಪ್ರಸ್ತಾಪವನೆ ವಾಪಸ್ ಬಂದಿದೆ. ಹಾಗಾಗಿ ಇದು ಭಾವನಾತ್ಮಕ ವಿಷಯವಾಗಿದೆ. ಈ ನಿಟ್ಟಿನಲ್ಲಿ ಕೇಂದ್ರ ನಿರ್ಣಯ ಮಾಡಬೇಕಾಗಿದೆ. ಈ ವಿಷಯದಲ್ಲಿ ಕಾಂಗ್ರೆಸ್ ಪಕ್ಷ ಸಮಾಜದೊಂದಿಗೆ ಇದೆ ಎಂದರು.
ಕೋಲಿ ಸಮಾಜವನ್ನು ಎಸ್ ಟಿ ಪಟ್ಟಿಗೆ ಸೇರಿಸದೆ ಇರುವುದಕ್ಕೆ ಬಿಜೆಪಿ ಸರ್ಕಾರದ ಧೋರಣೆಯೇ ಕಾರಣ ಎಂದ ಆರೋಪಿಸಿದ ಅವರು ಹಿಂದುಳಿದ ವರ್ಗಗಳ ಅಭಿವೃದ್ದಿ ಬಿಜೆಪಿ ಗೆ ಬೇಕಿಲ್ಲ ಅದು ಯಾವೊತ್ತು ಸಾಮಾಜಿಕ ನ್ಯಾಯ ಕೊಟ್ಟಿಲ್ಲ. ಈ ಸಮಾಜಕ್ಕೆ ನ್ಯಾಯ ಕೊಡುವ ಕೆಲಸ ಕಾಂಗ್ರೆಸ್ ನಿಂದ ಮಾತ್ರ ಸಾಧ್ಯ ಎಂದು ಡಾ ಶರಣಪ್ರಕಾಶ ಅಭಿಪ್ರಾಯಪಟ್ಟು ನಮ್ಮ ಸರ್ಕಾರ ಸಂಪೂರ್ಣ ಬಹುಮತದಿಂದ ಅಧಿಕಾರಕ್ಕೆ ಬಂದರೆ ಇದು ಸಾಧ್ಯವಾಗಲಿದೆ ಎಂದರು.
ಮೀಸಲಾತಿ ತೆಗೆಯುವುದು ಬಿಜೆಪಿಯ ಏಕೈಕ ಅಜೆಂಡಾ ಎಂದ ಸಚಿವರು, ಈ ಸಲ ನಾಲ್ಕು ನೂರು ಸೀಟು ಬಂದರೆ ಸಂವಿಧಾನ ಬದಲಾಯಿಸಲಾಗುವುದು ಎಂದು ಸಂಸದ ಅನಂತಕುಮಾರ್ ಹೇಳಿದ್ದಾರೆ. ಆದರೆ, ಅಂಬೇಡ್ಕರ್ ಬಂದರೂ ಸಂವಿಧಾನ ಬದಲಾವಣೆ ಅಸಾಧ್ಯ ಎಂದು ಮೋದಿ ಹೇಳುತ್ತಾರೆ. ಒಟ್ಟಾರೆ ಸಂವಿಧಾನ ಬದಲಾವಣೆ ಅವರ ಏಕೈಕ ಉದ್ದೇಶವಾಗಿದೆ ಎಂದರು.
ಮಾಜಿ ಸಚಿವ ಬಾಬುರಾವ್ ಚಿಂಚನಸೂರು ಮಾತನಾಡಿ ಕೋಲಿ ಸಮಾಜವನ್ನು ಎಸ್ ಟಿ ಗೆ ಸೇರಿಸಿದ ನಂತರವಷ್ಟೇ ತಾವು ನಿರ್ಗಮಿಸುವುದಾಗಿ ಘೋಷಿಸಿದರು.
ಕೋಲಿ ಸಮಾಜವನ್ನು ಎಸ್ ಟಿ ಗೆ ಸೇರಿಸುವ ಹೋರಾಟಕ್ಕೆ ವಿಠಲ್ ಹೇರೂರು ನಾಂದಿ ಹಾಡಿ ಅದೇ ಹೋರಾಟದಲ್ಲೇ ನಮ್ಮನ್ನಗಲಿದರು. ಈಗ ಮತ್ತೆ ಅದೇ ರೀತಿಯಲ್ಲಿ ಹೋರಾಟ ಮುಂದುವರೆಸಬೇಕಿದೆ. ಸಚಿವರಾದ ಪ್ರಿಯಾಂಕ್ ಖರ್ಗೆ ಹಾಗೂ ಶರಣಪ್ರಕಾಶ ಪಾಟೀಲ್ ಅವರ ನೇತೃತ್ವದಲ್ಲಿ ಈ ಹೋರಾಟ ನಡೆಯಬೇಕಿದೆ. ಕೋಲಿ ಸಮಾಜದ ಬಂಧುಗಳು ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸಲಿದ್ದಾರೆ ಎಂದು ಎಂ ಎಲ್ ಸಿ ತಿಪ್ಪಣ್ಣಪ್ಪ ಕಮಕನೂರು ಹೇಳಿದರು.
ಕೋಲಿ ಸಮುದಾಯದ ರಾಜ್ಯಮಟ್ಟದ ಸಮಾವೇಶವನ್ನು ಇದೇ ತಿಂಗಳು 25 ರಿಂದ 27 ರವೆಗಿನ ಯಾವುದಾದರೂ ದಿನಾಂಕವನ್ನು ನಿಗದಿಪಡಿಸಿ ನಡೆಸಲಾಗುವುದು ಎಂದರು.
ವೇದಿಕೆಯ ಮೇಲೆ ಶರಣಪ್ಪ ಮಾನೇಗಾರ, ಭೀಮಣ್ಣ ಸಾಲಿ,ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ರಾಜಗೋಪಾಲರೆಡ್ಡಿ, ಮುದಿರಾಜ, ಬಸವರಾಜ್ ಬೂದಿಹಾಳ, ಬಸವರಾಜ ಹರವಾಳ, ಸಾಯಿಬಣ್ಣ ದತ್ತಾತ್ರೆಯ ರೆಡ್ಡಿ, ಸೇರಿದಂತೆ ಹಲವರಿದ್ದರು. ಹುಲಿಗೆಪ್ಪ ಕನಕಗಿರಿ ನಿರೂಪಿಸಿದರು. ಜಿಲ್ಲಾ ಕಾಂಗ್ರೆಸ್ ಪಕ್ಷದ (ಹಿಂದುಳಿದ ವರ್ಗಗಳ ) ಉಪಾಧ್ಯಕ್ಷ ಪಿಡ್ಡಪ್ಪ ಜಾಲಗಾರ ವಂದಿಸಿದರು.