ಸುರಪುರ: ತಾಲೂಕಿನ ದೇವರಗೋನಾಲ ಗ್ರಾಮದಲ್ಲಿ ಏಪ್ರಿಲ್ 19 ರಂದು ಹೈಯಾಳಲಿಂಗೇಶ್ವರ ದೇವಸ್ಥಾನದ ಅರ್ಚಕರಾದ ಸಕ್ರೆಪ್ಪ ತಾತನವರ ಕಲ್ಯಾಣ ಮಹೋತ್ಸವದ ಅಂಗವಾಗಿ ಹಮ್ಮಿಕೊಂಡಿರುವ ಸಾಮೂಹಿಕ ವಿವಾಹ ಕಾರ್ಯಕ್ರಮಕ್ಕೆ ಭರ್ಜರಿ ತಯಾರಿ ಆರಂಭಿಸಲಾಗಿದೆ.ಗ್ರಾಮದಲ್ಲಿನ ಹೈಯಾಳಲಿಂಗೇಶ್ವರ ದೇವಸ್ಥಾನದ ಆವರಣದಲ್ಲಿ ಗ್ರಾಮದ ಎಲ್ಲಾ ಮುಖಂಡರು ಸಭೆ ನಡೆಸಿದರು.
ಸಭೆಯಲ್ಲಿ ಭಾಗವಹಿಸಿದ್ದ ಸಕ್ರೆಪ್ಪ ತಾತಾ ಹಾಗೂ ಲಕ್ಷ್ಮೀಪುರ ಶ್ರೀಗಿರಿ ಮಠದ ಡಾ:ಚನ್ನಮಲ್ಲಿಕಾರ್ಜುನ ಶಿವಾಚಾರ್ಯ ಸ್ವಾಮೀಜಿಯವರು ಮಾತನಾಡಿ,ಇಡೀ ಗ್ರಾಮದ ಎಲ್ಲರು ಒಗ್ಗಟ್ಟಿನಿಂದ ಸಾಮೂಹಿಕ ವಿವಾಹ ಕಾರ್ಯಕ್ರಮ ಹಮ್ಮಿಕೊಂಡು ಸಕ್ರೆಪ್ಪ ತಾತನವರ ಕಲ್ಯಾಣ ಮಹೋತ್ಸವ ಅರ್ಥಪೂರ್ಣವಾಗಿ ನಡೆಸಲು ಮುಂದಾಗಿರುವುದು ತುಂಬಾ ಸಂತೋಷದ ಸಂಗತಿಯಾಗಿದೆ ಎಂದರು.
ಅಲ್ಲದೆ ಎಲ್ಲಾ ಹರಗುರು ಚರಮೂರ್ತಿಯರು ಕಾರ್ಯಕ್ರಮದಲ್ಲಿ ಭಾಗವಹಿಸುವುದರಿಂದ ಎಲ್ಲವನ್ನೂ ಅಚ್ಚುಕಟ್ಟಾಗಿ ನಡೆಸುವ ಮೂಲಕ ಮಾದರಿ ಕಾರ್ಯಕ್ರಮವನ್ನಾಗಿ ನಡೆಸೋಣ ಎಂದರು.
ಇದೇ ಸಂದರ್ಭದಲ್ಲಿ ಕಾರ್ಯಕ್ರಮದ ಯಶಸ್ಸಿಗೆ ವಿವಿಧ ಸಮಿತಿಗಳನ್ನು ರಚನೆ ಮಾಡಿ ಹಿರಿಯರ ಮಾರ್ಗದಶರ್ಶನದಲ್ಲಿ ಯುವಕರ ಸಮಿತಿಗಳ ಮೂಲಕ ಸಂಪೂರ್ಣ ಕಾರ್ಯಕ್ರಮ ಸುಶೂತ್ರವಾಗಿ ಯಶಸ್ವಿಗೊಳ್ಳಲು ರೂಪುರೇಷೆ ತಯಾರಿಸಲಾಯಿತು.
ಸಭೆಯಲ್ಲಿ ಗ್ರಾಮದ ಅನೇಕ ಜನ ಮುಖಂಡರು ಹಾಗೂ ನುರಾರು ಜನ ಹೈಯಾಳಲಿಂಗೇಶ್ವರ ಭಕ್ತರು ಭಾಗವಹಿಸಿದ್ದರು.