ಕಲಬುರಗಿ: ನಾವು ಮಾಡಿದ ಕೆಲಸಕ್ಕೆ ಈಗ ಮತದ ಕೂಲಿ ಕೇಳುತ್ತಿದ್ದೇವೆ. ನಾವು ಮತ್ತಷ್ಟು ಕೆಲಸ ಮಾಡಲು ನೀವು ಶಕ್ತಿ ನೀಡಬೇಕು ಎಂದು ಗ್ರಾಮೀಣಾಭಿವೃದ್ದಿ ಹಾಗೂ ಪಂಚಾಯತ್ ರಾಜ್ ಸಚಿವ ಪ್ರಿಯಾಂಕ್ ಖರ್ಗೆ ಹೇಳಿದರು.
ಜೇವರ್ಗಿ ತಾಲೂಕಿನ ಚಿಗರಳ್ಳಿ ಕ್ರಾಸ್ ಬಳಿ ಏರ್ಪಡಿಸಲಾಗಿದ್ದ ಕಾಂಗ್ರೆಸ್ ಅಭ್ಯರ್ಥಿ ರಾಧಾಕೃಷ್ಣ ದೊಡ್ಡಮನಿ ಅವರ ಪರ ಮತಯಾಚಿಸಿ ಅವರು ಮಾತನಾಡುತ್ತಿದ್ದರು.
ನಿಮ್ಮ ಮತದ ಆಶೀರ್ವಾದದಿಂದಾಗಿ ರಾಜ್ಯ ಸರ್ಕಾರ ಅಧಿಕಾರಕ್ಕೆ ಬಂದು ಚುನಾವಣೆಯಲ್ಲಿ ನೀಡಿದ ಭರವಸೆಯಂತೆ ಐದು ಗ್ಯಾರಂಟಿ ಯೋಜನೆಗಳನ್ನು ಜಾರಿಗೊಳಿಸಿದ್ದೇವೆ. ಇದರಿಂದ ರಾಜ್ಯದ ಅರ್ಹ ಫಲಾನುಭವಿಗಳು ಲಾಭಪಡೆಯುತ್ತಿದ್ದಾರೆ. ಶಕ್ತಿ ಯೋಜನೆಯಿಂದಾಗಿ ಮಹಿಳೆಯರು ಉಚಿತ ಬಸ್ ಪ್ರಯಾಣ ಮಾಡಿ ದೇವಸ್ಥಾನಗಳಿಗೆ ಭೇಟಿ ನೀಡುತ್ತಿದ್ದಾರೆ. ಈ ವಿಷಯವನ್ನು ಧರ್ಮಸ್ಥಳದ ಮಂಜುನಾಥ ಸ್ವಾಮಿ ದೇವಸ್ಥಾನ ಧರ್ಮಾಧಿಕಾರಿ ವಿರೇಂದ್ರ ಹೆಗ್ಗಡೆ ಹೇಳಿ ಹರ್ಷ ವ್ಯಕ್ತಪಡಿಸಿದ್ದಾರೆ ಎಂದರು.
ಈ ಸಲದ ಲೋಕಸಭೆ ಚುನಾವಣೆ ಕಾಂಗ್ರೆಸ್ ಹಾಗೂ ಬಿಜೆಪಿ ಅಭ್ಯರ್ಥಿಗಳ ನಡುವಿನ ಚುನಾವಣೆಯಲ್ಲ. ಬದಲಿಗೆ ಕಲಬುರಗಿ ಹಾಗೂ ದೇಶದ ಭವಿಷ್ಯ ನಿರ್ಧರಿಸುವ ಚುನಾವಣೆಯಾಗಿದೆ. ಜಿಲ್ಲೆಯ ಸಮಗ್ರ ಅಭಿವೃದ್ದಿಗೆ ಕಾಂಗ್ರೆಸ್ ಅಭ್ಯರ್ಥಿ ರಾಧಾಕೃಷ್ಣ ಅವರಿಗೆ ಮತ ನೀಡಿ. ಯುವಕರಿಗೆ ಉದ್ಯೋಗ, ಮಹಿಳೆಯರಿಗೆ ಸ್ವಾಭಿಮಾನದ ಜೀವನ, ರೈತರಿಗೆ ಸಹಾಯ ಸೇರದಂತೆ ಜನಪರ ಕೆಲಸ ಮಾಡುವ ಬದ್ದತೆ ಕಾಂಗ್ರೆಸ್ ಪಕ್ಷಕ್ಕೆ ಇದೆ ಎಂದರು.
ಕಲಬುರಗಿ ಯಿಂದ ಬೆಂಗಳೂರಿಗೆ ವಂದೇ ಭಾರತ ರೇಲ್ವೆ ಓಡಿಸಿದ್ದೇ ಸಂಸದರ ಸಾಧನೆಯಾಗಿದೆ. ಈ ರೇಲ್ವೆ ಬಡವರು ಪ್ರಯಾಣ ಮಾಡುವ ರೈಲ್ವೆಯಲ್ಲ. ಅಷ್ಟೊಂದು ದುಬಾರಿ ಬೆಲೆತೆತ್ತು ಬಡವರು ಪ್ರಯಾಣ ಮಾಡಲು ಸಾಧ್ಯವೇ ಇಲ್ಲವೆಂದರು.
ಮೋದಿ ರಾಷ್ಟ್ರ ಮಟ್ಟದಲ್ಲಿ ಸುಳ್ಳು ಹೇಳಿದ್ದರೆ ಜಾಧವ ವಿಭಾಗ ಮಟ್ಟದಲ್ಲಿ ಸುಳ್ಳು ಹೇಳುತ್ತಾರೆ ಎಂದ ಪ್ರಿಯಾಂಕ್ ಖರ್ಗೆ ಕೋಲಿ, ಕಬ್ಬಲಿಗ ಹಾಗೂ ಕುರುಬ ಸಮಾಜಗಳನ್ನು ಎಸ್ ಟಿ ಸೇರಿಸುವುದಾಗಿ ಹೇಳಿ ಮತ ಪಡೆದ ಜಾಧವ್ ಈ ವಿಚಾರವನ್ನೇ ಮರೆತುಬಿಟ್ಟಿದ್ದಾರೆ ಎಂದು ಟೀಕಿಸಿದರು.
ಅಭ್ಯರ್ಥಿ ರಾಧಾಕೃಷ್ಣ ದೊಡ್ಡಮನಿ ಮಾತನಾಡಿ, ಕಲಬುರಗಿ ಜಿಲ್ಲೆಯ ಅಭಿವೃದ್ದಿಗೆ ನೀಲಿ ನಕ್ಷೆ ತಯಾರಿಸಿದ್ದೇನೆ. ನೀವು ಆಶೀರ್ವಾದ ಮಾಡಿ ಸಂಸದನನ್ನಾಗಿ ಆಯ್ಕೆ ಮಾಡಿಕಳಿಸಿ ಅಭಿವೃದ್ಧಿ ಕೆಲಸ ಮಾಡಲು ಶಕ್ತಿ ತುಂಬಬೇಕು ಎಂದು ಹೇಳಿದರು.
ಕೆಕೆಆರ್ ಡಿಬಿ ಅಧ್ಯಕ್ಷ ಅಜಯ್ ಸಿಂಗ್ ಮಾತನಾಡಿ ರೈತರ ಆದಾಯ ದುಪ್ಪಟ್ಟು ಮಾಡುವುದಾಗಿ ಹೇಳಿದ್ದ ಮೋದಿ ಯಾವ ಆದಾಯ ದುಪ್ಪಟ್ಟು ಮಾಡಿಲ್ಲ. ಅವರು ಹೇಳಿದ್ದೆಲ್ಲ ಬರೀ ಸುಳ್ಳು ಎಂದರು.
ವೇದಿಕೆಯ ಮೇಲೆ ಡಿಸಿಸಿ ಅಧ್ಯಕ್ಷರಾದ ಜಗದೇವ ಗುತ್ತೇದಾರ, ಶಾಸಕರಾದ ಅಲ್ಲಮಪ್ರಭು ಪಾಟೀಲ, ತಿಪ್ಪಣ್ಣಪ್ಪ ಕಮಕನೂರು, ಕೇದಾರಲಿಂಗಯ್ಯ ಹಿರೇಮಠ ಸೇರಿದಂತೆ ಇತರರು ಇದ್ದರು.