ಮುಖವಾಡ ತೊಟ್ಟವರಿಗೆ ಮತ ಕೊಡಬೇಡಿ

0
17

ವಾಡಿ: ಸ್ವಾರ್ಥದ ಬದುಕಿಗಾಗಿ ದುಪ್ಪಟ್ಟು ದುಡ್ಡು ಮಾಡಲು ರಾಜಕಾರಣವನ್ನು ದುರ್ಬಳಕೆ ಮಾಡಿಕೊಳ್ಳುತ್ತಿರುವ ಭ್ರಷ್ಟ ರಾಜಕಾರಣಿಗಳು ಈಗ ಮತ್ತೊಮ್ಮೆ ಹೊಸ ಮುಖವಾಡಗಳನ್ನು ತೊಟ್ಟು ಮನೆ ಬಾಗಿಲಿಗೆ ಬರುತ್ತಿದ್ದಾರೆ. ಇಂಥಹವರಿಗೆ ಯಾವುದೇ ಕಾರಣಕ್ಕೂ ಮತ ಕೊಡಬೇಡಿ ಎಂದು ಸೋಷಲಿಸ್ಟ್ ಯುನಿಟಿ ಸೆಂಟರ್ ಆಫ್ ಇಂಡಿಯಾ (ಎಸ್‍ಯುಸಿಐ) ಕಮ್ಯುನಿಸ್ಟ್ ಪಕ್ಷದ ರಾಜ್ಯ ಸೆಕ್ರೆಟೇರಿಯೇಟ್ ಸದಸ್ಯ ಕಾಮ್ರೇಡ್ ಎಂ.ಶಶಿಧರ್ ಕರೆ ನೀಡಿದರು.

ಚಿತ್ತಾಪುರ ವಿಧಾನಸಭೆ ಮತಕ್ಷೇತ್ರ ವ್ಯಾಪ್ತಿಯ ಹಳಕರ್ಟಿ ಗ್ರಾಮದಲ್ಲಿ ಏರ್ಪಡಿಸಲಾಗಿದ್ದ ಎಸ್‍ಯುಸಿಐ ಪಕ್ಷದ ಬೆಂಬಲಿಗರು ಹಾಗೂ ಕಾರ್ಯಕರ್ತರ ಸಭೆ ಉದ್ದೇಶಿಸಿ ಅವರು ಮಾತನಾಡಿದರು. ಚುನಾವಣೆಯಲ್ಲಿ ಗೆದ್ದರೆ ಕ್ಷೇತ್ರದ ಅಭಿವೃದ್ಧಿ ಮಾಡುತ್ತೇನೆ. ನಿಮ್ಮ ಮನೆ ಮಗನಾಗಿ ದುಡಿಯುತ್ತೇನೆ. ನಮ್ಮ ಪಕ್ಷ ಅಧಿಕಾರಕ್ಕೆ ಬಂದರೆ ಬಡತನ ಹೋಗಲಾಡಿಸುತ್ತೇವೆ. ಬೆಲೆ ಏರಿಕೆ ನಿಯಂತ್ರಣ ಮಾಡುತ್ತೇವೆ. ಯುವಕರಿಗೆ ಉದ್ಯೋಗ ಕೊಡುತ್ತೇವೆ. ಹೀಗೆ ವಿವಿಧ ಭರವಸೆಗಳನ್ನು ಕೊಟ್ಟು ಗೆದ್ದು ಹೋದವರು ಒಮ್ಮೆಯೂ ಕ್ಷೇತ್ರದ ಜನರತ್ತ ಚಿತ್ತ ಹರಿಸಲಿಲ್ಲ. ಶೂನ್ಯ ಅಭಿವೃದ್ಧಿಯೇ ಇವರ ಕೊಡುಗೆಯಾಗಿದೆ. ಒಬ್ಬ ಭ್ರಷ್ಟನನ್ನು ಸೋಲಿಸಲು ಇನ್ನೊಬ್ಬ ಭ್ರಷ್ಟನಿಗೆ ಮತ ಕೊಟ್ಟು ಪ್ರಜಾಪ್ರಭುತ್ವದ ಆಶಯವನ್ನೇ ಗಾಳಿಗೆ ತೂರಲಾಗುತ್ತಿದೆ. ಕಾಂಗ್ರೆಸ್ ಹಾಗೂ ಬಿಜೆಪಿ ಪಕ್ಷಗಳು ಅಂಬಾನಿ, ಅದಾನಿ, ಟಾಟಾ, ಬಿರ್ಲಾರಂತಹ ಬಂಡವಾಳಶಾಹಿಗಳ ಹಿತಕಾಯುವ ಲೂಟಿಕೋರ ಪಕ್ಷಗಳಾಗಿವೆ. ಇವರ ಒಳ ಕುತಂತ್ರಗಳನ್ನು ಅರಿತು ಎಚ್ಚರಿಕೆಯಿಂದ ಮತ ಚೆಲಾಯಿಸಬೇಕು ಎಂದರು.

Contact Your\'s Advertisement; 9902492681

ಎಸ್‍ಯುಸಿಐ ಕಮ್ಯುನಿಸ್ಟ್ ಪಕ್ಷವು ಪ್ರಸಕ್ತ ಲೋಕಸಭೆ ಚುನಾವಣೆಯಲ್ಲಿ ದೇಶದಲ್ಲಿ ಸ್ವತಂತ್ರವಾಗಿ ಚುನಾವಣೆ ಎದುರಿಸುತ್ತಿದೆ. ಕರ್ನಾಟಕದ 19 ಕ್ಷೇತ್ರಗಳು ಸೇರಿದಂತೆ ದೇಶದಾದ್ಯಂತ ಒಟ್ಟು 151 ಕ್ಷೇತ್ರಗಳಲ್ಲಿ ಸ್ಪರ್ಧೆ ಮಾಡುತ್ತಿದೆ. ಕಲಬುರಗಿ ಕ್ಷೇತ್ರದಿಂದ ಹೋರಾಟಗಾರ ಕಾಮ್ರೇಡ್ ಎಸ್.ಎಂ.ಶರ್ಮಾ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದಾರೆ. ನೀತಿ, ನೈತಿಕತೆ, ಮೌಲ್ಯಗಳನ್ನು ಮೈಗೂಡಿಸಿಕೊಂಡು ಭ್ರಷ್ಟಾಚಾರ, ಖಾಸಗೀಕರಣ, ಬೆಲೆ ಏರಿಕೆ, ನಿರುದ್ಯೋಗ ಸೇರಿದಂತೆ ಜನತೆಯ ಜ್ವಲಂತ ಸಮಸ್ಯೆಗಳ ವಿರುದ್ಧ ನಿರಂತರ ಹೋರಾಟದಲ್ಲಿರುವ ಎಸ್‍ಯುಸಿಐ ಅಭ್ಯರ್ಥಿಗಳನ್ನು ಗೆಲ್ಲಿಸುವ ಜವಾಬ್ದಾರಿ ಪ್ರಜ್ಞಾವಂತ ಮತದಾರರ ಮೇಲಿದೆ ಎಂದು ಹೇಳಿದರು.

ಎಸ್‍ಯುಸಿಐ ಜಿಲ್ಲಾ ನಾಯಕ ಕಾಮ್ರೇಡ್ ವೀರಭದ್ರಪ್ಪ ಆರ್.ಕೆ, ಮುಖಂಡರಾದ ಶರಣು ಹೇರೂರ, ವೆಂಕಟೇಶ ದೇವದುರ್ಗಾ, ಗೌತಮ ಪರ್ತೂಕರ, ಶಿವುಕುಮಾರ ಆಂದೋಲಾ, ಈರಣ್ಣ ಇಸಬಾ, ಚೌಡಪ್ಪ ಗಂಜಿ, ಶರಣುಕುಮಾರ ದೋಶೆಟ್ಟಿ, ಭಾಗಣ್ಣ ಬುಕ್ಕಾ, ಗೋದಾವರಿ ಕಾಂಬಳೆ, ವಿಠ್ಠಲ್ ರಾಠೋಡ, ರಾಜು ಒಡೆಯರಾಜ, ಗೋವಿಂದ ಯಳವಾರ, ಮಲ್ಲಿಕಾರ್ಜುನ ಗಂದಿ ಸೇರಿದಂತೆ ನೂರಾರು ಜನ ಪಾಲ್ಗೊಂಡಿದ್ದರು.

“ಕೋಮುವಾದಿ, ಫ್ಯಾಸೀವಾದಿ, ಬಂಡವಾಳಶಾಹಿ ನೀತಿಗಳ ವಿರುದ್ಧ ಈ ಚುನಾವಣೆಯಲ್ಲಿ ಜನಪರ ಧ್ವನಿ ಮೊಳಗಬೇಕು. ಆದರೆ, ಕಾಂಗ್ರೆಸ್ ನೇತೃತ್ವದ ವಿವಿಧ ಅವಕಾಶವಾದಿ ಪ್ರಾದೇಶಿಕ ಪಕ್ಷಗಳ ಮೈತ್ರಿಕೂಟವಾದ ಇಂಡಿಯಾಕ್ಕೆ ನೈಜ ಧರ್ಮನಿರಪೇಕ್ಷ, ಪ್ರಜಾತಾಂತ್ರಿಕ ಪರ್ಯಾಯವನ್ನು ನೀಡಲು ಖಂಡಿತ ಅಸಾಧ್ಯ. ಬಿಜೆಪಿ ಬೆಳೆದು ಅಧಿಕಾರಕ್ಕೆ ಬರುವವರೆಗೆ ದೇಶದ ಬಂಡವಾಳಶಾಹಿಗಳ ಸೇವೆಗೈದಿರುವುದು ಇದೇ ಕಾಂಗ್ರೆಸ್ ಎನ್ನುವುದರಲ್ಲಿ ಸಂಶಯವಿಲ್ಲ. ಹಾಗಾಗಿ ಎನ್‍ಡಿಎ ಮತ್ತು ಇಂಡಿಯಾ ಎರಡೂ ಮೈತ್ರೀಕೂಟಗಳು ಬಂಡವಾಳಶಾಹಿ ವರ್ಗಗಳ ಹಿತ ಕಾಪಾಡುವ ರಾಜಕೀಯ ಗುಂಪುಗಳಾಗಿವೆ. ಮತದಾರರು ಈ ಎರಡೂ ಪಕ್ಷಗಳನ್ನು ಧಿಕ್ಕರಿಸಬೇಕು. ಎಸ್‍ಯುಸಿಐ ಪಕ್ಷದ ಸಿದ್ಧಾಂತ, ನಾಯಕರ ಹೋರಾಟದ ಹಾದಿಯನ್ನು ಗಮನಿಸಿ ಮತ ನೀಡಬೇಕು.” -ಎಸ್.ಎಂ.ಶರ್ಮಾ. ಎಸ್‍ಯುಸಿಐ ಪಕ್ಷದ ಕಲಬುರಗಿ ಲೋಕಸಭೆ ಚುನಾವಣೆಯ ಅಭ್ಯರ್ಥಿ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here