ಕಲಬುರಗಿ: ಕೋಮುವಾದಿ ಅಜೆಂಡಾ ಹೊಂದಿರುವ ಪಕ್ಷದವರು ನಮ್ಮ ಕತ್ತನ್ನು ಕೊಯ್ದು ಜೀವ ತೆಗೆಯಲು ಮುಂದಾಗಿದೆ ಎಂದು ಸಿಪಿಐಎಂ ಪಕ್ಷದ ಜಿಲ್ಲಾ ಕಾರ್ಯದರ್ಶಿ ಕೆ ನೀಲಾ ಅಭಿಪ್ರಾಯ ವ್ಯಕ್ತಪಡಿಸಿದರು.
ಇಲ್ಲಿನ ಕಮಲಾಪುರ ತಾಲೂಕಿನ ವಿಕೆ ಸಲ್ಗರ್ ಗ್ರಾಮದಲ್ಲಿ ಭಾರತ ಕಮ್ಯುನಿಸ್ಟ್ (ಮಾರ್ಕ್ಸ್ ವಾದಿ) ಪಕ್ಷದ ರಾಜಕೀಯ ಸಮಾವೇಶವನ್ನು ಉದ್ದೇಶಿಸಿ ಮಾತನಾಡಿದ ಅವರು ಇಂದು ಜನರ ಕೈಗೆ ಕೆಲಸಗಳಿಲ್ಲ ಬಡತನ ದಿನೇ ದಿನೇ ಹೆಚ್ಚಾಗುತ್ತಿದೆ. ಹಸಿವಿನ ಸೂಚ್ಯಂಕದಲ್ಲಿ ನಮ್ಮ ಭಾರತದ ಸ್ಥಾನ ಇಳಿಮುಖ ಕಾಣುತ್ತಿದೆ. ಓದಿ ಕುಳಿತ ಯುವಕರಿಗೆ ಕೆಲಸ ಸಿಗುತ್ತಿಲ್ಲ. ಗ್ರಾಮೀಣ ಪ್ರದೇಶದ ಜೀವಾಳವಾಗಿರುವಂತಹ ಉದ್ಯೋಗಾತ್ರಿ ಕಾಯ್ದೆಯ ಶಕ್ತಿಯನ್ನು ದಿನದಿಂದ ದಿನಕ್ಕೆ ಕ್ಷೀಣಿಸಲಾಗುತ್ತಿದೆ ಎಂದು ದೂರಿದರು.
ಅನೇಕ ವರ್ಷಗಳ ಹೋರಾಟದಿಂದ ನಾವು ಉದ್ಯೋಗ ಖಾತ್ರಿ ಕಾಯ್ದೆಯನ್ನು ಪಡೆದುಕೊಂಡಿದ್ದೇವೆ. 65 ರೂಪಾಯಿ ಕೂಲಿಯಿಂದ ಶುರುವಾದ ಈ ಕಾಯ್ದೆಯು ಇವತ್ತು 349 ರೂಪಾಯಿ ಕೂಲಿಗೆ ಬಂದು ನಿಂತಿದೆ. ಇದೆಲ್ಲ ಸಾಧ್ಯವಾಗಿದ್ದು ಎಡಪಕ್ಷಗಳ ಹೋರಾಟದಿಂದ ಮಾತ್ರ ಎಂದು ತಿಳಿಸಿದರು.
ಬಿಜೆಪಿಯು ಉದ್ಯೋಗ ಖಾತ್ರಿಯನ್ನು ಮುಣುಗಿಸುವುದಕ್ಕಾಗಿಯೇ ಎನ್ ಎಂ ಎಂ ಎಸ್, ಎಬಿಪಿಎಸ್, ಪ್ರತಿ ವರ್ಷ ಆಧಾರ ಕಾರ್ಡ್ ಲಿಂಕ್, ಇ ಕೆ ವೈ ಸಿ ಇತ್ಯಾದಿ ನಿಯಮಗಳ ನಿರ್ಬಂಧಗಳನ್ನು ತರಲಾಗಿದೆ. ಇದರಿಂದಾಗಿ ಗ್ರಾಮೀಣ ಪ್ರದೇಶದ ಜನರು ಉದ್ಯೋಗದಿಂದ ವಂಚಿತರಾಗುತ್ತಿದ್ದಾರೆ ಎಂದು ಕಳವಳ ವ್ಯಕ್ತಪಡಿಸಿದ್ದರು.
ನಾವು ಕಮ್ಯುನಿಸ್ಟ್ ಪಕ್ಷದವರು ಈ ಕಾಯಿದೆಗಾಗಿ ನಿರಂತರವಾಗಿ ಹೊರಾಟ ಮಾಡಿದ್ದೇವೆ ಮತ್ತು ಈಗಲೂ ಮಾಡುತ್ತಿದ್ದೇವೆ. ಮನುವಾದಿ ಧೋರಣೆಯ ಈ ಬಿಜೆಪಿ ಪಕ್ಷವು ಮಹಿಳಾ ವಿರೋಧಿ, ರೈತ ವಿರೋಧಿ, ಕೂಲಿ ಕಾರ್ಮಿಕ ವಿರೋಧಿ ನೀತಿಗಳನ್ನು ತರುತ್ತಿದ್ದಾರೆ. ಹಾಗಾಗಿ ಈ ಬಾರಿ ಚುನಾವಣೆಯಲ್ಲಿ ಕೋಮುವಾದಿಗಳಿಗೆ ಹಿಮ್ಮೆಟ್ಟಿಸಲು ನಾವು ಬಿಜೆಪಿ ಯನ್ನು ಸೋಲಿಸಲೇಬೇಕಿದೆ ಎಂದು ಕರೆ ನೀಡಿದರು.
ಈಗ ಮೋದಿಯವರು ತಾಳಿಯ(ಮಾಂಗಲ್ಯದ)ಬಗ್ಗೆ ಸುಳ್ಳನ್ನು ಹರಡುತ್ತಿದ್ದಾರೆ. ಅವರು ಮಾಂಗಲ್ಯ ಕಟ್ಟಿ ಮದುವೆಯಾದ ಹೆಂಡತಿಯನ್ನೇ ತೊರೆದಿದ್ದಾರೆ. ಹೆಂಡತಿಗೆ ನ್ಯಾಯ ಕೊಡದ, ಅವರ ಮಾಂಗಲ್ಯದ ಗೌರವ ಉಳಿಸದ ಮೋದಿಯವರಿಗೆ ಇತರ ಮಹಿಳೆಯರ ಮಾಂಗಲ್ಯದ ಬಗ್ಗೆ ಮಾತಾಡುವ ನೈತಿಕತೆ ಇಲ್ಲ ಎಂದರು.
ನಿರುದ್ಯೋಗ ಸೃಷ್ಟಿಸಿದ, ಬಡತನ ಹೆಚ್ಚಿಸಿದ, ದೇಶದ ಸಾಲವನ್ನು ಹತ್ತಾರು ಪಟ್ಟು ಹೆಚ್ಚು ಮಾಡಿದ, ದೇಶದ ಸಂಪತ್ತನ್ನು ಕಾರ್ಪೋರೆಟ್ ಗಳಿಗೆ ಧಾರೆ ಎರೆದ ಮೋದಿಯವರಿಗೆ ಈಗ ಚುನಾವಣೆಯಲ್ಲಿ ಸೋಲುವ ಭೀತಿ ಎದುರಾಗಿದೆ. ಚುನಾವಣೆಯಲ್ಲಿ ಶ್ರೀರಾಮನನ್ನೂ ಎಳೆದು ತಂದ ಮೇಲೂ ಜನತೆಯು ನಂಬುತ್ತಿಲ್ಲ. ಭಾರತವೀಗ ಬಿಜೆಪಿಯನ್ನು ಸೋಲಿಸುವ ತೀರ್ಮಾನ ಮಾಡಿದ್ದರಿಂದ ಮೋದಿಯವರು ಮತ್ತು ಬಿಜೆಪಿಯು ಮಾನಸಿಕ ಸ್ಥಿಮಿತತೆ ಕಳೆದುಕೊಂಡಿದೆ ಎಂದು ಟೀಕಿಸಿದರು.
ಸುಳ್ಳುಗಳನ್ನು ಮತ್ತು ಕೋಮುದ್ವೇಷವನ್ನು ಹಬ್ಬಿಸಲು ಮುಂದಾಗಿದೆ. ಇದನ್ನು ಸಿಪಿಐಎಂ ಪಕ್ಷವು ತೀವ್ರವಾಗಿ ಖಂಡಿಸುತ್ತದೆ. ಬಿಜೆಪಿಯನ್ನು ಸೋಲಿಸಿದಾಗ ಮಾತ್ರ ಭಾರತದ ಸಂವಿಧಾನ ಉಳಿಯುವುದು. ಆದ್ದರಿಂದ ಅನಿವಾರ್ಯವಾಗಿ ಜನರು ಕಾಂಗ್ರೆಸ್ ಅನ್ನು ಆಯ್ಕೆ ಮಾಡಬೇಕಿದೆ. ಆದರೆ ಕಾಂಗ್ರೆಸ್ ಪಕ್ಷವು ಸಿಪಿಐಎಂ ಮೇಲೆ ವಿನಾಕಾರಣ ಆರೋಪ ಮಾಡುವುದು ವಿವೇಕವಲ್ಲ. ಇಂತಹ ನಿಲುವು ಕೈ ಬಿಡಬೇಕು ಎಂದು ಒತ್ತಾಯಿಸಿದರು.
ಮುಖ್ಯ ಅತಿಥಿಗಳಾಗಿ ಆಗಮಿಸಿದಂತಹ ಜನವಾದಿ ಮಹಿಳಾ ಸಂಘಟನೆಯ ರಾಜ್ಯಾಧ್ಯಕ್ಷರಾದ ಮೀನಾಕ್ಷಿ ಬಾಳಿ ಯವರು ಹೇಗೆ ಬಿಜೆಪಿಯವರು ಯುವಕರ ನಿರುದ್ಯೋಗದ ಬಗ್ಗೆ ಮಾತನಾಡದೆ, ರಾಷ್ಟ್ರದ ಬಡತನದ ಬಗ್ಗೆ ಮಾತನಾಡದೆ ಕೇವಲ ಹಿಂದೂ ಮುಸ್ಲಿಂ ಧರ್ಮಗಳ ಬಗ್ಗೆ ಮಾತಾಡಿ ಕೋಮು ದಂಗೆಗಳ ಹಬ್ಬಿಸುವಲ್ಲಿ ಬಿಜೆಪಿ ನಿರತವಾಗಿದೆ ಎಂದು ಹೇಳಿದರು.
ಹಸಿದವರಿಗೆ ಅಕ್ಕಿ ಕೊಡದ ಬಿಜೆಪಿಯು ರಾಮನ ಪ್ರಾಣ ಪ್ರತಿಷ್ಠಾನೆಯ ಭಾಗವಾಗಿ ಪ್ರತಿ ಹಳ್ಳಿ ಪ್ರತಿ ತಾಲೂಕಿನಲ್ಲಿ ಮನೆ ಮನೆಗೆ ರಾಮನ ಆಶೀರ್ವಾದ ಎಂದು ಹೇಳಿ ಅಕ್ಷತೆಯ ಕಾಳನ್ನು ಹಂಚಿದರು. ಒಂದು ಊರು ಒಂದು ಮನೆ ಸಂಪೂರ್ಣ ದೇಶಕ್ಕೆ ಹಂಚಿದ ಅಕ್ಕಿಯನ್ನು ಹಸಿದವರಿಗೆ ಕೊಟ್ಟಿದ್ದರೆ ಅವರ ಹಸಿವಾದರೂ ನೀಗೂತ್ತಿತ್ತು. ಕಮಲದ ಕೆಸರಲ್ಲಿ ನಮ್ಮ ದೇಶ ಬಿದ್ದು ಒದ್ದಾಡುತ್ತಿದೆ ಈಗ ಕೈ ಹಿಡಿದು ಮೇಲೇಳಬೇಕಿದೆ ಎಂದು ಹೇಳಿದರು.
ದುಡಿಯುವ ಜನತೆಯ ಎಡ ರಾಜಕೀಯ ಶಕ್ತಿಯನ್ನು ಗಟ್ಟಿಗೊಳಿಸಬೇಕಿದೆ. ಸಿಪಿಐಎಂ ಪಕ್ಷವು ಅತ್ಯಂತ ದೃಢತೆಯಿಂದ ಕೋಮುವಾದವನ್ನು ಸೋಲಿಸಲು ಮತ್ತು ದೇಶವನ್ನು ಉಳಿಸಲು ತೀರ್ಮಾನ ಮಾಡಿದೆ ಎಂದು ಹೇಳಿದರು.
ಪಕ್ಷದ ಹಿರಿಯ ಸಂಗಾತಿಗಳಾದ ಬಾಬುರಾವ್ ಮುಗಳಿಯವರು ತಮ್ಮ ಅಧ್ಯಕ್ಷೀಯ ಭಾಷಣದಲ್ಲಿ ‘ಈ ಬಾರಿ ಕೋಮುವಾದಿ ಪಕ್ಷವಾದ ಬಿಜೆಪಿಯನ್ನು ಒಗ್ಗಟ್ಟಿನಿಂದ ಸೋಲಿಸಲೇಬೇಕಿದೆ. ಬಿಜೆಪಿ ಸೋತರೆ ಮಾತ್ರ ನಮ್ಮ ಮುಂದಿನ ಪೀಳಿಗೆಗೆ ಭವಿಷ್ಯವಿದೆ. ಇಂದು ನಾವು ಎಚ್ಚೆತ್ತುಕೊಳ್ಳದಿದ್ದರೆ ನಮ್ಮ ಮಕ್ಕಳ ಭವಿಷ್ಯವನ್ನು ನಾವೇ ಕೈಯಾರೆ ಕತ್ತು ಹಿಸುಕಿ ಕೊಂದಂತಾಗುತ್ತದೆ’ ಎಂದು ಮಾತಾಡಿದರು.
ಸಮಾವೇಶದಲ್ಲಿ ಪಕ್ಷದ ಜಿಲ್ಲಾ ಸದಸ್ಯರಾದ ಪಾಂಡುರಂಗ ಮಾವಿನಕರ ಅವರು ಸ್ವಾಗತಿಸಿದರು.
ನಿರೂಪಣೆಯನ್ನು ಪ್ರಾಂತ ರೈತ ಸಂಘದ ಶಿವಕುಮಾರ ಹೆರೂರ ಮಾಡಿದರು. ಶಿವಶರಣಪ್ಪ ಧನ್ನೂರ, ಜಗನ್ನಾಥ ಹೊಡಲ್, ಅಪ್ಪಾರಾಯ ವಾಡಿ, ಪ್ರಕಾಶ ಜಾನೆ, ಕಮಲಾಕರ ಹಳ್ಳೆ ಯವರು ವೇದಿಕೆ ಮೇಲೆ ಉಪಸ್ಥಿತರಿದ್ದರು. SFI ಮತ್ತು DYFI ನ ಸಂಗಾತಿಗಳಾದ ಸುಜಾತ, ಮೇಘಾ ಮತ್ತು ಲವಿತ್ರ ಅವರು ಕ್ರಾಂತಿ ಗೀತೆಗಳನ್ನು ಜಾಡುವ ಮೂಲಕ ಬಿಜೆಪಿಯನ್ನು ಸೋಲಿಸಿ ಎಂದು ಸಂದೇಶ ನೀಡಿದರು.