‘ಬ್ಯಾಟ್’ ಚಿನ್ಹೆಗೆ ಮತ ಹಾಕುವಂತೆ ಮನವಿ: ರೈತರ ಹೃದಯ ತಟ್ಟಿದ ಎಸ್‍ಯುಸಿಐ ಅಭ್ಯರ್ಥಿ ಶರ್ಮಾ

0
40

ವಾಡಿ: ಕಾಂಗ್ರೆಸ್ ಮತ್ತು ಬಿಜೆಪಿ ಪಕ್ಷಗಳ ಅಬ್ಬರದ ಪ್ರಚಾರದ ನಡುವೆ ಸದ್ದಿಲ್ಲದೆ ಸಿಡಿದೆದ್ದಿರುವ ಎಸ್‍ಯುಸಿಐ (ಕಮ್ಯುನಿಸ್ಟ್) ಪಕ್ಷದ ಅಭ್ಯರ್ಥಿ ಕಾಮ್ರೇಡ್ ಎಸ್.ಎಂ.ಶರ್ಮಾ, ರೈತರ ಹೃದಯ ತಟ್ಟುವಲ್ಲಿ ಯಶಸ್ವಿಯಾಗಿದ್ದಾರೆ. ಗ್ರಾಮೀಣ ಜನರ ಮನೆಬಾಗಿಲಿಗೆ ತೆರಳಿ ಮತಯಾಚಿಸುವ ಮೂಲಕ ಹೋರಾಟದ ಕೊಂಡಿಗಳನ್ನು ಮತಗಳನ್ನಾಗಿ ಪರಿವರ್ತಿಸಲು ಪ್ರಯತ್ನಿಸಿದ್ದಾರೆ.

ಕಲಬುರಗಿ ಲೋಕಸಭಾ ಕಣದಲ್ಲಿ ಇಷ್ಟು ದಿನ ಕಾಂಗ್ರೆಸ್‍ನ ರಾಧಾಕೃಷ್ಣ ದೊಡ್ಡಮನಿ ಹಾಗೂ ಬಿಜೆಪಿಯ ಡಾ.ಉಮೇಶ ಜಾಧವ ಮಧ್ಯೆ ನೇರ ಹಣಾಹಣಿ ಎಂಬರ್ಥದಲ್ಲಿ ಪ್ರಚಾರ ನಡೆದಿತ್ತು.

Contact Your\'s Advertisement; 9902492681

ಮತದಾನಕ್ಕೆ ಕೇವಲ ಹತ್ತು ದಿನಗಳು ಬಾಕಿಯಿರುವಾಗಲೇ ಪಕ್ಷೇತರ ಅಭ್ಯರ್ಥಿಯಾಗಿ ಕಣದಲ್ಲಿರುವ ಎಸ್‍ಯುಸಿಐ ನಾಯಕ ಎಸ್.ಎಂ.ಶರ್ಮಾ ಅವರು ಕಾರ್ಯಕರ್ತರ ಪಡೆಯನ್ನು ಕಟ್ಟಿಕೊಂಡು ಪ್ರಚಾರಕ್ಕೆ ಧುಮುಕಿದ್ದು, ಶನಿವಾರ ಚಿತ್ತಾಪುರ ವಿಧಾನಸಭೆ ಮತಕ್ಷೇತ್ರ ವ್ಯಾಪ್ತಿಯ ವಾಡಿ ಪಟ್ಟಣ ಸೇರಿದಂತೆ ಇಂಗಳಗಿ, ಕುಂದನೂರ, ಚಾಮನೂರ, ಕಡಬೂರ, ನಾಲವಾರ, ಲಾಡ್ಲಾಪುರ, ಹಣ್ಣಿಕೇರಾ, ಅಳ್ಳೊಳ್ಳಿ, ಕರದಾಳ ಗ್ರಾಮಗಳಲ್ಲಿ ಬಿರುಸಿನ ಪ್ರಚಾರ ಕೈಗೊಂಡರು. ಕೆಂಪು ಶಾಲು ಹೊತ್ತು ರೈತರ ಮನೆಯ ಕದ ತಟ್ಟಿದ ಅಭ್ಯರ್ಥಿ ಶರ್ಮಾ, ಬ್ಯಾಟ್ ಗುರುತಿಗೆ ಮತ ಹಾಕುವಂತೆ ಮನವಿ ಮಾಡಿದರು. ರೈತ-ಕಾರ್ಮಿಕ ಸಂಘದ ಹೋರಾಟಗಾರ ಅಭ್ಯರ್ಥಿಯನ್ನು ಗ್ರಾಮೀಣ ಜನರು ಆತ್ಮೀಯವಾಗಿ ಸ್ವಾಗತಿಸಿದರು.

ಈ ವೇಳೆ ಮತದಾರರನ್ನುದ್ದೇಶಿಸಿ ಮಾತನಾಡಿದ ಎಸ್‍ಯುಸಿಐ (ಪಕ್ಷೇತರ) ಅಭ್ಯರ್ಥಿ ಎಸ್.ಎಂ.ಶರ್ಮಾ, ದೇಶದ ದುಡಿಯುವ ಜನರ ಬದುಕು ಸರ್ವನಾಶಗೊಳ್ಳಲು ಅಧಿಕಾರ ನಡೆಸಿದ ಈ ಕಾಂಗ್ರೆಸ್ ಮತ್ತು ಬಿಜೆಪಿ ಪಕ್ಷಗಳು ಪ್ರಮುಖ ಕಾರಣವಾಗಿವೆ. ಜನಸೇವೆಯ ಸೋಗಿನಲ್ಲಿ ಬಂದು ಮತ ಕೇಳುತ್ತಲೇ ಗೆದ್ದು ಅಧಿಕಾರಕ್ಕೇರಿದ ದಿನವೇ ಬಂಡವಾಳಶಾಹಿ ಶೋಷಕರ ಪರ ಕಾನೂನುಗಳನ್ನು ಜಾರಿಗೆ ತರುತ್ತಾರೆ. ಪಕ್ಷಗಳ ಹೆಸರು ಭಿನ್ನವಾಗಿದ್ದರೂ ಇವರು ನಡೆಸುವ ಸರ್ಕಾರ ಮಾತ್ರ ಕೋಟ್ಯಾಧಿಪತಿಗಳ ಪರವಾಗಿರುತ್ತದೆ. ದೇಶದಲ್ಲಿ ರೈತರು ಸಂಕಷ್ಟದಲ್ಲಿದ್ದಾರೆ.

ಯುವಜನರು ಉದ್ಯೋಗವಿಲ್ಲದೆ ಬೀದಿ ಬೀದಿ ಅಲೆಯುತ್ತಿದ್ದಾರೆ. ಶಿಕ್ಷಣದ ಖಾಸಗೀಕರಣದಿಂದಾಗಿ ಬಡ ವಿದ್ಯಾರ್ಥಿಗಳ ಉನ್ನತ ಶಿಕ್ಷಣದ ಕನಸು ನುಚ್ಚುನೂರಾಗಿದೆ. ಬೆಲೆ ಏರಿಕೆ ಎಂಬುದು ಗಗನಕ್ಕೇರಿದೆ. ಬಡತನ, ಹಸಿವು, ದಾರಿದ್ರ್ಯ ದೇಶವನ್ನು ಕಾಡುತ್ತಿದೆ. ಭಷ್ಟಾಚಾರ ಎಂಬುದು ಆಡಳಿತ ವ್ಯವಸ್ಥೆಯ ಹಾಸುಹೊಚ್ಚಾಗಿದೆ ಎಂದು ಆಕ್ರೋಶ ವ್ಯಕ್ತಪಡಿದ ಶರ್ಮಾ, ಇಂಥಹ ಜನದ್ರೋಹಿ ಪಕ್ಷಗಳನ್ನು ಸೋಲಿಸಲು ಪಣ ತೊಡಿ ಎಂದು ಕರೆ ನೀಡಿದರು.

ಎಸ್‍ಯುಸಿಐ ಕಾರ್ಯದರ್ಶಿ ವೀರಭದ್ರಪ್ಪ ಆರ್.ಕೆ, ಜಿಲ್ಲಾ ಸಮಿತಿ ಸದಸ್ಯ ರಾಮಣ್ಣ ಇಬ್ರಾಹಿಂಪುರ, ಕಾರ್ಯಕರ್ತರಾದ ಮಲ್ಲಿನಾಥ ಹುಂಡೇಕಲ್, ರಾಜು ಒಡೆಯರಾಜ್, ಶರಣು ಹೇರೂರ, ಗೌತಮ ಪರ್ತೂಕರ, ಶಿವುಕುಮಾರ ಆಂದೋಲಾ, ವೆಂಕಟೇಶ ದೇವದುರ್ಗ, ಗೋವಿಂದ ಯಳವಾರ, ಸಾಬಣ್ಣ ಸುಣಗಾರ, ಸಿದ್ಧಾರ್ಥ ತಿಪ್ಪನೋರ, ಸಿದ್ದು ಮದ್ರಿ, ಶ್ರೀಶೈಲ್ ಕೆಂಚಗುಂಡಿ ಪಾಲ್ಗೊಂಡಿದ್ದರು.

ಚೊಂಬು-ಚಿಪ್ಪು ಬ್ಯಾಟ್‍ನಿಂದ ಎದಿರೇಟು: “ಲೋಕಸಭೆ ಚುನಾವಣೆಯನ್ನು ಹೇಗಾದರೂ ಮಾಡಿ ಗೆಲ್ಲಲೇಬೇಕು ಎಂಬ ಹಟಕ್ಕೆ ಬಿದ್ದಿರುವ ಕಾಂಗ್ರೆಸ್-ಬಿಜೆಪಿ ಪಕ್ಷಗಳು ಚೊಂಬು-ಚಿಪ್ಪಿನ ನಾಟಕ ಶುರುಮಾಡಿವೆ. ಕಳೆದ ಏಳು ದಶಕಗಳ ಆಡಳಿತ ವ್ಯವಸ್ಥೆಯಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ಪಕ್ಷಗಳೇ ಅಧಿಕಾರ ನಡೆಸಿವೆ. ಇವರೇ ಹೇಳಿಕೊಳ್ಳುತ್ತಿರುವಂತೆ ಸಾಮಾನ್ಯ ಜನರಿಂದ ಮತಗಳನ್ನು ಪಡೆದು ಒಂದು ಪಕ್ಷ ದೇಶದ ಜನರ ಕೈಗೆ ಚೊಂಬು ಕೊಟ್ಟರೆ, ಇನ್ನೊಂದು ಪಕ್ಷ ಚಿಪ್ಪು ಕೊಟ್ಟು ಮೋಸ ಮಾಡಿದೆ. ಇವರು ನಡೆಸಿದ ಬ್ರಹ್ಮಾಂಡ ಭ್ರಷಟಾಚಾರವನ್ನು ಇವರೇ ಬಹಿರಂಗಗೊಳಿಸಿ ಮತದಾರರ ಮುಂದೆ ಬೆತ್ತಲಾಗಿ ನಿಂತಿದ್ದಾರೆ. ಅಭಿವೃದ್ಧಿ ವಿಷಯದಲ್ಲಿ ಶೂನ್ಯ ಸಾಧನೆ ಮಾಡಿದ ಕೈ-ಕಮಲ ಪಕ್ಷಗಳು ಕೋಮುವಾದ ಮತ್ತು ಜಾತಿವಾದವನ್ನು ಜೀವಂತವಾಗಿಟ್ಟು ಜನರ ಐಕ್ಯತೆ ಒಡೆದಿವೆ. ಎಸ್‍ಯುಸಿಐ ಅಭ್ಯರ್ಥಿಯ “ಬ್ಯಾಟ್” ಗುರುತಿಗೆ ಮತಹಾಕುವ ಮೂಲಕ ಚೊಂಬು-ಚಿಪ್ಪಿನ ರಾಜಕಾರಣಕ್ಕೆ ಪಾಠ ಕಲಿಸಬೇಕು” – ರಾಮಣ್ಣ ಇಬ್ರಾಹಿಂಪುರ. ಎಸ್‍ಯುಸಿಐ ಜಿಲ್ಲಾ ಸಮಿತಿ ಸದಸ್ಯ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here