ಮಲ್ಲಿಕಾರ್ಜುನ್ ಖರ್ಗೆ ಸಂಸದರಾಗಿ ಆಯ್ಕೆ ಆಗಿದರಿಂದ 371(J) ಪಡೆಯಲು ಸಾಧ್ಯವಾಯಿತು: ಪ್ರಿಯಾಂಕ್ ಖರ್ಗೆ

0
19

ಕಲಬುರಗಿ: ಕಲ್ಯಾಣ ಕರ್ನಾಟಕ ಭಾಗಕ್ಕೆ ವಿಶೇಷ ಸ್ಥಾನಮಾನದ ಅಗತ್ಯವೇ ಇಲ್ಲ ಎಂದು ಅಂದಿನ ಉಪಪ್ರಧಾನಿ ಎಲ್.ಕೆ.ಅದ್ವಾಣಿ 2002ರಲ್ಲಿ ಸ್ಪಷ್ಟಪಡಿಸಿದ್ದಾಗ್ಯೂ ಈ ನಿಟ್ಟಿನಲ್ಲಿ ಕಲಬುರಗಿ ಲೋಕಸಭಾ ಕ್ಷೇತ್ರದ ಬಿಜೆಪಿ ಡಾ.ಉಮೇಶ್ ಜಾಧವ್ ಸುಳ್ಳು ಹೇಳಿಕೊಂಡು ಜನರ ಹಾದಿ ತಪ್ಪಿಸುತ್ತಿದ್ದಾರೆ ಎಂದು

ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಖಾತೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಟೀಕಿಸಿದರು.

Contact Your\'s Advertisement; 9902492681

ಇಲ್ಲಿನ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ನೆರೆಯ ಆಂಧ್ರಪ್ರದೇಶದಲ್ಲಿ ಇರುವ ಪರಿಸ್ಥಿತಿಗೂ ಕಲ್ಯಾಣ ಕರ್ನಾಟಕ ಭಾಗದ ಪರಿಸ್ಥಿತಿಗೂ ಸಾಕಷ್ಟು ವ್ಯತ್ಯಾಸವಿದೆ. ಹಾಗಾಗಿ, ಆಂಧ್ರಪ್ರದೇಶದಂತೆ ಕಲ್ಯಾಣ ಕರ್ನಾಟಕ ಭಾಗಕ್ಕೆ ವಿಶೇಷ ಸ್ಥಾನಮಾನ ನೀಡುವ ಪ್ರಶ್ನೆಯೇ ಉದ್ಭವಿಸುವುದಿಲ್ಲ ಎಂದು ನವೆಂಬರ್‌ 22, 2002ರಲ್ಲಿ ಅಂದಿನ ಕರ್ನಾಟಕದ ಮುಖ್ಯಮಂತ್ರಿ ಎಸ್‌.ಎಂ.ಕೃಷ್ಣ ಅವರಿಗೆ ಅದ್ವಾನಿ ಬರೆದ ಪತ್ರವನ್ನು ಸಚಿವ ಪ್ರಿಯಾಂಕ್ ಪ್ರದರ್ಶಿಸಿದರು.

ಪ್ರಧಾನಿ ನರೇಂದ್ರ ಮೋದಿ ಕಳೆದ 10 ವರ್ಷಗಳಲ್ಲಿ ಏನೂ ಮಾಡದೆ ಇದ್ದಾಗ್ಯೂ ತಮ್ಮ ಪಕ್ಷದ ಪ್ರತಿಯೊಬ್ಬರೂ ಹಸಿ ಸುಳ್ಳುಗಳನ್ನು ಹೇಳುವುದು ಹೇಗೆ ಎಂಬುದನ್ನು ಚೆನ್ನಾಗಿ ತರಬೇತಿ ನೀಡಿದ್ದಾರೆ. ಹಾಗಾಗಿ, ಎಲ್. ಕೆ.ಅದ್ವಾನಿ ವಿಶೇಷ ಸ್ಥಾನಮಾನದ ಪ್ರಸ್ತಾವನೆ ತಿರಸ್ಕರಿಸದೆ, ಆ ನಿಟ್ಟಿನಲ್ಲಿ ವಿಸ್ತೃತ ವರದಿ ನೀಡುವಂತೆ ಕೋರಿದ್ದರು ಎಂದು ಡಾ.ಜಾಧವ್ ಸುಳ್ಳು ಹೇಳುತ್ತಾ ಜನರ ಹಾದಿ ತಪ್ಪಿಸುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದರು.

ಕೇವಲ ಮಲ್ಲಿಕಾರ್ಜುನ ಖರ್ಗೆ ಒಬ್ಬರಿಂದಲೇ 371(ಜೆ) ಜಾರಿಯಾಗಿಲ್ಲ. ವೈಜನಾಥ ಪಾಟೀಲ್, ವಿದ್ಯಾಧರ ಗುರೂಜಿ, ವಿಶ್ವನಾಥರೆಡ್ಡಿ ಮುದ್ನಾಳ, ಧರಂಸಿಂಗ್ ಸೇರಿದಂತೆ ಎಲ್ಲರ ಹೋರಾಟ ಫಲದಿಂದ ಕಲ್ಯಾಣ ಕರ್ನಾಟಕ ಭಾಗಕ್ಕೆ 371(ಜೆ) ಜಾರಿಗೊಂಡಿದೆ ಎಂದು ಡಾ.ಜಾಧವ್ ಹೇಳಿಕೊಂಡು ಅಡ್ಡಾಡುತ್ತಿದ್ದಾರೆ. ಆದರೆ, ಆಗ ಕೇಂದ್ರದಲ್ಲಿ ಯುಪಿಎ ಸರಕಾರ ಇಲ್ಲದೆ ಹೋಗಿದ್ದರೆ, ಪ್ರಧಾನಿ ಹುದ್ದೆಯಲ್ಲಿ ಡಾ.ಮನಮೋಹನ್ ಸಿಂಗ್ ಇಲ್ಲದಿದ್ದರೆ, ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಕಲಬುರಗಿ ನಗರದಲ್ಲಿ ಅಂದು ನಡೆದ ಬೃಹತ್ ಸಮಾವೇಶದಲ್ಲಿ ಈ ಭಾಗಕ್ಕೆ ಒಂದು ವರ್ಷದಲ್ಲಿ 371 ಅಡಿ ವಿಶೇಷ ಸ್ಥಾನಮಾನ ದೊರಕುವಂತೆ ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿ ವಾಗ್ದಾನ ಮಾಡದೆ ಹೋಗಿದ್ದರೆ, ಆ ವಾಗ್ದಾನಕ್ಕೆ ಪೂರಕವಾಗಿ ಮಲ್ಲಿಕಾರ್ಜುನ ಖರ್ಗೆ ಕೇಂದ್ರದ ಎಲ್ಲ ಪ್ರತಿಪಕ್ಷ ನಾಯಕರ ಮನೆ ಬಾಗಿಲಿಗೆ ಮಧ್ಯರಾತ್ರಿ ಎಂದು ಸಹ ಲೆಕ್ಕ ಹಾಕದೆ ಹೋಗಿ ವಿಶೇಷ ಸ್ಥಾನಮಾನಕ್ಕೆ ಬೆಂಬಲ ನೀಡುವಂತೆ ಅಂಗಲಾಚದೆ ಹೋಗಿದ್ದರೆ, ಕಲ್ಯಾಣ ಕರ್ನಾಟಕ ಭಾಗದ ಸಮಗ್ರ ಅಭಿವೃದ್ಧಿಗಾಗಿ ಧರಂಸಿಂಗ್ ಹಾಗೂ ಮಲ್ಲಿಕಾರ್ಜುನ ಖರ್ಗೆ ಒತ್ತಾಸೆ ನೀಡದೆ ಹೋಗಿದ್ದರೆ ಈವರೆಗೆ ರಸ್ತೆಗಳ ಮೇಲೆ ಹೋರಾಟ ಮುಂದುವರೆಸಿಕೊಂಡು ಬರಬೇಕಾಗುತ್ತಿತ್ತೇ ಹೊರತು; ವಿಶೇಷ ಸ್ಥಾನಮಾನ ಲಭಿಸುತ್ತಿರಲಿಲ್ಲ. ಇಂದು 371 (ಜೆ) ಜಾರಿಗೊಂಡಿರುವುದರ ಹಿಂದೆ ಕಾಂಗ್ರೆಸ್ ಪಕ್ಷ ಹಾಗೂ ಮಲ್ಲಿಕಾರ್ಜುನ ಖರ್ಗೆಯವರ ಕೊಡುಗೆ ಸಾಕಷ್ಟಿದೆ ಎಂಬುದು ಗೊತ್ತಿದ್ದಾಗ್ಯೂ ಜಾಧವ್ ಉದ್ದೇಶಪೂರ್ವಕವಾಗಿ ಹಸಿ ಸುಳ್ಳು ಹೇಳಿಕೊಂಡು ಓಡಾಡುತ್ತಿದ್ದಾರೆ ಎಂದರು.

ಇಷ್ಟಾದರೂ ಕಾಂಗ್ರೆಸ್ ಆಗಲಿ, ಖರ್ಗೆಯವರಾಗಲಿ, ತಾವಾಗಲಿ ಸ್ಥಳೀಯ ನಾಯಕರ ಆ ದಿನಗಳ ಹೋರಾಟವನ್ನು ಯಾವತ್ತೂ ಕಡೆಗಣಿಸಿಲ್ಲ. ನಾವ್ಯಾರೂ ಎಲ್ಲವೂ ನಮ್ಮಿಂದಲೇ ಆಗಿದೆ ಎಂದು ಎಲ್ಲಿಯೂ ಹೇಳಿಲ್ಲ ಎಂದು ಸಚಿವ ಪ್ರಿಯಾಂಕ್ ಖರ್ಗೆ ಸ್ಪಷ್ಟಪಡಿಸಿದರು.

371 (ಜೆ) ಸುಲಭವಾಗಿ ಜಾರಿಗೆ ತರಲು ಯುಪಿಎ ಸರಕಾರದ ಬಳಿ ಬಹುಮತ ಇರಲಿಲ್ಲ. ಈಗ ಪ್ರಧಾನಿ ಮೋದಿ ನೇತೃತ್ವದ ಎನ್.ಡಿ.ಎ ಮೈತ್ರಿಕೂಟ ಸರಕಾರಕ್ಕೆ ಬಹುಮತ ಇದ್ದಾಗ್ಯೂ ಕೋಲಿ ಹಾಗೂ ಕುರುಬ ಸಮಾಜವನ್ನು ಪರಿಶಿಷ್ಟ ಪಂಗಡಕ್ಕೆ ಸೇರ್ಪಡೆ ಮಾಡಲು ಏಕೆ ಸಾಧ್ಯವಾಗುತ್ತಿಲ್ಲ ಎಂದು ಸಚಿವ ಪ್ರಿಯಾಂಕ್ ಪ್ರಶ್ನಿಸಿದರು.

ಜಮ್ಮು-ಕಾಶ್ಮೀರದ ವಿಶೇಷ ಸ್ಥಾನಮಾನ ರದ್ದುಪಡಿಸಲು, ತ್ರಿವಳಿ ತಲಾಖ್ ರದ್ದುಗೊಳಿಸಲು, ಸಿಎಎ ಜಾರಿಗೊಳಿಸಲು ಇರುವ ಬಹುಮತವನ್ನು ಕೋಲಿ ಮತ್ತು ಕುರುಬ ಸಮಾಜಗಳನ್ನು ಪರಿಶಿಷ್ಟ ಪಂಗಡಕ್ಕೆ ಸೇರ್ಪಡೆ ಮಾಡಲು ಏಕೆ ಬಳಸಿಕೊಳ್ಳುತ್ತಿಲ್ಲ ಎಂದು ಅಚ್ಚರಿ ವ್ಯಕ್ತಪಡಿಸಿದರು.

ಕೆಪಿಸಿಸಿ ಕಾರ್ಯಾಧ್ಯಕ್ಷ ಮಂಜುನಾಥ ಭಂಡಾರಿ, ಕಾಂಗ್ರೆಸ್ ಜಿಲ್ಲಾಧ್ಯಕ್ಷ ಜಗದೇವ ಗುತ್ತೇದಾರ್, ಸಂತೋಷ್ ಪಾಟೀಲ್ ಧಣ್ಣೂರ್ ಸೇರಿದಂತೆ ಇತರರಿದ್ದರು.

ಕಾಂಗ್ರೆಸ್ ನಿಂದ ಮಾತ್ರ ಅಭಿವೃದ್ಧಿ ಸಾಧ್ಯ: ಕಲ್ಯಾಣ ಕರ್ನಾಟಕ ಭಾಗಕ್ಕೆ 371(ಜೆ) ಅಡಿ ವಿಶೇಷ ಸ್ಥಾನಮಾನ ಲಭಿಸಿದ ಬಳಿಕ ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿ ನೇತೃತ್ವದಲ್ಲಿ ಮೂಲಸೌಕರ್ಯ ಅಭಿವೃದ್ಧಿಗೆ ಸಂಬಂಧಿಸಿದಂತೆ ಈವರೆಗೆ 29257 ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗಿದೆ ಎಂದು ಸಚಿವ ಪ್ರಿಯಾಂಕ್ ಖರ್ಗೆ ವಿವರ ನೀಡಿದರು.

ಈ ಪೈಕಿ ಶಿಕ್ಷಣ ಕ್ಷೇತ್ರದಲ್ಲಿ 10896, ಆರೋಗ್ಯ ಕ್ಷೇತ್ರದಲ್ಲಿ 1496, ರಸ್ತೆ ಮತ್ತು ಸೇತುವೆಗಳ ನಿರ್ಮಾಣಕ್ಕಾಗಿ 12207, ಕುಡಿಯುವ ನೀರಿನ ಪೂರೈಕೆಗಾಗಿ 1688, ನೈರ್ಮಲೀಕರಣಕ್ಕಾಗಿ 464, ಕೃಷಿ ಮತ್ತು ನೀರಾವರಿ ಯೋಜನೆಗಳ ಅನುಷ್ಠಾನಕ್ಕಾಗಿ 73, ಕ್ರೀಡಾ ಕ್ಷೇತ್ರಕ್ಕಾಗಿ 102 ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗಿದೆ ಎಂದು ವಿವರಿಸಿದರು.

ಮತ್ತೊಂದೆಡೆ, ಬಿಜೆಪಿ ಅಧಿಕಾರದಲ್ಲಿದ್ದಾಗ ಮಂಡಳಿಯಲ್ಲಿ ಕೇವಲ ಭ್ರಷ್ಟಾಚಾರ ನಡೆಸಲಾಯಿತು ಎಂದು ಖರ್ಗೆ ಟೀಕಿಸಿದರು.

ಕಾಂಗ್ರೆಸ್‌ ಪಕ್ಷದಿಂದ ಮಾತ್ರ ಕಲ್ಯಾಣ ಕರ್ನಾಟಕ ಹಾಗೂ ಕಲಬುರಗಿ ಜಿಲ್ಲೆಯ ಅಭಿವೃದ್ಧಿ ಸಾಧ್ಯ ಎಂದು ಅವರು ಪ್ರತಿಪಾದಿಸಿದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here