ರಾಯಚೂರು: ಸರ್ಕಾರಿ ಪ್ರಾಥಮಿಕ ಶಾಲೆಗಳಿಗೆ 2022-23ನೇ ಸಾಲಿನಲ್ಲಿ ನೇಮಕವಾದ ರಾಯಚೂರು ಸೇರಿ ಕಲ್ಯಾಣ ಕರ್ನಾಟಕ ಭಾಗದ ಏಳು ಜಿಲ್ಲೆಗಳ ಪ್ರಾಥಮಿಕ (6 ರಿಂದ 8 ನೇ ತರಗತಿ ) ಶಿಕ್ಷಕರಿಗೆ ಏಳು ತಿಂಗಳಿಂದ ವೇತನ ಬಿಡುಗಡೆಯಾಗಿಲ್ಲ. ಏಳು ತಿಂಗಳಿಂದ ವೇತನವಿಲ್ಲದೆ ಕಾರ್ಯ ನಿರ್ವಹಿಸಲಾಗಿದೆ. ಇನ್ನು ಕೆಲ ದಿನಗಳಲ್ಲಿ ಶಾಲೆಗಳು ಮತ್ತೆ ಆರಂಭವಾಗಲಿವೆ. ವೇತನವಿಲ್ಲದೆ ಶಿಕ್ಷಕರಿಗೆ ಕುಟುಂಬ ನಿರ್ವಹಣೆ ಸಂಕಷ್ಟವಾಗಿದೆ. ಇದನ್ನು ಭಾರತ ವಿದ್ಯಾರ್ಥಿ ಫೆಡರೇಷನ್ (ಎಸ್ಎಫ್ಐ) ರಾಯಚೂರು ಜಿಲ್ಲಾ ಸಮಿತಿ ವಿರೋಧಿಸಿದೆ.
ಕಳೆದ ವರ್ಷ ರಾಜ್ಯ ಸರ್ಕಾರದಿಂದ 11,734 ಶಿಕ್ಷಕರನ್ನು ನೇಮಕ ಮಾಡಿ ಆದೇಶ ಹೊರಡಿಸಲಾಗಿತ್ತು. ಈ ಪೈಕಿ ರಾಯಚೂರು 742 ಶಿಕ್ಷಕರು ನೇಮಕಗೊಂಡಿದ್ದರು. ಹೊಸದಾಗಿ ನೇಮಕವಾದ ಶಿಕ್ಷಕರಿಗೆ ವೇತನ ಬಿಡುಗಡೆ ಮಾಡಬೇಕು. ವೇತನ ಜಾರಿ ವಿಳಂಬಕ್ಕೆ ಕರ್ನಾಟಕ ರಾಜ್ಯ ಬಿಮಾ ನಿಗಮ( ಕೆಜಿಐಡಿ), ಎನ್ಪಿಎಸ್ ಯೋಜನೆ ಹಾಗೂ ಶಿಕ್ಷಕರ ಸೇವಾ ಮಾಹಿತಿ (ಇಇಡಿಎಸ್) ಸೇವೆಗಳ ಪ್ರಕ್ರಿಯೆ ಆನ್ಲೈನ್ನಲ್ಲಿ ನಡೆದಿದ್ದು ಬಿಇಓ, ಡಿಡಿಪಿಐ ಅವರೇ ನೇರ ಹೊಣೆಗಾರರಾಗಿದ್ದು, ಈ ಕೂಡಲೇ ಆಯುಕ್ತರು ಈ ಬಗ್ಗೆ ಪರಿಶೀಲಿಸಿ ಅಧಿಕಾರಿಗಳಿಗೆ ವೇತನ ಪಾವತಿಗೆ ಸೂಚಿಸಬೇಕು ಎಂದು ರಮೇಶ ವೀರಾಪೂರು ಆಗ್ರಹಿಸಿದ್ದಾರೆ.
ಕೂಡಲೇ ಎಲ್ಲಾ ತಾಲೂಕುಗಳ ವ್ಯಾಪ್ತಿಯಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿಗಳ ಹಾಗೂ ಎಲ್ಲ ಕೇಸ್ ವರ್ಕಗರ್ಗಳ ಸಭೆ ನಡೆಸಿ ಆನ್ಲೈನ್ ಪ್ರಕ್ರಿಯೆ ಪೂರ್ಣಗೊಳಿಸಲು ಕ್ರಮ ತೆಗೆದುಕೊಳ್ಳಬೇಕು. ಇತ್ತೀಚೆಗೆ ನಡೆದ ಲೋಕಸಭಾ ಚುನಾವಣೆಯಲ್ಲೂ ವೇತನ ವಂಚಿತ ಶಿಕ್ಷಕರು ಕಾರ್ಯನಿರ್ವಹಿಸಿದ್ದಾರೆ.
ಎಸ್ಸೆಸ್ಸೆಲ್ಸಿ ಪರೀಕ್ಷಾ ಮೇಲ್ವಿಚಾರಕರಾಗಿ ಕೆಲಸ ಮಾಡಿದ್ದಾರೆ. ಆದರೆ, ವೇತನ ಮಾತ್ರ ಬಿಡುಗಡೆಯಾಗುತ್ತಿಲ್ಲ. ಕಲ್ಯಾಣ ಕರ್ನಾಟಕ ಹೊರತುಪಡಿಸಿ ರಾಜ್ಯದ ಇತರ ಜಿಲ್ಲೆಗಳ ನೂತನ ಶಿಕ್ಷಕರಿಗೆ ವೇತನ ಬಿಡುಗಡೆಯಾಗಿದ್ದು, ಕಲ್ಯಾಣ ಕರ್ನಾಟಕ ಭಾಗದ ಅಧಿಕಾರಿಗಳ ಬೇಜವಾಬ್ದಾರಿತನ ಮತ್ತು ಅಸಡ್ಡೆ ಎದ್ದು ಕಾಣುತ್ತಿದೆ. ಒಂದು ವಾರದಲ್ಲಿ ವೇತನ ಮಾಡದೇ ಇದ್ದರೆ ಮೇ 27 ರಂದು ಡಿಡಿಪಿಐ ಕಚೇರಿ ಎದುರು ಎಸ್ಎಫ್ಐ ನೇತೃತ್ವದಲ್ಲಿ ಪ್ರತಿಭಟನಾ ಧರಣಿ ನಡೆಸಲಾಗುವುದು ಎಂದು ಎಚ್ಚರಿಕ್ಕೆ ನೀಡಿದ್ದಾರೆ.