ಚಿತ್ತಾಪುರ: ರಾಜ್ಯದಲ್ಲಿ ಯುವತಿಯರ ಕೊಲೆಗಳು ಮೇಲಿಂದ ಮೇಲೆ ನಡೆಯುತ್ತಿದ್ದು ಕಳೆದ ತಿಂಗಳು ನೇಹಾ ಹತ್ಯೆ ನಡೆದು ಅದು ಮಾಸುವ ಮುನ್ನವೇ ಅದೇ ಹುಬ್ಬಳಿ ಪಟ್ಟಣದಲ್ಲಿ ಅಂಜಲಿ ಅಂಬಿಗೇರ ಎನ್ನುವ ಯುವತಿಯನ್ನು ಕೊಲೆ ನಡೆದಿದೆ. ಇಂತಹ ಕೃತ್ಯ ಎಸುಗುವವರನ್ನು ಕಠಿಣ ಶಿಕ್ಷೆಗೆ ಒಳಪಡಿಸದಿದ್ದಲ್ಲಿ ಇಂತಹ ಘಟನೆಗಳು ನಿರಂತರವಾಗಿ ನಡೆಯುವ ಭಿತಿಯಿದ್ದು ಕೂಡಲೇ ಆರೋಪಿಗಳನ್ನು ಬಂಧಿಸಿ ಶಿಕ್ಷೆಗೆ ಗುರಿಪಡಿಸಬೇಕು ಎಂದು ಕರ್ನಾಟಕ ಪ್ರದೇಶ ತಾಲೂಕು ಯುವ ಕೊಲಿ ಸಮಾಜದ ಅಧ್ಯಕ್ಷ ಮಹೇಶ ಸಾತನೂರ, ಶಿವಕುಮಾರ ಸುಣಗಾರ, ಮಲ್ಲಿಕಾರ್ಜುನ ಅಲ್ಲೂರಕರ್ ಒತ್ತಾಯಿಸಿದ್ದಾರೆ.
ಪಟ್ಟಣದಲ್ಲಿ ಪ್ರತಿಭಟನೆ ನಡೆಸಿ ಮಾತನಾಡಿದ ಅವರು, ಅಂಜಲಿ ಅಂಬಿಗೇರ ಅವರಿಗೆ ಕೊಲೆ ಬೆದರಿಕೆ ಇದೆ ಎಂದು ಪೊಲೀಸರಿಗೆ ಮಾಹಿತಿ ನೀಡಿದ್ದರೂ ಕೂಡಾ ಪೊಲೀಸರು ರಕ್ಷಣೆ ನೀಡದೇ ಇರುವುದರಿಂದ ಅಂಜಲಿ ಕೊಲೆಯಾಗಿದೆ. ಇದರಿಂದ ಅವರ ಕುಟುಂಬ ಬೀದಿಗೆ ಬಿದ್ದಂತಾಗಿದೆ.
ಸರ್ಕಾರವು ಜೀವ ಬೆದರಿಗೆ ಮನವಿಯನ್ನು ನಿರ್ಲಕ್ಷ ವಹಿಸಿದ ಪೊಲೀಸ್ ಅಧಿಕಾರಿಗಳ ವಿರುದ್ಧ ಶಿಸ್ತು ಕ್ರಮ ತೆಗೆದುಕೊಳ್ಳಬೇಕು ಮತ್ತು ಇಂತಹ ಕೃತ್ಯ ನಡೆಯದಂತೆ ರಾಜ್ಯದಲ್ಲಿ ಕಠಿಣ ಕಾನೂನನ್ನು ಜಾರಿಗೆ ತರಬೇಕು. ಅಂಜಲಿ ಕುಟುಂಬಕ್ಕೆ ರಾಜ್ಯ ಸರ್ಕಾರದಿಂದ ಪರಿಹಾರ ಹಾಗೂ ಕುಟುಂಬದ ಒಬ್ಬರಿಗೆ ಸರ್ಕಾರಿ ನೌಕರಿ ನೀಡಬೇಕೆಂದು ಒತ್ತಾಯಿಸುವ ಮನವಿ ಪತ್ರವನ್ನು ತಹಶೀಲ್ದಾರ್ ಮೂಲಕ ಮುಖ್ಯಮಂತ್ರಿಗೆ ಸಲ್ಲಿಸಿ ಒತ್ತಾಯಿಸಿದರು.
ಪ್ರಭು ಹಲಕಟ್ಟಿ, ತಿಪ್ಪಣ್ಣ ಇವಣಿ, ನಾಗೂ ಸಣ್ಣೂರಕರ್, ಮಲ್ಲಿಕಾರ್ಜುನ ತಳವಾರ, ಸಾಬಣ್ಣ ದಂಡೊತಿ, ಶರಣು ಹಲಕಟ್ಟಿ, ಗೂಳಿ ಡಿಗ್ಗಿ, ದುರ್ಗಣ್ಣ ವಿಜಾಪುರಕರ್, ಬಾಬು ಜಿವಣಗಿ, ಆನಂದ ಯರಗಲ್, ನರಹರಿ ಕುಲ್ಕರ್ಣಿ, ಚಂದ್ರು ಪಾಟೀಲ್ ಇಟಗಿ ಸೇರಿದಂತೆ ಇತರರು ಇದ್ದರು.