ಕಲಬುರಗಿ: ಮುಖ್ಯಮಂತ್ರಿ ಯಡಿಯೂರಪ್ಪನವರನ್ನು ಸಿಎಂ ಖುರ್ಚಿಯಿಂದ ಕೆಳಗಿಳಿಸಿದರೆ ಬೀದಿಗಳಿದು ಹೋರಾಟ ಮಾಡಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿರುವ ಮಠಾಧಿಶರ ನಡೆಗೆ ಲೇಖಕ ಹಾಗೂ ಗುಲ್ಬರ್ಗ ವಿಶ್ವವಿದ್ಯಾಲಯದ ಕನ್ನಡ ಅಧ್ಯಯನ ಸಂಸ್ಥೆಯ ನಿರ್ದೇಶಕ ಪ್ರೊ. ಎಚ್.ಟಿ. ಪೋತೆ ಬೇಸರ ವ್ಯಕ್ತಪಡಿಸಿದ್ದಾರೆ.
ಸರ್ವರಿಗೆ ಸಮಬಾಳು; ಸಮಪಾಲು ನೀಡುವ ದಿಸೆಯಲ್ಲಿ ೧೨ನೇ ಶತಮಾನದಲ್ಲಿಯೇ ಕ್ರಾಂತಿ ಮಾಡಿದ ಕಲ್ಯಾಣ ಕರ್ನಾಟಕದ ಈನೆಲದಿಂದಲೇ ಇಂತಹ ಮಾತುಗಳು ಕೇಳಿ ಬಂದಿರುವುದು ಸರಿಯಾದುದಲ್ಲ ಎಂದು ಅವರು ತಿಳಿಸಿದರು.
ಗುಲ್ಬರ್ಗ ವಿಶ್ವವಿದ್ಯಾಲಯದ ಕನ್ನಡ ಅಧ್ಯಯನ ಸಂಸ್ಥೆ ಹಾಗೂ ಮೈಸೂರಿನ ಡಾ. ಎಲ್. ಬಸವರಾಜು ಜನ್ಮ ಶತಮಾನೋತ್ಸವ ಆಚರಣಾ ಸಮಿತಿ ಆಶ್ರಯದಲ್ಲಿ ಹರಿಹರ ಸಭಾಂಗಣದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಡಾ. ಎಲ್. ಬಸವರಾಜು ಜನ್ಮ ಶತಮಾನೋತ್ಸವ ರಾಜ್ಯ ಮಟ್ಟದ ವಿಚಾರ ಸಂಕಿರಣ ಉದ್ಘಾಟನಾ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಸ್ವಾಮೀಜಿಗಳಾಗಿ ರಾಜಕೀಯ ಮಾತುಗಳನ್ನಾಡುವುದು ಅವರ ವ್ಯಕ್ತಿತ್ವಕ್ಕೆ ಘನತೆ ತರುವಂತಹದಲ್ಲ.
ದೇಶದಲ್ಲಿ ಇನ್ನೂ ಜೀವಂತವಾಗಿರುವ ಅಸ್ಪೃಶ್ಯತೆ ಬಗ್ಗೆ ಚಕಾರವೆತ್ತದ ಎತ್ತದ ಸ್ವಾಮೀಜಿಗಳು ತಮ್ಮ ಮಠಕ್ಕೆ ಬರುವ ಅನುದಾನದ ಹಣಕ್ಕಾಗಿ ಯಡಿಯೂರಪ್ಪನವರನ್ನು ಬೆಂಬಲಿಸುತ್ತಿರುವುದು ಯಾವ ಕಾಳಜಿ, ಯಾರ ಕಾಳಜಿ ಎಂಬುದನ್ನು ಪ್ರದರ್ಶಿಸುವಂತಿದೆ ಎಂದು ವಿಷಾದ ವ್ಯಕ್ತಪಡಿಸಿದರು.
“ಏನೆಲ್ಲವನ್ನು “ಮನ್ ಕೀ ಬಾತ್” ನಲ್ಲಿ ಮಾತನಾಡುವ ದೇಶದ ಪ್ರಧಾನಿ ನರೇಂದ್ರ ಮೋದಿಯವರು ಈ ರೀತಿಯ ಸ್ವಜನಪಕ್ಷಪಾತ, ಜಾತೀಯತೆ, ಅಸಹಿಷ್ಣುತೆ ಬಗ್ಗೆ ಯಾಕೆ ಮಾತನಾಡುವುದಿಲ್ಲ? ಅಖಿಲ ಭಾರತ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದ ಎಲ್. ಬಸವರಾಜು ಅವರು ತಮಗೆ ನೀಡಿದ್ದ ಹಮ್ಮಿಣಿ ಹಣವನ್ನು ಎಸ್/ಎಸ್ಟಿ ವಿದ್ಯಾರ್ಥಿಗಳ ವಿದ್ಯಾಭ್ಯಾಸಕ್ಕಾಗಿ ಪ್ರತ್ಯೇಕ ಶಾಲೆ ತೆರೆಯಲು ಕೊಟ್ಟಿದ್ದ ಎಲ್.ಬಿ. ಅವರು ಉತ್ತಮ ಮೇಲ್ಪಂಕ್ತಿ ಹಾಕಿ ಕೊಟ್ಟಿದ್ದಾರೆ.“ – ಪ್ರೊ. ಎಚ್.ಟಿ. ಪೋತೆ
ಗೊಲ್ಲರಹಟ್ಟಿಯಲ್ಲಿ ವಾಸಿಸುವ ಕೆಳವರ್ಗದ ಜನರೇ ಆ ಕ್ಷೇತ್ರವನ್ನು ಪ್ರತಿನಿಧಿಸುವ ಸಂಸದನಿಗೆ ಪ್ರವೇಶ ನೀಡುವುದಿಲ್ಲವೆಂದರೆ ನಾವು ಇನ್ನೂ ಎಂತಹ ಪರಿಸ್ಥಿತಿಯಲ್ಲಿದ್ದೇವೆ ಎಂಬುದನ್ನು ಅರ್ಥ ಮಾಡಿಕೊಳ್ಳಬೇಕಿದೆ ಎಂದು ವಿಷಾದ ವ್ಯಕ್ತಪಡಿಸಿದರು.
ವಿಚಾರ ಸಂಕಿರಣ ಉದ್ಘಾಟಿಸಿದ ಎಲ್. ಬಸವರಾಜು ಜನ್ಮ ಶತಮಾನೋತ್ಸವ ಆಚರಣಾ ಸಮಿತಿ ಅಧ್ಯಕ್ಷ ಪ್ರೊ. ನೀಲಗಿರಿ ಎಂ. ತಳವಾರ ಮಾತನಾಡಿ, ವಚನ, ಜೈನ, ಬೌದ್ಧ ಸಾಹಿತ್ಯ ರಚಿಸಿದ ಎಲ್.ಬಿ. ಅವರು, ಸಂಶೋಧನೆ, ಗ್ರಂಥ ಸಂಪಾದನೆ, ಅನುವಾದ ಕ್ಷೇತ್ರದ ಜೊತೆಬೆ ತಮ್ಮ ಇಳಿವಯಸ್ಸಿನಲ್ಲಿ ಕಾವ್ಯ ಕ್ಷೇತ್ರದಲ್ಲಿ ಕೃಷಿ ಮಾಡಿದ್ದಾರೆ. ೯೩ ವರ್ಷಗಳ ಅರ್ಥಪೂರ್ಣವಾಗಿ ಬದುಕಿದ ಬಸವರಾಜು ಅವರು, ಆಧುನಿಕ ಕಾಲದ ಸವ್ಯ ಸಾಚಿ ಲೇಖಕ ಎಂದು ಬಣ್ಣಿಸಿದರು.
ಎಲ್. ಬಸವರಾಜು
ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಮೈಸೂರಿನ ಮಾನವ ಮಂಟಪದ ಪ್ರಗತಿಪರ ಹೋರಾಟಗಾರ ಉಗ್ರ ನರಸಿಂಹೇಗೌಡ ಮಾತನಾಡಿದರು. ಡಾ. ಕುಪ್ನಳ್ಳಿ ಎಂ. ಭೈರಪ್ಪ ಪ್ರಾಸ್ತಾವಿಕ ಮಾತನಾಡಿದರು. ಡಾ. ಹಣಮಂತ ಮೇಲಿನಕೇರಿ ನಿರೂಪಿಸಿದರು. ಡಾ. ಪ್ರೇಮಾ ಅಪಚಂದ ವಂದಿಸಿದರು.
ನಂತರ ನಡೆದ ಗೋಷ್ಠಿಯಲ್ಲಿ ಹಳಗನ್ನಡ ಕಾವ್ಯ (ಪಂಪ-ರನ್ನ) ಕುರಿತು ಪ್ರೊ. ಚಂದ್ರಶೇಖರ ನಂಗಲಿ, ಬುದ್ಧ ಚರಿತೆ ಮತ್ತು ಸೌಂದರ ನಂದ ವಿಷಯ ಕುರಿತು ಡಾ. ಅಮೃತಾ ಕಟಕೆ ಮಾತನಾಡಿದರು. ವಚನ ಸಾಹಿತ್ಯ ಕುರಿತು ಮೈಸೂರಿನ ಮಹಾರಾಣಿ ಕಾಲೇಜಿನ ಕನ್ನಡ ಪ್ರಧ್ಯಾಪಕಿ ಡಾ. ಲತಾ ಮೈಸೂರು, ಡಾ. ಎಲ್. ಬಸವರಾಜು ಕಾವ್ಯ ಕುರಿತು ಕಮಲಾಪುರ ಸರ್ಕಾರಿ ಪ್ರಥಮದರ್ಜೆ ಕಾಲೇಜಿನ ಸಹ ಪ್ರಾಧ್ಯಾಪಕ ಡಾ. ಗವಿಸಿದ್ಧ ಪಾಟೀಲ ಮಾತನಾಡಿದರು. ಡಾ. ಸಿದ್ಧಲಿಂಗ ದಬ್ಬಾ ನಿರೂಪಿಸಿದರು. ಡಾ. ಶಿವಪುತ್ರ ಹೊಸಮನಿ ವಂದಿಸಿದರು.
Sir, one of the Great AUTHER IS NOT RESPONDING TO ANY CAMUNITY GURUJI ITS OUR OWN RIGHTS.