ಕಲಬುರಗಿ: ಭೂಮಿ ನಮ್ಮೆಲ್ಲರನ್ನೂ ಕಾಪಾಡುವ ಪ್ರಕೃತಿ ಮಾತೆಯಾಗಿದ್ದಾಳೆ. ಭೂಮಿಯ ಮೇಲಿರುವ ಪ್ರತಿ ಜೀವಿಗಳ ರಕ್ಷಣೆ ಮಾಡುವ ಆ ಮಾತೆಯ ರಕ್ಷಣೆಯಲ್ಲಿ ನಾವೆಲ್ಲರೂ ವಿಫಲರಾಗಿದ್ದೇವೆ ಎಂದು ಹಿರಿಯ ಪತ್ರಕರ್ತ ಸುಭಾಷ ಬಣಗಾರ್ ಅಭಿಪ್ರಾಯ ಪಟ್ಟರು.
ನಗರದ ಶ್ರೀ ಹಿಂಗುಲಾಂಬಿಕಾ ಶಿಕ್ಷಣ ಮಹಾವಿದ್ಯಾಲಯದಲ್ಲಿ ಬುಧವಾರ ಭಾರತೀಯ ರೆಡ್ ಕ್ರಾಸ್ ಸಂಸ್ಥೆ ಜಿಲ್ಲಾ ಶಾಖೆ, ಶ್ರೀ ಹಿಂಗುಲಾಂಬಿಕಾ ಶಿಕ್ಷಣ ಮಹಾವಿದ್ಯಾಲಯದ ಆಶ್ರಯದಲ್ಲಿ ಹಮ್ಮಿಕೊಳ್ಳಲಾಗಿದ್ದ ವಿಶ್ವ ಪರಿಸರ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಜನಸಂಖ್ಯೆಯ ಹಿನ್ನಲೆಯಲ್ಲಿ ಭೂಮಿಯ ಮೇಲಿನ ನೈಸರ್ಗಿಕ ಸಂಪತ್ತು ಹಾಳು ಮಾಡಲಾಗುತ್ತಿದೆ. ಮರಗಿಡಗಳನ್ನು ಕಡಿದ ಅರಣ್ಯ ನಾಶ ಮಾಡಲಾಗುತ್ತಿದೆಯೇ, ಶುದ್ಧವಾದ ನೀರು ಕಲುಷಿತಗೊಳಿಸಲಾಗುತ್ತಿದೆ ಎಂದು ಹೇಳಿದರು.
ಸುಂದರವಾದ ಭೂಮಿಯು ಈಗಾಗಲೇ ಶೇ.೪೦ರಷ್ಟು ಕ್ಷೀಣಿಸಿದೆ ಎಂದು ಈಗಾಗಲೇ ಅಂದಾಜಿಸಲಾಗಿದೆ. ಇದರ ಪುನರುತ್ಥಾನವಾಗಬೇಕಿದೆ. ಈ ಹಿನ್ನಲೆಯಲ್ಲಿ ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ವಿಶ್ವಸಂಸ್ಥೆಯು ೨೦೨೪ ವರ್ಷವನ್ನು ನಮ್ಮ ಭೂಮಿ ನಮ್ಮ ಭವಿಷ್ಯ ಎಂಬ ಘೋಷವ್ಯಾಖ್ಯೆದೊಂದಿಗೆ ಭೂ ಮರುಸ್ಥಾಪನೆ, ಮರುಭೂಮೀಕರಣವನ್ನು ನಿಲ್ಲ್ಲಿಸುವುದು ಮತ್ತು ಬರ ನಿರೋಧಕತೆಯನ್ನು ನಿರ್ಮಿಸುವುದು’ ಆಗಿದೆ. ಇದಕ್ಕಾಗಿ ಎಲ್ಲರೂ ಒಗ್ಗೂಡಿ ಶ್ರಮಿಸಬೇಕಾಗಿದೆ ಎಂದರು.
ನಮ್ಮ ಮನೆಯ ಸುತ್ತಮುತ್ತಲನ ಪರಿಸರವನ್ನು ಸ್ವಚ್ಛವಾಗಿಟ್ಟುಕೊಂಡು, ಮರಗಿಡಗಳನ್ನು ಬೆಳೆಸಬೇಕು. ನೀರನ್ನು ಅನಗತ್ಯವಾಗಿ ಪೋಲು ಮಾಡದೆ ಮಿತವಾಗಿ ಬಳಸಬೇಕು, ಮಳೆ ನೀರು ಇಂಗು ಗುಂಡಿಗಳ ಮೂಲಕ ಬೋರ್‌ವೆಲ್‌ಗೆ ಇಂಗಿಸುವ ಕಾರ್ಯಮಾಡಬೇಕಿದೆ. ಇಂತಹ ಸಣ್ಣಪುಟ್ಟ ಕಾರ್ಯಗಳೊಂದಿಗೆ ಪರಿಸರ ರಕ್ಷಣೆಗೆ ಮುಂದಾಗೋಣ ಎಂದು ಹೇಳಿದರು.
ಭಾರತೀಯ ರೆಡ್‌ಕ್ರಾಸ್ ಸಂಸ್ಥೆಯ ಗೌರವ ಕಾರ್ಯದರ್ಶಿ ರವೀಂದ್ರ ಶಾಬಾದಿ ಪ್ರಾಸ್ತಾವಿಕವಾಗಿ ಮಾತನಾಡಿ, ಹಸಿರೆ ಉಸಿರು ಎಂದು ಹೇಳುವ ನಾವೆಲ್ಲರೂ ಪರಿಸರ ರಕ್ಷಣೆಗೆ ಆತ್ಮಸಾಕ್ಷಿಯಾಗಿ ಕಾರ್ಯ ನಿರ್ವಹಿಸಬೇಕಾಗಿದೆ. ಪ್ರತಿಯೊಬ್ಬರೂ ಮರಗಿಡಗಳನ್ನು ರಕ್ಷಿಸಬೇಕಾಗಿದೆ. ಸಸಿ ನೆಟ್ಟು ಅವುಗಳ ಪೋಷಿಸಲು ಮುಂದಾಗಬೇಕಿದೆ ಎಂದು ಹೇಳಿದರು.
ಪ್ರಾಂಶುಪಾಲರಾದ ಡಾ.ಗೀತಾ ಪಿ.ಮೋರೆ ಅವರು ಮಾತನಾಡಿ, ಪರಿಸರ ಸಂರಕ್ಷಣೆ ಬಗ್ಗೆ ಮಕ್ಕಳಲ್ಲಿ ಜಾಗೃತಿ ಮೂಡಿಸಬೇಕು. ತಮ್ಮ ಹುಟ್ಟುಹಬ್ಬ ಸೇರಿದಂತೆ ಮತ್ತಿತರ ಶುಭ ಕಾರ್ಯಗಳಲ್ಲಿ ಸಸಿಗಳನ್ನು ನೆಟ್ಟು ಅವುಗಳನ್ನು ರಕ್ಷಿಸಬೇಕು. ಈ ನಿಟ್ಟಿನಲ್ಲಿ ಜಾಗೃತಿ ಕಾರ್ಯಕ್ಕೆ ಯುವ ಶಿಕ್ಷಕರು ಮುಂದಾಗಬೇಕು ಎಂದು ಅಭಿಪ್ರಾಯ ಪಟ್ಟರು.
ಯುವ ರೆಡ್‌ಕ್ರಾಸ್ ಘಟಕದ ಸಂಯೋಜಕ ಡಾ.ಪದ್ಮರಾಜ ರಾಸಣಗಿ ವಿಶೇಷ ಉಪನ್ಯಾಸ ನೀಡಿದರು.
ರೆಡ್ ಕ್ರಾಸ್ ಸಂಸ್ಥೆಯ ಸಭಾಪತಿ ಅರುಣಕುಮಾರ್ ಲೋಯಾ ಅಧ್ಯಕ್ಷತೆ ವಹಿಸಿದ್ದರು. ಇದೇ ಸಂದರ್ಭದಲ್ಲಿ ಪರಿಸರವಾದಿಗಳಾದ ಕೇದಾರನಾಥ ಕುಲಕರ್ಣಿ, ಸತೀಶ ಜಿ.ಘಂಟಿ ಅವರನ್ನು ಸನ್ಮಾನಿಸಲಾಯಿತು. ಕಾರ್ಯಕ್ರಮದ ಅಂಗವಾಗಿ ನಡೆದ ಪ್ರಭಂದ ಮತ್ತು ಭಾಷಣ ಸ್ಪರ್ಧೆಯಲ್ಲಿ ವಿಜೇತ ವಿದ್ಯಾರ್ಥಿಗಳಾದ ಭವಾನಿ, ಸಹನಾ, ಪ್ರಿಯಾಂಕ್ ಬಿ. ಅವರಿಗೆ ಬಹುಮಾನ ವಿತರಿಸಲಾಯಿತು.
ಶಿಕ್ಷಣ ಸಂಸ್ಥೆಯ ಮೇಲ್ವಿಚಾರಕರಾದ ಅರುಣ ಜಿ, ಕಾರ್ಯಕ್ರಮ ಅಧಿಕಾರಿ ರೇಣುಕಾ ಆರ್.ಸ್ವಾಮಿ, ಡಾ.ಸೈಯದ್ ಸನಾವುಲ್, ರಾಜೇಶ, ಶಿವಶರಣಪ್ಪ, ಸಂಧ್ಯಾರಾಜ್ ಸೇರಿದಂತೆ ಮತ್ತಿತರರು ಇದ್ದರು. ವಿದ್ಯಾರ್ಥಿನಿ ಲಕ್ಷ್ಮೀ ಪ್ರಾರ್ಥಿಸಿದರು. ಭಾಗ್ಯಶ್ರೀ ಹಿರೇಮಠ ಸ್ವಾಗತಿಸಿದರು. ಸುಧಾ ಕಾರ್ಯಕ್ರಮ ನಿರೂಪಣೆ ಮಾಡಿದರು. ಭಾಗ್ಯಮ್ಮ ವಂದಿಸಿದರು.