ಶಹಾಬಾದ: ಪ್ರತಿಯೊಂದು ಮರವು ಮಾನವನ ಜೀವಾಳ.ಮಾನವ ಜೀವಂತವಾಗಿ ಇರಲು ಗಿಡ-ಮರಗಳು ಅನಿವಾರ್ಯ.ಕಾಲಕಾಲಕ್ಕೆ ಮಳೆಯಾಗಬೇಕಾದಲ್ಲಿ ಗಿಡಮರಗಳನ್ನು ಬೆಳೆಸುವುದು ಅನಿವಾರ್ಯ ಎಂದು ಸಿ.ಎ.ಇಂಗಿನಶೆಟ್ಟಿ ಕಾಲೇಜಿನ ಪ್ರಾಂಶುಪಾಲ ರಾಜಗೋಪಾಲ ಜೂಜಾರೆ ಹೇಳಿದರು.
ಅವರು ಬುಧವಾರ ನಗರದ ರಾಷ್ಟ್ರಭಾಷಾ ಶೀಕ್ಷಣ ಸಮಿತಿಯಲ್ಲಿ ವಿಶ್ವ ಪರಿಸರ ದಿನದ ಅಂಗವಾಗಿ ಆಯೋಜಿಸಲಾದ ಸಸಿ ನೆಡುವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
ಪ್ರಸ್ತುತ ದಿನಗಳಲ್ಲಿ ವಾಯುಮಾಲಿನ್ಯ ಹೆಚ್ಚಾಗುತ್ತಿದ್ದು, ಪರಿಸರವನ್ನು ಉಳಿಸಬೇಕಾದರೆ ಹೆಚ್ಚು ಗಿಡ-ಮರಗಳನ್ನು ಬೆಳಸಬೇಕು. ಆಧುನಿಕ ಜೀವನ ಶೈಲಿಯೊಂದಿಗೆ ಪರಿಸರ ಅವನತಿಯ ಅಂಚಿಗೆ ಬಂದಿದೆ. ಇಂದಿನ ಮಕ್ಕಳು ಪರಿಸರವನ್ನು ಉಳಿಸುವುದು ಅನಿವಾರ್ಯವಾಗಿದೆ. ಪರಿಸರ ದಿನಾಚರಣೆಯಲ್ಲಿ ಮಾತ್ರ ಗಿಡ ನೆಡುವುದನ್ನು ಬಿಟ್ಟು, ಸದಾ ಕಾಲ ಪರಿಸರದ ಕಾಳಜಿ ಹೊಂದಬೇಕು ಎಂದು ಸಲಹೆ ನಿಡಿದರು.
ಎಸ್.ಎಸ್.ನಂದಿ ಪ್ರೌಢಶಾಲೆಯ ಮುಖ್ಯಗುರು ಸುಧೀರ ಕುಲಕರ್ಣಿ ಮಾತನಾಡಿ, ವಿದ್ಯಾರ್ಥಿಗಳು ತಮ್ಮ ಬಡಾವಣೆಯ ರಸ್ತೆ ಪಕ್ಕದಲ್ಲಿ, ಮನೆಯ ಅಕ್ಕ-ಪಕ್ಕದಲ್ಲಿ ಗಿಡಗಳನ್ನು ನೆಟ್ಟು ಪೋಷಿಸಬೇಕು.
ಕಾಡನ್ನು ಬೆಳಸಿ ನಾಡು ಉಳಿಸಿ. ಕಾಡು ಬೆಳೆದರೆ ಉತ್ತಮವಾದ ಮಳೆ ಬೆಳೆಯಾಗುತ್ತದೆ. ಇದರಿಂದ ಪ್ರತಿಯೊಬ್ಬರೂ ಪ್ರಗತಿ ಹೊಂದಲು ಸಾಧ್ಯವಾಗುತ್ತದೆ.ಪರಿಸರ ಸಂರಕ್ಷಣೆ ಎಲ್ಲರ ಹೊಣೆಯಾಗಿದೆ. ಗಿಡ, ಮರಗಳನ್ನು ಹೆಚ್ಚು ಬೆಳೆಸಬೇಕು ಎಂದರು.
ಎಸ್.ಜಿ.ವರ್ಮಾ ಹಿಂದಿ ಪ್ರೌಢಶಾಲೆಯ ಮುಖ್ಯಗುರು ಮಲ್ಲಿನಾಥ ಪಾಟೀಲ ಮಾತನಾಡಿ, ಪ್ರಕೃತಿ ನಮಗೆ ಯಾವುದೇ ಪ್ರತಿಫಲಾಪೇಕ್ಷೆ ಇಲ್ಲದೆ ಶುದ್ಧ ನೀರು, ಗಾಳಿ, ಆಹಾರ ಸೇರಿದಂತೆ ಇನ್ನು ಅನೇಕ ಅಗತ್ಯ ವಸ್ತುಗಳನ್ನು ನೀಡುತ್ತಿದೆ. ಪರಿಸರವನ್ನು ನಾವು ರಕ್ಷಿಸಿದರೆ ಅದು ನಮ್ಮನ್ನು ರಕ್ಷಿಸುತ್ತದೆ. ಈ ನಿಟ್ಟಿನಲ್ಲಿ ಪ್ರತಿಯೊಬ್ಬರೂ ಸ್ವ ಇಚ್ಛೆಯಿಂದ ಗಿಡ, ಮರಗಳನ್ನು ಬೆಳೆಸಿ, ಪರಿಸರ ಸಂರಕ್ಷಿಸಬೇಕೆಂದು ತಿಳಿಸಿದರು.
ಈ ಸಂದರ್ಭದಲ್ಲಿ ಶಿಕ್ಷಕರಾದ ಬಾಬಾಸಾಹೇಬ ಸಾಳುಂಕೆ, ಚನ್ನಬಸಪ್ಪ ಕೊಲ್ಲೂರ್,ಮಹೇಶ್ವರಿ ಗುಳಿಗಿ,ರಂಜಿತಾ ಹಿರೇಮಠ, ಸುರೇಖಾ ಜಾಯಿ ಸೇರಿದಂತೆ ಶಾಲಾ ಮಕ್ಕಳು ಹಾಜರಿದ್ದರು.