ಶಹಾಬಾದ: ನಗರದ ವಾರ್ಡ ನಂ.17 ಹಾಗೂ ನಗರದ ಮಧ್ಯಭಾಗದಲ್ಲಿರುವ ಸೇಂಟ್ ಥಾಮಸ್ ಶಾಲೆಯ ಮುಂಭಾಗದಲ್ಲಿ ರಸ್ತೆ ನಿರ್ಮಾಣಕ್ಕಾಗಿ ಅಗೆದು ಹೋದ ರಸ್ತೆಯಲ್ಲಿ ಸಾಕಷ್ಟು ಪ್ರಮಾಣದಲ್ಲಿ ನೀರು ಸೇರಿಕೊಂಡು ಸಾರ್ವಜನಿಕರ ಸಂಚಾರಕ್ಕೆ ತುಂಬಾ ತೊಂದರೆಯಾಗುತ್ತಿದೆ.
ಕಳೆದ ಹತ್ತು ದಿನಗಳಿಂದ ಹಿಂದೆ ರಸ್ತೆ ಅಗೆಯಲಾಗಿದೆ.ಅಲ್ಲದೇ ಮೊಳಕಾಲುದ್ದ ಆಳ ತೋಡಿದ್ದರಿಂದ ಮಳೆ ಬಂದಾಗಲೊಮ್ಮೆ ನೀರು ತುಂಬಿಕೊಂಡು ಸಾರ್ವಜನಿಕರಿಗೆ ಎಲ್ಲಿಲ್ಲದ ತೊಂದರೆ ಅನುಭವಿಸುತ್ತಿದ್ದಾರೆ.ಅಲ್ಲದೇ ಶಾಲೆಗೆ ಬರುವ ವಿದ್ಯಾರ್ಥಿಗಳಿಗೆ ಹಾಗೂ ಪಾಲಕರಿಗೆ ಶಾಲೆಗೆ ಪ್ರವೇಶ ಮಾಡಬೇಕಾದರೂ ಹರಸಾಹಸ ಪಡಬೇಕಾಗಿದೆ. ಮಳೆ ನೀರು ಹೋಗುವಂತೆ ಗುತ್ತಿಗೆದಾರರು ಕ್ರಮಕೊಳ್ಳದಿರುವುದರಿಂದ ಇಷ್ಟೆಲ್ಲಾ ಅವಾಂತರಕ್ಕೆ ಕಾರಣವಾಗಿದೆ.
ಜನರು ಹೊಂಡದಲ್ಲಿ ಬಿದ್ದು, ಮೈಯೆಲ್ಲಾ ಕೆಸರು ಮಾಡಿಕೊಂಡ ಉದಾಹರಣೆಗಳಿವೆ. ಇದೇ ರಸ್ತೆಯಲ್ಲಿ ವಾರ್ಡ ಸದಸ್ಯೆ ಸಾಬೇರಾಬೇಗಂ ಅವರ ಮನೆಯಿದೆ.ಆದ್ದರಿಂದ ರಸ್ತೆ ನಿರ್ಮಾಣದ ಜತೆಗೆ ಮಳೆ ಬಂದಾಗಲೊಮ್ಮೆ ನೀರು ನಿಲ್ಲದಂತೆ ಕ್ರಮಕೈಗೊಳ್ಳಲು ಸಾರ್ವಜನಿಕರು ಆಗ್ರಹಿಸಿದ್ದಾರೆ.ಒಂದು ವೇಳೆ ಏನಾದರೂ ಅನಾಹುತವಾದರೆ ಅದಕ್ಕೆಲ್ಲಾ ನಗರಸಭೆಯ ಅಧಿಕಾರಿಗಳೇ ಹೊಣೆಗಾರರಾಗುತ್ತಾರೆ.
ಈ ಕಾಮಗಾರಿ ವೀಕ್ಷಿಸಬೇಕಾದ ಎಇಇ, ಜೆಇಗಳು ತಮಗೂ ಅದಕ್ಕೂ ಸಂಬಂಧವಿಲ್ಲದಂತೆ ವರ್ತಿಸುತ್ತಿದ್ದಾರೆ.ಈ ಕಡೆ ಗಮನಹರಿಸುವುದೇ ಇಲ್ಲಾ ಎಂದು ಸಾರ್ವಜನಿಕರ ಆರೋಪವಾಗಿದೆ.ಕೂಡಲೇ ಈ ಬಗ್ಗೆ ಕ್ರಮಕೈಗೊಂಡು, ಬೇಗನೆ ರಸ್ತೆ ನಿರ್ಮಾಣ ಮಾಡಿಕೊಡಬೇಕೆಂದು ಕರವೇ ತಾಲೂಕಾಧ್ಯಕ್ಷ ಯಲ್ಲಾಲಿಂಗ ಹೈಯ್ಯಾಳಕರ್ ಒತ್ತಾಯಿಸಿದ್ದಾರೆ.