- ಎಂ.ಡಿ ಮಶಾಖ ಚಿತ್ತಾಪುರ
ಚಿತ್ತಾಪುರ; ತಾಲೂಕಿನ ಯಾಗಾಪುರ ಮತ್ತು ಬೆಳಗೇರಾ ಗ್ರಾಮಗಳ ನಡುವೆ ಅಡವಿಯಲ್ಲಿ ಚಿರತೆಯೊಂದು ದಾಳಿ ಮಾಡಿ ಮಲ್ಲಪ್ಪ ಮಪಟ್ಟಲ್ಲಿ ಎಂಬುವವರ ಹೋರಿ ಗಾಯಗೊಂಡ ಘಟನೆ ಜರುಗಿದೆ.
ಮೇಯಿಸಲು ಗುಡ್ಡದ ಸಮೀಪ ದನಕರು ಹೊಡೆದುಕೊಂಡು ಹೋದಾಗ ಚಿರತೆ ದಾಳಿ ಮಾಡಿದೆ. ಅದನ್ನು ಗಮನಿಸಿ ದನಗಾಹಿಗಳು ಜೋರಾಗಿ ಚೀರಾಡಿದಾಗ ಭಯಗೊಂಡ ಚಿರತೆ ಹೋರಿಯನ್ನು ಬಿಟ್ಟು ಓಡಿ ಹೋಗಿದೆ.
ಹೋರಿಯ ಕತ್ತಿಗೆ ರಕ್ತಗಾಯವಾಗಿವೆ. ಪಶು ವೈದ್ಯರು ಸ್ಥಳಕ್ಕೆ ಭೇಟಿ ನೀಡಿ ಚಿಕಿತ್ಸೆ ನೀಡಿದ್ದಾರೆ ಎಂದು ಗ್ರಾಮಸ್ಥರು ಹೇಳಿದ್ದಾರೆ.
ಕಳೆದ ಒಂದು ವರ್ಷದಿಂದ ಚಿರತೆಯು ಬೆಳಗೇರಾ ಗ್ರಾಮಗಳ ಸಮೀಪದ ಗುಡ್ಡದಲ್ಲಿ ಓಡಾಡುತ್ತಿದೆ. ಆಹಾರ ಅರಸಿಕೊಂಡು ಗುಡ್ಡದಿಂದ ಹೊರಗೆ ಬಂದು ಜಾನುವಾರುಗಳ ಮೇಲೆ ದಾಳಿ ಮಾಡಿ ಕೊಂದು ಏಳೆದುಕೊಂಡು ಹೋಗುತ್ತಿರುವ ಘಟನೆಗಳು ಆಗಾಗ ನಡೆಯುತ್ತಲೇ ಇವೆ. ಅರಣ್ಯ ಇಲಾಖೆಯ ಅಧಿಕಾರಿಗಳು ಚಿರತೆಯನ್ನು ಸೆರೆ ಹಿಡಿದು ಜನರಿಗೆ, ರೈತರಿಗೆ, ದನಗಾಹಿಗಳಿಗೆ ಕಾಡುತ್ತಿರುವ ಭಯ, ಆತಂಕ ನಿವಾರಿಸಬೇಕು ಎಂದು ಸ್ಥಳೀಯ ಜನರು ಒತ್ತಾಯಿಸಿದ್ದಾರೆ.