ಕಲಬುರಗಿ: ಕೇಂದ್ರ ಸರ್ಕಾರ ಕೃಷಿ ಉತ್ಪನ್ನಗಳಿಗೆ ವೈಜ್ಞಾನಿಕ ಬೆಲೆ ನಿಗದಿಪಡಿಸಬೇಕೆಂದು ಅಖಿಲ ಭಾರತ ಕಿಸಾನ್ ಸಭಾದ ರಾಜ್ಯಾಧ್ಯಕ್ಷ ಡಾ. ಸಿದ್ದನಗೌಡ ಪಾಟೀಲ್ ಒತ್ತಾಯಿಸಿದರು.
ನಗರದಲ್ಲಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೇಂದ್ರ ಸರ್ಕಾರ ಒಟ್ಟು 23 ಬೆಳೆಗಳಿಗೆ ಎಂಎಸ್ಪಿ ಮೂಲಕ ದರ ನಿಗದಿ ಮಾಡಿ ರೈತರಿಗೆ ಆರ್ಥಿಕ ಹೊರೆ ಬೀಳುವಂತೆ ಮಾಡಿದೆ ಎಂದು ಆರೋಪಿಸಿದರು.
ಅವೈಜ್ಞಾನಿಕವಾಗಿರುವ ಎಂಎಸ್ ಪಿ ದರ ನಿಗದಿ ಮಾಡಿರುವುದನ್ನು ಖಂಡಿಸಿ ರೈತ ಕಿಸಾನ್ ಮೋರ್ಚಾದಿಂದ 13 ತಿಂಗಳ ಕಾಲ ಧರಣಿ ನಡೆಸಿದ ಸಂದರ್ಭದಲ್ಲಿ ಬಿಜೆಪಿ ಸರ್ಕಾರ ಈ ಕುರಿತು ಚಿಂತನೆ ಮಾಡಿ ನಿರ್ಧಾರ ಪ್ರಕಟಿಸುವುದಾಗಿ ಹೇಳಿತು. ಬೆಲೆ ನಿಗದಿ ಮಾಡುವ ಸಂದರ್ಭದಲ್ಲಿ ರೈತ ಸಂಘಟನೆಗಳನ್ನು ಅಭಿಪ್ರಾಯ ಕೇಳದೆ ಏಕ ಪಕ್ಷೀಯವಾಗಿ ನಿರ್ಣಯ ತೆಗೆದುಕೊಂಡು ಸಂಕಷ್ಟದಲ್ಲಿರುವ ರೈತರಿಗೆ ಮತ್ತಷ್ಟು ಹೊರೆ ಬೀಳುವಂತೆ ಮಾಡಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಸ್ವಾಮಿನಾಥನ್ ವರದಿಯ ಪ್ರಕಾರ ಕೃಷಿ ಉತ್ಪನ್ನಗಳಿಗೆ ಬೆಲೆ ನಿಗದಿಪಡಿಸಬೇಕು ಮತ್ತು ಮತ್ತು ಅವೈಜ್ಞಾನಿಕವಾಗಿರುವ ಎಂ ಎಸ್ ಪಿ ದರವನ್ನು ಪರಿಶೀಲಿಸಿ ಕ್ರಮಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ದೇಶದ ಒಣಭೂಮಿ ಹತ್ತಿ ಬೆಳೆಯುವ ರೈತರನ್ನು ಧ್ವಂಸಗೊಳಿಸುವ ಸಲುವಾಗಿ ಬಿಜೆಪಿ ಸರ್ಕಾರವು 2022- 23ನೇ ಸಾಲಿನ ಹಣಕಾಸು ವರ್ಷದಲ್ಲಿ ಸುಂಕ ರಹಿತ ಹತ್ತಿ ಆಮದನ್ನು ಶೇ.200ಕ್ಕೆ ಹೆಚ್ಚಿಸಿ ಸುಮಾರು 15 ಸಾವಿರ ಕೋಟಿ ರೂಪಾಯಿ ಆಮದು ಮಾಡಿಕೊಂಡಿದೆ ಎಂದು ಆರೋಪಿಸಿದರು.
ಸುದ್ದಿಗೋಷ್ಟಿಯಲ್ಲಿ ಮುಖಂಡರಾದ ಡಾ.ಜನಾರ್ಧನ, ಮೌಲಾ ಮುಲ್ಲಾ, ಭೀಮಾಶಂಕರ್ ಮಾಡಿಯಾಳ್ ಇದ್ದರು.