ಕಲಬುರಗಿ: ನೌಕರಿ ಕಾಯಕವಾದರೆ ತೃಪ್ತಿ ಜೀವನ, ವೃತ್ತಿಯಲ್ಲಿ ಸೇವಾ ಮನೋಭಾವ ಹೊಂದಿದರೆ ಆತ್ಮಶುದ್ಧಿಯಾಗಿ ಸಂತೃಪ್ತ ಜೀವನ ನಮ್ಮದಾಗುತ್ತದೆ ಎಂದು ಉಪಳಾಂವ ಗ್ರಾಮದ ಶ್ರೀರಾಮ ಕನ್ನಡ ಕಾನ್ವೆಂಟ್ ಶಾಲೆಯ ಮುಖ್ಯ ಗುರುಗಳಾದ ಶ್ರೀಮತಿ ಜ್ಯೋತಿ ಪಾಟೀಲ ಹೇಳಿದರು.
ನಗರದ ಭವಾನಿ ನಗರದಲ್ಲಿರುವ ಬಬಲಾದ ಮಠದಲ್ಲಿ 217ನೇ ವಾರದ ಶಿವಾನುಭವಗೋಷ್ಠಿ ಕಾರ್ಯಕ್ರಮದಲ್ಲಿ ವಿಶೇಷ ಉಪನ್ಯಾಸ ನೀಡಿ ಮಾತನಾಡುತ್ತಾ ಸಹನೆ ಸಂತೃಪ್ತಿ ಎನ್ನುವುದು ಮಾರುಕಟ್ಟೆಯಲ್ಲಿ ದೊರಕುವುದಿಲ್ಲ, ಅದೇ ರೀತಿ ನಮ್ಮ ಒಳಗೆ ಇರುವ ಕೋಪ ದಮನ ಮಾಡಿ ಆ ಸ್ಥಾನವನ್ನು ಆಕ್ರಮಿಸಿಕೊಳ್ಳುವ ಸಕರಾತ್ಮಕ ಗುಣ ಸಹನೆ. ಕೆಲವು ಜನ ಸಂಬಳಕ್ಕಾಗಿ ನೌಕರಿ ಮಾಡಿದರೆ ಇನ್ನೂ ಕೆಲವು ಜನ ಸೇವೆಗಾಗಿ ನೌಕರಿ ಮಾಡುತ್ತಾರೆ ಸಂಬಳ ತೆಗೆದುಕೊಂಡ ವ್ಯಕ್ತಿ ಕುಟುಂಬಕ್ಕಾಗಿ ಸೀಮಿತವಾದರೆ, ಸೇವೆ ಮಾಡುವ ವ್ಯಕ್ತಿ ಉತ್ತಮ ಸಮಾಜ ಕಟ್ಟುವ ಶಕ್ತಿಯಾಗಿ ಹೊರಹೊಮ್ಮುತ್ತಾನೆ. ನಾವೆಲ್ಲರೂ ಸೇವೆ ಮಾಡುವ ಮೂಲಕ ಮಕ್ಕಳಿಗೆ ಆದರ್ಶವಾಗೋಣ ಎಂದು ಮಾರ್ಮಿಕವಾಗಿ ನುಡಿದರು.
ಮುಖ್ಯ ಅತಿಥಿಗಳಾದ ಕುಮಸಿ ಗ್ರಾಮ ಪಂಚಾಯತಿ ಅಧ್ಯಕ್ಷರಾದ ಶ್ರೀಧರ ಪಾಟೀಲ ಗಣಜಲಖೇಡ ಮಾತನಾಡುತ್ತಾ ನಿಜವಾಗಲೂ ಬಬಲಾದ ಪೂಜ್ಯರು ಶಿವಾನುಭವಗೋಷ್ಠಿ ಎಂಬ ಹೆಸರಿನೊಂದಿಗೆ ಹಲವಾರು ಜನ ನಿಸ್ವಾರ್ಥ ಸಮಾಜ ಸೇವಕರನ್ನು ಪರಿಚಯ ಮಾಡುತ್ತಿರುವ ಕಾರ್ಯ ಶ್ಲಾಘನೀಯ. ಇಂದು ಸನ್ಮಾನಿತ ಗೊಂಡಿರುವ ವೈದ್ಯರು ಹಲವಾರು ಜೀವ ಉಳಿಸಿದರೆ, ಪತ್ರಕರ್ತರು ಸಮಾಜದ ಅಂಕುಡೊಂಕುಗಳನ್ನು ತಿದ್ದಿ ಜನ ಜಾಗೃತಿ ಮೂಡಿಸುವ ಕಾರ್ಯ ಮಾಡುತ್ತಾರೆ. ಇವರಿಬ್ಬರು ನಮ್ಮ ರಾಷ್ಟ್ರದ ಬಹುದೊಡ್ಡ ಶಕ್ತಿಯಾಗಿದ್ದಾರೆ. ಇವರ ಸೇವೆ ಸಮೃದ್ಧ ಸಮಾಜ ನಿರ್ಮಾಣಕ್ಕೆ ಅಡಿಪಾಯವಾಗುತ್ತದೆ ಎಂದು ಹೇಳಿದರು. ಕಾರ್ಯಕ್ರಮದ ನೇತೃತ್ವ ಶ್ರೀಮಠದ ಪೀಠಾಧಿಪತಿಗಳಾದ ಪೂಜ್ಯಶ್ರೀ ಗುರುಪಾದಲಿಂಗ ಮಹಾ ಶಿವಯೋಗಿಗಳು ವಹಿಸಿದ್ದರು.
ಇದೇ ಸಂದರ್ಭದಲ್ಲಿ ಪತ್ರಿಕಾ ದಿನಾಚರಣೆ ಹಾಗೂ ವೈದ್ಯ ದಿನಾಚರಣೆ ನಿಮಿತ್ಯ ಹಿರಿಯ ವೈದ್ಯರಾದ ಡಾ. ಕೆ. ಬಸವರಾಜ ಹಾಗೂ ಪತ್ರಕರ್ತರಾದ ಸಾಜಿದ ಅಲಿ ಅವರಿಗೆ ಶ್ರೀ ಮಠದ ವತಿಯಿಂದ ಗೌರವಿಸಲಾಯಿತು.
ಕಾರ್ಯಕ್ರಮದಲ್ಲಿ ನ್ಯಾಯವಾದಿ ಹಣಮಂತರಾಯ ಎಸ್ ಅಟ್ಟೂರ, ಸಂಗಮೇಶ ಹೂಗಾರ, ಮಾಣಿಕ ಮಿರ್ಕಲ, ರೇವಣಸಿದ್ದಯ್ಯ ಶಾಸ್ತ್ರಿ, ಮಲ್ಲಿನಾಥ ಕುಮಸಿ, ಶರಣಬಸಪ್ಪ ಪಾಟೀಲ ವರನಾಳ, ಸಿದ್ದಣ್ಣ ಬಿರೆದಾರ ವಾಡಿ, ಕು.ವಾಸು ಪಾಟೀಲ, ಗುರುರಾಜ ಹಸರಗುಂಡಗಿ, ಶಾಂತು ಕಲಬುರಗಿ, ಗೌಡೇಶ ಬಿರಾದಾರ, ನಾಗರಾಜ ಪಾಟೀಲ, ಶಿವಕುಮಾರ ಸಾವಳಗಿ, ಪ್ರಕಾಶ ಬಿರಾದಾರ ವಾಡಿ, ನಿರ್ಮಲಾ ಹಿರೇಮಠ, ಸಂಗೀತಾ ಪಾಟೀಲ, ಜ್ಯೋತಿ ಕಲಬುರಗಿ, ಮೀನಾಕ್ಷಿ ಜಮಾದಾರ, ಮೀನಾಕ್ಷಿ ಮೋಟೆ, ಅಮರೇಶ್ವರಿ ಹೂಗಾರ, ಸೇರಿದಂತೆ ಅನೇಕ ಜನ ಪಾಲ್ಗೊಂಡಿದ್ದರು.