ಕಲಬುರಗಿ: ಜೇವರ್ಗಿ ತಾಲೂಕಿನ ಮಲ್ಲಾಬಾದ್ ಏತ ನೀರಾವರಿ ಯೋಜನೆಯ ಅನುಷ್ಠಾನ ಪ್ರಕ್ರಿಯೆ ಚಾಲ್ತಿಯಲ್ಲಿದೆ. ಟೆಂಡರ್ ಕರೆಯುವಂತೆ ಜಲಸಂಪನ್ಮೂಲ ಸಚಿವರೂ ಆಗಿರುವ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ ಎಂದು ಕೆಕೆಆರ್‌ಡಿಬಿ ಅಧ್ಯಕ್ಷ, ಶಾಸಕ ಡಾ. ಅಜಯಸಿಂಗ್ ಧರಂಸಿಂಗ್ ಹೇಳಿದ್ದಾರೆ.
ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು, ಮಲ್ಲಾಬಾದ್ ಏತ ನೀರಾವರಿ ಯೋಜನೆ ಜಾರಿಗೆ ನಮ್ಮ ಸರಕಾರ ಬದ್ಧವಾಗಿದೆ. ಈ ಬಗ್ಗೆ ಜಲಸಂಪನ್ಮೂಲ ಸಚಿವ ಡಿ.ಕೆ. ಶಿವಕುಮಾರ್ ಅವರು ಜೇವರ್ಗಿಯಲ್ಲಿಚುನಾವಣಾ ಪ್ರಚಾರ ಸಭೆಯಲ್ಲಿವಾಗ್ದಾನ ನೀಡಿದ್ದರು. ಅದರಂತೆ ಮುಂದಿನ ಪ್ರಕ್ರಿಯೆ ತ್ವರಿತವಾಗಿ ಕೈಗೊಳ್ಳಲು ಸೂಚನೆ ನೀಡಿರುವರು ಎಂದಿದ್ದಾರೆ.
ಯೋಜನೆ ಅನುಷ್ಠಾನದ ಬಗ್ಗೆ ಕೃಷ್ಣಭಾಗ್ಯ ಜಲ ನಿಗಮದ 140ನೇ ಆಡಳಿತ ಮಂಡಳಿ ಸಭೆಯಲ್ಲಿಅಂಗೀಕಾರವಾಗಿದೆ. ಯೋಜನೆಯ ಹಂತ 1, 2 ಮತ್ತು 3ರ ಬಾಕಿ ಉಳಿದಿರುವ ವಿತರಣಾ ಕಾಮಗಾರಿಗಳ ಅನುಷ್ಠಾನಕ್ಕೆ ಅನುದಾನವೂ ನಿಗದಿಪಡಿಸಲು ಸಚಿವರು ಸೂಚಿಸಿದ್ದಾರೆ. ಈ ಯೋಜನೆ ಪೂರ್ಣಗೊಳಿಸಿ 33, 860 ಹೆಕ್ಟೇರ್ ಪ್ರದೇಶಕ್ಕೆ ನೀರಾವರಿ ಸೌಲಭ್ಯ ಕಲ್ಪಿಸಲು ಸರಕಾರ ಬದ್ಧತೆಯಿಂದ ಕೆಲಸ ಮಾಡುತ್ತಿದೆ ಎಂದು ಅಜಯಸಿಂಗ್ ಸ್ಪಷ್ಟಪಡಿಸಿದ್ದಾರೆ.
ನಾನು ಈಗಾಗಲೇ ಡಿಸಿಎಂ ಅವರನ್ನು ಭೇಟಿಯಗಿ ಕಾಲಮಿತಿಯೊಳಗೆ ಕಾಮಗಾರಿ ಪೂರ್ಣಗೊಳಿಸಲು ಮನವರಿಕೆ ಮಾಡಿಕೊಟ್ಟಿರುವೆ. ಸಚಿವರು ಸಹ ಜಲಸಂಪನ್ಮೂಲ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.
ಮಲ್ಲಾಬಾದ್ ಏತ ನೀರಾವರಿ ಯೋಜನೆ ಮೂಲಕ ಯಡ್ರಾಮಿ ತಾಲೂಕಿನ 38 ಹಳ್ಳಿಗಳು ಮತ್ತು ಜೇವರ್ಗಿ ತಾಲೂಕಿನ 20 ಹಳ್ಳಿಗಳ ರೈತರ ಜಮೀನುಗಳಿಗೆ ನೀರು ಒದಗಿಸಲು ಕಂಕಣಬದ್ಧವಾಗಿ ಕೆಲಸ ಮಾಡುತ್ತಿದ್ದೇನೆ ಎಂದು ವಿವರಿಸಿದ್ದಾರೆ.
ಮಲ್ಲಾಬಾದ್ ಏತ ನೀರಾವರಿ ಯೋಜನೆ ಜಾರಿಗೆ ನಮ್ಮ ಸರಕಾರ ಬದ್ಧವಾಗಿದೆ. ಯೋಜನೆಯ ಟೆಂಡರ್ ಪ್ರಕ್ರಿಯೆ ಕೈಗೊಳ್ಳಲು ಜಲಸಂಪನ್ಮೂಲ ಸಚಿವರು ಈಗಾಗಲೇ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. ಅದರಂತೆ ಪ್ರಕ್ರಿಯೆಗಳು ತ್ವರಿತವಾಗಿ ನಡೆದಿವೆ. ಅದಕ್ಕಾಗಿ ಕ್ಷೇತ್ರದ ಪೂಜ್ಯ ಶ್ರೀಗಳು, ನೀರಾವರಿ ಹೋರಾಟಗಾರರು, ರೈತ ಮುಖಂಡರು ಸರಕಾರಕ್ಕೆ ಸಹಕರಿಸಬೇಕು. -ಡಾ.ಅಜಯಸಿಂಗ್, ಶಾಸಕರು, ಜೇವರ್ಗಿ