ಏಕ ಬಳಕೆ ಪ್ಲಾಸ್ಟಿಕ್ ನಿಷೇಧ: ನಿರಂತರ ದಾಳಿ ಮಾಡಿ, ಹೆಚ್ಚು ದಂಡ ವಿಧಿಸಿ | ಬಿ.ಫೌಜಿಯಾ ತರನ್ನುಮ್

0
96

ಕಲಬುರಗಿ: ರಾಜ್ಯದಲ್ಲಿ ಕಲಬುರಗಿ ಸೇರಿದಂತೆ 5 ನಗರಗಳನ್ನು ಏಕ ಬಳಕೆ ಪ್ಲಾಸ್ಟಿಕ್ ಮುಕ್ತ ನಗರವೆಂದು ಘೋಷಿಸಿರುವ ಹಿನ್ನೆಲೆಯಲ್ಲಿ ಕಲಬುರಗಿ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ನಿಷೇಧಿತ ಏಕ ಬಳಕೆ ಪ್ಲಾಸ್ಟಿಕ್ ವಸ್ತುಗಳ ತಯಾರಿಕೆ, ಸಾಗಾಣಿಕೆ, ಸಂಗ್ರಹಣೆ ಹಾಗೂ ಮಾರಾಟಕ್ಕೆ ಕಡಿವಾಣ ಹಾಕಲು ನಿರಂತರ ಅಂಗಡಿ-ಮುಂಗಟ್ಟುಗಳ ಮೇಲೆ ದಾಳಿ ನಡೆಸಿ ಭಾರಿ ದಂಡ ವಿಧಿಸುವಂತೆ ಜಿಲ್ಲಾಧಿಕಾರಿ ಬಿ.ಫೌಜಿಯಾ ತರನ್ನುಮ್ ಅವರು ನಗರ ಸ್ಥಳೀಯ ಸಂಸ್ಥೆಗಳ ಮುಖ್ಯಸ್ಥರಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದರು.

ಸೋಮವಾರ ಇಲ್ಲಿನ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಕಲಬುರಗಿ ನಗರದಲ್ಲಿ ಏಕ ಬಳಕೆ ಪ್ಲಾಸ್ಟಿಕ್ ಉತ್ಪನ್ನಗಳನ್ನು ಮಾರಾಟ ಮತ್ತು ಬಳಕೆ ನಿರ್ಬಂಧ ಹಿನ್ನೆಲೆಯಲ್ಲಿ ಕೈಗೊಂಡ ಕ್ರಮಗಳ ಕುರಿತು ಪರಾಮರ್ಶಿಸಿದ ಅವರು, ಇದೂವರೆಗಿನ ದಾಳಿ ಮತ್ತು ಅಲ್ಪ ದಂಡಕ್ಕೆ ಅಸಮಾಧಾನ ವ್ಯಕ್ತಪಡಿಸಿ, ಸಂಪೂರ್ಣ ಪ್ಲಾಸ್ಟಿಕ್ ನಿಲ್ಲಿಸಬೇಕೆಂದರೆ ನಗರದಲ್ಲಿನ ಸಾರ್ವಜನಿಕರಿಗೆ ಈ ಬಗ್ಗೆ ಅರಿವು ಮೂಡಿಸುವುದರ ಜೊತೆಗೆ ವಾಣಿಜ್ಯ ಅಂಗಡಿ-ಮುಂಗಟ್ಟುಗಳು, ಕಾರ್ಖಾನೆ, ಸಗಟು ವಿತರಕರು, ಗೋದಾಮು, ಹೋಟೆಲ್, ಬೀದಿ ಬದಿ ವ್ಯಾಪಾರಿಗಳ ಮೇಲೆ ಪೌರ ಸಂಸ್ಥೆಗಳ ಮುಖ್ಯಸ್ಥರು, ಪರಿಸರ ಅಭಿಯಂತರರು ನಿರಂತರ ದಾಳಿ ನಡೆಸಿ ದಂಡ ವಿಧಿಸಬೇಕು ಎಂದರು.

Contact Your\'s Advertisement; 9902492681

ಮೊದಲನೇ ಮತ್ತು ಎರಡನೇ ಬಾರಿ ಉಲ್ಲಂಘನೆಗೆ ದಂಢ ವಿಧಿಸಿ, ಮೂರನೇ ಬಾರಿ ಉಲ್ಲಂಘನೆ ಮರುಕಳಿಸಿದಲ್ಲಿ ಮುಲಾಜಿಲ್ಲದೆ ಅಂತಹವರ ಮೇಲೆ ಕಾನೂನು ಕ್ರಮ ಕೈಗೊಳ್ಳಬೇಕೆಂದು ಅಧಿಕಾರಿಗಳಿಗೆ ನಿರ್ದೇಶನ ನೀಡಿದ ಜಿಲ್ಲಾಧಿಕಾರಿಗಳು, ಹೊರ ಜಿಲ್ಲೆ, ಗಡಿ ರಾಜ್ಯದಿಂದ ಜಿಲ್ಲೆಗೆ ಈ ನಿಷೇಧಿತ ಪ್ಲಾಸ್ಟಿಕ್ ಅಮದು ಆಗದಂತೆ ಚೆಕ್ ಪೋಸ್ಟ್‍ನಲ್ಲಿ ನಿಗಾ ವಹಿಸಬೇಕೆಂದರು.

ನಗರದಲ್ಲಿ ವಾಣಿಜ್ಯ ಇಲಾಖೆಯವರು ಚೆಕ್ ಪೋಸ್ಟ್ ಸ್ಥಾಪಿಸಬೇಕು. ಇನ್ನು ಎಂ.ಎಸ್.ಎಂ.ಇ. ಕೈಗಾರಿಕೆಗಳಲ್ಲಿ ಇದರ ಬಳಕೆಯಾಗದಂತೆ ಜಿಲ್ಲಾ ಕೈಗಾರಿಕಾ ಕೇಂದ್ರದ ಅಧಿಕಾರಿಗಳು ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಬೇಕೆಂದರು.

2023ರ ವಿಶ್ವ ಪರಿಸರ ದಿನಾಚರಣೆದಂದು ರಾಜ್ಯದ ಅರಣ್ಯ, ಪರಿಸರ ಮತ್ತು ಜೀವಿಶಾಸ್ತ್ರ ಸಚಿವರು ಕಲಬುರಗಿ, ಬೀದರ, ಮೈಸೂರು, ಮಂಗಳೂರು ಹಾಗೂ ಧರ್ಮಸ್ಥಳ ಪಟ್ಟಣಗಳನ್ನು ಏಕ ಬಳಕೆ ಪ್ಲಾಸ್ಟಿಕ್ ಮುಕ್ತ ನಗರವನ್ನಾಗಿ ಘೋಷಿಸಿದ್ದು, ಈ ಸಂಬಂಧ ಕೈಗೊಂಡ ಅನುಪಾಲನಾ ವರದಿ ಸಲ್ಲಿಸುವಂತೆ ಸರ್ಕಾರದ ನಿರ್ದೇಶನ ಇರುವ ಕಾರಣ, ಇದೂವರೆಗೆ ನಗರದಲ್ಲಿ ಕೈಗೊಂಡ ಕ್ರಮದ ಬಗ್ಗೆ 2 ದಿನದಲ್ಲಿ ಅನುಪಾಲನಾ ವರದಿ ಸಲ್ಲಿಸುವಂತೆ ಅಧಿಕಾರಿಗಳಿಗೆ ಡಿ.ಸಿ. ಸೂಚನೆ ನೀಡಿದರು.

ಮಣ್ಣಿನ ಗಣಪ ಬಳಸಿ: ಮುಂದೆ ಗಣೇಶ ಹಬ್ಬ ಬರುತ್ತಿರುವ ಕಾರಣ ಪರಿಸರಕ್ಕೆ ಹಾನಿಕಾರಕವಾಗಿರುವ ಪಿ.ಓ.ಪಿ. ಗಣಪನನ್ನು ತ್ಯಜಿಸಿ ಪರಿಸರ ಸ್ನೇಹಿ ಮಣ್ಣಿನಿಂದ ಮಾಡಿದ ಗಣಪನನ್ನು ಪ್ರತಿಷ್ಠಾಪಿಸುವಂತೆ ನಗರದ ಜನತೆ, ಸಂಘ-ಸಂಸ್ಥೆಗಳಿಗೆ, ಪ್ರತಿಷ್ಠಾಪನಾ ಮಂಡಳಿಗಳಿಗೆ ಇವಾಗಿನಿಂದಲೆ ಅರಿವು ಮೂಡಿಸಬೇಕು. ಸಾರ್ವಜನಿಕರು ಸಹ ಪರಿಸರ ಸ್ನೇಹಿ ಹಬ್ಬ ಆಚರಿಸಬೇಕು ಎಂದು ಡಿ.ಸಿ. ಬಿ.ಫೌಜಿಯಾ ತರನ್ನುಮ್ ತಿಳಿಸಿದರು.

ಕರ್ನಾಟಕ ರಾಜ್ಯ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿಯ ಕಲಬುರಗಿ ಪ್ರಾದೇಶಿಕ ಕಚೇರಿಯ ಪರಿಸರ ಅಧಿಕಾರಿ ಅದಮ್ ಪಟೇಲ್ ಮಾತನಾಡಿ, ಇದೂವರೆಗೆ ನಗರ ಸೇರಿದಂತೆ ಜಿಲ್ಲೆಯಲ್ಲಿ ಪ್ಲಾಸ್ಟಿಕ್ ಬಳಕೆ ನಿರ್ಬಂಧ ಕುರಿತು ತೆಗೆದುಕೊಂಡ ಕ್ರಮಗಳ ಕುರಿತು ವಿವರಿಸಿದಲ್ಲದೆ ಕಳೆದ 2023-24 ರಿಂದ ಇಲ್ಲಿಯವರೆಗೆ ಪರಿಸರ ಕಾಯ್ದೆ-1986ರನ್ವಯ ಮಂಡಳಿಯಿಂದ ತಲಾ 2 ಪ್ಲಾಸ್ಟಿಕ್ ತಯ್ಯಾರಿಕಾ ಘಟಕ, ಗೋದಾಮುಗಳ ಮೇಲೆ ದಾಳಿ ಮಾಡಿ ಎಫ್.ಐ.ಆರ್. ದಾಖಲಿಸಿದೆ. ಇದಲ್ಲದೆ 3 ಕಾರ್ಖಾನೆಗಳನ್ನು ಶಾಸ್ವತವಾಗಿ ಮುಚ್ಚಿಸಲು ಮಂಡಳಿಗೆ ಶಿಫಾರಸ್ಸು ಮಾಡಲಾಗಿದೆ ಎಂದಲ್ಲದೆ ದಾಳಿಯಲ್ಲಿ ವಶಪಡಿಸಿಕೊಳ್ಳುವ ಏಕ ಬಳಕೆ ಪ್ಲಾಸ್ಟಿಕ್‍ಗಳನ್ನು ನಿಯಮಾವಳಿಯಂತೆ ಜಿಲ್ಲೆಯ ಸಿಮೆಂಟ್ ಕಂಪನಿಗಳಿಗೆ ಪ್ಲಾಸ್ಟಿಕ್ ತ್ಯಾಜ್ಯ ಕೋ-ಪ್ರೊಸೆಸಿಂಗ್ ಮಾಡಲು ನೀಡಲಾಗುತ್ತಿದೆ ಎಂದು ಸಭೆಗೆ ಮಾಹಿತಿ ನೀಡಿದರು.

ಸಭೆಯಲ್ಲಿ ಕಲಬುರಗಿ ಮಹಾನಗರ ಪಾಲಿಕೆ ಆಯುಕ್ತ ಭುವನೇಶ ಪಾಟೀಲ ದೇವಿದಾಸ್, ಪರಿಸರ ಅಭಿಯಂತರರಾದ ಸುಷ್ಮಾ ಸಾಗರ್, ಜಿಲ್ಲೆಯ ಎಲ್ಲಾ ನಗರ ಸ್ಥಳೀಯ ಸಂಸ್ಥೆಗಳ ಮುಖ್ಯಾಧಿಕಾರಿಗಳು, ಪರಿಸರ ಇಂಜಿನೀಯರಗಳು, ಆರೋಗ್ಯ ನಿರೀಕ್ಷಕರು ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here