ಶಹಾಬಾದ: ಜೀವನದಲ್ಲಿಶಿಸ್ತು ಹಾಗೂ ಸತತ ಪರಿಶ್ರಮದಿಂದ ಇಂದಿನ ಸ್ಪರ್ಧಾತ್ಮಕ ಜಗತ್ತಿನಲ್ಲಿ ಉಜ್ವಲ ಭವಿಷ್ಯ ರೂಪಿಸಿಕೊಳ್ಳಲು ವಿದ್ಯಾರ್ಥಿಗಳು ಮುಂದಾಗಬೇಕು ಎಂದು ನಗರ ಪೊಲೀಸ್ ಠಾಣೆಯ ಎಎಸ್‍ಐ ಶ್ರೀಕಾಂತ ನಾಯಕ ಹೇಳಿದರು.
ಅವರು ನಗರದ ಸಿ.ಎ. ಇಂಗಿನಶೆಟ್ಟಿ ಕಾಲೇಜಿನ ಪ್ರಥಮ ವರ್ಷದ ವಾಣಿಜ್ಯ ವಿಭಾಗದ ವಿದ್ಯಾರ್ಥಿಗಳಿಗೆ ಆಯೋಜಿಸಲಾದ ಸ್ವಾಗತ ಸಮಾರಂಭದ ಮುಖ್ಯ ಅತಿಥಿಗಳಾಗಿ ಮಾತನಾಡಿದರು.
ವಿದ್ಯಾರ್ಥಿಗಳು ಓದಿನ ಜತೆಗೆ ಜೀವನದಲ್ಲಿ ಶಿಸ್ತು ರೂಢಿಸಿಕೊಳ್ಳಬೇಕು. ವಿದ್ಯಾರ್ಥಿಗಳು ವಿದ್ಯಾವಂತರಾಗುತ್ತಿದ್ದಾರೆಯೇ ಹೊರತು ಶಿಸ್ತು ರೂಢಿಸಿಕೊಳ್ಳುತ್ತಿಲ್ಲ. ಶಿಸ್ತು ಇಲ್ಲದ ಮೇಲೆ ವಿದ್ಯಾವಂತರಾಗಿದ್ದರೂ ಪ್ರಯೋಜನ ಬರುವುದಿಲ್ಲ. ಹೀಗಾಗಿ ಪ್ರತಿಯೊಬ್ಬರು ಶಿಸ್ತನ್ನು ತಮ್ಮ ಜೀವನದಲ್ಲಿ ರೂಢಿಸಿಕೊಳ್ಳಬೇಕು.ಅಲ್ಲದೇ ಕಾಲೇಜು ಸೇರ್ಪಡೆಯಾದ ನಂತರ ಓದಿನ ಕಡೆಗೆ ಹೆಚ್ಚಿನ ಗಮನ ನೀಡಿ.ಸ್ವಲ್ಪ ವಾಲಿದರೂ ಅದು ನಿಮ್ಮ ಜೀವನಕ್ಕೆ ಹಾಗೂ ಕುಟುಂಬಕ್ಕೆ ತೊಂದರೆಯುಂಟು ಮಾಡುತ್ತದೆ ಎಂದರಲ್ಲದೇ, 18 ವರ್ಷಕ್ಕಿಂತ ಕಡಿಮೆ ವಯಸ್ಸು ಹೊಂದಿದ ವಿದ್ಯಾರ್ಥಿಗಳು ಕಾಲೇಜಿಗೆ ಬೈಕ್ ತೆಗೆದುಕೊಂಡು ಬರುತ್ತಿದ್ದಾರೆ.ಒಂದು ವೇಳೆ ಏನಾದರೂ ಅನಾಹುತವಾದರೆ,ಬೈಕ್ ಮಾಲೀಕರ ಮೇಲೆ ಕೇಸ್ ರಜಿಸ್ಟರ್ ಆಗುತ್ತದೆ.ನೀವು ಮಾಡಿದ ತಪ್ಪಿಗೆ ನಿಮ್ಮ ಹೆತ್ತವರು ಕಷ್ಟ ಅನುಭವಿಸುವ ಕೆಲಸಕ್ಕೆ ಮುಂದಾಗಬೇಡಿ ಎಂದರು.
ವಾಣಿಜ್ಯ ವಿಭಾಗದ ಉಪನ್ಯಾಸಕ ಪ್ರವೀಣ ರಾಜನ್ ಮಾತನಾಡಿ, ವಿದ್ಯಾರ್ಥಿಗಳು ಮೊಬೈಲ್, ಅಂತರ್ಜಾಲ, ಟಿ.ವಿ. ಗಳಿಂದ ದೂರ ಇದ್ದು, ಒಳ್ಳೆಯ ಆಸಕ್ತಿ, ಆಲೋಚನೆ ಹಾಗೂ ಶ್ರದ್ಧಾಭಕ್ತಿಗಳನ್ನು ಮೈಗೂಡಿಸಿ ಸತ್ಪ್ರಜೆಗಳಾಗಿ ಬಾಳಿ ಭವ್ಯ ಭಾರತದ ಆಸ್ತಿಗಳಾಗಬೇಕು ಎಂದರು.
ಸಿ.ಎ.ಇಂಗಿನಶೆಟ್ಟಿ ಕಾಲೇಜಿನ ಪ್ರಾಂಶುಪಾಲ ರಾಜಗೋಪಾಲ ಜೂಜಾರೆ ಮಾತನಾಡಿ, ವಿದ್ಯಾರ್ಥಿಗಳು ಗುರಿ ತಲುಪಬೇಕಾದರೆ ಕಠಿಣ ಪರಿಶ್ರಮ ಅಗತ್ಯ, ಪಾಲಕರು ತುಂಬಾ ಕಷ್ಟಪಟ್ಟು ಮಕ್ಕಳನ್ನು ಓದಿಸುತ್ತಾರೆ. ಮಕ್ಕಳು ಪಾಲಕರ ಕಷ್ಟವನ್ನು ಅರಿತು ಚನ್ನಾಗಿ ಅಭ್ಯಾಸ ಮಾಡಿದಾಗ ಪಾಲಕರ ಶ್ರಮಕ್ಕೆ ತಕ್ಕ ಪ್ರತಿಫಲ ಸಿಕ್ಕಂತಾಗುತ್ತದೆ. ಎಂದರು.
ಎಸ್.ಜಿ.ವರ್ಮಾ ಹಿಂದಿ ಪ್ರೌಢಶಾಲೆಯ ಮುಖ್ಯಗುರು ಮಲ್ಲಿನಾಥ ಪಾಟೀಲ ಮಾತನಾಡಿದರು. ರಾಷ್ಟ್ರಭಾಷಾ ಶಿಕ್ಷಣ ಸಮಿತಿಯ ಕಾರ್ಯದರ್ಶಿ ದಿಲೀಪ್ ಯಲಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು.
ಉಪನ್ಯಾಸಕರಾದ ರಾಜಕುಮಾರ ಬಾಸೂತ್ಕರ್,ರಮೇಶ ವಾಲಿ, ಶರಣಪ್ಪ ಹಲಕರ್ಟಿ, ದೀಪಾ.ಡಿ, ಅಶ್ವಿನಿ ಮೋಹಿತೆ, ಜ್ಯೋತಿ.ಎಸ್.ಡೆಂಗಿ,ಪದ್ಮಶ್ರೀ ಜೋಷಿ,ಮಹೇಶ್ವರಿ ಗುಳಿಗಿ,ಭಾರತಿ ಚವ್ಹಾಣ, ಲತಾ ಸಾಳುಂಕೆ, ವೀರಯ್ಯ ಹಿರೇಮಠ ಇತರರು ಇದ್ದರು.