ಕಲಬುರಗಿ: ಕಳೆದ ನಾಲ್ಕು ದಶಕಗಳಿಂದ ಶೋಷಿತರ ಧ್ವನಿಯಾಗಿಹೋರಾಟದ ಬದುಕು ನಡೆಸಿದ ನನಗೆ ಇಂದು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ನಮ್ಮನ್ನು ದಲಿತ ಚಳವಳಿ ಸಾಹಿತ್ಯ ಸಮ್ಮೇಳನಕ್ಕೆ ಸರ್ವಾಧ್ಯಕ್ಷರಾಗಿ ಆಯ್ಕೆ ಮಾಡಿದ್ದು, ಹೋರಾಟಗಾರರಿಗೆ ವಿಶೇಷ ಗೌರವ ಕೊಟ್ಟಂತಾಗಿದೆ ಎಂದು ಸಮ್ಮೇಳನದ ನಿಯೋಜಿತ ಸರ್ವಾಧ್ಯಕ್ಷರೂ ಆದ ಕರ್ನಾಟಕ ದಲಿತ ಸಂಘರ್ಷ ಸಮಿತಿಯ ರಾಜ್ಯ ಸಂಚಾಲಕ ಡಾ. ಡಿ.ಜಿ. ಸಾಗರ ಅಭಿಮತ ವ್ಯಕ್ತಪಡಿಸಿದರು.
ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ವತಿಯಿಂದ ನಗರದ ಕನ್ನಡ ಭವನದ ಆವರಣದಲ್ಲಿ ಏರ್ಪಡಿಸಿದ ಸಮ್ಮೇಳನಾಧ್ಯಕ್ಷರ ಅಧಿಕೃತ ಆಹ್ವಾನ ಸ್ವೀಕರಿಸಿ ಮಾತನಾಡಿದ ಅವರು, ಪ್ರತಿಯೊಬ್ಬರ ಜಿವನ ಸಂಘರ್ಷಮಯವಾಗಿದ್ದು, ಸಮಾಜದಲ್ಲಿನ ಅನೇಕ ಏಳು ಬೀಳುಗಳನ್ನು, ಅಸಮಾನತೆ ಕಾಣುತ್ತೇವೆ. ಸಮ ಸಮಾಜವನ್ನು ಕಟ್ಟಲು ಮತ್ತು ಬದುಕನ್ನು ಪರಿವರ್ತನೆಗೊಳಿಸಲು ಚಳವಳಿಗಳು ಹುಟ್ಟಿಕೊಂಡಿವೆ.
ಗ್ರಾಮೀಣ ಪ್ರದೇಶದಲ್ಲಿ ಶೋಷಿತರ ಬದುಕು ಕಟ್ಟಿಕೊಳ್ಳುವಲ್ಲಿ ನಿರಂತರ ಹೋರಾಟಗಳು ನಾಲ್ಕು ದಶಕಗಳಿಂದ ನಡೆಸಿಕೊಂಡು ಬರಲಾಗುತ್ತಿದೆ ಎಂದು ಅವರು ತಮ್ಮ ಬದುಕಿನ ಘಟನೆಗಳನ್ನು ಎಳೆ ಎಳೆಯಾಗಿ ಬಿಚ್ಚಿಟ್ಟರು. ಹೋರಾಟಗಾರರಿಗೆ ಸಾಹಿತ್ಯವೆಂಬುದು ಶಕ್ತಿಯಾಗಿ ನಿಲ್ಲುತ್ತದೆ. ಸಾಹಿತ್ಯ ಮತ್ತು ಚಳವಳಿ ಒಂದು ನಾಣ್ಯದ ಎರಡು ಮುಖಗಳಿದ್ದಂತೆ. ಅದಕ್ಕಾಗಿ ದಲಿತ ಚಳವಳಿ ಸಾಹಿತ್ಯ ಸಮ್ಮೇಳನ ಹಮ್ಮಿಕೊಂಡಿರುವುದು ಔಚಿತ್ಯಪೂರ್ಣವಾಗಿದೆ ಎಂದರು.
ಜಿಲ್ಲಾ ಕಸಾಪ ಅಧ್ಯಕ್ಷ ವಿಜಯಕುಮಾರ ಪಾಟೀಲ ತೇಗಲತಿಪ್ಪಿ ಮಾತನಾಡಿ, ಶರಣರು,, ದಾಸರು, ಸೂಫಿ-ಸಂತರು ಸಮಾಜದ ಪರಿವರ್ತನೆಗೆ ಅನೇಕ ಹೋರಾಟಗಳು ನಡೆದಿವೆ. ಅವು ಜನರಲ್ಲಿ ವೈಚಾರಿಕ ಪ್ರಜ್ಞೆ ಮೂಡಿಸುವಲ್ಲಿ ಪ್ರಮುಖ ಪಾತ್ರ ವಹಿಸಿವೆ. ದಮನಿತರ ಬೆನ್ನ ಹಿಂದಿನ ಶಕ್ತಿಯಾಗಿ ದಲಿತ ಸಾಹಿತ್ಯ, ಚಳವಳಿಗಳು ಆಗಾಗ ಹುಟ್ಟಿ ಬಂದಿವೆ. ಇದಕೆ ್ಕ ಸಾಕ್ಷಿ ಪ್ರಜ್ಞೆಯಾಗಿ ಪರಿಷತ್ತು ಇಂತಹದೊಂದು ವಿಶೇಷ ಸಮ್ಮೇಳನವನ್ನು ಆಯೋಜಿಸುವ ಮೂಲಕ ಪರಿಷತ್ತನ್ನು ನಿಜವಾದ ರೀತಿಯಲ್ಲಿ ಜನಸಾಮಾನ್ಯರ ಪರಿಷತ್ತನ್ನಾಗಿ ಮಾಡಲಾಗುತ್ತಿದೆ ಎಂದರು.
ಶಾಸಕ ಅಲ್ಲಮಪ್ರಭು ಪಾಟೀಲ ನೆಲೋಗಿ, ಜಿಲ್ಲಾ ಸಾರ್ವಜನಿಕ ಗ್ರಂಥಾಲಯದ ಉಪ ನಿರ್ದೇಶಕ ಅಜಯಕುಮಾರ, ಹಿರಿಯ ಸಾಹಿತಿಗಳಾದ ಡಾ. ಹನುಮಂತರಾವ ದೊಡ್ಮನಿ, ಸುರೇಖಾ ಡಿ.ಜಿ. ಸಾಗರ, ಎಸ್ ಪಿ ಸುಳ್ಳದ್, ಪ್ರೌಢ ಶಾಲಾ ಸಹ ಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷ ಮಹೇಶ ಹೂಗಾರ, ಬೈಲಪ್ಪ ನೆಲೋಗಿ, ಪ್ರಮುಖರಾದ ಶಿವರಾಜ ಅಂಡಗಿ, ಧರ್ಮಣ್ಣ ಎಚ್ ಧನ್ನಿ, ಶರಣರಾಜ ಛಪ್ಪರಬಂದಿ, ರವೀಂದ್ರಕುಮಾರ ಭಂಟನಳ್ಳಿ, ರಾಜೇಂದ್ರ ಮಾಡಬೂಳ, ಶಾಮಸುಂದರ ಕುಲಕರ್ಣಿ, ಶಿವಲಿಂಗಪ್ಪ ಅಷ್ಟಗಿ, ಗೀತಾ ಮುದಗಲ್, ಶಕುಂತಲಾ ಪಾಟೀಲ ಜಾವಳಿ, ಸಿದ್ಧಲಿಂಗ ಜಿ ಬಾಳಿ, ರಮೇಶ ಡಿ ಬಡಿಗೇರ, ಡಾ. ರೆಹಮನ್ ಪಟೇಲ್, ಶಿವಾನಂದ ಮಠಪತಿ, ವೀರಣ್ಣಾ, ದಿನೇಶ ಮದಕರಿ, ಸೋಮಶೇಖರ ನಂದಿಧ್ವಜ, ಡಾ. ವಿಷ್ಣುವರ್ಧನ್, ವಿನೋದಕುಮಾರ ಜೆ.ಎಸ್., ರವಿ ಶಹಾಪುರಕರ್, ಸಂತೋಷ ಕುಡಳ್ಳಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.