ಕ್ಷೇತ್ರದ ಅಭಿವೃದ್ದಿಗೆ ಬದ್ಧ: ಸಂಸದ ರಾಧಾಕೃಷ್ಣ ದೊಡ್ಡಮನಿ

0
46

ಕಲಬುರಗಿ: ನಿಮ್ಮೆಲ್ಲರ ಸಹಕಾರ ಹಾಗೂ ಆಶೀರ್ವಾದದಿಂದಾಗಿ ನಾನು ಸಂಸದನಾಗಿ ಆಯ್ಕೆಯಾಗಿದ್ದೇನೆ. ಮುಂಬರುವ ದಿನಗಳಲ್ಲಿ ಕ್ಷೇತ್ರದ ಜನರ ಸಂಕಷ್ಟಗಳಿಗೆ ಸ್ಪಂದಿಸಿ ಕ್ಷೇತ್ರ ಅಭಿವೃದ್ದಿಗೆ ಬದ್ಧನಾಗಿದ್ದೇನೆ ಎಂದು ಸಂಸದ ರಾಧಾಕೃಷ್ಣ ದೊಡ್ಡಮನಿ ಹೇಳಿದರು.

ಕಮಲಾಪುರ ಗ್ರಾಮದ ಕೋಹಿನೂರು ಕಲ್ಯಾಣ ಮಂಟಪದಲ್ಲಿ ಏರ್ಪಡಿಸಲಾಗಿದ್ದ ಅಭಿನಂದನಾ ಸಮಾರಂಭದಲ್ಲಿ ಮಾತನಾಡುತ್ತಿದ್ದರು.

Contact Your\'s Advertisement; 9902492681

ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಮತ್ತು ಕಲಬುರಗಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಮಾತನಾಡಿ ಖರ್ಗೆ ಸಾಹೇಬರವತಿಯಿಂದ, ರಾಧಾಕೃಷ್ಣ ದೊಡ್ಡಮನಿ ಅವರ ವತಿಯಿಂದ ಹಾಗೂ ನನ್ನ ವೈಯಕ್ತಿಕ ವತಿಯಿಂದ ಕಮಲಾಪುರ ಜನತೆಗೆ ಅಭಿನಂದನೆಗಳು. ನಿಮ್ಮೆಲ್ಲರ ಆಶೀರ್ವಾದದಿಂದಾಗಿ ಕ್ಷೇತ್ರದಲ್ಲಿ ಅಭಿವೃದ್ದಿ ಪರ್ವ ಮುಂದುವರೆಯಲಿದೆ ಎಂದರು.

ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರು ಒಗ್ಗಟ್ಟಾಗಿ ಕೆಲಸ ಮಾಡಿದ್ದರೆ ಕಾಂಗ್ರೆಸ್ ಗೆದ್ದಿದೆ. ಈ ಒಗ್ಗಟ್ಟು ಹೀಗೆ ಮುಂದುವರೆದರೆ, ಕಾಂಗ್ರೆಸ್ ಪಕ್ಷವನ್ನು ಯಾರೂ ಸೋಲಿಸಲಾಗುವುದಿಲ್ಲ. ಮುಂಬರುವ ಜಿಪಂ ಹಾಗೂ ತಾಪಂ ಚುನಾವಣೆಯಲ್ಲಿ ಹೀಗೆ ಒಗ್ಗಟ್ಟಾಗಿ ಮುಂದುವರೆಯಬೇಕು ಎಂದು ಮನವಿ ಮಾಡಿದರು.

ಸಂಸದರು ರೇಲ್ವೆ ಸಚಿವರಿಗೆ ಭೇಟಿ ಮಾಡಿ ಕಲಬುರಗಿ ಯಲ್ಲಿರುವ ರೇಲ್ವೆ ಕಾಮಗಾರಿ ಹಾಗೂ ಪ್ರತ್ಯೇಕ ವಿಭಾಗ ಸ್ಥಾಪನೆಗೆ ಸಂಬಂಧಿಸಿದಂತೆ ಚರ್ಚೆ ನಡೆಸಿದ್ದಾರೆ. ಕಲಬುರಗಿ ಗೆ ಹೊಸ ರಿಂಗ್ ರಸ್ತೆ ಸೇರಿದಂತೆ ಹಲವಾರು ನೂತನ ರಸ್ತೆಗಳ ಅಭಿವೃದ್ದಿಗೆ ಕೇಂದ್ರ ಸಚಿವರನ್ನು ಭೇಟಿ ಮಾಡಿದ್ದಾರೆ. ಟೆಕ್ಸಟೈಲ್ ಪಾರ್ಕ್ ಸ್ಥಾಪನೆಗೆ ಸಂಬಂಧಿಸಿದಂತೆ ಸಂಬಂಧಿಸಿದ ಸಚಿವರೊಂದಿಗೆ ಮಾತನಾಡಿದ್ದಾರೆ. ಮುಂದಿನ‌ ಎರಡುವರೆ ವರ್ಷದಲ್ಲಿ ಕಲಬುರಗಿ ಲೋಕಸಭಾ ವ್ಯಾಪ್ತಿಯ ಪ್ರತಿಯೊಂದು ಗ್ರಾಮಗಳಿಗೆ ಅರಿವು ಕೇಂದ್ರ ಸ್ಥಾಪಿಸಲಾಗುವುದು.‌ಇದು‌ ಸಂಸದರ ಪರ ನಾನು ಭಾಷೆ ಕೊಡುತ್ತಿದ್ದೇನೆ ಎಂದರು.

ಬಿಜೆಪಿ ಹಾಗೂ ಜೆಡಿಎಸ್ ನಾಯಕರ ಪಾದಯಾತ್ರೆಯ ಕುರಿತು ವ್ಯಂಗ್ಯವಾಡಿದ ಪ್ರಿಯಾಂಕ್ ಖರ್ಗೆ, ಪಾದಾಯಾತ್ರೆಯ ಉದ್ದೇಶ ಅವರಿಗೆ ಗೊತ್ತಿಲ್ಲ. ಆದರೆ,‌ ನಮ್ಮ ಕಾಂಗ್ರೆಸ್ ಪಕ್ಷದ ನಾಯಕರು ಅರ್ಥಿಕ ಅಸಮಾನತೆ, ಸಂವಿಧಾನದ‌ ರಕ್ಷಣೆ ಹಾಗೂ ಭ್ರಷ್ಟಾಚಾರದ ವಿರುದ್ದ ಪಾದಯಾತ್ರೆ ಮಾಡಿದ್ದೇವೆ. ನಮ್ಮ ಪಾದಯಾತ್ರೆ ಜನರಿಗಾಗಿ‌ ಆದರೆ ಇವರ ಪಾದಯಾತ್ರೆ ಯಾರಿಗಾಗಿ ಎಂದು ಅವರಿಗೆ ಗೊತ್ತಿಲ್ಲ.‌ ಒಂದಂತೂ ಸ್ಪಷ್ಟ, ನಿಖಿಲ್ ಕುಮಾರಸ್ವಾಮಿ ಹಾಗೂ‌ ವಿಜಯೇಂದ್ರ ಅವರನ್ನ ಮುನ್ನೆಲೆಗೆ ತರಲು ಪಾದಯಾತ್ರೆ ಮಾಡುತ್ತಿದ್ದಾರೆ. ಅದೇ ಪ್ರಜ್ವಲ್ ರೇವಣ್ಣ ಪ್ರಕರಣ ಆದಾಗ, ಪಿಎಸ್ ಐ ಹಗರಣ ಆದಾಗ, ಗಂಗಾಕಲ್ಯಾಣ ಹಗರಣ ಆದಾಗ ಬಿಜೆಪಿಯರು ಯಾಕೆ ಪಾದಯಾತ್ರೆ ನಡೆಸಲಿಲ್ಲ ಎಂದು ಟಾಂಗ್ ನೀಡಿದರು.

ಕೇಂದ್ರಕ್ಕೆ ಸಲ್ಲಿಸಿದ 36,000 ಕೋಟಿ ಬರ ಪರಿಹಾರ ಪ್ರಸ್ತಾವನೆಯನ್ನು ಕಡೆಗಣಿಸಲಾಗಿತ್ತು. ಆದರೆ ನಾವು ಸುಪ್ರಿಂ ಕೋರ್ಟ ಗೆ ಹೋಗಿದ್ದರಿಂದ 3000 ಕೋಟಿ ಅನುದಾನ ಬಿಡಿಗಡೆ ಮಾಡಿದ್ದಾರೆ ಎಂದರು.

ಮುಡಾ ಹಗರಣ ತನಿಖೆ ನಡೆಸಲು ನ್ಯಾಯಾಂಗ ತನಿಖೆ ನಡೆಸಿ‌ ಸುಮಾರು ನೂರು ಪುಟಗಳ ವರದಿಯನ್ನು ರಾಜ್ಯಪಾಲರಿಗೆ ಸಲ್ಲಿಸಲಾಗಿದೆ. ಅದೇ ದಿನ ವ್ಯಕ್ತಿಯೊಬ್ಬರು ಸಿಎಂ ಅವರ ವಿರುದ್ದ ದೂರು ದಾಖಲಿಸಲು ರಾಜ್ಯಪಾಲರ ಅನುಮತಿ ಕೇಳುತ್ತಾರೆ. ಇದಕ್ಕೆ ರಾಜ್ಯಪಾಲರು ಸಿಎಂ ಅವರಿಗೆ ಶೋಕಾಷ್ ನೋಟಿಸು ನೀಡಿದ್ದಾರೆ. ಬಿಜೆಪಿಯವರು ರಾಜ್ಯಪಾಲರನ್ನು ದುರಪಯೋಗಪಡಿಸಿಕೊಂಡು
ಸ್ಥಿರ ಸರ್ಕಾರವನ್ನು ಬೀಳಿಸಲು ನಡೆಸಿದ ಪ್ರಯತ್ನವಾಗಿದೆ ಎಂದು ಆರೋಪಿಸಿದರು.

ಇಡಿ, ಐಟಿ ಹಾಗೂ ಸಿಬಿಐ ಮೂಲಕ ನಮ್ಮನ್ನು ಬೆದರಿಸಲು ಬರಬೇಡಿ. ನಾವು ಕಾಂಗ್ರೆಸ್ ನವರು ಬ್ರಿಟಿಷರ ವಿರುದ್ದ ಹೋರಾಟ ಮಾಡಿದ್ದೇವೆ. ನಿಮ್ಮ ನೋಟಿಸಿಗೆ ಹೆದರುತ್ತೇವಾ? ನೀವು ನಮ್ಮ ಸಿಎಂ ಗೆ ಎಷ್ಟೆ ತೊಂದರೆ ಕೊಟ್ಟರೆ ಸರಿ ಹೆದರುವುದಿಲ್ಲ, ಬಗ್ಗುವುದಿಲ್ಲ ಎಂದು ಕಟುತ್ತರ ನೀಡಿದರು.

ಸಿಎಂ ಸಲಹೆಗಾರ ಹಾಗೂ ಶಾಸಕ ಬಿ.ಆರ್. ಪಾಟೀಲ್ ಮಾತನಾಡಿ ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರಿಗೆ ರಾಧಾಕೃಷ್ಣ ಅವರಿಗೆ ಲೋಕಸಭೆಗೆ ಸ್ಪರ್ಧಿಸಲು ಟಿಕೇಟ್ ನೀಡಬೇಕು ಎಂದು ಮನಸಿರಲಿಲ್ಲ. ಆದರೆ, ಅಂತಹ ಸಂದರ್ಭ ಬಂತು ಹಾಗಾಗಿ ಅವರನ್ನ ಅಭ್ಯರ್ಥಿಯನ್ನಾಗಿ ಮಾಡಿದರು ಹಾಗೆ ಮತದಾರರು ಆಶೀರ್ವಾದ ಮಾಡಿದರು. ಸಂಸದರಾಗಿ ಆಯ್ಕೆಯಾದ ರಾಧಾಕೃಷ್ಣ ದೊಡ್ಡಮನಿ ಅವರು ಜನರ ಕಷ್ಟಗಳ ಬಗ್ಗೆ ಸಂಸತ್ತಿನಲ್ಲಿ ಧ್ವನಿ ಎತ್ತುತ್ತಿದ್ದಾರೆ ಎಂದರು.

ವೈದ್ಯಕೀಯ ಶಿಕ್ಷಣ ಸಚಿವ ಡಾ ಶರಣಪ್ರಕಾಶ ಪಾಟೀಲ್ ಮಾತನಾಡಿ, ಕಳೆದ ಲೋಕಸಭಾ ಚುನಾವಣೆಯಲ್ಲಿ‌ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ರಾಧಾಕೃಷ್ಣ ಅವರಿಗೆ ಆಶೀರ್ವಾದ ಮಾಡಿದ್ದಕ್ಕೆ ಮತದಾರರಿಗೆ ಅಭಿನಂದನೆಗಳು. ಮತಕ್ಷೇತ್ರದ ಸಮಗ್ರ ಅಭಿವೃದ್ದಿಗೆ ನಾವು ಸದಾ ಕಂಕಣಬದ್ದರಾಗಿದ್ದೇವೆ. ನಿಮ್ಮ ಯಾವುದೇ ಸಮಸ್ಯೆಗಾಗಿ ನಮ್ಮ‌‌ಮನೆಯ ಬಾಗಿಲು ಸದಾ ತೆರೆದಿರುತ್ತದೆ ಎಂದರು.

ಎಂ ಎಲ್ ಸಿ ತಿಪ್ಪಣ್ಣಪ್ಪ ಕಮಕನೂರು ಮಾತನಾಡಿ ರಾಧಾಕೃಷ್ಣ ದೊಡ್ಡಮನಿ ಒಂದು ಓಟು ಹೆಚ್ಚಿಗೆ ಪಡೆದರೆ ರಾಜೀನಾಮೆ ನೀಡುವುದಾಗಿ ಹೇಳಿದವರು ಯಾಕೆ ರಾಜೀನಾಮೆ ಕೊಡಲಿಲ್ಲ ಎಂದು ಕುಟುಕಿದರು.

ವೇದಿಕೆಯ ಮೇಲೆ ಎಂ ಎಲ್ ಸಿಗಳಾದ ಚಂದ್ರಶೇಖರ್ ಪಾಟೀಲ್, ಜಗದೇವ ಗುತ್ತೇದಾರ, ಮಾಜಿ ಸಚಿವ ರೇವುನಾಯಕ ಬೆಳಮಗಿ, ದೇವೇಂದ್ರಪ್ಪ ಮರತೂರು, ವೈಜನಾಥ್ ತಡಕಲ್, ಡಾ ರಶೀದ್, ಶಿವಾನಂದ ಪಾಟೀಲ್, ಮಜರ್ ಖಾನ್, ಸೋಮಶೇಖರ ಗೋನಾಯಕ, ಚಂದ್ರಿಕಾ ಪರಮೇಶ್ವರ ಸೇರಿದಂತೆ ಹಲವರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here