ಸ್ವಾಭಿಮಾನದ ಜೀವನಕ್ಕಾಗಿ ಗ್ಯಾರಂಟಿ ಯೋಜನೆ: ಸಚಿವ ಪ್ರಿಯಾಂಕ್ ಖರ್ಗೆ

0
103

ನವ ಭಾರತ, ನವ ಕರ್ನಾಟಕ ನಿರ್ಮಾಣಕ್ಕೆ ಶ್ರಮಿಸಲು ಕಂಕಣಬದ್ಧರಾಗೋಣ: ಸಚಿವ ಪ್ರಿಯಾಂಕ್ ಖರ್ಗೆ

ಕಲಬುರಗಿ: ರಾಜ್ಯದ ಗ್ರಾಮೀಣಾಭಿವೃಧ್ಧಿ ಮತ್ತು ಪಂಚಾಯತ್ ರಾಜ್, ಮಾಹಿತಿ ತಂತ್ರಜ್ಞಾನ ಮತ್ತು ಜೈವಿಕ ತಂತ್ರಜ್ಞಾನ ಹಾಗೂ ಕಲಬುರಗಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಅವರು ಗುರುವಾರ ನಗರದ ಪೊಲೀಸ್ ಪರೇಡ್ ಮೈದಾನದಲ್ಲಿ 78ನೇ ಸ್ವಾತಂತ್ರ್ಯ ದಿನಾಚರಣೆ ಪ್ರಯುಕ್ತ ರಾಷ್ಟ್ರಧ್ವಜಾರೋಹಣ ನೆರವೇರಿಸಿದರು.

ರಾಷ್ಟ್ರಧ್ವಜಾರೋಹಣ ನೆರವೇರಿಸಿ ಮಾತನಾಡಿದ ಅವರು ಭಾರತ ದೇಶದ ನಿವಾಸಿಗಳಿಗೆ ಬ್ರಿಟೀಷರ ದಾಸ್ಯತನದಿಂದ ಬಿಡುಗಡೆ ಗೊಳಿಸಿ ಸ್ವಾತಂತ್ರ್ಯ ದೊರಕಿಸಿಕೊಡುವಲ್ಲಿ ಹಲವಾರು ಮಹನೀಯರು ವರ್ಷಗಳ ಕಾಲ ಹೋರಾಟ ನಡೆಸಿ ತ್ಯಾಗ ಬಲಿದಾನ ಮಾಡಿದ್ದಾರೆ. ಅಂದಿನ ಹೋರಾಟದ ಹಾದಿಯನ್ನು ಹಾಗೂ ನಮ್ಮ ಪೂರ್ವಜರ ಹೋರಾಟವನ್ನು ಇಂದಿನ ಯುವಕರು ಅರಿತುಕೊಳ್ಳಬೇಕು ಎಂದರು.

Contact Your\'s Advertisement; 9902492681

1947 ರಲ್ಲಿ ಬ್ರೀಟಿಷರಿಂದ ಸ್ವತಂತ್ರ್ಯಗೊಂಡ ನಂತರ ಭಾರತದಲ್ಲಿ ಯಾವುದೇ ಅಭಿವೃದ್ದಿ ಇರಲಿಲ್ಲ. ಆರ್ಥಿಕ ಅಸಮಾನತೆ, ಶೈಕ್ಷಣಿಕ ಕ್ಷೇತ್ರದ ಕುಂಠಿತ, ಕೃಷಿಯಲ್ಲಿ ಸ್ವಾವಲಂಬನೆ ಹೊಂದಿರಲಿಲ್ಲ. ವಿವಿಧ ಭಾಷೆ, ಧರ್ಮದ ಜನರಿರುವ ವಿಶಾಲವಾದ ದೇಶದ ಭೌಗೋಳಿಕ ಒಗ್ಗೂಡಿಸುವ ಮೂಲಕ ಬಲಿಷ್ಠ ರಾಷ್ಟ್ರ ನಿರ್ಮಾಣ ಮಾಡಬೇಕಾದ ಜವಾಬ್ದಾರಿ ಅಂದಿನ ಪ್ರಧಾನಮಂತ್ರಿ ಜವಾಹರ್ ಲಾಲ್ ನೆಹರು ಅವರ ಸರ್ಕಾರದ ಮೇಲಿತ್ತು. ಹೀಗೆ ಹಲವಾರು ತೊಂದರೆಗಳನ್ನು ಮೆಟ್ಟಿ ನಿಂತು ಇಂದು ಭಾರತ ಬಲಿಷ್ಠರಾಷ್ಟ್ರವಾಗಿದೆ. ಆದರೂ ಕೆಲವರು ಅಂದಿನ ಸರ್ಕಾರ ದೇಶದಲ್ಲಿ ಏನು ಅಭಿವೃದ್ದಿ ಮಾಡಿಲ್ಲ ಎಂದು ಟೀಕಿಸುತ್ತಿದ್ದಾರೆ. ಇದು ಸತ್ಯಕ್ಕೆ ದೂರವಾದದ್ದು ಎಂದು ತಿಳಿಸಿದರು.

ದೇಶಕ್ಕೆ ಸ್ವಾತಂತ್ರ್ಯ ಬಂದ ನಂತರ ಡಾ ಬಾಬಾಸಾಹೇಬ್ ಅಂಬೇಡ್ಕರ್ ಅವರಿಂದ ಸಂವಿಧಾನ ರಚನೆಯಾಗಿ ನಂತರ ಜಾರಿಗೆ ಬಂದ ತಕ್ಷಣ ಭಾರತದಲ್ಲಿ ಮಹಿಳೆಯರಿಗೆ ಮತದಾನದ ಹಕ್ಕನ್ನು ನೀಡಲಾಗಿದೆ‌. ಆದರೆ ಅಮೇರಿಕಾ ಮುಂತಾದ ದೇಶಗಳಲ್ಲಿ ಈ ಅವಕಾಶ ಕಲ್ಪಿಸಲು ನೂರು ವರ್ಷ ಹಿಡಿಯಿತು ಎಂದು ಮಾಹಿತಿ ನೀಡಿದರು.

ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಆಡಳಿತಕ್ಕೆ ಬಂದ ನಂತರ ಕೃಷಿ, ಹೈನುಗಾರಿಕೆ, ಆರೋಗ್ಯ, ನೀರಾವರಿ, ಶೈಕ್ಷಣಿಕ,ವೈಜ್ಞಾನಿಕ ಕ್ಷೇತ್ರದಲ್ಲಿ ಗಣನೀಯ ಸಾಧನೆ ಮಾಡಲಾಗಿದೆ ಇದರ ಜೊತೆಗೆ ಮೂಲಭೂತ ಸೌಲಭ್ಯ ಒದಗಿಸುವುದು ಸೇರಿದಂತೆ ಮಾಹಿತಿ ತಂತ್ರಜ್ಞಾನ ಕ್ಷೇತ್ರದಲ್ಲಿ ಗಮನಾರ್ಹ ಸಾಧನೆ ಮಾಡಿದ್ದೇವೆ.ರಾಜ್ಯ ಸರ್ಕಾರ ನಾಗರಿಕರ ಆರ್ಥಿಕ ಸಬಲತೆಗೆ ಹಾಗೂ ಸ್ವಾಭಿಮಾನದ ಜೀವನ ನಡೆಸಲು ಗ್ಯಾರಂಟಿ ಯೋಜನೆ ಜಾರಿಗೊಳಿಸಲಾಗಿದೆ. ಶಕ್ತಿ, ಗೃಹಜ್ಯೋತಿ, ಗೃಹಲಕ್ಷ್ಮೀ, ಅನ್ನಭಾಗ್ಯ ಹಾಗೂ ಯವನಿಧಿ ಯೋಜನೆಗಳ ಮೂಲಕ ಇಂದು ಕೋಟ್ಯಾಂತರ ಫಲಾನುಭವಿಗಳು ಲಾಭ ಪಡೆಯುತ್ತಿದ್ದಾರೆ.

ಇನ್ನೂ, ರೈತರಿಗೆ ಬೆಳೆ ವಿಮೆ ನೀಡುವ ಮೂಲಕ ಕೃಷಿ‌ ವಲಯದ ಸಬಲತೆಗೆ ಆದ್ಯತೆ ನೀಡಲಾಗಿದೆ. ಕಲಬುರಗಿ ಜಿಲ್ಲೆಯಲ್ಲಿ 2023-24 ಸಾಲಿನ 1.59 ಲಕ್ಷ ರೈತರಿಗೆ ₹189 ಕೋಟಿ‌ ವಿಮೆ ನೀಡಿದೆ. ಈ ವರ್ಷ ಜಿಲ್ಲೆಯ ಎರಡು ಲಕ್ಷಕ್ಕೂ ಅಧಿಕ ರೈತರು ನೋಂದಣಿ‌‌‌ ಮಾಡಿಸಿಕೊಂಡಿದ್ದಾರೆ ಎಂದು ತಿಳಿಸಿದರು.

ಇದಲ್ಲದೇ ಆರೋಗ್ಯ ಕ್ಷೇತ್ರದಲ್ಲಿ ಜಿಲ್ಲೆಯಲ್ಲಿ ಹಲವಾರು ಗಮನಾರ್ಹ ಯೋಜನೆಗಳನ್ನು ಜಾರಿಗೊಳಿಸಲಾಗುತ್ತಿದೆ. ₹90 ಕೋಟಿ‌ ವೆಚ್ಚದಲ್ಲಿ ಇಂದಿರಾಗಾಂಧಿ ಮಕ್ಕಳ ಆಸ್ಪತ್ರೆ 371 ಬೆಡ್ ಗಳ ಆಸ್ಪತ್ರೆ, ₹ 90 ಕೋಟಿ‌ ವೆಚ್ಚದಲ್ಲಿ 200 ಬೆಡ್ ಗಳ ತಾಯಿ ಮತ್ತು ‌ಮಗು ಆಸ್ಪತ್ರೆ, ₹72 ಕೋಟಿ ವೆಚ್ಚದಲ್ಲಿ150 ಬೆಡ್ ಗಳ ಕ್ಯಾನ್ಸರ್ ಆಸ್ಪತ್ರೆ‌ ನಿರ್ಮಾಣ ಮಾಡಲಾಗುತ್ತಿದೆ.ಐಎಎಸ್, ಐಪಿಎಸ್, ಕೆಎಎಸ್, ಬ್ಯಾಂಕಿಂಗ್ ಸೇರಿದಂತೆ ಇತರೆ ಸ್ಪರ್ಧಾತ್ಮಕ ಪರೀಕ್ಷೆಗೆ ತಯಾರಾಗಲು ವಿದ್ಯಾರ್ಥಿಗಳಿಗೆ ಅನುಕೂಲವಾಗಲು ₹10 ಕೋಟಿ ವೆಚ್ಚದಲ್ಲಿ ನೈಸ್ ಅಕಾಡೆಮಿ ಸ್ಥಾಪಿಸಲಾಗುತ್ತಿದೆ ಎಂದರು.

ಇದರೊಂದಿಗೆ ಜಿಲ್ಲೆಯಲ್ಲಿ 205 ಕೂಸಿನ ಮನೆಗಳನ್ನು ಸ್ಥಾಪಿಸಲಾಗಿದ್ದು 3,794 ಮಕ್ಕಳನ್ನು ಪೋಷಿಸಲಾಗುತ್ತಿದೆ. ದೇಶದ ಪ್ರತಿಯೊಬ್ಬ ಪ್ರಜೆಯು ಪರಸ್ಪರ ಪ್ರೀತಿ, ವಿಶ್ವಾಸ, ಭ್ರಾತೃತ್ವ ಭಾವನೆ, ಕೋಮು ಸಾಮರಸ್ಯದಿಂದ ಕೂಡಿ ಬಾಳಬೇಕಾಗಿದೆ. ಅಭಿವೃದ್ದಿ ಕಾರ್ಯಗಳು ಮತ್ತು ಪ್ರಗತಿಪರ ಚಿಂತನೆಗಳು ನಮ್ಮೆಲ್ಲರ ಗುರಿಯಾಗಬೇಕಿದೆ. ದೇಶದ ಏಕತೆ ಮತ್ತು ಸಮಗ್ರತೆ ಕಾಪಾಡಲು ಬದ್ಧರಾಗಿ, ದೃಢಸಂಕಲ್ಪ ಮಾಡುವುದರ ಮೂಲಕ ನವ ಭಾರತಕ್ಕೆ ಹಾಗೂ ನವ ಕರ್ನಾಟಕ ನಿರ್ಮಾಣಕ್ಕೆ ಶ್ರಮಿಸಲು ಕಂಕಣಬದ್ಧರಾಗೋಣ ಎಂದು ಕರೆ ನೀಡಿದರು.

ಸಂಸದ ರಾಧಾಕೃಷ್ಣ ದೊಡ್ಡಮನಿ, ಶಾಸಕರಾದ ಅಲ್ಲಮಪ್ರಭು ಪಾಟೀಲ, ಕನೀಜ್ ಫಾತಿಮಾ, ವಿಧಾನ ಪರಿಷತ್ ಶಾಸಕರಾದ ತಿಪ್ಪಣ್ಣಪ್ಪ ಕಮಕನೂರ, ಜಗದೇವ ಗುತ್ತೇದಾರ, ಕರ್ನಾಟಕ ಕುರಿ ಮತ್ತು ಉಣ್ಣೆ ಅಭಿವೃದ್ಧಿ ನಿಗಮದ ಅಧ್ಯಕ್ಷ ದೇವೆಂದ್ರಪ್ಪ ಮರತೂರು, ಕಲಬುರಗಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಮಜಹರ್ ಆಲಂ ಖಾನ್, ಕಲಬುರಗಿ ಮಹಾನಗರ ಪಾಲಿಕೆಯ ಮಹಾಪೌರರಾದ ಯಲ್ಲಪ್ಪ ನಾಯ್ಕೋಡಿ, ಕೆ.ಕೆ.ಅರ್.ಡಿ.ಬಿ ಕಾರ್ಯದರ್ಶಿ ಎಂ.ಸುಂದರೇಶ ಬಾಬು, ಡಿ.ಸಿ. ಬಿ.ಫೌಜಿಯಾ ತರನ್ನುಮ್, ಐ.ಜಿ.ಪಿ ಅಜಯ್ ಹಿಲೋರಿ, ಜಿಲ್ಲಾ ಪಂಚಾಯತ್ ಸಿ.ಇ.ಓ ಭಂವರ್ ಸಿಂಗ್ ಮೀನಾ, ಎಸ್.ಪಿ. ಅಡ್ಡೂರು ಶ್ರೀನಿವಾಸಲು, ಶಾಲಾ ಶಿಕ್ಷಣ ಇಲಾಖೆಯ ಅಪರ ಆಯುಕ್ತ ಆಕಾಶ ಶಂಕರ್, ಡಿ.ಸಿ.ಪಿ ಕನಿಕಾ ಸಿಕ್ರಿವಾಲ್, ಮಹಾನಗರ ಪಾಲಿಕೆ ಆಯುಕ್ತ‌ ಭುವನೇಶ ಪಾಟೀಲ ದೇವಿದಾಸ್, ಡಿ.ಸಿ.ಎಫ್. ಸುಮಿತ್ ಪಾಟೀಲ, ಕೆ.ಕೆ.ಆರ್.ಟಿ.ಸಿ ವ್ಯವಸ್ಥಾಪಕ ನಿರ್ದೇಶಕ ಎಂ.ರಾಚಪ್ಪಾ, ಅಪರ ಜಿಲ್ಲಾಧಿಕಾರಿ ರಾಯಪ್ಪ ಹುಣಸಗಿ ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here