ಆಳಂದ: ಯಾವ ಮುಖ ಇಟ್ಟುಕೊಂಡು ಯಾವ ಪುರುಷಾರ್ಥಕ್ಕೆ ಸನ್ಮಾನ ಮಾಡಿಕೊಳ್ಳುತ್ತಿದ್ದೀರಿ ಆಳಂದ ಶಾಸಕರೇ ಎಂದು ಜಿ.ಪಂ ಮಾಜಿ ಉಪಾಧ್ಯಕ್ಷ ಹರ್ಷಾ ಗುತ್ತೇದಾರ ಅವರು ಶಾಸಕ ಬಿ ಆರ್ ಪಾಟೀಲರಿಗೆ ಪ್ರಶ್ನಿಸಿದ್ದಾರೆ.
ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು, ಆಳಂದ ತಾಲೂಕಿನ ಖಜೂರಿ, ಹೊದಲೂರ ಮತ್ತು ಭೂಸನೂರ ಗ್ರಾಮಗಳಲ್ಲಿ ತಮಗೆ ನಿರೀಕ್ಷಿತ ಮತಗಳು ಬಂದಿಲ್ಲ ಎಂದು ರಾಜಕೀಯ ದ್ವೇಷದಿಂದ ಅವರ ಮೇಲೆ ಸೇಡು ತೀರಿಸಿಕೊಳ್ಳುವ ಉದ್ದೇಶದಿಂದ ಅಧಿಕಾರಿಗಳನ್ನು ಬಳಸಿಕೊಂಡು ಆ ಗ್ರಾಮಗಳನ್ನು ಬೆಳೆ ಹಾನಿ ಪರಿಹಾರದಿಂದ ದೂರವಿಟ್ಟಿದ್ದೀರೆಂದು ಸನ್ಮಾನಿಸಿಕೊಳ್ಳುತ್ತೀದ್ದೀರಾ ಎಂದು ಛೇಡಿಸಿದ್ದಾರೆ.
ಬೆಳೆ ಪರಿಹಾರ, ಬೆಳೆ ವಿಮೆ, ನೆಟೆರೋಗ ಪರಿಹಾರ ಮಂಜೂರಾತಿಯಲ್ಲಿ ನಿಮ್ಮ ಪಾತ್ರ ಏನೂ ಇಲ್ಲವೆನ್ನುವುದು ಈಗಾಗಲೇ ಜಗಜ್ಜಾಹೀರಾಗಿದೆ. ಸುಮ್ಮನೇ ತಾಲೂಕಿನ ರೈತರ ದಿಕ್ಕು ತಪ್ಪಿಸುವ ಉದ್ದೇಶದಿಂದ ನಿಮ್ಮ ಹಿಂಬಾಲಕರ ಮೂಲಕ ಸನ್ಮಾನ ಮಾಡಿಕೊಳ್ಳುತ್ತೀದ್ದೀರಿ ಎಂದು ಕಟುಕಿದ್ದಾರೆ.
ತೊಗರಿಯ ನೇಟೆ ರೋಗಕ್ಕೆ 10000 ರೂ ಪರಿಹಾರ ನೀಡಬೇಕು ಎಂದು ಸದನದಲ್ಲಿ ಸದನದ ಹೊರಗೆ ಒತ್ತಾಯ ಮಾಡಿದ್ದು ಆಗಿನ ಆಳಂದ ಶಾಸಕ ಸುಭಾಷ್ ಗುತ್ತೇದಾರ ಅವರು. ಅವರ ಮನವಿಗೆ ಸ್ಪಂದಿಸಿ ತೊಗರಿಯ ನೆಟೆರೋಗಕ್ಕೆ ಪರಿಹಾರ ಘೋಷಿಸಿದ್ದು ಅಂದಿನ ಬಿಜೆಪಿ ಸರ್ಕಾರದ ಮುಖ್ಯಮಂತ್ರಿಗಳಾದ ಬಸವರಾಜ ಬೊಮ್ಮಾಯಿ ಅವರು. ಇದರ ಕುರಿತು ಬೆಳಗಾವಿ ಅಧಿವೇಶನದ ವಿಧಾನಸಭೆಯ ಕಲಾಪದ ಕಡತ ತೆಗಿಸಿ ನೋಡಲಿ ಎಂದು ಸವಾಲು ಹಾಕಿದ್ದಾರೆ.
ಪ್ರಧಾನ ಮಂತ್ರಿ ಫಸಲ್ ಭೀಮಾ ಯೋಜನಾ ಅಡಿ ಬೆಳೆ ವಿಮೆ ಕೊಡೋದು ಕೇಂದ್ರ ಸರ್ಕಾರ. ಕೇಂದ್ರ ಸಚಿವರ ಮೂಲಕ ಅತೀ ಹೆಚ್ಚಿನ ಬೆಳೆ ವಿಮೆ ಪರಿಹಾರ ಆಳಂದ ತಾಲೂಕಿಗೆ ಬರುವಂತೆ ಮಾಡಿದ್ದು ರಾಜ್ಯದ ಹಿಂದಿನ ಬಿಜೆಪಿ ಸರ್ಕಾರ. ಇದರಲ್ಲಿ ರಾಜ್ಯ ಕಾಂಗ್ರೆಸ್ ಸರ್ಕಾರದ ಯಾವುದೇ ಪಾಲಿಲ್ಲ. ಇದೇ ಫಸಲ್ ಭೀಮಾ ಯೋಜನೆ ರೈತರಿಗೆ ಉಪಯೋಗ ಆಗುತ್ತಿಲ್ಲ ಎಂದು ಬೊಬ್ಬೆ ಹೊಡೆದದ್ದು ನೀವೇ ಅಲ್ಲವೇ ಆಳಂದ ಶಾಸಕರೇ?. ಮತ್ತೊಬ್ಬರು ಮಾಡಿದ ಕೆಲಸಕ್ಕೆ ಸುಳ್ಳು ಹೇಳಿ ತಮ್ಮ ಬೆನ್ನು ತಾವೇ ತಟ್ಟಿಕೊಳ್ಳುವುದನ್ನು ಶಾಸಕ ಬಿ ಆರ್ ಪಾಟೀಲ ಇನ್ನೂ ಮುಂದಾದರೂ ಬಿಡಲಿ ಎಂದಿದ್ದಾರೆ.
ಬರ ಪರಿಹಾರಕ್ಕೆ ರಾಜ್ಯ ಕಾಂಗ್ರೆಸ ಸರ್ಕಾರ ಕೊಟ್ಟಿದ್ದು ಕೇವಲ 2000 ರೂ. ಆದರೆ ಓಆಖಈ ಅಡಿ 10000 ರೂ. ಕೊಟ್ಟಿದ್ದು ನರೇಂದ್ರ ಮೋದಿಜಿ ನೇತೃತ್ವದ ಕೇಂದ್ರ ಸರ್ಕಾರ ಬೇಕಿದ್ದರೇ ಬೆಳೆ ಪರಿಹಾರ, ಬೆಳೆ ವಿಮೆ ಹಾಗೂ ನೆಟೆರೋಗಕ್ಕೆ ಯಾವ್ಯಾವ ಸರ್ಕಾರಗಳು ಎಷ್ಟೇಷ್ಟೂ ಹಣ ಬಿಡುಗಡೆ ಮಾಡಿವೆ ಎಂದು ದಾಖಲೆ ಬಿಡುಗಡೆ ಮಾಡಲಿ ಎಂದು ಸವಾಲು ಹಾಕಿದ್ದಾರೆ.