ವಾಡಿ: ಸಮೀಪದ ಲಾಡ್ಲಾಪುರ ಗ್ರಾಮದ ಸರ್ಕಾರಿ ಪ್ರೌಢಶಾಲಾ ಆವರಣದಲ್ಲಿ ಪ್ರೌಢಶಾಲೆಯ ನೂರಕ್ಕೂ ಹೆಚ್ಚು ವಿದ್ಯಾರ್ಥಿಗಳು ಯೋಗಾಭ್ಯಾಸ ಮಾಡಿದರು.
ಪತಂಜಲಿ ಯೋಗ ಶಿಕ್ಷಕ ವೀರಣ್ಣ ಯಾರಿ ಯೋಗಾಭ್ಯಾಸ ಮಾಡಿಸುತ್ತಾ ಮಾತನಾಡಿ,ವಿದ್ಯಾರ್ಥಿಗಳು ಪ್ರತಿದಿನ ಯೋಗಾಭ್ಯಾಸ ಮಾಡುವುದರಿಂದ ನೆನಪಿನ ಶಕ್ತಿಯ ಜೊತೆಗೆ ಮೆದುಳು ಚುರುಕಾಗಿ,ಬುದ್ಧಿವಂತಿಕೆ ಹೆಚ್ಚಾಗುತ್ತದೆ.ಓದಿನಲ್ಲಿ ಆಸಕ್ತಿ ಮತ್ತು ಏಕಾಗ್ರತೆ ಮೂಡುತ್ತದೆ ಎಂದರು.
ವಿದ್ಯಾರ್ಥಿಗಳು ಬಾಲ್ಯದಿಂದಲೇ ಯೋಗಾಭ್ಯಾಸ ಮಾಡಿದರೆ ಭವಿಷ್ಯದಲ್ಲಿ ಒಳ್ಳೆಯ ಆರೋಗ್ಯವಂತ ಕುಟುಂಬ, ಆರೋಗ್ಯವಂತ ಗ್ರಾಮ,ಆರೋಗ್ಯ ವಂತ ರಾಷ್ಟ್ರ ನಿರ್ಮಾಣ ಸಾಧ್ಯ, ಓದುವ 20 ನಿಮಿಷಗಳ ಮೊದಲು ಯೋಗ ಮಾಡುವುದರಿಂದ ಏಕಾಗ್ರತೆ ಹೆಚ್ಚುತ್ತದೆ. ಯೋಗ ದಿಂದ ರಕ್ತ ಸಂಚಾರವೂ ಹೆಚ್ಚುತ್ತದೆ. ಆದ್ದರಿಂದ ಯೋಗ ನಮ್ಮ ಜೀವನದ ಅವಿಭಾಜ್ಯ ಅಂಗವಾಗಬೇಕು.ಯೋಗ ಮನುಷ್ಯನ ಹುಟ್ಟಿನಿಂದ ನಿರಂತರ ಪ್ರಕ್ರಿಯೆಯಾಗಿದೆ ಶಿಶುಗಳು ದಿನವಿಡೀ ಹಲವು ಬಾರಿ ಮಕರಾಸನ ಮತ್ತು ಪವನ ಮುಕ್ತಾಸನ ಮಾಡುವುದನ್ನು ನಾವು ಗಮನಿಸಬಹುದು. ಯೋಗ ಮಾಡುವುದರಿಂದ ಉತ್ತಮ ನಿದ್ದೆಯೂ ಬರುತ್ತದೆ. ಬೆಳಗ್ಗೆ ಬೇಗ ಎದ್ದು ಚೆನ್ನಾಗಿ ಓದುವ ಅಭ್ಯಾಸ ರೂಡಿಸಿಕೊಳ್ಳಬಹುದು ಎಂದು ಹೇಳಿದರು.
ಯೋಗ ಶಿಕ್ಷಕ ಎಚ್ .ಸಚಿನ್ ದಿನನಿತ್ಯದ ಆರೋಗ್ಯ ಸೂತ್ರಗಳು ತಿಳಿಸಿ, ಪ್ರಕೃತಿಯಲ್ಲಿನ ಆರೋಗ್ಯದ ಗುಟ್ಟನ್ನು ವಿವರಿಸಿದರು.
ನಂತರ ವಿದ್ಯಾರ್ಥಿಗಳು ಯೋಗಾಭ್ಯಾಸ ಅನುಭವವನ್ನು ಹಂಚಿಕೊಂಡರು. ಶಾಲೆಯ ಮುಖ್ಯ ಗುರುಗಳಾದ
ಚಂದ್ರಾಮ ಅಮನಗಡ, ಸಹಶಿಕ್ಷಕರಾದ ಅಬ್ದುಲ್ ನಾಯಕ, ವಿಜಯ ಕುಮಾರ, ಶಿವಪ್ಪ ಶಿರುಗುಂಪಿ, ಭೀಮಾಶಂಕರ ಮೇತ್ರಿ, ಮಹ್ಮದ್ ಏಜಾಜ್, ಅಶ್ವಿನಿರಾಣಿ, ಶೋಭಾ, ರಾಜೇಶ್ವರಿ, ಮಂಜುಳಾ, ಶ್ರೀದೇವಿ, ಶೃತಿ, ಮಲ್ಲಮ್ಮ
ಹಾಗೂ ಕರಿ ಬಸವೇಶ್ವರ ಯುವಕ ಸಂಘದ ವಸಂತ ಹಳಕಟ್ಟಿ, ರವಿಕುಮಾರ ಕಮರಡಗಿ ಸೇರಿದಂತೆ ಸಂಘದ ಪದಾಧಿಕಾರಿಗಳು, ಗ್ರಾಮದವರು ಇದ್ದರು.