ಶಕ್ತಿ ಯೋಜನೆ: ಕಲಬುರಗಿಯಲ್ಲಿ 757.87 ಲಕ್ಷ ಮಹಿಳೆಯರ ಉಚಿತ ಪ್ರಯಾಣ | ಸಚಿವ ಪ್ರಿಯಾಂಕ್ ಖರ್ಗೆ

0
27

ಕಲಬುರಗಿ: ರಾಜ್ಯ ಸರ್ಕಾರದ ಪ್ರಮುಖ ಕಾರ್ಯಕ್ರಮಗಳಲ್ಲಿ ಒಂದಾದ ಶಕ್ತಿ ಯೋಜನೆ ಜಾರಿಗೆ ಬಂದು ಯಶಸ್ವಿಯಾಗಿ ಒಂದು ವರ್ಷ ಪೂರೈಸಿದ್ದು, ಕಾಂಗ್ರೆಸ್ ಪಕ್ಷ ಚುನಾವಣೆ ಸಂದರ್ಭದಲ್ಲಿ ನೀಡಿದ ಭರವಸೆಯಂತೆ ಅಧಿಕಾರಕ್ಕೆ ಬಂದ ಮೇಲೆ ಈ ಯೋಜನೆಯನ್ನು ಜಾರಿಗೊಳಿಸಿದೆ. ಇದರಿಂದ ಮಹಿಳೆಯರು ನಿಗಮದ ಬಸ್ ಗಳಲ್ಲಿ ಉಚಿತ ಪ್ರಯಾಣ ಮಾಡುವ ಮೂಲಕ ಯಾತ್ರ ಸ್ಥಳಗಳು ಸೇರಿದಂತೆ ಪ್ರವಾಸಿ ತಾಣಗಳಿಗೆ ಭೇಟಿ ನೀಡುತ್ತಿರುವುದು ಖುಷಿ ತಂದಿದೆ ಎಂದು ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಮತ್ತು ಕಲಬುರಗಿ ಜಿಲ್ಲಾ ಉಸ್ತುವಾರಿ ಸಚಿವರಾದ ಪ್ರಿಯಾಂಕ್ ಖರ್ಗೆ ಹರ್ಷ ವ್ಯಕ್ತಪಡಿಸಿದ್ದಾರೆ.

ಈ ಕುರಿತು ಪತ್ರಿಕಾ ಪ್ರಕಟಣೆ ಹೊರಡಿಸಿರುವ ಅವರು, ಶಕ್ತಿ ಯೋಜನೆಯಡಿಯಲ್ಲಿ ಕಲಬುರಗಿ ಜಿಲ್ಲೆಯಲ್ಲಿ ಜುಲೈ ಅಂತ್ಯದವರೆಗೆ 757.87 ಲಕ್ಷ ಮಹಿಳೆಯರು ನಿಗಮದ ಬಸ್ ಗಳಲ್ಲಿ ಉಚಿತ ಪ್ರಯಾಣ ಮಾಡಿದ್ದು ಯೋಜನೆಯ ಲಾಭ ಪಡೆದುಕೊಂಡಿದ್ದಾರೆ ಎಂದು ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಮತ್ತು ಕಲಬುರಗಿ ಜಿಲ್ಲಾ ಉಸ್ತುವಾರಿ ಸಚಿವರಾದ ಪ್ರಿಯಾಂಕ್ ಖರ್ಗೆ ತಿಳಿಸಿದ್ದಾರೆ.

Contact Your\'s Advertisement; 9902492681

ಕಳೆದ ವರ್ಷದ ಜೂನ್ 11, 2023 ರಂದು ಈ ಯೋಜನೆ ಜಾರಿಗೆ ಬಂದಿದೆ. ಅಲ್ಲಿಂದ ಈ ವರ್ಷದ ಜುಲೈ 31 ರವರೆಗೆ ಜಿಲ್ಲೆಯಲ್ಲಿ ಒಟ್ಟು 757.87 ಲಕ್ಷ ಮಹಿಳಾ ಪ್ರಯಾಣಿಕರು ನಿಗಮದ ಬಸ್ ಗಳಲ್ಲಿ‌ಉಚಿತ ಪ್ರಯಾಣ ಮಾಡಿದ್ದಾರೆ. ಇದಕ್ಕೆ ರೂ. 250.08 ಕೋಟಿಯಷ್ಟು ವೆಚ್ಚ ಉಂಟಾಗಿರುತ್ತದೆ.

ಕಲಬುರಗಿ ಜಿಲ್ಲೆ ಸೇರಿದಂತೆ ಇಡೀ ಕಲ್ಯಾಣ ಕರ್ನಾಟಕ ವ್ಯಾಪ್ತಿಯಲ್ಲಿ ಸದರಿ ಯೋಜನೆಯ ಅನ್ವಯ ಇದೇ ಅವಧಿಯಲ್ಲಿ‌ ಒಟ್ಟು 38.48 ಕೋಟಿ ಮಹಿಳಾ ಪ್ರಯಾಣಿಕರು ಪ್ರಯಾಣಿಸಿದ್ದು, ಇದರಿಂದ 1,287.63 ಕೋಟಿಯಷ್ಟು ವೆಚ್ಚ ಉಂಟಾಗಿರುತ್ತದೆ ಎಂದು‌ ಸಚಿವರು ಹೇಳಿದ್ದಾರೆ.

ಶಕ್ತಿ ಯೋಜನೆ ಜಾರಿಗೆ ಬಂದ ನಂತರ ಮಹಿಳಾ ಪ್ರಯಾಣಿಕರು ಯಾತ್ರ ಸ್ಥಳಗಳಿಗೆ ಹೆಚ್ಚಿನ‌ ಸಂಖ್ಯೆಯಲ್ಲಿ ಭೇಟಿ ನೀಡುವ ಮೂಲಕ ಹುಂಡಿಯಲ್ಲಿ ಕಾಣಿಕೆ ಸಲ್ಲಿಸಿದ್ದರಿಂದ ದೇವಾಲಯಗಳ ಆದಾಯದಲ್ಲಿ ಗಣನೀಯ ಏರಿಕೆ‌ ಕಂಡುಬಂದಿದೆ. ಈ ಬಗ್ಗೆ ಧರ್ಮಸ್ಥಳ ಶ್ರೀ ಮಂಜುನಾಥ ಸ್ವಾಮಿ ದೇವಾಲಯದ ಧರ್ಮಾಧಿಕಾರಿಗಳಾದ ಶ್ರೀ ವಿರೇಂದ್ರ ಹೆಗ್ಗಡೆಯವರು ಸರ್ಕಾರಕ್ಕೆ ಪತ್ರ ಬರೆದು ತಮ್ಮ ಮೆಚ್ಚುಗೆ ಸೂಚಿಸಿದ್ದು ಹೆಮ್ಮೆ ತರುವ ಸಂಗತಿಯಾಗಿದೆ ಎಂದು ಖರ್ಗೆ ಹೇಳಿದ್ದಾರೆ.

ಶಕ್ತಿ ಯೋಜನೆ ಜಾರಿಗೆ ಬಂದ ನಂತರ ಪ್ರಯಾಣಿಕರ ಸಂಖ್ಯೆಯಲ್ಲಿ ಗಣನೀಯ ಹೆಚ್ಚಳವಾಗಿರುತ್ತದೆ. ಜೊತೆಗೆ, ಅನುಸೂಚಿ ( ಶೆಡ್ಯೂಲ್ ), ಸರತಿ ( ಟ್ರಿಪ್ ) ಬಸ್ ಗಳ ಪ್ರಯಾಣದ ಕಾರ್ಯಾಚರಣೆ ವ್ಯಾಪ್ತಿ ಕೂಡ‌ ಹಿಗ್ಗಿದೆ.

ಈ ಮೊದಲು ಕಲ್ಯಾಣ ಕರ್ನಾಟಕದಲ್ಲಿ ಪ್ರತಿನಿತ್ಯ ಒಟ್ಟು 4,028 ಅನುಸೂಚಿಗಳಿದ್ದವು. ನಂತರ 4,666 ಅನುಸೂಚಿಗಳಾಗಿದ್ದು, ದಿನವೊಂದಕ್ಕೆ 638 ಅನುಸೂಚಿಗಳು ಹೆಚ್ಚಾಗಿವೆ. ಸರತಿಗಳ ಸಂಖ್ಯೆ 22,214 ಇದ್ದು ನಂತರ 27,334 ಆಗಿದ್ದು, 5,120 ಸರತಿಗಳ ಸಂಖ್ಯೆ‌ಹೆಚ್ಚಾಗಿದೆ. ಈ ಮೊದಲು 14.46 ಲಕ್ಷ ಕಿಮೀ. ಕಾರ್ಯಾಚರಣೆ ವ್ಯಾಪ್ತಿ ಹೊಂದಿತ್ತು. ಆ ನಂತರ‌ 17.13 ಲಕ್ಷ ವ್ಯಾಪ್ತಿಗೆ ಏರಿದ್ದು ಪ್ರತಿನಿತ್ಯ 2.67 ಲಕ್ಷ ಗಳವರೆಗೆ ಕಿ.ಮೀ ವ್ಯಾಪ್ತಿ ವಿಸ್ತಾರವಾಗಿದೆ. ಅದರಂತೆ ಪ್ರಯಾಣಿಕರ‌ ಸಂಖ್ಯೆಯಲ್ಲಿಯೂ ಗಣನೀಯ ಹೆಚ್ಚಳವಾಗಿದೆ. ಮೊದಲು ಪ್ರತಿನಿತ್ಯ 13.58 ಲಕ್ಷ ಪ್ರಯಾಣಿಕರು ಇದ್ದರೆ, ಯೋಜನೆಯ ನಂತರ 16.99 ಲಕ್ಷಕ್ಕೆ ಮುಟ್ಟಿದ್ದು ಪ್ರತಿನಿತ್ಯ 3.41 ಲಕ್ಷ ಹೆಚ್ಚುವರಿ ಮಹಿಳೆಯರು ಪ್ರಯಾಣಿಸುತ್ತಿದ್ದಾರೆ.

*ಕಲ್ಯಾಣ ಕರ್ನಾಟಕ ಪ್ರದೇಶದಲ್ಲಿ ನೇಮಕಾತಿ ಪ್ರಕ್ರಿಯೆಗೆ ಕ್ರಮ*

ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ 2023-24ನೇ ಸಾಲಿನಲ್ಲಿ ನೇರ ನೇಮಕಾತಿ ಮೂಲಕ ದರ್ಜೆ-3 ಮೇಲ್ವಿಚಾರಕೇತರ ವೃಂದದ 925- ಚಾಲಕ ಹಾಗೂ 694 ಚಾಲಕ-ಕಂ-ನಿರ್ವಾಹಕ ಸೇರಿದಂತೆ ಒಟ್ಟು 1,619 ಚಾಲನಾ ಹುದ್ದೆಗಳನ್ನು ನೇಮಕಾತಿ ಮಾಡಿಕೊಳ್ಳಲಾಗಿದೆ ಎಂದು ಅವರು ಹೇಳಿದ್ದಾರೆ.

ಚಾಲಕ ಹಾಗೂ ಚಾಲಕ ಕಂ ನಿರ್ವಾಹಕ ಹುದ್ದೆಗಳನ್ನು ತುಂಬುವ ಬೇಡಿಕೆ ಬಹಳ ದಿನಗಳಿಂದ ಇದ್ದುದರಿಂದ ಈಗ ಒಟ್ಟು 1619 ಹುದ್ದೆಗಳನ್ನು ತುಂಬಿ ಸಿಬ್ಬಂದಿಗಳಿಗೆ ಕೌನ್ಸಲಿಂಗ್ ಮೂಲಕ ಸ್ಥಳ ನಿಯೋಜನೆ ಮಾಡಲಾಗಿದೆ. ವಿಭಾಗದಲ್ಲಿ ಖಾಲಿ ಇರುವ 1,437 ನಿರ್ವಾಹಕರು, 55 ದರ್ಜೆ-2ರ ಅಧಿಕಾರಿಗಳು, 98 ಮೇಲ್ವಿಚಾರಕರು ಸೇರಿದಂತೆ ಒಟ್ಟು 1,590 ವಿವಿದ ಹುದ್ದೆಗಳ ನೇಮಕಾತಿ ಮಾಡಿಕೊಳ್ಳಲು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ ಇದಲ್ಲದೇ, ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದ ಹಿಂಬಾರಿ ಇರುವ ಒಟ್ಟು 36 ಹುದ್ದೆಗಳ ನೇಮಕಾತಿ ಪ್ರಕ್ರಿಯೆ ಜಾರಿಯಲ್ಲಿದೆ ಎಂದು ಅವರು ಹೇಳಿದ್ದಾರೆ.

*ತರಬೇತಿಗೆ ಕ್ರಮ*

2023-24ನೇ ಸಾಲಿನಲ್ಲಿ ನಿಗಮದ ತರಬೇತಿ ಕೇಂದ್ರಗಳಲ್ಲಿ 2,473 ಸಿಬ್ಬಂದಿಗಳಿಗೆ ಪುನಶ್ಚೇತನ ಮತ್ತು ಪರಿಚಯ ತರಬೇತಿ ಹಾಗೂ 6,615 ಖಾಸಗಿ ಅಭ್ಯರ್ಥಿಗಳಿಗೆ ಚಾಲನಾ ತರಬೇತಿಯನ್ನು ನೀಡಲಾಗಿರುತ್ತದೆ.

*ಅನುಕಂಪದ ಮೇಲೆ ನೇಮಕಾತಿ*

2023-24ನೇ ಸಾಲಿನಲ್ಲಿ ಅನುಕಂಪ ಆಧಾರದ ಮೇಲೆ ದರ್ಜೆ-3 ಮೇಲ್ವಿಚಾರಕೇತರ ವೃಂದದ ಹುದ್ದೆಗಳಿಗೆ 124 ಮೃತಾವಲಂಬಿತರನ್ನು ಭರ್ತಿ ಮಾಡಿಕೊಳ್ಳಲಾಗಿದೆ..

*ನಮ್ಮ ಕಲಬುರಗಿ ಸಾರಿಗೆ ಆ್ಯಪ್”ಗೆ ಚಾಲನೆ*

ಸಾರ್ವಜನಿಕರಿಗೆ ಉತ್ತಮ ಸಾರಿಗೆ ಸೌಲಭ್ಯ ಕಲ್ಪಿಸುವ ನಿಟ್ಟಿನಲ್ಲಿ “ನಮ್ಮ ಕಲಬುರಗಿ ಸಾರಿಗೆ ಆ್ಯಪ್” ತಂತ್ರಾಂಶವನ್ನು ಅಭಿವೃದ್ಧಿಪಡಿಸಲಾಗಿದ್ದು, ಇದರಿಂದ ಸಾರ್ವಜನಿಕರು ಬಸ್ಸುಗಳ ಆಗಮನ ಮತ್ತು ನಿರ್ಗಮನಗಳ ನಿಖರ ಮಾಹಿತಿಯನ್ನು ಪಡೆದುಕೊಳ್ಳಬಹುದು ಎಂದು ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ.

*ಅಪಘಾತದಲ್ಲಿ ಮೃತ ಹೊಂದಿದ ನೌಕರರಿಗೆ ವಿಮಾ ಸೌಲಭ್ಯ*

ಕ.ಕ.ರ.ಸಾ.ನಿಗಮ ಹಾಗೂ ಯೂನಿಯನ್ ಬ್ಯಾಂಕ್ ರವರೊಂದಿಗೆ ಪ್ರೀಮಿಯಮ್‍ರಹಿತ ಒಡಂಬಡಿಕೆ ಮುಖಾಂತರ ಯೂನಿಯನ್ ಬ್ಯಾಂಕ ಖಾತೆ ಹೊಂದಿದ ಸಿಬ್ಬಂದಿಯವರಿಗೆ ಕರ್ತವ್ಯನಿರತ ಅಥವಾ ಖಾಸಗಿ ಅಪಘಾತದಲ್ಲಿ ಮೃತ ಹೊಂದಿದವರಿಗೆ ಒಟ್ಟು ರೂ. 1.20 ಕೋಟಿ ಮೊತ್ತವನ್ನು, ಶ್ವಾಶ್ವತ ಅಂಗ ವೈಫಲ್ಯತಗೆ ರೂ. 1.00 ಕೋಟಿ ಮೊತ್ತದ ಯೋಜನೆಯನ್ನು ಜಾರಿಗೆ ತರಲಾಗಿದೆ.

*ಜಯದೇವ ಹೃದ್ರೋಗ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆಯೊಂದಿಗೆ ಆರೋಗ್ಯ ಸೇವೆ ಒಡಂಬಡಿಕೆ*

ಎಲ್ಲಾ ಹೃದಯ ಸಂಬಂಧಿ ಕಾಯಿಲೆಗಳು ಬರದಂತೆ ತಡೆಗಟ್ಟಲು ಮುಂಜಾಗ್ರತವಾಗಿ ಎಲ್ಲಾ ನೌಕರರ ಹೃದ್ರೋಗ ತಪಾಸಣೆ/ಪರೀಕ್ಷೆಯ ವ್ಯವಸ್ಥೆಯನ್ನು ಕಲ್ಪಿಸುವ ನಿಟ್ಟಿನಲ್ಲಿ ಜಯದೇವ ಹೃದ್ರೋಗ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆಯೊಂದಿಗೆ ಆರೋಗ್ಯ ಸೇವೆ ಒಡಂಬಡಿಕೆ ಮಾಡಿಕೊಂಡಿದ್ದು, ಇದರಿಂದ ನಿಗಮದ ಎಲ್ಲಾ 20,000 ನೌಕರರಿಗೆ ನಗದುರಹಿತವಾಗಿ ಆರೋಗ್ಯ ತಪಾಸಣೆಗಾಗಿ ಅನುಕೂಲ ಕಲ್ಪಿಸಲಾಗಿದೆ.

*ನೂತನ ಬಸ್ ಗಳ ಖರೀದಿ*

ಸಾರ್ವಜನಿಕ ಪ್ರಯಾಣಿಕರಿಗೆ ಸಾರಿಗೆ ಸೌಲಭ್ಯವನ್ನು ಕಲ್ಪಿಸಲು ಹೊಸ ಬಸ್‍ಗಳ ಖರೀದಿಗೆ ಕ್ರಮ ಕೈಗೊಳ್ಳಲಾಗಿದೆ. 2023-24ನೇ ಸಾಲಿನಿಂದ ಇಲ್ಲಿಯವರೆಗೆ 902 ಹೊಸ ವಾಹನಗಳನ್ನು ಖರೀದಿಸಿ ವಾಹನ ಬಲಕ್ಕೆ ಸೇರ್ಪಡೆಗೊಳಿಸಲಾಗಿದೆ.

ಈ 902 ಹೊಸ ವಾಹನಗಳ ಪೈಕಿ, 720 ವಾಹನಗಳು ( 680- ಗ್ರಾಮಾಂತರ, 6- ವೊಲ್ವೋ, 4- ಎಸಿ ಸ್ಲೀಪರ್ ಹಾಗೂ 30- ನಾನ್ ಎಸಿ‌ ಸ್ಲೀಪರ್ ) 2023-24.ರಲ್ಲಿ ಖರೀದಿಸಲಾಗಿದೆ. ಇನ್ನೂ 2024-25 ಸಾಲಿನಲ್ಲಿ 182 ಗ್ರಾಮಾಂತರ ಸಾರಿಗೆ ವಾಹನಗಳು ಸೇರಿವೆ. ಜೊತೆಗೆ ಈ ಸಾಲಿನಲ್ಲಿಯೇ ಇನ್ನೂ 330 ಹೊಸ ವಾಹನಗಳ ಖರೀದಿಸುವ ಯೋಜನೆ ಹೊಂದಲಾಗಿದೆ‌ ಎಂದು‌ ಸಚಿವರು ವಿವರಿಸಿದ್ದಾರೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here