ಬೆಂಗಳೂರು :ಕಳೆದ ಕೆಲವು ದಿನಗಳಿಂದ ಕಲ್ಕತ್ತಾ ಮತ್ತು ಬೇರೆ ಕಡೆಗಳಲ್ಲಿ ಮಹಿಳೆಯರ ಮೇಲೆ ನಡೆಯುತ್ತಿರುವ ಅತ್ಯಾಚಾರ ಮತ್ತು ದೌರ್ಜನ್ಯ ಪ್ರಕರಣಗಳು ಅಕ್ಷಮ್ಯ. ನಾಗರಿಕ ಸಮಾಜ ತಲೆತಗ್ಗಿಸುವಂತಹ ಪಾಶವೀ ಕೃತ್ಯಗಳು ನಡೆಯುತ್ತಿವೆ. ಇದನ್ನು ಅತ್ಯಂತ ಉಗ್ರ ಶಬ್ದಗಳಲ್ಲಿ ಖಂಡಿಸಬೇಕಾಗಿದೆ, ಮಾತ್ರವಲ್ಲ, ಇಡೀ ದೇಶದ ಮಹಿಳೆಯರ ಸುರಕ್ಷತೆಯ ಬಗ್ಗೆ ಕೇಂದ್ರ ಮತ್ತು ರಾಜ್ಯ ಸರಕಾರಗಳು ಅತ್ಯಂತ ಕಠಿಣವಾದ ದೃಢವಾದ ಅನೇಕ ಸುರಕ್ಷತಾ ಕ್ರಮಗಳನ್ನು ತೆಗೆದುಕೊಳ್ಳಬೇಕು ಎಂದು ಬಿಜೆಪಿ ಅಸಂಘಟಿತ ಕಾರ್ಮಿಕರ ಪ್ರಕೋಷ್ಠದ ರಾಜ್ಯ ಸಮಿತಿ ಸದಸ್ಯರಾದ ಪ್ರೀತಿ ಹೊನ್ನಗುಡಿ ಆಗ್ರಹಿಸಿದರು.
ಮಾಧ್ಯಮಗಳಿಗೆ ಬಿಡುಗಡೆ ಮಾಡಿರುವ ಪ್ರಕಟಣೆಯಲ್ಲಿ ಅವರು, ಮಹಿಳೆಯರ ಸುರಕ್ಷೆಗೆ ಸಂಬಂಧಿಸಿದ ಕಾನೂನು 2005ರಲ್ಲಿ ಜಾರಿಗೆ ಬಂದರೂ ಆ ಕಾನೂನಿನ ಅರಿವನ್ನು ಮೂಡಿಸುವಲ್ಲಿ ಹಿಂದೆ ಬಿದ್ದಿದ್ದೇವೆ. ನಾವು ವಿಶೇಷವಾಗಿ ಹೆಣ್ಣು ಮಕ್ಕಳಿಗೆ ಹೈಸ್ಕೂಲ್ ಹಂತದಲ್ಲಿ ಮಹಿಳಾ ಸುರಕ್ಷತೆ ಬಗ್ಗೆ ಅರಿವು ಮೂಡಿಸಬೇಕಾಗಿದೆ. ಹೈಸ್ಕೂಲಿನಿಂದ ಪದವಿ ತರಗತಿ ತನಕ ಎಲ್ಲ ಹೆಣ್ಣು ಮಕ್ಕಳಿಗೆ ಸುರಕ್ಷತೆಗೆ ಬೇಕಾಗಿರುವಂತಹ ಆತ್ಮರಕ್ಷಣೆ ಕಲೆಯ ತರಬೇತಿ ಕೊಡಬೇಕಾಗಿದೆ. ಕೇಂದ್ರ ಮತ್ತು ರಾಜ್ಯ ಸರಕಾರ ಶಿಕ್ಷಣ ಪದ್ಧತಿಯಲ್ಲೇ ಇದನ್ನು ಅಳವಡಿಸಿಕೊಳ್ಳಬೇಕು ಎಂದು ಅವರು ಒತ್ತಾಯಿಸಿದರು.