ವಿನೂತನ ಪ್ರಯೋಗ `ಗಜಲ್-ಕವಿತೆ’ ಜುಗಲಬಂದಿ

0
107

ಕಲಬುರಗಿ: ಅದೊಂದು ಸುಂದರ ಭಾವಲೋಕ, ಅಲ್ಲಿ ಮೋಹಕ ಮಾತುಗಳದೇ ಅನುರಣನ. ಪ್ರೇಮದ ಉನ್ಮಾದ ಮತ್ತು ವಿರಹದ ಬೇಗೆ ಒಂದೆಡೆಯಾದರೆ, ಸೂಫಿಸಂ ಜೊತೆಗೆ ಸಾಮಾಜಿಕ ಸ್ತರ ಮತ್ತೊಂದೆಡೆ.. ಹೀಗೆ ಇಡೀ ಸಭಾಸದನ `ನಶೆ’ ಏರಿಸಿಕೊಂಡಂತಿತ್ತು.

ಹೌದು, ಅದು ಗಜಲಿನ ನಶೆ, ದ್ವಿಪದಿಗಳ ನಶೆ, ಗಾಲಿಬ್ ಗಜಲಿನ ನಶೆ, ಉರ್ದು ಮತ್ತು ಹಿಂದಿ ಗಜಲುಗಳ ನಶೆ..
ಇದು ಕಲಬುರಗಿ ವಿಶ್ವವಿದ್ಯಾಲಯದ ಮಹಾತ್ಮಗಾಂಧಿ ಸಭಾಂಗಣದಲ್ಲಿ ಕರ್ನಾಟಕ ಗಜಲ್ ಅಕಾಡೆಮಿ ಬೆಂಗಳೂರು ವತಿಯಿಂದ ಭಾನುವಾರ ಇಡೀ ದಿನ ಗಜಲ್ ಸಂಭ್ರಮ ಎಂಬಂತೆ ಆಯೋಜಿಸಿದ್ದ ಅಖಿಲ ಕರ್ನಾಟಕ ಪ್ರಥಮ ಗಜಲ್ ಸಮ್ಮೇಳನದ ನಾಲ್ಕನೇ ಗೋಷ್ಠಿಯಾಗಿದ್ದ `ನಿನ್ನ ಗಜಲಿಗೆ ನನ್ನ ಕವಿತೆ’ ಎಂಬ ಜುಗಲಬಂದಿ ಕಾರ್ಯಕ್ರಮ ಇದೇ ಮೊದಲ ಬಾರಿಗೆ ಇಂತಹ ಪ್ರಯೋಗ ನಡೆಯಿತು.

Contact Your\'s Advertisement; 9902492681

ವೇದಿಕೆಯಲ್ಲಿ ಪ್ರಥಮ ಗಜಲ್ ಸಮ್ಮೇಳನದ ಪ್ರಥಮ ಸಮ್ಮೇಳನಾಧ್ಯಕ್ಷೆ ಶ್ರೀಮತಿ ಪ್ರಭಾವತಿ ಎಸ್.ದೇಸಾಯಿ ಅವರು ವಿರಾಜಮಾನರಾಗಿದ್ದರು. ಅಲ್ಲಿಯೇ ಪಕ್ಕದಲ್ಲಿ ದಂಪತಿ ಕುಳಿತಿದ್ದರು. ಈ ಇಬ್ಬರೂ ನಡೆಸಿಕೊಟ್ಟ ಜುಗಲಬಂದಿ ಕಾರ್ಯಕ್ರಮವಂತೂ ಸಭಿಕರ ಮನ ಸೆಳೆಯಿತು.

ಸಿನಿಮಾ, ಧಾರಾವಾಹಿ ನಟ ಹಾಗೂ ಕಂಠದಾನ ಕಲಾವಿದ ಶ್ರೀನಿವಾಸ ಪ್ರಭು ಮತ್ತು ನಿವೃತ್ತ ಕನ್ನಡ ಪ್ರಾಧ್ಯಾಪಕಿ, ಕವಯಿತ್ರಿ ಡಾ.ರಂಜನಿ ಪ್ರಭು ಅವರ ಜುಗಲಬಂದಿಯಲ್ಲಿ ಗಜಲ್ ಮತ್ತು ಕವಿತೆ ಒಂದರ ಮೇಲೊಂದು ಸೊಗಸಾದ ವಾತಾವರಣವನ್ನು ನಿರ್ಮಾಣ ಮಾಡಿದ್ದವು. ಕೇಳುಗರಿಗೆ ರಸದುಣಿಸು. ವಾಹ್ ಎಂಬುದು ಅಲ್ಲಿ ಸೇರಿದ್ದ ನೂರಾರು ಸಭಿಕರ ಆನಂದದ ರಿಂಗಣ.
ನಿಜ.. ಅದು ಗಜಲ್ ನಾದಲೋಕವನ್ನು ಸೃಷ್ಟಿಯಾಗಿದ್ದ ಸಂದರ್ಭ. ಶ್ರೀನಿವಾಸ ಪ್ರಭು ಅವರು ಉರ್ದು ಮತ್ತು ಹಿಂದಿ ಲೋಕದ ಗಜಲ್ ನಾದ ಆಲಾಪ ಮಾಡುತ್ತ.. ಸುಶ್ರಾವ್ಯವಾಗಿ ಹಾಡುತ್ತಿದ್ದರೆ, ಅವರ ಪತ್ನಿ ಡಾ.ರಂಜನಿ ಪ್ರಭು ಅದಕ್ಕೆ ಜುಗಲಬಂದಿಯಾಗಿ ತಮ್ಮ ಸ್ವರಚಿತ ಕವಿತೆಯನ್ನು ವಾಚಿಸುವ ಮೂಲಕ ರಮ್ಯತೆಯನ್ನು ಸೃಷ್ಟಿಸುತ್ತಿದ್ದರು.
ಮಳೆ ನಿಂತು ಹೋದ ಮೇಲೆ ಪ್ರಫುಲ್ಲವಾದ ಸಂಜೆಯ ವಾತಾವರಣದಂತಿದ್ದ ಆ ಸಭಾಂಗಣದಲ್ಲಿ ಸುಪ್ರಸಿದ್ದ ಗಜಲುಗಳನ್ನು ಶ್ರೀನಿವಾಸ ಪ್ರಭು ಹಾಡಿದರು. ತದ ನಂತರ ಕವಿತೆಗಳನ್ನು ಡಾ.ರಂಜನಿ ಪ್ರಭು ವಾಚಿಸಿದರು. ಆದರೆ ಆ ಕವಿತೆಗಳು ಗಜಲ್ ಅನುವಾದಗಳಲ್ಲ. ಗಜಲಿಗೆ ಪ್ರತಿಕ್ರಿಯೆಯಾಗಿ, ಕೆಲವೊಮ್ಮೆ ಉತ್ತರವಾಗಿ, ಮತ್ತೆ ಕೆಲವೊಮ್ಮೆ ಮರುಪ್ರಶ್ನೆಯಾಗಿ ಅಥವಾ ಭಾವ ವಿಸ್ತರಣವಾಗಿ ಮೂಡಿಬಂದವು.

`ಶೇರ್ ಕೆ ಫೂಲ್ ಕಿತಾಬೋಂಸೆ ನಹೀ
ಜುಲ್ಫ್ ಕೀ ಛಾಂವ್ ಸೆ ಹಮ್ ಚುನತೇ ಹೈ
ಲೋಗ್ ಹೋಠೋಂಸೆ ಸುನಾ ಕರತೆ ಹೈ
ಹಮ್ ನಿಗಾಹೋಂಸೆ ಗಜಲ್ ಸುನತೇ ಹೈ’
ಇಂತಹದ್ದೊಂದು ಸೊಗಸಾದ ಗಜಲಿಗೆ ಧ್ವನಿಯಾದ ಶ್ರೀನಿವಾಸ ಪ್ರಭು ಅವರು ಗಾನ ಮಾಧುರ್ಯಕ್ಕೆ ಮನಸೋತ ಪ್ರೇಕ್ಷಕರು ಚಪ್ಪಾಳೆಯ ಸುರಿಮಳೆ ಸುರಿಸಿದರು.

`ಕಣ್ಣು ಕಣ್ಣು ಕಲೆತಾಗ ಹಾಡು ಮೂಡೀತು ಗೆಳತಿ
ಎಂದು ತುಂಟನಗೆ ನಕ್ಕ ನಲ್ಲ ಹೇಳುವೆನು ಕೇಳು ಕವಿತೆ ಮೂಡುವುದು ಹೇಗೆ.. ತೀಡಿದ್ದ ನೆರಿಗೆಯನು ಮತ್ತೆ ತೀಡುತಿರಲು ಕವಿತೆ ಮೂಡಿದ ಹಾಗೆ.. ಎಂದು ಗಜಲಿಗೆ ಜುಗಲಬಂದಿಯಾಗಿ ಡಾ.ರಂಜನಿ ಪ್ರಭು ತುಂಬಾ ರಮ್ಯತೆಯಿಂದ ವಾಚಿಸುವಾಗ… ವಾಹ್ ಎಂದು ತಮ್ಮ ಖುಷಿಯನ್ನು ವ್ಯಕ್ತಪಡಿಸಿದರು.

ಹೀಗೆ ಸರಿಸುಮಾರು ಎಂಟ್ಹತ್ತು ಗಜಲ್ ಹಾಡಿದರೆ, ಅದಕ್ಕೆ ಪ್ರತಿಕ್ರಿಯೆಯಾಗಿ ಕವಿತೆಗಳನ್ನು ವಾಚಿಸುವ ಮೂಲಕ ಭಾವಲೋಕ ನಿರ್ಮಾಣಗೊಂಡಿತ್ತು. ಇದಕ್ಕೆ ಸಾಕ್ಷಿಪ್ರಜ್ಞೆಯಾಗಿ ಮಾತನಾಡಿದ ಕೊಪ್ಪಳದ ಗಜಲ್ ಕವಿಯಿತ್ರಿ ಶ್ರೀಮತಿ ಅನಸೂಯಾ ಜಹಾಗೀರದಾರ, ಗೇಯತೆ ಇರುವ ಗಜಲ್‍ಗಳನ್ನು ಹಾಡುತ್ತಿದ್ದರೆ ಅದೊಂದು ಲೋಕವೇ ಬೇರೆ, ಅಲ್ಲಿ ಯಾರೆಂದರೆ ಯಾರೂ ಬೇಡ. ಕೇವಲ ಮಾಧುರ್ಯ ಅಷ್ಟೇ ಎಂದು ಹೇಳುವ ಮೂಲಕ ಜುಗಲಬಂದಿಗೆ ಶ್ರೀಮಂತಿಕೆಯನ್ನು ತಂದುಕೊಟ್ಟರು.

ಈ ಜುಗಲಬಂದಿ ಕಾರ್ಯಕ್ರಮವನ್ನು ಸೊಗಸಾದ ನುಡಿಗಳ ಮೂಲಕ ಸಾರಥ್ಯ ವಹಿಸಿದ್ದು ಕರ್ನಾಟಕ ಗಜಲ್ ಅಕಾಡೆಮಿಯ ಕಾರ್ಯದರ್ಶಿಯೂ ಆಗಿರುವ ಸಮ್ಮೇಳನದ ರೂವಾರಿ ಮಹಿಪಾಲರೆಡ್ಡಿ ಮುನ್ನೂರ್ ಅವರು. ಕರ್ನಾಟಕದ ಮೂಲೆ ಮೂಲೆಯಿಂದ ಬಂದಿದ್ದ ಸುಮಾರು 150 ಕ್ಕೂ ಹೆಚ್ಚು ಗಜಲಕಾರರು ಜುಗಲ್ ಕಾರ್ಯಕ್ರಮವನ್ನು ಆಸ್ವಾದಿಸಿದರು.

ಕವಿಗಳಾದ ಎಸ್.ಪಿ.ಸುಳ್ಳದ, ರಂಗಾಯಣ ನಿಕಟಪೂರ್ವ ನಿರ್ದೇಶಕ ಪ್ರಭಾಕರ ಜೋಶಿ, ಕತೆಗಾರ್ತಿ ಸಂಧ್ಯಾ ಹೊನಗುಂಟಿಕರ್, ರಂಗ ತಜ್ಞೆ ಶಾಂತಾ ಭೀಮಸೇನರಾವ, ಗುಲಬರ್ಗ ವಿವಿಯ ಉರ್ದು-ಪರ್ಷಿಯನ್ ವಿಭಾಗದ ಮುಖ್ಯಸ್ಥ ಡಾ.ಅಬ್ದುಲ್ ರಬ್ ಉಸ್ತಾದ, ಪ್ರಾಧ್ಯಾಪಕ ಡಾ.ರಮೇಶ ಲಂಡನಕರ್, ಗಜಲಕಾರ ಬೋಡೆ ರಿಯಾಜ್ ಅಹ್ಮದ, ಸಂಚಾಲಕ ಅಬ್ದುಲ್ ಹೈ.ತೋರಣಗಲ್ಲು, ಡಾ.ಶ್ರೀಶೈಲ ಮಾದಣ್ಣನವರ, ಕರ್ನಾಟಕ ಸಾಹಿತ್ಯ ಅಕಾಡೆಮಿ ಸದಸ್ಯರುಗಳಾದ ಸಿದ್ದರಾಮ ಹೊನ್ಕಲ್ ಮತ್ತು ಡಾ.ಚಂದ್ರಕಲಾ ಬಿದರಿ, ಗೌರಿ ಪಾಟೀಲ, ಡಾ.ಪ್ರೇಮಾ ಹೂಗಾರ, ಡಾ.ಕಪಿಲ್ ಚಕ್ರವರ್ತಿ, ಸಿದ್ದರಾಮ ಸರಸಂಬಿ ಸೇರಿದಂತೆ ನೂರಾರು ಜನ ಉಪಸ್ಥಿತರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here