ಸೆಪ್ಟೆಂಬರ್ 1 ರಿಂದ ಜಾನುವಾರು ಗಣತಿ ಪ್ರಾರಂಭ: ಬಿ.ಫೌಜಿಯಾ ತರನ್ನುಮ್

0
200

ಕಲಬುರಗಿ: ಪಶುಪಾಲನಾ ಮತ್ತು ಪಶುವೈದ್ಯ ಸೇವಾ ಇಲಾಖೆಯಿಂದ ಸೆಪ್ಟೆಂಬರ್ 1 ರಿಂದ 21ನೇ ರಾಷ್ಟ್ರೀಯ ಜಾನುವಾರು ಗಣತಿ ಕಾರ್ಯ ದೇಶದಾದ್ಯಂತ ಏಕಕಾಲದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿ ಬಿ.ಫೌಜಿಯಾ ತರನ್ನುಮ್ ತಿಳಿಸಿದ್ದಾರೆ.

ಬುಧವಾರ ಇಲ್ಲಿನ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ರಾಷ್ಟ್ರೀಯ ಜಾನುವಾರು ಗಣತಿಯ ಪೋಸ್ಟರ್ ಬಿಡುಗಡೆಗೊಳಿಸಿ ಮಾತನಾಡಿದ ಅವರು, ಈ ಗಣತಿ ಕಾರ್ಯ ಕಲಬುರಗಿ ಜಿಲ್ಲೆಯಲ್ಲಿ ಸೆಪ್ಟೆಂಬರ್ 1 ರಿಂದ ಡಿಸೆಂಬರ್ 31ರ ವರೆಗೆ ನಡೆಯಲಿದೆ ಎಂದರು.

Contact Your\'s Advertisement; 9902492681

ಜಿಲ್ಲೆಯ ಎಲ್ಲಾ ನಗರ ಮತ್ತು ಗ್ರಾಮಾಂತರ ಪ್ರದೇಶಗಳಲ್ಲಿ ಇಲಾಖೆಯ ಗಣತಿದಾರರು ಪ್ರತಿಯೊಂದು ಮನೆ, ಉದ್ಯಮ, ಸಂಸ್ಥೆಗಳಿಗೆ ಭೇಟಿ ನೀಡಿ ಎಲ್ಲಾ ತರಹದ ಸಾಕು ಪ್ರಾಣಿಗಳು ಹಾಗೂ ಕುಕ್ಕುಟಗಳ ಮಾಹಿತಿಯನ್ನು ಸಂಗ್ರಹಿಸಲಿದ್ದು, ಇದಕ್ಕೆ ಸಾರ್ವಜನಿಕರು, ರೈತರು ಸಹಕಾರ ನೀಡಬೇಕೆಂದು ಮನವಿ ಮಾಡಿಕೊಂಡರು.

ಜಾನುವಾರು ಗಣತಿಗೆ ಜಿಲ್ಲೆಯಲ್ಲಿ ಸಕಲ ಸಿದ್ದತೆ ಮಾಡಿಕೊಳ್ಳಲಾಗಿದ್ದು, ಜಿಲ್ಲೆಯಲ್ಲಿ 4,91,298 ಕುಟುಂಬಗಳ ಮನೆಗೆ ಗಣತಿದಾರರು ಭೇಟಿ ನೀಡಲಿದ್ದಾರೆ. ಗಣತಿಗಾಗಿ 115 ಜನ ಎಣಿಕೆದಾರರು ಹಾಗೂ 25 ಜನ ಮೇಲ್ವಿಚಾರಕರನ್ನು ನೇಮಿಸಲಾಗಿದೆ. ಸಾಕು ಪ್ರಾಣಿಗಳಾದ ಗೋವುಗಳು, ಎಮ್ಮೆ, ಕುರಿ, ಕೋಳಿ, ನಾಯಿ, ಕುದರೆ, ಹಂದಿಗಳ ಮಾಹಿತಿ ಸಂಗ್ರಹಿಸಲಿದ್ದಾರೆ ಎಂದರು.

ಜಾನುವಾರು ಗಣತಿಯು ದೇಶಾದ್ಯಂತ ಜಾನುವಾರು ಸಂಖ್ಯೆಯ ಸಮಗ್ರ ದತ್ತಾಂಶವನ್ನು ಸಂಗ್ರಹಿಸಲು ಬಹುಮುಖಿಯಾಗಿದ್ದಲ್ಲದೆ ಜಾನುವಾರು ವಲಯವನ್ನು ಅಭಿವೃದ್ಧಿಪಡಿಸಲು ಮತ್ತು ನೀತಿ ನಿರೂಪಣೆ, ಅನುಷ್ಠಾನ ಮತ್ತು ಮೇಲ್ವಿಚಾರಣೆಯ ಉದ್ದೇಶ ಹೊಂದಲಾಗಿದೆ ಎಂದಿದ್ದಾರೆ.

ಈ ಸಂದರ್ಭದಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಡ್ಡೂರು ಶ್ರೀನಿವಾಸಲು, ಡಿ.ಸಿ.ಪಿ ಕನಿಕಾ ಸಿಕ್ರಿವಾಲ್, ಸಹಾಯಕ ಆಯುಕ್ತರಾದ ರೂಪಿಂದರ್ ಸಿಂಗ್ ಕೌರ್, ಪ್ರಭುರೆಡ್ಡಿ, ಜಿಲ್ಲಾ ಪಂಚಾಯತಿಯ ಯೋಜನಾ ನಿರ್ದೇಶಕ ಜಗದೇವಪ್ಪ, ಪಶುಪಾಲನಾ ಮತ್ತು ಪಶುವೈದ್ಯ ಸೇವಾ ಇಲಾಖೆಯ ಉಪನಿರ್ದೇಶಕ ಡಾ. ಸಿರಾಜ್ ಅಹ್ಮದ್ ಅವಟಿ ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here