ಕಲಬುರಗಿ: ಆರ್ಟಿಕಲ್ 371 (ಜೆ) ವ್ಯಾಪ್ತಿಯ ಕಲ್ಯಾಣ ಕರ್ನಾಟಕ ಭಾಗದ ನೇಮಕಾತಿ, ಮುಂಬಡ್ತಿಗೆ ಸಂಬಂಧಿದಂತೆ ಈ ಭಾಗದ ಜನರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಪ್ರತ್ಯೇಕ ಸಚಿವಾಲಯ ಸ್ಥಾಪಿಸುವ ಮಹತ್ವದ ನಿರ್ಣಯವನ್ನು ಮಂಗಳವಾರ ಇಲ್ಲಿ ನಡೆದ 19ನೇ ಸಚಿವ ಸಂಪುಟ ಸಭೆಯಲ್ಲಿ ತೆಗೆದುಕೊಳ್ಳಲಾಯಿತು.
ನಗರದ ಮಿನಿವಿಧಾನಸೌಧದಲ್ಲಿ ನಡೆದ ಸಚಿವ ಸಂಪುಟದಲ್ಲಿ ಒಟ್ಟು 56 ವಿಷಯಗಳ ಬಗ್ಗೆ ಸುದೀರ್ಘ ಚರ್ಚೆ ನಡೆಸಿದ ಕ್ಯಾಬಿನೆಟ್, ಕಲ್ಯಾಣ ಕರ್ನಾಟಕ ಭಾಗಕ್ಕೆ ಸಂಬಂಧಿಸಿದ 46 ವಿಷಯಗಳ ಬಗ್ಗೆ ಚರ್ಚೆ ನಡೆಸಿ ಅನೇಕ ಯೋಜನೆಗಳಿಗೆ ಅನುಮೋದನೆ ನೀಡಿತು.
ಪ್ರಮುಖ ನಿರ್ಣಯಗಳು:
1. ಬೀದರ್- ರಾಯಚೂರು ನಗರ ಪಾಲಿಕೆಗಳನ್ನಾಗಿ ಪರಿವರ್ತನೆ
2. ಬೀದರ್- ಕಲಬುರಗಿ ಜಿಲ್ಲೆಯ ಹಳ್ಳಿಗಳಿಗೆ 7,200 ಕೋಟಿ ರೂ. ವೆಚ್ಚದಲ್ಲಿ ಕುಡಿಯುವ ನೀರಿನ ಯೋಜನೆಗೆ ಕೇಂದ್ರ ಸರ್ಕಾರ 3600 ಕೋಟಿ, ರಾಜ್ಯ ಸರ್ಕಾರ 3600 ಕೋಟಿ ರೂ. ಸಹಭಾಗಿತ್ವದಲ್ಲಿ ಯೋಜನೆ ರೂಪಿಸುವುದು.
3. ಕ.ಕ. ಭಾಗಕ್ಕೆ ಪ್ರತ್ಯೇಕ ಸಚಿವಾಲಯ
4. ಕಲ್ಯಾಣ ಕರ್ನಾಟಕ ಅಭಿವೃದ್ಧಿ ಮಂಡಳಿಗೆ ರಾಜ್ಯ ಸರ್ಕಾರ 5000 ಕೋಟಿ ರೂ. ನೀಡಿದಂತೆ ಕೇಂದ್ರ ಸರ್ಕಾರವೂ 5000 ಕೋಟಿ ರೂ. ನೀಡಬೇಕು ಮನವಿಯ ನಿರ್ಣಯ
5. ಕಲ್ಯಾಣ ಕರ್ನಾಟಕ ಭಾಗದಲ್ಲಿ ಖಾಲಿ ಇರುವ 17439 ಹುದ್ದೆಗಳನ್ನು ಹಂತ ಹಂತವಾಗಿ ಭರ್ತಿ ಮಾಡುವುದು
6. ಬಸವಕಲ್ಯಾಣದ ಅನುಭವ ಮಂಟಪದಿಂದ ಅಂಜನಾದ್ರಿ ಬೆಟ್ಟದವರೆಗೆ ಇರುವ ಪ್ರವಾಸಿ ತಾಣಗಳ ಉತ್ತೇಜಿಸುವ ಪ್ರಸ್ತಾವನೆಗೆ ಅನುಮೋದನೆ
7. 45 ಹೊಸದಾಗಿ ಪ್ರಾಥಮಿಕ ಆರೋಗ್ಯ ಕೇಂದ್ರ, 31 ಸಮುದಾಯ ಆರೋಗ್ಯ ಕೇಂದ್ರ ಪ್ರಾರಂಭ
8. 9 ತಾಲ್ಲೂಕು ಆಸ್ಪತ್ರೆಗಳ ಮೇಲ್ದರ್ಜೆಗೇರಿಸುವುದು
9. 2 ತಾಲ್ಲೂಕು ಆಸ್ಪತ್ರೆಗಳನ್ನು ಜಿಲ್ಲಾಸ್ಪತ್ರೆಗಳನ್ನಾಗಿ ಪರಿವರ್ತನೆ
10. ರಾಜ್ಯದ ಎಲ್ಲ ಮಿನಿ ವಿಧಾನಸೌಧ ಹೆಸರು ಬದಲಿಸಿ ಪ್ರಜಾಸೌಧ ಮರು ನಾಮಕರಣ
11. ಕೃಷಿ, ಕೈಗಾರಿಕೆ, ಅರಣ್ಯ, ಆರೋಗ್ಯ, ವಸತಿ, ಸಾರಿಗೆ ಸೇರಿದಂತೆ ವಿವಿಧ ಕ್ಷೇತ್ರಗಳಿಗೆ
15550 ಕೋಟಿ ರೂ. ಅನುದಾನ
ಈ ಮುಖ್ಯ ನಿರ್ಣಯಗಳಲ್ಲದೆ ಬಜೆಟ್ ನಲ್ಲಿ ಘೋಷಣೆ ಮಾಡಿದ ಎಲ್ಲ ಅಭಿವೃದ್ಧಿ ಕಾರ್ಯಗಳಿಗೆ ಅನುಮೋದನೆ ನೀಡಲಾಗಿದೆ ಎಂದು ಮುಖ್ಯಮಂತ್ರಿಗಳು ತಿಳಿಸಿದರು.
ಉಪಮುಖ್ಯಮಂತ್ರಿ ಡಿ. ಕೆ. ಶಿವಕುಮಾರ, ಎಚ್.ಸಿ. ಮಹಾದೇವಪ್ಪ, ಎಚ್.ಕೆ. ಪಾಟೀಲ, ಪ್ರಿಯಾಂಕ್ ಖರ್ಗೆ, ಡಾ. ಶರಣಪ್ರಕಾಶ ಪಾಟೀಲ, ಈಶ್ವರ ಖಂಡ್ರೆ, ಕೆಕೆಆರ್ ಡಿಬಿ ಅಧ್ಯಕ್ಷ ಡಾ. ಅಜಯಸಿಂಗ್, ಸಂಸದ ರಾಧಾಕೃಷ್ಣ ದೊಡ್ಡಮನಿ ಇತರರಿದ್ದರು.