ಗುರುಗಳಾದವರು ಸಮಾಜಕ್ಕೆ ಭಾರವಾಗದೆ ಬೆಳಕಾಗಬೇಕು: ನಿಡುಮಾಮಿಡಿ ಶ್ರೀ

0
27

ಕಲಬುರಗಿ: ಬಸವಾದಿ ಶರಣರ ಪರಂಪರೆ, ಬಸವತತ್ವ ಪರಿಪಾಲನೆಯಲ್ಲಿ ಸುಲಫಲ ಮಠದ ಕೊಡುಗೆ ಅನನ್ಯವಾಗಿದೆ ಎಂದು ಬಸವಕಲ್ಯಾಣ ಅನುಭವ ಮಂಟಪದ ಅಧ್ಯಕ್ಷ ನಾಡೋಜ ಶ್ರೀ ಡಾ.ಬಸವಲಿಂಗ ಪಟ್ಟದ್ದೇವರು ನುಡಿದರು.

ನಗರದ ಶಹಾಬಜಾರ್‌ನ ಸುಲಫಲ ಮಠದಲ್ಲಿ ಶನಿವಾರ ಆಯೋಜಿಸಿದ್ದ ಶ್ರೀ ಚನ್ನವೀರ ಶಿವಯೋಗಿಗಳ ೭೦ನೇ ಪುಣ್ಯಸ್ಮರಣೆ, ಶ್ರೀಶೈಲ ಸಾಗರಂಧರ ಜಗದ್ಗುರು ಶ್ರೀ ಡಾ.ಸಾರಂಗಧರ ದೇಶಿಕೇಂದ್ರ ಮಹಾಸ್ವಾಮೀಜಿ ಪಟ್ಟಾಧಿಕಾರ ದಶಮಾನೋತ್ಸವ ಮತ್ತು ಜನ್ಮದಿನ, ಮಹಾದ್ವಾರ ಉದ್ಘಾಟನೆ, ಕಲ್ಯಾಣ ಕರ್ನಾಟಕ ರತ್ನ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ನೇತೃತ್ವ ವಹಿಸಿ ಅವರು ಮಾತನಾಡಿದರು.

Contact Your\'s Advertisement; 9902492681

ಬಸವತತ್ವ ಪ್ರಚಾರದಲ್ಲಿ ಭಾಲ್ಕಿ ಹಿರೇಮಠಕ್ಕೆ ಸುಲಫಲ ಶ್ರೀ (ಸಾರಂಗಧರ ಜಗದ್ಗುರು) ಸಾಥ್ ನೀಡುತ್ತಿರುವುದು ಸಂತಸದ ಸಂಗತಿ. ಪುಟ್ಟ ಮಠವನ್ನು ಕಟ್ಟಿ ಬೆಳೆಸಿ ಭಕ್ತರಿಗೆ ಅನ್ನದಾಸೋಹ ಒದಗಿಸಿದ್ದಾರೆ. ಯಾವುದೇ ಜಾತಿ, ಧರ್ಮಕ್ಕೆ ಸೀಮಿತವಾಗದೆ ಪ್ರತಿಯೊಬ್ಬರ ಕಷ್ಟಕ್ಕೆ ಸ್ಪಂದಿಸುತ್ತ ಬಸವಣ್ಣನವರ ಕಾಯಕ ತತ್ವದಂತೆ ನಡೆಯುತ್ತಿದ್ದಾರೆ ಎಂದು ಬಣ್ಣಿಸಿದರು.

ಸಾನ್ನಿಧ್ಯ ವಹಿಸಿದ್ದ ನಿಡುಮಾಮಿಡಿಯ ಶ್ರೀ ವೀರಭದ್ರ ಚನ್ನಮಲ್ಲ ದೇಶಿಕೇಂದ್ರ ಮಹಾಸ್ವಾಮೀಜಿ ಆಶೀರ್ವಚನ ನೀಡಿ, ಕೆಲ ಗುರುಗಳು ಭಾರವಾದರೆ, ಕೆಲವರು ಬೆಳಕಾಗುತ್ತಾರೆ. ಸಮಾಜಕ್ಕೆ ಬೆಳಕಾಗುವ ಗುರುಗಳು ಹೆಚ್ಚಾಗಬೇಕಿದೆ. ಪಾರಂಪರಿಕ ಜತೆಗೆ ಆಧುನಿಕ ಶಿಕ್ಷಣದಲ್ಲಿ ಪರಿಪೂರ್ಣತೆ ನೀಡಿ ಸಮಾಜವನ್ನು ಉದ್ಧರಿಸುವ ಕೆಲಸವಾಗಬೇಕು ಎಂದರು.

ಲಿಂಗಾನಂದ ಸ್ವಾಮೀಜಿ, ಮಾತಾಜಿ ಅವರು ಬಸವಾದಿ ಶರಣರ ತತ್ವ ಪ್ರಚುರಪಡಿಸಿದರು. ಬಸವಲಿಂಗ ಪಟ್ಟದ್ದೇವರು ಬಸವತತ್ವ ಪ್ರಚಾರ, ಪ್ರಸಾರದಲ್ಲಿ ಮುಂಚೂಣಿಯಲ್ಲಿ ನಿಂತರು. ಸುಲಫಲ ಶ್ರೀಗಳು ಸಮನ್ವಯದೊಂದಿಗೆ ಮುನ್ನಡೆಯುತ್ತಿದ್ದಾರೆ. ಶ್ರೀಶೈಲದಲ್ಲಿ ಘಂಟಿ ಮಠ ಮತ್ತು ಸಾರಂಗಧರ ಮಠ ಎರಡೇ ಇದ್ದವು. ೭ನೇ ಶತಮಾನದಲ್ಲಿನ ಸಾರಂಗಧರ ಮಠವನ್ನು ಶ್ರೀ ಡಾ.ಸಾರಂಗಧರ ದೇಶಿಕೇಂದ್ರ ಸ್ವಾಮೀಜಿ ಮುನ್ನಡೆಸುತ್ತಿದ್ದಾರೆ ಎಂದು ನುಡಿದರು.

ಸಣ್ಣ ಕೈಗಾರಿಕೆ ಸಚಿವ ಶರಣಬಸಪ್ಪ ದರ್ಶನಾಪುರ ಮಾತನಾಡಿ, ಸುಲಫಲ ಶ್ರೀಗಳು ಜನಪರ ಸ್ವಾಮೀಜಿ. ಎಲ್ಲರನ್ನು ಸಮಾನವಾಗಿ ಕಂಡು ಕಷ್ಟಗಳಿಗೆ ಓಗೊಟ್ಟು ಕೆಲಸ ಮಾಡುತ್ತಿದ್ದಾರೆ ಎಂದರು.

ಅಧ್ಯಕ್ಷತೆ ವಹಿಸಿದ್ದ ಶರಣಬಸವೇಶ್ವರ ಸಂಸ್ಥಾನದ ಮಾತೋಶ್ರೀ ಡಾ.ದಾಕ್ಷಾಯಿಣಿ ಎಸ್.ಅಪ್ಪ ಮಾತನಾಡಿ, ಸುಲಫಲ ಮಠದ ಮಹಾಂತ ಶಿವಾಚಾರ್ಯರು ಬಸವಾದಿ ಶರಣರ ವಿಚಾರಗಳ ಪ್ರತಿಪಾದಕರು. ಸಾಮಾಜಿಕ ಚಿಂತಕರು, ಧರ್ಮ, ಸಾಹಿತ್ಯ, ಸಾಂಸ್ಕೃತಿಕ ಬೆಳವಣಿಗೆಯಲ್ಲಿ ಈ ಮಠದ ಕೊಡುಗೆ ಅಪಾರ. ವಿಶೇಷವಾಗಿ ಶರಣಬಸವೇಶ್ವರ ಸಂಸ್ಥಾನದೊಂದಿಗೆ ಉತ್ತಮ ಬಾಂಧವ್ಯ ಹೊಂದಿರುವ ಶ್ರೀಗಳು ನೂರು ವರ್ಷ ಬಾಳುವಂತೆ ಶ್ರೀ ಶರಣಬಸವೇಶ್ವರರು ಆಶೀರ್ವಾದ ಮಾಡಲಿ ಎಂದು ಹಾರೈಸಿದರು.

ನಾಲವಾರದ ಶ್ರೀ ಡಾ.ಸಿದ್ಧ ತೋಟೇಂದ್ರ ಶಿವಾಚಾರ್ಯ, ಹಾರಕೂಡದ ಶ್ರೀ ಡಾ.ಚನ್ನವೀರ ಶಿವಾಚಾರ್ಯರಿಗೆ ಕಲ್ಯಾಣ ಕರ್ನಾಟಕ ರತ್ನ ಪ್ರಶಸ್ತಿ, ೨೫ ಸಾವಿರ ನಗದು ಮತ್ತು ಸ್ಮರಣಿಕೆ ನೀಡಿ ಗೌರವಿಸಲಾಯಿತು. ಪ್ರಶಸ್ತಿ ಸ್ವೀಕರಿಸಿದ ಪೂಜ್ಯರು, ಮೃದು ಸ್ವಭಾವದ ಸುಲಫಲ ಶ್ರೀಗಳು ಜನರ ಪರ ಹೋರಾಟ ಮಾಡುತ್ತಾರೆ. ಗುರುಗಳಲ್ಲಿ ಶ್ರದ್ಧೆ, ಭಕ್ತಿ ಹೊಂದಬೇಕು. ಗುರುಲಿಂಗ ಜಂಗಮರ ಸ್ಮರಣೆ ಮಾಡಬೇಕು ಎಂದು ಹಾರೈಸಿದರು.

ಸ್ವಾಗತ ಸಮಿತಿ ಅಧ್ಯಕ್ಷರಾದ ಮಾಜಿ ಶಾಸಕ ದತ್ತಾತ್ರೇಯ ಪಾಟೀಲ್ ರೇವೂರ ಪ್ರಾಸ್ತಾವಿಕ ಮಾತನಾಡಿದರು. ಸೊನ್ನದ ಶ್ರೀ ಡಾ.ಶಿವಾನಂದ ಮಹಾಸ್ವಾಮೀಜಿ, ಯಡ್ರಾಮಿ ಶ್ರೀ ಸಿದ್ಧಲಿಂಗ ಮಹಾಸ್ವಾಮೀಜಿ ಸಮ್ಮುಖ ವಹಿಸಿದ್ದರು.

ಸ್ವಾಗತ ಸಮಿತಿ ಗೌರವಾಧ್ಯಕ್ಷರಾದ ನೆಲೋಗಿ ಶ್ರೀ ಸಿದ್ಧಲಿಂಗ ಮಹಾಸ್ವಾಮೀಜಿ, ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಕಾರ್ಯದರ್ಶಿ ಬಸವರಾಜ ದೇಶಮುಖ, ಶಾಸಕರಾದ ಅಲ್ಲಮಪ್ರಭು ಪಾಟೀಲ್, ಡಾ.ಬಿ.ಜಿ.ಪಾಟೀಲ್, ತಿಪ್ಪಣ್ಣಪ್ಪ ಕಮಕನೂರ, ಗ್ರಂಥಾಲಯ ನಿರ್ದೇಶಕ ಡಾ.ಸತೀಶಕುಮಾರ ಹೊಸಮನಿ, ಸುಭಾಷಚಂದ್ರ ಇಂಗಳೇಶ್ವರ, ಉದ್ಯಮಿ ಟಿ.ಸುರೇಶಗೌಡ, ಸರ್ಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷ ರಾಜು ಲೇಂಗಟಿ, ಮಾಜಿ ಎಂಎಲ್‌ಸಿ ಅಮರನಾಥ ಪಾಟೀಲ್, ವೀರಶೈವ ಮಹಾಸಭಾ ಜಿಲ್ಲಾಧ್ಯಕ್ಷ ಶರಣಕುಮಾರ ಮೋದಿ, ಶರಣಗೌಡ ಪಾಳಾ, ಶರಣಬಸವ ವಿವಿ ಡೀನ್ ಡಾ. ಲಕ್ಷ್ಮೀ ಪಾಟೀಲ್ ಮಾಕಾ, ಬಾಬು ಹೊನ್ನಾನಾಯಕ ಇತರರಿದ್ದರು.

ಜನ್ಮದಿನ ನಿಮಿತ್ತ ಡಾ.ಸಾರಂಗಧರ ದೇಶಿಕೇಂದ್ರ ಸ್ವಾಮೀಜಿ ಅವರನ್ನು ಮಠಾಧೀಶರು, ಗಣ್ಯರು, ಭಕ್ತರು ಸತ್ಕರಿಸಿದರು.

ನಾಡಿನ ಮಠ-ಮಾನ್ಯಗಳು ಅದ್ಭುತ ಕೊಡುಗೆ ನೀಡುತ್ತಿವೆ. ವಿಶೇಷವಾಗಿ ಶಿಕ್ಷಣದಲ್ಲಿ ಕ್ರಾಂತಿ ಮಾಡಿವೆ. ಸರ್ಕಾರ ಮಾಡಲು ಆಗದಂಥ ಕೆಲಸಗಳನ್ನು ಮಠಗಳು ಮಾಡಿವೆ. ಮಠಗಳು ಬೆಳೆದರೆ ಮನುಕುಲ ಉದ್ಧಾರ ಆಗಲಿದೆ.- ಶರಣಬಸಪ್ಪ ದರ್ಶನಾಪುರ, ಸಣ್ಣ ಕೈಗಾರಿಕೆ ಸಚಿವ

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here