ಮಹಿಳೆ ಮುಂದಾಳತ್ವದಲ್ಲಿ ವಿಶ್ವದ ಪ್ರಗತಿ ಸಾಧ್ಯ; ಮಹಾದೇವಿಯಕ್ಕಗಳ ಸಮ್ಮೇಳನ- 14 ಅದ್ದೂರಿ ತೆರೆ

0
53

ಕಲಬುರಗಿ: ವಿಶ್ವಕ್ಕೆ ಮೊಟ್ಟ ಮೊದಲ ಪ್ರಜಾತಂತ್ರವನ್ನು ಕೊಟ್ಟ ವಿಶ್ವಗುರು ಬಸವಣ್ಣನವರು, ಆಗಿನ ಕಾಲದಲ್ಲೇ ಮಹಿಳೆಯರಿಗೆ ಮುಕ್ತ ಸ್ವಾತಂತ್ರ್ಯ ಒದಗಿಸಿದ್ದರು ಎಂದು ಬೀದರ್ ಬಸವ ಸೇವಾ ಪ್ರತಿಷ್ಠಾನದ ಅಧ್ಯಕ್ಷೆ ಡಾ. ಗಂಗಾಂಬಿಕಾ ಪಾಟೀಲ ನುಡಿದರು.

ಡಾ.ಬಿ.ಡಿ. ಜತ್ತಿ ವಚನ ಅಧ್ಯಯನ ಮತ್ತು ಸಂಶೋಧನ ಕೇಂದ್ರ, ಕಲಬುರಗಿ ಬಸವ ಸಮಿತಿ ಸಹಯೋಗದಲ್ಲಿ ಜಯನಗರದ ಅನುಭವ ಮಂಟಪದಲ್ಲಿ ಭಾನುವಾರ ಜರುಗಿದ ಮಹಾದೇವಿಯಕ್ಕಗಳ ಸಮ್ಮೇಳನ- 14 ಸಮಾರೋಪ (ಮಂಗಲದ ಹರಹು) ಸಮಾರಂಭದಲ್ಲಿ ಡಾ. ಬಿ.ಡಿ. ಜತ್ತಿ ವೈರಾಗ್ಯ ನಿಧಿ ಅಕ್ಕ ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಅವರು, ಸ್ತ್ರೀ ಮುಂದಾಳತ್ವದ ಅಧ್ಯಾತ್ಮದ ಕ್ರಾಂತಿಗೆ ನಾಂದಿ ಹಾಕಿದ ಬಸವಾಲ್ಲಮರು ಹಾಗೂ ಅಕ್ಕಮಹಾದೇವಿಯವರು ಪರಿಪೂರ್ಣತೆಯ ಬದುಕನ್ನು ಕಟ್ಟಿಕೊಟ್ಟರು ಎಂದರು.

Contact Your\'s Advertisement; 9902492681

ಅಕ್ಕ ಅನುಭವಿಸುವ ಅನುಭೂತಿ ಬಹಳ ವಿಶಿಷ್ಟವಾದುದು. ಇವರಂತೆ ನೀಲಾಂಬಿಕೆ, ಅಕ್ಕಮ್ಮ, ಅಕ್ಕ ನಾಗಮ್ಮ, ಕಾಳವ್ವೆ, ಆಯ್ದಕ್ಕಿ ಲಕ್ಕಮ್ಮ ಮುಂತಾದ ಶರಣೆಯರು ಕೂಡ ಶರಣರ ಮೂಲ ಆದ್ಯಾತ್ಮಿಕ ಚೈತನ್ಯವಿಡಿದು ಬೆಳೆದವರು.

ಸ್ತ್ರೀ ಮುಂದಾಳತ್ವವಿರುವ ಅಧಿಕಾರವಿರುವ ಕಡೆ ಶ್ರೇಷ್ಠವಾದ ಪ್ರಗತಿ ಆಗುತ್ತಿದೆ ಎಂದು ಸರ್ಕಾರದ ಸರ್ವೇಕ್ಷಣಾ ವರದಿಗಳು ಈಗ ಹೇಳುತ್ತಿದೆ. ಆದರೆ ಇದನ್ನು 12ನೇ ಶತಮಾನದಲ್ಲಿ ಬಸವಣ್ಣನವರು ಜಾರಿಗೆ ತಂದಿದ್ದರು. ಅವರು ಸ್ಥಾಪಿಸಿದ ಅನುಭವ ಮಂಟಪದಲ್ಲಿ 33 ವಚನಕಾರ್ತಿಯರಿದ್ದರು ಎಂಬುದು ಗಮನಾರ್ಹ ಸಂಗತಿಯಾಗಿದೆ ಎಂದು ಹೇಳಿದರು.

ಇನ್ನು ಮುಂದೆ ಸ್ತ್ರೀ ಮುಂದಾಳತ್ವದಲ್ಲಿ ಪ್ರಪಂಚ ನಡೆಯುತ್ತದೆ. ಮನುಷ್ಯನ ಶಕ್ತಿ ಕೇಂದ್ರವೇ ಮಹಿಳೆ ಎಂಬುದನ್ನು ವಿಜ್ಞಾನ ಹೇಳುತ್ತಿರುವುದು ಮಹಿಳೆಯರಲ್ಲಿನ ಅದಮ್ಯ ಶಕ್ತಿಯನ್ನು ತೋರಿಸಿಕೊಡುತ್ತದೆ ಎಂದರು.

ಸಮ್ಮೇಳನಾಧ್ಯಕ್ಷೆ ಡಾ. ಶಾಂತಲಾ ನಿಷ್ಠಿ, ಬಸವ ಸಮಿತಿ ಅಧ್ಯಕ್ಷೆ ವಿಲಾಸವತಿ ಖೂಬಾ, ಸಮ್ಮೇಳನದ ಸಂಚಾಲಕಿ ಡಾ. ಜಯಶ್ರೀ ದಂಡೆ, ಸ್ವಾಗತ ಸಮಿತಿ ಗೌರವಾಧ್ಯಕ್ಷೆ ಶರಣಮ್ಮ ಕಲಬುರ್ಗಿ, ಕಾರ್ಯದರ್ಶಿ ಅನಸೂಯಾ ನಡಕಟ್ಟಿ ವೇದಿಕೆಯಲ್ಲಿದ್ದರು.

ಸಂಗೀತ ಕ್ಷೇತ್ರದಲ್ಲಿ ಸಾಧನೆ ಮಾಡಿದ ಡಾ.‌ಛಾಯಾ ಭರತನೂರ, ಡಾ.‌ಕಲಾವತಿ ದೊರೆ, ಡಾ.‌ರೇಣುಕಾ ಹಾಗರಗುಂಡಗಿ, ಅಶ್ವಿನಿ ಚಿಟ್ಟಾ, ಡಾ. ಸೀಮಾ ಪಾಟೀಲ ಅವರಿಗೆ ಗೌರವ ಸನ್ಮಾನ ಮಾಡಲಾಯಿತು.

ಡಾ.‌ನಿವೇದಿತಾ ಸ್ವಾಮಿ ನಿರೂಪಿಸಿದರು. ಜಯಶ್ರೀ ಕೋಣಿನ್ ವಂದಿಸಿದರು.

ಮಹಿಳೆಯರಿಗಾಗಿ, ಮಹಿಳೆಯರು ಕೂಡಿ ಮಾಡಿದ ಮಹತ್ವದ ಸಮ್ಮೇಳನವಿದು. ಇಲ್ಲಿ ಎರಡು ದಿನಗಳ ಕಾಲ ಮಹಿಳೆಯರೆ ನಿರೂಪಣೆ, ಸ್ವಾಗತ, ಉಪನ್ಯಾಸ, ವಚನ ನೃತ್ಯ, ವಚನ ಉಗ್ಘಡಣೆ, ಹೆಜ್ಜೆ ಕುಣಿತ ಮುಂತಾದ ಸಾಹಿತ್ಯಕ, ಸಾಂಸ್ಕೃತಿಕ ಕಾರ್ಯಕ್ರಮ ನಡೆಸಿಕೊಟ್ಟಿರುವುದು ಬಹಳ ವಿಶೇಷವಾಗಿತ್ತು. -ಡಾ. ಜಯಶ್ರೀ ದಂಡೆ, ಕಲಬುರಗಿ

ಬಸವ ಬೆಳಕು ಪಸರಿಸಿದ ಬಿ.ಡಿ.‌ಜತ್ತಿ; 12ನೇ ಶತಮಾನದ ವಚನ ಬೆಳಕು ಕ್ರಮೇಣ ಕಡಿಮೆಯಾಗುತ್ತಿದ್ದಾಗ ವಿಶ್ವಗುರು ಬಸವಣ್ಣನವರ ಅಷ್ಟ ಶತಮಾನವೋತ್ಸವ ಆಚರಿಸುವ ಮೂಲಕ ಬಸವ ಬೆಳಕನ್ನು ನಾಡಿನೆಲ್ಲೆಡೆ ಪಸರಿಸಿದ ಕೀರ್ತಿ ಬಸವ ಸಮಿತಿ ಸಂಸ್ಥಾಪಕ ಡಾ. ಬಿ.ಡಿ.‌ಜತ್ತಿಯವರಿಗೆ ಸಲ್ಲುತ್ತದೆ ಎಂದು ಡಾ. ಗಂಗಾಬಿಕಾ ಪಾಟೀಲ ತಿಳಿಸಿದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here