ಬಸವಕಲ್ಯಾಣ್: ಬಸವ ಮಹಾಮನೆ ಆವರಣದಲ್ಲಿ ನಡೆದ ೧೮ನೇ ಕಲ್ಯಾಣ ಪರ್ವದ ನಿಮಿತ್ತ ಜಗದ್ಗುರು ಮಾತೆ ಗಂಗಾದೇವಿ ನೇತೃತ್ವದಲ್ಲಿ ಭಾನುವಾರ ನಗರದ ಐತಿಹಾಸಿಕ ಪರುಷ ಕಟ್ಟೆಯಲ್ಲಿ ವಿಶೇಷ ಪೂಜೆ ಸಲ್ಲಿಸಿ, ಜ್ಯೋತಿ ಹೊತ್ತಿಸಿಕೊಂಡು ಬಸವ ಮಹಾಮನೆಗೆ ಬರಲಾಯಿತು.
ಪರುಷ ಕಟ್ಟೆಯಲ್ಲಿ ಕೂಡಲ ಸಂಗಮದ ಬಸವ ಧರ್ಮ ಪೀಠದ ಪೀಠಾಧ್ಯಕ್ಷೆ ಜಗದ್ಗುರು ಮಾತೆ ಗಂಗಾದೇವಿ ಅವರು ಮಾತನಾಡಿ, ಐತಿಹಾಸಿಕ ಪವಿತ್ರ ಸ್ಥಳವಾದ ಪರಷುಕಟ್ಟೆಯಲ್ಲಿ ಯಾವುದೇ ಸಂಕಲ್ಪ ಮಾಡಿಕೊಂಡರೂ ಈಡೇರುತ್ತದೆ. ಲಿಂಗಾಯತ ಧರ್ಮಕ್ಕೆ ಸ್ವತಂತ್ರ ಧರ್ಮದ ಮಾನ್ಯತೆ ಸಿಗಬೇಕು. ಬಸವ ತತ್ವ ವಿಶ್ವವ್ಯಾಪ್ತಿಯಾಗಿ ಪ್ರಸಾರಗೊಳ್ಳಬೇಕು. ವಿಶ್ವದ ಎಲ್ಲ ಕಡೆಗಳಿಂದಲೂ ಜನ ಕಲ್ಯಾಣದ ಕಡೆಗೆ ಬರುವಂತಾಗಬೇಕು ಎಂದರು.
ಈಗಾಗಲೇ ಶರಣರ ನಾಡಾದ ಬಸವಕಲ್ಯಾಣದಲ್ಲಿ ಲಿಂ. ಡಾ. ಮಾತೆ ಮಹಾದೇವಿ ಅವರು ೧೦೮ ಬಸವ ಪುತ್ಥಳಿ ನಿರ್ಮಿಸಿ ಮಹಾನ ಕಾರ್ಯ ಮಾಡಿದ್ದಾರೆ. ಮತ್ತು ಬೆಂಗಳೂರಿನಲ್ಲಿ ೧೧೧ ಅಡಿಯ ಬಸವ ಪುತ್ಥಳಿ ನಿರ್ಮಿಸಲಾಗುತ್ತಿದೆ. ಆದಷ್ಟು ಬೇಗ ಈ ಕಾರ್ಯ ಮುಗಿಸಲು ಭಗವಂತನು ಶಕ್ತಿ ನೀಡಲಿ ವಿಶ್ವದ ಜನರು ಈ ಪುತ್ಥಳಿಗಳು ನೋಡಲು ಆಗಮಿಸುವಂತಾಗಬೇಕು ಎಂದು ತಿಳಿಸಿದ ಅವರು, ಲಿಂಗಾಯತ ಧರ್ಮಕ್ಕೆ ಸ್ವತಂತ್ರ ಧರ್ಮದ ಮಾನ್ಯತೆ ಸಿಗಬೇಕು ಎಂದು ಈಗಾಗಲೇ ಅನೇಕರ‍್ಯಾಲಿಗಳು ಜರುಗಿವೆ. ಆದಷ್ಟು ಬೇಗ ಮಾನ್ಯತೆ ಸಿಗಲಿ ಎಂದು ಎಲ್ಲರೂ ಸಂಕಲ್ಪ ಮಾಡಿಕೊಳ್ಳಬೇಕು ಎಂದು ಅವರು ತಿಳಿಸಿದರು.
ಈ ಸಂದರ್ಭದಲ್ಲಿ ಶ್ರೀ ಜಗದ್ಗುರು ಚನ್ನಬಸವಾನಂದ್ ಸ್ವಾಮಿಜಿ, ಜಗದ್ಗುರು ಬಸವಕುಮಾರ್ ಸ್ವಾಮೀಜಿ, ಬಸವಪ್ರಭು ಸ್ವಾಮಿ, ಮಾತೆ ಸತ್ಯಾದೇವಿ, ಬಸವರಾಜ್ ಧನ್ನೂರ್ ಸೇರಿದಂತೆ ನೂರಾರು ಬಸವ ಭಕ್ತರು ಭಾಗವಹಿಸಿದ್ದರು.