ಕಲಬುರಗಿ: ದೇವದಾಸಿ ಮಹಿಳೆಯರ ಮಾಸಿಕ ಪಿಂಚಣಿ ಬಾಕಿ ಬಿಡುಗಡೆ ಸೇರಿದಂತೆ ವಿವಿಧ ಬೇಡಿಕೆಗಳನ್ನು ಮುಂದಿಟ್ಟುಕೊಂಡು ಗುರುವಾರ ದಲಿತ ಹಕ್ಕುಗಳ ಸಮಿತಿ ಕರ್ನಾಟಕ, ದೇವದಾಸಿ ಮಹಿಳಾ ವಿಮೋಚನಾ ಸಂಘ, ಕರ್ನಾಟಕ ರಾಜ್ಯ ಮಸಣ ಕಾರ್ಮಿಕರ ಸಂಘದ ನೇತೃತ್ವದಲ್ಲಿ ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ಪ್ರತಿಭಟನಾ ಪ್ರದರ್ಶನ ಮಾಡಿದರು.
ಸಂಘಟನೆಯ ರಾಜ್ಯ ಸಂಚಾಲಕ ಯು. ಬಸವರಾಜ್ ಅವರ ನೇತೃತ್ವದಲ್ಲಿ ನಡೆದ ಪ್ರತಿಭಟನೆಯಲ್ಲಿ ದಲಿತ ಹಕ್ಕುಗಳ ಸಮಿತಿ ಜಿಲ್ಲಾಧ್ಯಕ್ಷ ಸುಧಾಮ್ ಧನ್ನಿ, ಜಿಲ್ಲಾ ಕಾರ್ಯದರ್ಶಿ ಪಾಂಡುರಂಗ್ ಮಾವಿನಕರ್, ದೇವದಾಸಿ ವಿಮೋಚನಾ ಸಂಘದ ಜಿಲ್ಲಾಧ್ಯಕ್ಷೆ ಚಂದಮ್ಮ ಗೋಳಾ, ಕಾರ್ಯದರ್ಶಿ ಸುಗಂಧಾ ಪಿ. ಮಾವಿನಕರ್, ಪೀರಪ್ಪ ಬಿ. ಮಾದರ್, ಎಸ್.ಬಿ. ಅದ್ವಾನಿ, ಸಿದ್ಧರಾಮ್ ಹರವಾಳ್, ಜಗದೇವಿ ನೂಲಕರ್, ಶಾಂತಕುಮಾರ್ ಗುಡುಬಾ, ಗಿಡ್ಡಮ್ಮಾ ಪವಾರ್, ಕೆ. ನೀಲಾ, ಶರಣಬಸಪ್ಪ ಮಮಶೆಟ್ಟಿ, ಎಂ.ಬಿ. ಸಜ್ಜನ್ ಮುಂತಾದವರು ಪಾಲ್ಗೊಂಡಿದ್ದರು.
ಪ್ರತಿಭಟನೆಕಾರರು ನಂತರ ಜಿಲ್ಲಾಧಿಕಾರಿಗಳ ಮೂಲಕ ರಾಜ್ಯದ ಮುಖ್ಯಮಂತ್ರಿ ಸಿದ್ಧರಾಮಯ್ಯ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಅವರಿಗೆ ಮನವಿ ಪತ್ರ ಸಲ್ಲಿಸಿ, ಬಿಟ್ಟು ಹೋದ ದೇವದಾಸಿ ಮಹಿಳೆಯರ ಮತ್ತು ಅವರ ಪತಿ ಬಿಟ್ಟು ಹೋದ ಹೆಣ್ಣು ಮಕ್ಕಳು ಸೇರಿದಂತೆ ಕುಟುಂಬದ ಎಲ್ಲ ಸದಸ್ಯರ ಗಣತಿಯನ್ನು ಕೂಡಲೇ ಆರಂಭಿಸುವಂತೆ, ಅವರಿಗೆ ಪುನರ್ ವಸತಿ ಕಲ್ಪಿಸುವಂತೆ ಒತ್ತಾಯಿಸಿದರು.
ಮಸಣ ಕಾರ್ಮಿಕರನ್ನು ಗಣತಿ ಮಾಡಿ 45 ವರ್ಷ ಮೇಲ್ಪಟ್ಟವರಿಗೆ ಮಾಸಿಕ 3000ರೂ.ಗಳ ಪಿಂಚಣಿ ಯೋಜನೆ ಜಾರಿಗೊಳಿಸುವಂತೆ, ಪ್ರತಿ ಕುಣಿ ಅಗೆದು ಮುಚ್ಚುವ ಕೆಲಸವನ್ನು ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆಯಡಿ ಸೇರಿಸಿ ಕನಿಷ್ಠ 3000ರೂ.ಗಳನ್ನು ಒದಗಿಸುವಂತೆ, ಸುರಕ್ಷತಾ ಕ್ರಮಗಳನ್ನು ಕೈಗೊಳ್ಳುವಂತೆ, ದಲಿತ ವಿದ್ಯಾವಂತ ನಿರುದ್ಯೋಗ ಯುವಕ, ಯುವತಿಯರಿಗೆ ಮಾಸಿಕ ಹತ್ತು ಸಾವಿರ ರೂ.ಗಳ ನಿರುದ್ಯೋಗ ಭತ್ಯೆ ಒದಗಿಸುವಂತೆ ಅವರು ಆಗ್ರಹಿಸಿದರು.
ದಲಿತ ಮಹಿಳೆಯರ ಸ್ವಾವಲಂಬಿ ಬದುಕಿಗಾಗಿ 75ರಷ್ಟು ಸಹಾಯಧನದ ಬಡ್ಡಿ ರಹಿತ ಹತ್ತು ಲಕ್ಷ ರೂ.ಗಳ ಸರ್ಕಾರದ ಗ್ಯಾರಂಟಿ ಸಾಲ ಕೊಡುವಂತೆ, ಬೇಸಾಯ ಮಾಡಲು ಬಯಸುವ ಎಲ್ಲ ದಲಿತ ಕುಟುಂಬಗಳಿಗೆ ತಲಾ ಐದು ಎಕರೆ ಜಮೀನನ್ನು ಭೂಸ್ವಾಧೀನದ ಮೂಲಕ ಒದಗಿಸುವಂತೆ, ಕೇಂದ್ರ ಸರ್ಕಾರ ದಲಿತ ಜನ ಸಮುದಾಯಗಳ ಸಂಖ್ಯೆಗೆ ಅನುಗುಣವಾಗಿ ಅನುದಾನ ಒದಗಿಸುವ ಪರಿಶಿಷ್ಟ ಜಾತಿ ಮತ್ತು ಪಂಗಡಗಳ ಉಪಯೋಜನೆ ಕಾಯ್ದೆ ಜಾರಿಗೊಳಿಸುವಂತೆ, ಪರಿಶಿಷ್ಟರ ಮೇಲಿನ ದೌರ್ಜನ್ಯ ಕಾಯ್ದೆ ಬಲಪಡಿಸುವಂತೆ ಅವರು ಒತ್ತಾಯಿಸಿದರು.
ದಲಿತ ಕುಟುಂಬಗಳ ಗಣತಿ ಮಾಡಿ ಹಿರಿತನ ಮತ್ತು ಕಡುಬಡತನದ ಆಧಾರದಲ್ಲಿ ಒಂದೆಡೆಯಿಂದ ಎಲ್ಲ ಕುಟುಂಬಗಳಿಗೆ ಪುನರ್ವಸತಿ ಕಲ್ಪಿಸಲು ಕ್ರಮ ವಹಿಸುವಂತೆ, ಪ್ರತಿ ವರ್ಷವೂ ಅರ್ಜಿ ಆಹ್ವಾನಿಸಿ ಫಲಾನುಭವಿಗಳನ್ನು ಆಯ್ಕೆ ಮಾಡುವುದನ್ನು ನಿಲ್ಲಿಸುವಂತೆ, ಎಸ್‍ಸಿಪಿ, ಟಿಎಸ್‍ಪಿ ಉಪ ಯೋಜನೆ ಸಮರ್ಪಕ ಜಾರಿಗಾಗಿ ಇಲಾಖಾವಾರು ಪುನರ್ ಯೋಜನೆಗಳನ್ನು ರೂಪಿಸಿ ವಿಜಿಲೆನ್ಸ್‍ನ್ನು ಸ್ಥಾಪಿಸುವಂತೆ, ದಲಿತ ಯುವಜನರು ಸ್ವಯಂ ಉದ್ಯೋಗಕ್ಕಾಗಿ ಬಡ್ಡಿ ಮತ್ತು ಜಾಮೀನುರಹಿತ 25 ಲಕ್ಷ ರೂ.ಗಳ ಸಾಲ ನೀಡುವಂತೆ ಅವರು ಆಗ್ರಹಿಸಿದರು.