ಗ್ರಾಮೀಣ ಪತ್ರಕರ್ತರ ಬಸ್ ಪಾಸ್ ಘೋಷಣೆಯಲ್ಲಿ ಗೊಂದಲ

0
91

ವಾಡಿ: ಗ್ರಾಮೀಣ ಪತ್ರಕರ್ತರಿಗೆ ಉಚಿತ ಬಸ್ ಪಾಸ್ ನೀಡಬೇಕು ಎಂಬ ಬಹು ವರ್ಷಗಳ ಬೇಡಿಕೆಗೆ ಸ್ಪಂದಿಸಿ ಆದೇಶ ಹೊರಡಿಸಿರುವ ಸರ್ಕಾರ, ಮಾನದಂಡಗಳ ಹೆಸರಿನಲ್ಲಿ ಅನಗತ್ಯ ಗೊಂದಲಗಳನ್ನು ಸೃಷ್ಟಿಸಿ ಗ್ರಾಮೀಣ ಪತ್ರಕರ್ತರನ್ನೇ ಅವಮಾನಿಸಿದೆ ಎಂದು ಚಿತ್ತಾಪುರ ತಾಲೂಕು ಪತ್ರಕರ್ತರ ಸಂಘದ ಮಾಜಿ ಕಾರ್ಯದರ್ಶಿ ಮಡಿವಾಳಪ್ಪ ಹೇರೂರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು ಸರ್ಕಾರದ ಅವೈಜ್ಞಾನಿಕ ಮಾನದಂಡಗಳನ್ನು ಪ್ರಶ್ನಿಸಿದ್ದಾರೆ. ಸಿಎಂ ಸಿದ್ದರಾಮಯ್ಯ ನೇತೃತ್ವದ ರಾಜ್ಯ ಸರ್ಕಾರ ಬಜೆಟ್ ನಲ್ಲಿ ಗ್ರಾಮೀಣ ಪತ್ರಕರ್ತರಿಗೆ ಉಚಿತ ಬಸ್ ಪಾಸ್ ನೀಡುವುದಾಗಿ ಪ್ರಕಟಿಸಿತ್ತು. ಅದರಂತೆ ಈಗ ಉಚಿತ ಬಸ್ ಪಾಸ್ ಪಡೆಯಲು ಅರ್ಜಿ ಕರೆದು ಗ್ರಾಮೀಣ ಪತ್ರಕರ್ತರನ್ನು ಯೋಜನೆಯಿಂದ ಹೊರಗುಳಿಯುವ ಮಾನದಂಡ ಪ್ರಕಟಿಸಿ ವಂಚಿಸಿದೆ. ಪತ್ರಿಕೆಯಲ್ಲಿ ಕನಿಷ್ಠ ನಾಲ್ಕು ವರ್ಷಗಳ ಕಾಲ ಪೂರ್ಣಾವದಿ ಪತ್ರಕರ್ತರಾಗಿ ಸೇವೆ ಸಲ್ಲಿಸಿರಬೇಕು ಎಂದು ತಿಳಿಸಿದೆ.

Contact Your\'s Advertisement; 9902492681

ಸೇವಾವಧಿ ಸಮಂಜಸವಾಗಿದೆ. ಆದರೆ ಪೂರ್ಣಾವಧಿ ಎಂಬ ಪದವೇ ಅಸಮರ್ಪಕವಾಗಿದೆ. ಈ ಮಾನದಂಡವೇ ರಾಜ್ಯದ ಎಲ್ಲಾ ಗ್ರಾಮೀಣ ಪತ್ರಕರ್ತರನ್ನು ಉಚಿತ ಬಸ್ ಪಾಸ್ ಸೌಲಭ್ಯದಿಂದ ಹೊರಗುಳಿಯುವಂತೆ ಮಾಡಿದೆ ಎಂದು ದೂರಿದ್ದಾರೆ.

ರಾಜ್ಯ ಮಟ್ಟದ ಮತ್ತು ಸ್ಥಳೀಯ ದಿನಪತ್ರಿಕೆಗಳಿಗೆ ಗ್ರಾಮೀಣ ಸುದ್ದಿಗಳೇ ಜೀವಾಳ ಎಂಬುದು ವಾಸ್ತವ ಸತ್ಯ. ಸುದ್ದಿ ಪತ್ರಿಕೆಗಳಲ್ಲಿ ಗ್ರಾಮೀಣ ಸಮಸ್ಯೆಗಳು ಬಿತ್ತರಗೊಳ್ಳಲು ಗ್ರಾಮೀಣ ಪತ್ರಕರ್ತರು ಪ್ರಮುಖ ಪಾತ್ರ ವಹಿಸುತ್ತಾರೆ. ಅಲ್ಲದೆ ಈ ಗ್ರಾಮೀಣ ಪತ್ರಕರ್ತರು ಅರೆಕಾಲಿಕ ವರದಿಗಾರರಾಗಿ ಮತ್ತು ಗೌರವ ಧನದಲ್ಲಿ ಸೇವೆ ಸಲ್ಲಿತ್ತಿದ್ದಾರೆ.

ಇವರಿಗೆ ಮಾಸಿಕ ವೇತನ ಎಂಬುದು ಇರುವುದಿಲ್ಲ. ಅಲ್ಪಾವಧಿ ವರದಿಗಾರರಾಗಿ ಸೇವೆ ಸಲ್ಲಿಸುವವರನ್ನೇ ಗ್ರಾಮೀಣ ಪತ್ರಕರ್ತರು ಎಂದು ಗುರುತಿಸಲಾಗಿದೆ. ಅಲ್ಲದೆ ಪೂರ್ಣಾವಧಿ ಪತ್ರಕರ್ತರಿಗೆ ಈಗಾಗಲೇ ಉಚಿತ ಬಸ್ ಪಾಸ್ ಯೋಜನೆ ಜಾರಿಯಲ್ಲಿದೆ ಎಂಬುದು ಸರ್ಕಾರ ಮತ್ತು ಸಾರಿಗೆ ಸಂಸ್ಥೆ ಅರ್ಥ ಮಾಡಿಕೊಳ್ಳಬೇಕು. ಗ್ರಾಮೀಣ ಪತ್ರಕರ್ತರ ಬಗ್ಗೆ ಸರಿಯಾಗಿ ತಿಳಿದುಕೊಳ್ಳದೆ ಅವಸರದಲ್ಲಿ ಮಾನದಂಡಗಳನ್ನು ವಿಧಿಸಿ ಮೂಗಿಗೆ ತುಪ್ಪ ಸವರುವ ಕೆಲಸ ಮಾಡಬಾರದು. ಕೂಡಲೇ ಸರ್ಕಾರ ವಿಧಿಸಿರುವ ಪೂರ್ಣಾವಧಿ ಮಾನದಂಡವನ್ನು ತೆಗೆದು ಅಲ್ಪಾವಧಿ ಪತ್ರಕರ್ತರು ಎಂದು ಬದಲಿಸಬೇಕು.

ತಾಲೂಕು ಮತ್ತು ಹೋಬಳಿ ಮಟ್ಟದಲ್ಲಿ ಕಾರ್ಯ ನಿರ್ವಹಿಸುವ ರಾಜ್ಯ ಮಟ್ಟದ ಪತ್ರಿಕೆಗಳ ಪತ್ರಕರ್ತರನ್ನೂ ಪರಿಗಣಿಸಬೇಕು. ಆ ಮೂಲಕ ನಿಜವಾದ ಗ್ರಾಮೀಣ ಪತ್ರಕರ್ತರಿಗೆ ಉಚಿತ ಬಸ್ ಪಾಸ್ ಸೌಲಭ್ಯ ಒದಗಿಸಬೇಕು ಎಂದು ಮಡಿವಾಳಪ್ಪ ಹೇರೂರ ಒತ್ತಾಯಿಸಿದ್ದಾರೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here