ಬಾಪು
ಹಸಿದ ಹೊಟ್ಟೆ, ಹರಕು ಬಟ್ಟೆ
ಕಂಡು ತುಂಬುಡಿಗೆ ಬಿಟ್ಟಿರಿ,
ಒಂದೂಟ ತ್ಯಜಿಸಿದಿರಿ;
ನಾವು ಬಡವನ ದೋಚಿ ತಿಜೋರಿ
ತುಂಬುವುದ ಬಿಟ್ಟಿಲ್ಲ !
ದೀನ- ದುರ್ಬಲರುದ್ಧಾರಕ್ಕಾಗಿ
ನಿದ್ದೆಗೆಟ್ಟಿರಿ ನೀವಂದು ;
ಜಾತಿ ಗಲಭೆಗಳ ನೋಡುತ್ತ,
ನಿದ್ದೆಗೆಡುತ್ತಿದ್ದೇವೆ ನಾವಿಂದು !
ಚರಕದ ಚಕ್ರ ತಿರುಗಿಸುತ್ತ
ಸ್ವಾವಲಂಬಿಯಾಗೆಂದಿರಲ್ಲ ;
ಕಾಲಚಕ್ರ ಉರುಳುತ್ತಲಿದೆ
ನಿಮ್ಮ ತತ್ವಗಳು ಮಾಸಿವೆಯೇ ಬಾಪು?
ಈಶ್ವರ ಅಲ್ಲಾಹ ತೇರೆ ನಾಮ
ಸಬ್ ಕೋ ಸನ್ಮತಿ ದೇ ಭಗವಾನ
ಎಂದು ಜಪಿಸಿದಿರಿ,
ಅವರ ಹೆಸರಿನ ಬಲದಲ್ಲಿ
ಅವರನ್ನೇ ಪಣಕ್ಕಿಟ್ಟೇದ್ದೇವೆ !
ಹಳ್ಳಿಯ ಉದ್ಧಾರವೇ ದೇಶೋದ್ಧಾರ
ಎಂಬ ಕನಸು ಕಂಡಿರಿ;
ಕೂಲಿಯನ್ನರಿಸಿ ಜನ ಗುಳೆ
ಹೋಗುವುದಂತೂ ಬಿಟ್ಟಿಲ್ಲ !
ನಿಮ್ಮ ಅಹಿಂಸಾ ಮಂತ್ರ
ಪಾಲಿಸುತ್ತಿದ್ದೇವೆ ಇಂದಿಗೂ ;
ದುಶ್ಚಟಗಳು ದೂರವಾಗಿಲ್ಲ,
ಶೋಷಿತರ ಕಂಬನಿ ಕಮರಿಲ್ಲ !
ರಾಮರಾಜ್ಯದ ಕನಸು
ನನಸು ಮಾಡಿದ್ದೇವೆ ;
ನಿರ್ಭಯಾ ನಿರ್ಭಯಳಾಗಿ
ನಿದ್ರಿಸುತ್ತಿದ್ದಾಳೆ ನೋಡಿ !
ವರ್ಷಕ್ಕೊಮ್ಮೆ ನಿಮ್ಮನ್ನು ಆರಾಧಿಸುತ್ತಿದ್ದೇವಷ್ಟೇ ,
ನಿಮ್ಮಾದರ್ಶಗಳನ್ನೇ ಗಾಳಿಗೆ
ತೂರಿದ್ದೇವೆ ರಾಷ್ಟ್ರಪಿತ !
ಗಲ್ಲಿಯಿಂದ ದಿಲ್ಲಿವರೆಗೆ
ಎತ್ತರದ ಪ್ರತಿಮೆ ಪ್ರತಿಷ್ಠಾಪಿಸಿದ್ದೇವೆ ;
ಅದೆಷ್ಟು ಶಾಂತಚಿತ್ತರಾಗಿ
ದಾರಿ ಬಿಟ್ಟ ನಿಮ್ಮ ಮಕ್ಕಳನು
ನೋಡುತ್ತ ನಿಂತಿರುವಿರಿ !
ಇನ್ನೂ ಏನು ಹೇಳಲಿ ಬಾಪು
ಬೇಜಾರಾಗದಿರಿ, ನೊಂದುಕೊಳ್ಳದಿರಿ !
-ಉಷಾ ಗೊಬ್ಬೂರ
ಕಲಬುರಗಿ