ಸುರಪುರ: ಹುಣಸಿಹೊಳೆಯಲ್ಲಿರುವ ಕಣ್ವಾ ಮೂಲ ಸಂಸ್ಥಾನ ಮಠವು ದೇಶದಲ್ಲಿಯೇ ತನ್ನದೆ ಆದ ಘನತೆ ಹಾಗು ಪರಂಪರೆಯನ್ನು ಹೊಂದಿದ ಮಠವಾಗಿದೆ.ಇದನ್ನು ೧೭೯೬ರಲ್ಲಿ ಸಂಸ್ಥಾನದ ಅರಸು ರಾಜಾ ಇಮ್ಮಡಿ ವೆಂಕಟಪ್ಪ ನಾಯಕರು ಸ್ಥಾಪಿಸಿದ್ದರು.
ಇದುವರೆಗು ಮಠವು ಯಾವುದೆ ಕಳಂಕ ಬರದಂತೆ ನಡೆದುಕೊಂಡು ಬಂದಿದೆ.ಆದರೆ ಕಳೆದ ತಿಂಗಳಲ್ಲಿ ವಿದ್ಯಾವಾರಿದಿ ತೀರ್ಥರಿಂದ ನಡೆದ ಒಂದು ಘಟನೆಯಿಂದಾಗಿ ಹುಣಸಿಹೊಳೆಯ ಕಣ್ವಾ ಮೂಲ ಸಂಸ್ಥಾನ ಮಠಕ್ಕೆ ನೂತನ ಪೀಠಾಧಿಪತಿಗಳನ್ನು ನೇಮಕ ಮಾಡಲು ಎಲ್ಲಾ ಮಠದ ಭಕ್ತರು ಹಾಗು ಇತರೆ ಮಠದ ಸಂಸ್ಥೆಗಳವರು ಸಂಸ್ಥಾನಕ್ಕೆ ಮನವಿ ಮಾಡಿಕೊಂಡಿದ್ದರಿಂದ ಕಳೆದ ತಿಂಗಳು ೨೦ ರಂದು ಸಭೆ ನಡೆಸಿ ನುತನ ಪೀಠಾಧಿಪತಿಗಳ ನೇಮಕಕ್ಕೆ ಹೆಸರುಗಳ ಸೂಚಿಸುವಂತೆ ತಿಳಿಸಲಾಗಿತ್ತು.
ಅದರಂತೆ ರವೀಂದ್ರಚಾರ್ಯ ಜೋಷಿ,ರಾಮಾಚಾರಿ ಜೋಷಿ,ರಾಮಮೂರ್ತಿ ಜೋಷಿ ಹಾಗು ಗಂಗಾಧರ ಜೋಷಿ ಇವರುಗಳ ಹೆಸರುಗಳನ್ನು ಹೆಸರಿಸಲಾಗಿತ್ತು.ನಂತರದಲ್ಲಿ ಎಲ್ಲರ ಪಾಂಡಿತ್ಯ ಹಾಗು ಇದು ವರೆಗಿನ ಸೇವೆಯನ್ನು ಪರಿಗಣಿಸಿ ಎಲ್ಲರ ಅಭಿಪ್ರಾಯದ ಮೇರೆಗೆ ನೂತನ ಪೀಠಾಧಿಪತಿಗಳನ್ನಾಗಿ ರವೀಂದ್ರಚಾರ್ಯ ಜೋಷಿಯವರನ್ನು ನೂತನ ಪೀಠಾಧಿಪತಿಗಳನ್ನಾಗಿ ನೇಮಿಸುವಂತೆ ಸೂಚಿಸಲಾಗಿದೆ ಎಂದು ಸಂಸ್ಥಾನದ ರಾಜಾ ಕೃಷ್ಣಪ್ಪ ನಾಯಕ ತಿಳಿಸಿದರು.
ಸಂಸ್ಥಾನದ ದರಬಾರದಲ್ಲಿ ಸುದ್ದಿಗೋಷ್ಠಿ ನಡೆಸಿ ರವೀಂದ್ರಚಾರ್ಯರ ಹೆಸರನ್ನು ಘೋಷಣೆ ಮಾಡಿದರು.ನೂತನ ಪೀಠಾಧಿಪತಿಗಳಾಗಲಿರುವ ರವೀಂದ್ರಚಾರ್ಯರಿಗೆ ದಿನಾಂಕ ೧೭ ರಂದು ಬೆಳಿಗ್ಗೆ ೦೯ ಗಂಟೆಗೆ ಹಿಂದಿನ ಶ್ರೀಗಳಾದ ವಿದ್ಯಾವಾರಿಧಿ ತೀರ್ಥರು ಉತ್ತರಾಧಿಕಾರಿಗಳಾದ ರವೀಂದ್ರಚಾರ್ಯ ಜೋಷಿಯವರಿಗೆ ಕಾಯಿ ನೀಡಿ,ದೀಕ್ಷಾ ನೀಡುವ ಮೂಲಕ ನೂತನ ಶ್ರೀಗಳ ನೇಮಕಕ್ಕೆ ಚಾಲನೆ ನೀಡಲಿದ್ದಾರೆ.೧೮ ನೇ ತಾರೀಖು ಶುಕ್ರವಾರ ನೂತನ ಶ್ರೀಗಳ ಪಟ್ಟಾಧಿಕಾರ ಕಾರ್ಯಕ್ರಮ ಕಣ್ವಾ ಮಠದಲ್ಲಿ ನಡೆಯಲಿದೆ ಎಂದು ತಿಳಿಸಿದರು.ಈ ಸಂದರ್ಭದಲ್ಲಿ ಸಂಸ್ಥಾನದ ರಾಜಾ ಲಕ್ಷ್ಮೀನಾರಾಯಣ ನಾಯಕ,ರಾಜಾ ರಂಗಪ್ಪ ನಾಯಕ ಸುಂಡಿ ಸಂಸ್ಥಾನ,ಗಣೇಶ ಜಹಾಗಿರದಾರ,ಕೇದಾರನಾಥ ಶಾಸ್ತ್ರಿ,ಸುನೀಲ ಸರಪಟ್ಟಣಶೆಟ್ಟಿ,ವಾಸುದೇವ ನಾಯಕ ಇತರರಿದ್ದರು.
ನೂತನ ಪೀಠಾಧಿಪತಿಗಳಾಗಲಿರುವ ರವೀಂದ್ರಾಚಾರ್ಯ ಜೋಷಿಯವರು ೧೪-೦೩-೧೯೫೭ ರಂದು ವಿಜಯಪುರ ಜಿಲ್ಲೆಯ ಹುನಗುಂದ ತಾಲ್ಲೂಕಿನ ಇಲ್ಲಕಲ್ಲ ನಲ್ಲಿ ಜನಸಿದ್ದು,ತಂದೆ ಹೆಚ್.ನರಸಿಂಹಚಾರ್ಯ ಜೋಷಿ,ತಾಯಿ ಬಕುಲಬಾಯಿ ಜೋಷಿ,೪ಜನ ಸಹೋದರರು,೩ ಜನ ಸಹೋದರಿಯರಿದ್ದಾರೆ.ಪತ್ನಿ ಹಾಗು ಉಲ್ಲಾಸ ಜೋಷಿ ಒಬ್ಬ ಪುತ್ರರಿದ್ದಾರೆ.ಶುಕ್ಲ ಯಜುರ್ವೇದ,ಬೃಹದಕಾರುಣ್ಯೋಪನಿಷತ್,ಶ್ರೀ ಯಾಜ್ಞವಲ್ಕ್ಯ ಸ್ಮೃತಿ,ಶತಪಥ ಬ್ರಾಹ್ಮಣ,ಅಧ್ಯಾಯನ ಮಾಡಿದ್ದು ವೇದಾಂತ ತರ್ಕಶಾಸ್ತ್ರ ಬಲ್ಲವರಾಗಿದ್ದಾರೆ. ೪ ವರ್ಷ ಯಾಜ್ಞವಲ್ಕ್ಯ ಆಶ್ರಮ ಚಿಂತಾಮಣಿಯಲ್ಲಿ, ೩ ವರ್ಷ ಬೆಂಗಳೂರಿನ ಪುತ್ತಿಗೆ ಮಠದಲ್ಲಿ ಹಾಗು ೨೫ ವರ್ಷಗಳಿಂದ ಮುನಿಸ್ವಾಮಪ್ಪ ಕಲ್ಯಾಣ ಮಂಟಪ ಯಶವಂತಪುರದಲ್ಲಿನ ಶ್ರೀ ಮಹಾಗಣಪತಿ ದೇವಸ್ಥಾನದ ಅರ್ಚಕರಾಗಿ ಸೇವೆ ಸಲ್ಲಿಸಿದ್ದಾರೆ.