ಶಹಾಬಾದ : ಕಲಬುರಗಿ ಜಿಲ್ಲೆಯ ಶಹಾಬಾದ ತಾಲೂಕಿನ ಭೂ ನ್ಯಾಯಮಂಡಳಿಯ ಅಧಿಕಾರೇತರ ಸದಸ್ಯರನ್ನಾಗಿ ನಾಮನಿರ್ದೇಶನಗೊಂಡ ಸದಸ್ಯರನ್ನು ತಹಸೀಲ್ದಾರ ಜಗದೀಶ ಚೌರ್ ಅವರು ಅಧಿಕೃತವಾಗಿ ಪ್ರಮಾಣ ಪತ್ರ ನೀಡಿ ಸನ್ಮಾನಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ತಹಸೀಲ್ದಾರ ಜಗದೀಶ ಚೌರ್, ಕರ್ನಾಟಕ ಭೂಸುಧಾರಣೆ ಕಾಯ್ದೆ 1961ರ ಕಲಂ 48ರ ಉಪ ಕಲಂ (1)ರಿಂದ (3)ರಲ್ಲಿ ಪ್ರದತ್ತವಾದ ಅಧಿಕಾರವನ್ನು ಚಲಾಯಿಸಿ ಕಲಬುರಗಿ ಜಿಲ್ಲೆಯ ಶಹಾಬಾದ ತಾಲೂಕಿನ ಭೂ ನ್ಯಾಯಮಂಡಳಿಯ ಸದಸ್ಯರನ್ನಾಗಿ ತೊನಸನಹಳ್ಳಿ(ಎಸ್) ಗ್ರಾಮದ ಶಿವಲಿಂಗಪ್ಪ ಶಿವರಾಯ ಗೊಳೇದ್, ಮರತೂರ ಗ್ರಾಮದ ಬಸವರಾಜ ಶಾಂತಪ್ಪ ಪಾಟೀಲ, ಗೋಳಾ(ಕೆ) ನಿಜಾಮ ಬಜಾರನ ರಘುವೀರಸಿಂಗ ನಾರಾಯಣಸಿಂಘ ವಕೀಲರು, ತರನಳ್ಳಿ ಗ್ರಾಮದ ಸುರೇಶ ಸೀತಾರಾಮ ಜಾಧವ ಅವರನ್ನು ಅಧಿಕಾರೇತರ ಸದಸ್ಯರನ್ನಾಗಿ ನಾಮನಿರ್ದೇಶನ ಮಾಡಿ ಕರ್ನಾಟಕ ರಾಜ್ಯಪಾಲರ ಆಜ್ಞಾನುಸಾರ ಮತ್ತು ಅವರ ಹೆಸರಿನಲ್ಲಿ ಕಂದಾಯ ಇಲಾಖೆ (ಭೂ ಸುಧಾರಣೆ) ಸರ್ಕಾರದ ಅಧೀನ ಕಾರ್ಯದರ್ಶಿ ಗೌರಮ್ಮ.ಆರ್ ಆದೇಶ ಹೊರಡಿಸಿದ್ದಾರೆ ಎಂದು ತಿಳಿಸಿದರು.ಅಲ್ಲದೇ ಮುಂಬರುವ ದಿನಗಳಲ್ಲಿ ಇದಕ್ಕೆ ಸಂಬಂಧಪಟ್ಟಂತೆ ಸಭೆ ನಡೆಸಲಾಗುವುದು ಎಂದರು.
ಈ ಸಂದರ್ಭದಲ್ಲಿ ಗ್ರೇಡ್-2 ತಹಸೀಲ್ದಾರ ಗುರುರಾಜ ಸಂಗಾವಿ,ಕರವೇ ತಾಲೂಕಾಧ್ಯಕ್ಷ ವಿಶ್ವರಾಜ ಫೀರೋಜಾಬಾದ, ಪತ್ರಕರ್ತರಾದ ಲೋಹಿತ್ ಕಟ್ಟಿ, ನಿಂಗಣ್ಣ ಜಂಬಗಿ, ಮಲ್ಕಣ್ಣ ಮುದ್ದಾ ಸೇರಿದಂತೆ ಇತರರು ಇದ್ದರು.
ಈ ಹಿಂದೆ ಚಿತ್ತಾಪೂರ ತಾಲೂಕಿನಿಂದ, ಈ ಬಾರಿ ಶಹಾಬಾದ ತಾಲೂಕಿನ ಭೂ ನ್ಯಾಯಮಂಡಳಿಯ ಸದಸ್ಯರನ್ನಾಗಿ ತೊನಸನಹಳ್ಳಿ(ಎಸ್) ಗ್ರಾಮದ ಶಿವಲಿಂಗಪ್ಪ ಶಿವರಾಯ ಗೊಳೇದ್ ಎರಡನೇ ಬಾರಿ ಸದಸ್ಯರಾಗಿದ್ದಾರೆ.