- ಎಂ.ಡಿ ಮಶಾಖ ಚಿತ್ತಾಪುರ
ಚಿತ್ತಾಪುರ: ಸಂವಿಧಾನ ಪೀಠದ ತೀರ್ಪಿಗೆ ಬದ್ಧವಾಗಿರದೇ ಜಾತಿ ಜನಗಣತಿ ವರದಿ ಬಿಡುಗಡೆ ನೇಪವೋಡ್ಡಿ ಒಳಮೀಸಲಾತಿಗೆ ಪಂಗನಾಮ ಹಾಕುತ್ತಿರುವ ರಾಜ್ಯ ಕಾಂಗ್ರೆಸ್ ಸರ್ಕಾರದ ನಡೆ ಖಂಡಿಸಿ ಪರಿಶಿಷ್ಟ ಜಾತಿಗಳ ಒಳಮೀಸಲಾತಿ ಜಾರಿ ಹೋರಾಟ ಸಮಿತಿ-ಕರ್ನಾಟಕ (ಸಹಯೋಗ-ಮಾದಿಗ ಸಂಘಟನೆಗಳ ಒಕ್ಕೂಟ, ಕರ್ನಾಟಕ) ನೇತೃತ್ವದಲ್ಲಿ ಅ.16 ರಂದು ರಾಜ್ಯಾದ್ಯಂತ ಜಿಲ್ಲಾಧಿಕಾರಿಗಳ ಕಚೇರಿ ಎದುರು ಬೃಹತ್ ಪ್ರತಿಭಟನೆಗೆ ಕರೆ ನೀಡಿದ ಹಿನ್ನೆಲೆಯಲ್ಲಿ ಕಲಬುರಗಿ ಜಿಲ್ಲಾಧಿಕಾರಿ ಕಚೇರಿ ಎದುರುಗಡೆ ಪ್ರತಿಭಟನೆ ಹಮ್ಮಿಕೊಂಡಿದ್ದು ಚಿತ್ತಾಪುರ ತಾಲೂಕಿನಿಂದ 500 ಜನರು ಭಾಗವಹಿಸಲಿದ್ದಾರೆ ಎಂದು ನಗರ ಯೋಜನಾ ಪ್ರಾಧಿಕಾರದ ಮಾಜಿ ಅಧ್ಯಕ್ಷ ದೀಪಕ್ ಹೊಸ್ಸೂರಕರ್ ತಿಳಿಸಿದ್ದಾರೆ.
ಪರಿಶಿಷ್ಟ ಜಾತಿಯಲ್ಲಿ ಒಳ ಮೀಸಲಾತಿಗೆ ರಾಜ್ಯ ಸರ್ಕಾರ ತಕ್ಷಣ ಕ್ರಮ ತೆಗೆದುಕೊಳ್ಳಬೇಕು. ಸಂವಿಧಾನ ಆಶಯಗಳಿಗೆ ಯಾವುದೇ ಧಕ್ಕೆ ಆಗದಂತೆ ಒಳಮೀಸಲಾತಿ ಪ್ರಮಾಣ ನಿಗದಿಪಡಿಸಬೇಕು ಎಂದು ಅವರು ಆಗ್ರಹಿಸಿದ್ದಾರೆ.
ಮಾಜಿ ಮುಖ್ಯಮಂತ್ರಿಗಳಾದ ಬಿ.ಎಸ್.ಯಡಿಯೂರಪ್ಪ ಮತ್ತು ಬಸವರಾಜ ಬೊಮ್ಮಾಯಿ ಹಾಗೂ ಮಾಜಿ ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ ಅವರ ಇಚ್ಛಾಶಕ್ತಿಯಿಂದ ಒಳ ಮೀಸಲಾತಿ ಜಾರಿಗೆ ತೆಗೆದುಕೊಂಡ ನಿರ್ಣಯವನ್ನು ಕಾಂಗ್ರೆಸ್ ಸರ್ಕಾರ ಜಾರಿ ಮಾಡಲಿ. ಪರಿಶಿಷ್ಟ ಜಾತಿ ಮತ್ತು ಪಂಗಡಗಳು ಹಾಗೂ ಹಿಂದುಳಿದವರಿಗೆ ನ್ಯಾಯೋಚಿತವಾಗಿ ಮೀಸಲಾತಿ ವರ್ಗೀಕರಣ ಮಾಡಲಾಗಿದೆ. ಬೊಮ್ಮಾಯಿ ಸರ್ಕಾರ ಕೇಂದ್ರಕ್ಕೆ ನೀಡಿದ ಶಿಫಾರಸನ್ನು ಯಥಾವತ್ತಾಗಿ ಜಾರಿಗೊಳಿಸಬೇಕು ಎಂದು ಒತ್ತಾಯಿಸಿದ್ದಾರೆ.
ಒಳ ಮೀಸಲಾತಿಗೆ ಸಂಬಂಧಿಸಿದಂತೆ ಬಸವರಾಜ ಬೊಮ್ಮಾಯಿ ನೇತೃತ್ವದ ಸರ್ಕಾರ ಅತ್ಯಂತ ಸಮರ್ಪಕವಾದ ನಿರ್ಣಯ ಕೈಗೊಂಡಿತ್ತು. ಈಗಿನ ರಾಜ್ಯ ಸರ್ಕಾರವೂ ಅದನ್ನೇ ಯಥಾವತ್ತಾಗಿ ಜಾರಿ ಮಾಡಬೇಕು ಎನ್ನುವುದು ನನ್ನ ವೈಯಕ್ತಿಕ ಮತ್ತು ಬಿಜೆಪಿ ಪಕ್ಷದ ನಿಲುವೂ ಆಗಿದೆ. ನಮ್ಮ ಸರ್ಕಾರವು ಯಾವ ಸಮುದಾಯಕ್ಕೂ ಅನ್ಯಾಯವಾಗದಂತೆ ಅಳೆದು ತೂಗಿ ಮೀಸಲಾತಿಯನ್ನು ಹಂಚಿಕೆ ಮಾಡಿದೆ. ಇದಕ್ಕಿಂತ ಉತ್ತಮ ರೀತಿಯಲ್ಲಿ ಮೀಸಲಾತಿ ಹಂಚಿಕೆ ಮಾಡುವುದಕ್ಕೆ ಸಾಧ್ಯವಿಲ್ಲ ಎಂದು ತಿಳಿಸಿದ್ದಾರೆ.
ಪರಿಶಿಷ್ಟ ಜಾತಿಯ ಎಡಗೈ ಗುಂಪಿಗೆ ಶೇ 6, ಬಲಗೈ ಗುಂಪಿಗೆ ಶೇ 5.5, ಲಂಬಾಣಿ, ಕೊರಮ, ಕೊರಚ, ಭೋವಿಗಳಿಗೆ ಶೇ 4.5, ಈ ಮೇಲಿನ ಗುಂಪಿಗೆ ಸೇರದ ಜಾತಿಗಳಿಗೆ ಶೇ 1 ಸೇರಿದಂತೆ ಪರಿಶಿಷ್ಟ ಜಾತಿಗೆ ಶೇ 17 ರಷ್ಟು ಮೀಸಲಾತಿ ನೀಡಲಾಗಿದೆ. ಹಿಂದುಳಿದ ವರ್ಗಗಳ ಪ್ರವರ್ಗ 2ಬಿ ಅಡಿಯಲ್ಲಿ ಮುಸ್ಲಿಂ ಸಮುದಾಯಕ್ಕೆ ನೀಡಲಾಗುತ್ತಿದ್ದ ಮೀಸಲಾತಿಯನ್ನು ರದ್ದು ಮಾಡಿ, ಅವರನ್ನು ಆರ್ಥಿಕವಾಗಿ ದುರ್ಬಲ ವರ್ಗಗಳ ಪಟ್ಟಿಗೆ ಸೇರಿಸಲಾಗಿತ್ತು.
ಮುಸ್ಲಿಮರಿಗೆ ನೀಡುತ್ತಿದ್ದ ಶೇ 4 ರಷ್ಟು ಮೀಸಲಾತಿಯನ್ನು ಒಕ್ಕಲಿಗರು, ಲಿಂಗಾಯತರು ಸೇರಿದಂತೆ ಹಲವು ಸಮುದಾಯಗಳಿಗೆ ಹಂಚಿಕೆ ಮಾಡಲಾಗಿದೆ. ಅದೇ ರೀತಿ, ಪ್ರವರ್ಗ 1ಕ್ಕೆ ಶೇ.4, ಪ್ರವರ್ಗ 2ಎ ಗೆ ಶೇ.15, ಪ್ರವರ್ಗ 2ಸಿ ಗೆ ಶೇ.6, ಪ್ರವರ್ಗ 2ಡಿ ಗೆ ಶೇ.7 ಒಟ್ಟು ಶೇ 32 ರಷ್ಟು ಮೀಸಲಾತಿ ಮರು ಹಂಚಿಕೆ ಮಾಡಲಾಗಿದೆ. ನ್ಯಾ.ಎ.ಜೆ.ಸದಾಶಿವ ಆಯೋಗದ ವರದಿಯ ಶಿಫಾರಸಿನ ಬದಲಿಗೆ, 2011ರ ಜನಗಣತಿಗೆ ಅನುಗುಣವಾಗಿ ಅಂದಿನ ಕಾನೂನು ಸಚಿವ ಜೆ.ಸಿ. ಮಾಧುಸ್ವಾಮಿ ಅಧ್ಯಕ್ಷತೆಯ ಸಚಿವ ಸಂಪುಟ ಉಪಸಮಿತಿ ಮಾಡಿದ್ದ ಮೀಸಲಾತಿಯ ಮರುಹಂಚಿಕೆಗೆ ಸಂಪುಟ ಸಭೆ ಒಪ್ಪಿಗೆ ನೀಡಿತ್ತು.
ಕೇಂದ್ರಕ್ಕೂ ಶಿಫಾರಸು ಮಾಡಿತ್ತು. ಸರ್ಕಾರ ಬದಲಾದ ಕಾರಣ ಅದು ಜಾರಿ ಆಗಿಲ್ಲ. ಸಿದ್ದರಾಮಯ್ಯ ನೇತೃತ್ವದ ರಾಜ್ಯ ಸರ್ಕಾರ ಅದನ್ನು ಜಾರಿ ಮಾಡಬೇಕು ಎಂದು ಆಗ್ರಹಿಸಿದ್ದಾರೆ.