ಕಾಲುಬಾಯಿ ರೋಗ ಲಸಿಕೆ ಶಿಬಿರ 24 ರಿಂದ

0
15

ವಾಡಿ: ಪಶುಪಾಲನೆ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆ ಹಾಗೂ ಸ್ಥಳೀಯ ಪಶು ಆರೋಗ್ಯ ಕೇಂದ್ರದ ವತಿಯಿಂದ ಅ.24 ಹಾಗೂ 25 ರಂದು ಎರಡು ದಿನ ವಾಡಿ ವ್ಯಾಪ್ತಿಯ ವಿವಿಧ ಗ್ರಾಮಗಳಲ್ಲಿ ರಾಷ್ಟ್ರೀಯ ಕಾಲುಬಾಯಿ ರೋಗ ನಿಯಂತ್ರಣಾ ಕಾರ್ಯಕ್ರಮ ಆಯೋಜಿಸಲಾಗಿದ್ದು, ಜಾನುವಾರುಗಳಿಗೆ ರೋಗ ನಿರೋಧಕ ಲಸಿಕೆ ಹಾಕಲಾಗುತ್ತಿದೆ ಎಂದು ಸ್ಥಳೀಯ ಪಶು ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ.ಸಂಗಮೇಶ ಬಿರಾದಾರ ತಿಳಿಸಿದ್ದಾರೆ.

ಈ ಕುರಿತು ಮಾಧ್ಯಮಗಳಿಗೆ ಮಾಹಿತಿ ನೀಡಿರುವ ಡಾ.ಸಂಗಮೇಶ ಬಿರಾದಾರ, ೧೬ನೇ ಸುತ್ತಿನ ಲಸಿಕಾ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಗುತ್ತಿದೆ. ವಾಡಿ ವಲಯದ ಒಟ್ಟು ಎಂಟು ಹಳ್ಳಿಗಳನ್ನು ಆಯ್ಕೆ ಮಾಡಿಕೊಳ್ಳಲಾಗಿದ್ದು, ಒಂದು ಹಳ್ಳಿಗೆ ಇಬ್ಬರು ವೈದ್ಯ ಸಿಬ್ಬಂದಿ ಕಾರ್ಯನಿರ್ವಹಿಸಲಿದ್ದಾರೆ. ಅ.೨೪ ರಂದು ವಾಡಿ, ಇಂಗಳಗಿ, ಕುಂದನೂರ, ಚಾಮನೂರು ಹಾಗೂ ಅ.೨೫ ರಂದು ಕಡಬೂರ, ಆಲೂರ, ಕಮರವಾಡಿ ಹಾಗೂ ಸೂಲಹಳ್ಳಿ ಗ್ರಾಮಗಳಲ್ಲಿ ಜಾನುವಾರುಗಳಿಗೆ ಕಾಲುಬಾಯಿ ರೋಗ ನಿಯಂತ್ರಣದ ಲಸಿಕೆ ಹಾಕಲಾಗುತ್ತಿದೆ. ಈ ಕುರಿತು ಗ್ರಾಮಗಳಲ್ಲಿ ಡಂಗೂರ ಸಾರುವ ಮೂಲಕ ವಿಶೇಷವಾಗಿ ಎತ್ತು, ಹೋರಿ, ಆಕಳು ಹಾಗೂ ಎಮ್ಮೆ ಸಾಕಿರುವ ರೈತರಿಗೆ ಲಸಿಕಾ ಕಾರ್ಯಕ್ರಮದ ಮಾಹಿತಿ ನೀಡುವಂತೆ ಸಂಬಂದಿಸಿದ ಗ್ರಾಮಗಳ ಗ್ರಾಪಂ ಅಭಿವೃದ್ಧಿ ಅಧಿಕಾರಿಗಳಿಗೆ ಮಾಹಿತಿ ನೀಡಲಾಗಿದೆ ಎಂದು ತಿಳಿಸಿದರು.

Contact Your\'s Advertisement; 9902492681

ಜಾನುವಾರುಗಳಿಗೆ ತಗಲುವ ಕಾಲುಬಾಯಿ ರೋಗವು ಒಂದು ವೈರಾಣು ರೋಗವಾಗಿದ್ದು, ಲಸಿಕೆ ಹಾಕುವುದೊಂದೇ ರೋಗ ನಿಯಂತ್ರಣಕ್ಕಿರುವ ಏಕೈಕ ಮಾರ್ಗ. ಜಾನುವಾರುಗಳು ಸದ್ಯ ಗುಣಮುಖವಾಗಿದ್ದರೂ ಕೂಡ ಮುಂದೆ ಗರ್ಭಕಟ್ಟುವಿಕೆಯಲ್ಲಿ ವಿಳಂಬ, ಸಾಮಾರ್ಥ್ಯ ಮತ್ತು ಇಳುವರಿಯಲ್ಲಿ ಇಳಿಮುಖವಾಗುವ ಸಾಧ್ಯತೆಯಿರುತ್ತದೆ. ಇದರಿಂದ ರೈತರಿಗೆ ಆರ್ಥಿಕ ನಷ್ಟ ಉಂಟಾಗುತ್ತದೆ. ಹೀಗಾಗಿ ಜಾನುವಾರುಗಳ ಪೂರ್ಣ ಸುರಕ್ಷತೆಗಾಗಿ ಕನಿಷ್ಟ ಎರಡು ಸಲ ಲಸಿಕೆ ಹಾಕಿಸುವುದು ಅತ್ಯಗತ್ಯ. ಕಾರಣ ಜಾನುವಾರು ಸಾಕಾಣಿಕೆ ಮಾಡುತ್ತಿರುವ ರೈತರ ಹಿತದೃಷ್ಠಿಯಿಂದ ಪಶು ಆರೋಗ್ಯ ಇಲಾಖೆ ರಾಷ್ಟ್ರೀಯ ಲಸಿಕಾ ಕಾರ್ಯಕ್ರಮ ಆಯೋಜಿಸಿದ್ದು, ರೈತರು ಇದರ ಲಾಭ ಪಡೆದುಕೊಳ್ಳಬೇಕು ಎಂದು ಡಾ.ಸಂಗಮೇಶ ಕೋರಿದ್ದಾರೆ. ಪಶು ವೈದ್ಯ ಡಾ.ಪಂಪಣ್ಣ ಸಜ್ಜನ್ ಈ ಸಂದರ್ಭದಲ್ಲಿ ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here