ಕಲಬುರಗಿ: ರಾಜ್ಯ ಸರ್ಕಾರವು ಒಳಮೀಸಲಾತಿ ಜಾರಿ ಕುರಿತಾಗಿ ಇದೇ 28ರಂದು ನಡೆಯಲಿರುವ ಸಂಪುಟ ಸಭೆಯಲ್ಲಿ ಚರ್ಚೆ ಮಾಡುವ ನಿರ್ಧಾರ ಕೈಗೊಂಡ ಬೆನ್ನಲ್ಲೇ ಇದೀಗ ರಾಜ್ಯಸಭಾ ವಿಪಕ್ಷ ನಾಯಕ, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ್ ಖರ್ಗೆ ಅವರ ತವರೂರಲ್ಲೇ ಬಲಗೈ ಸಮುದಾಯದಿಂದ ಭಾರೀ ವಿರೋಧ ವ್ಯಕ್ತವಾಗಿದೆ.
ಈ ಕುರಿತಾಗಿ ಮಾತನಾಡಿರುವ ದಲಿತ ಸಮುದಾಯದ ಹಿರಿಯ ಮುಖಂಡ ವಿಠ್ಠಲ್ ದೊಡ್ಡಮನಿ, ಒಳಮೀಸಲಾತಿ ಜಾರಿಗೆಗೆ ಬಲಗೈ ಸಮುದಾಯವು ವಿರೋಧಿಸುತ್ತದೆ, ಒಂದು ವೇಳೆ ಈ ಬಗ್ಗೆ ಕಾಂಗ್ರೆಸ್ ಸರ್ಕಾರ ಕ್ರಮ ಕೈಗೊಳ್ಳಲು ಮುಂದಾದರೆ ಸರ್ವನಾಶವಾಗಲಿದೆ ಎಂದು ಕಿಡಿಕಾರಿದ್ದಾರೆ.
ಒಳಮೀಸಲಾತಿ ನೀಡಬೇಕೆಂದು ಮಾದಿಗ ಸಮುದಾಯ ಬಟ್ಟೆ ಕಳಚಿ ಬೀದಿಯಲ್ಲಿ ಹೋರಾಟ ಮಾಡಿ ನಾಟಕ ಮಾಡುತ್ತಿದೆ, ನಾವು ಆ ರೀತಿ ಮಾಡಲ್ಲ, ಡಾ. ಬಿ.ಆರ್.ಅಂಬೇಡ್ಕರ್ ಅವರ ಆಶಯದಂತೆ ಎಲ್ಲರೂ ಸಮಾಜದಲ್ಲಿ ಬಾಳಬೇಕಾದರೆ ಈ ಮೀಸಲಾತಿ ನೀಡುವುದನ್ನು ಮತ್ತೊಮ್ಮೆ ಪರಿಶೀಲಿಸಲಿ ಮತ್ತು ನ್ಯಾಯಯುತವಾಗಿ ವರ್ಗೀಕರಣ ಮಾಡಬೇಕೆಂದು ಒತ್ತಾಯಿಸಿದ್ದಾರೆ.
ನಮಗೆ 7ರಿಂದ 8 ಪರ್ಸಂಟೇಜ್ ಮೀಸಲಾತಿ ಕೊಡುವುದಾಗಿ ಮಾತುಕತೆ ನಡೆಯುತ್ತಿದೆ. ಇಷ್ಟು ಕೊಡಲಿಕ್ಕೆ ನಾವೇನು ಕೂಲಿ ಮಾಡ್ತಿದ್ದೇವ? ನಮಗೆ 100 ಪರ್ಸಂಟೇಜ್ ಬೇಕು ಎಂದು ಆಗ್ರಹಿಸಿದ್ದಾರೆ.
ಮಲ್ಲಿಕಾರ್ಜುನ್ ಖರ್ಗೆ ಅವರ ಮಾತು ಕೇಳಲ್ಲ, ಜನರು ಅವರನ್ನು ಲೈಕ್ ಮಾಡಿದ್ದಾರೆ. ಹಾಗಾಗಿ ಅವರನ್ನು ಆರಿಸಿ ತಂದಿದ್ದಾರೆ. ಆರಿಸಿ ಬಂದ್ರೆ ಅವರ ಎಲ್ಲ ಮಾತುಗಳು ಕೇಳುತ್ತೀವಿ ಅಂತನಾ? ನಮಗೆ ಬೇಕಾದಷ್ಟು ಮೀಸಲಾತಿಗೆ ಅವರು ಒಪ್ಪಿದರೆ ನಾವು ಖರ್ಗೆ ಅವರ ಮಾತು ಕೇಳುತ್ತೇವೆ. ಇಲ್ಲದಿದ್ದರೆ ಯಾರ ಮಾತೂ ಕೇಳಲ್ಲ ಎಂದು ಗುಡುಗಿದ್ದಾರೆ.