ಕಲಬುರಗಿ; ದಂತ ವೈದ್ಯಕೀಯ ಕ್ಷೇತ್ರದಲ್ಲಿ ಇಂದು ಕ್ರಾಂತಿಕಾರಿ ಬದಲಾವಣೆಯಾಗಿದ್ದು ಹಲವಾರು ಹೊಸ ಹೊಸ ಯಂತ್ರಗಳ ಮೂಲಕ ದಂತ ರೋಗಿಗಳಿಗೆ ಯಶಸ್ವಿ ಚಿಕಿತ್ಸೆ ನೀಡಬಹುದು ಎಂದು ಹೈದರಾಬಾದ್ ಕರ್ನಾಟಕ ಶಿಕ್ಷಣ ಸಂಸ್ಥೆಯ ಆಡಳಿತ ಮಂಡಳಿ ಸದಸ್ಯರು ಹಾಗೂ ದಂತ ಮಹಾವಿದ್ಯಾಲಯ ಸಂಚಾಲಕರಾದ ಡಾ. ಅನಿಲ ಪಟ್ಟಣ ಹೇಳಿದರು.
ಅವರು ಹೈದರಾಬಾದ್ ಕರ್ನಾಟಕ ಶಿಕ್ಷಣ ಸಂಸ್ಥೆಯ ಎಸ್ ನಿಜಲಿಂಗಪ್ಪ ದಂತ ವೈದ್ಯಕೀಯ ಮಹಾವಿದ್ಯಾಲಯದಲ್ಲಿ ಓರಲ್ ಮೆಡಿಸಿನ್ ಮತ್ತು ರೇಡಿಯೋಲಾಜಿ ವಿಭಾಗದಿಂದ ನಡೆದ ವಿಶ್ವ ರೇಡಿಯೋಲಾಜಿ ದಿನದ ಅಂಗವಾಗಿ ಸಿ ಬಿ ಸಿ ಟಿಯ ಕುರಿತ ಒಂದು ದಿನದ ಕಾರ್ಯಾಗಾರ ಉದ್ಘಾಟಿಸಿ ಮಾತನಾಡುತ್ತಿದ್ದರು.
ಹೈದರಾಬಾದ್ ಕರ್ನಾಟಕ ಶಿಕ್ಷಣ ಸಂಸ್ಥೆಯ ಎಸ್ ನಿಜಲಿಂಗಪ್ಪ ದಂತ ಮಹಾವಿದ್ಯಾಲಯವು 1986 ರಲ್ಲಿ ಸ್ಥಾಪನೆಯಾಗಿ ಅಂದಿನಿಂದ ಇಂದಿನವರೆಗೆ ಈ ಭಾಗದಲ್ಲಿ ದಂತ ಚಿಕಿತ್ಸಾ ಸಂಬಂಧಿತ ಕಾಯಿಲೆಗಳಿಗೆ ಅತ್ಯುತ್ತಮವಾಗಿ ಕಾರ್ಯನಿರ್ವಹಿಸುತ್ತಿದೆ. ಸಂಸ್ಥೆಯು ಅಧುನಿಕ ಉಪಕರಣ ಖರೀದಿಸಿ ಉತ್ತಮ ಆರೋಗ್ಯ ಸೇವೆಯನ್ನು ನೀಡಲಾಗುತ್ತಿದೆ ಎಂದು ಹೇಳಿದರು.
ಅತ್ಯಾಧುನಿಕ ಸಿಬಿಸಿಟಿ ಉಪಕರಣ ಅಳವಡಿಕೆ : ಜಿಲ್ಲೆಯಲ್ಲಿ ಪ್ರಥಮ ಬಾರಿಗೆ ಅತ್ಯಾಧುನಿಕ ಸಿಬಿಸಿಟಿ ಉಪಕರಣ ಖರೀದಿಸಿದ್ದು, ಇಂತಹ ಉಪಕರಣ ಹೊಂದಿರುವ ಜಿಲ್ಲೆಯಲ್ಲಿ ಏಕೈಕ ದಂತ ಆಸ್ಪತ್ರೆ ಇದಾಗಿದೆ. ಇದು ಮುಖದ ಪೂರ್ಣ ಭಾಗವನ್ನು ಪರೀಕ್ಷೆ ಮಾಡಲು ಹೆಚ್ಚು ಅನುಕೂಲವಾಗಲಿದೆ ಎಂದು ತಿಳಿಸಿದರು.
ನಂತರ ಮಾತನಾಡಿದ ಹೈದರಾಬಾದ್ ಕರ್ನಾಟಕ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ಶ್ರೀ ಉದಯಕುಮಾರ್ ಚಿಂಚೋಳಿ ಈ ಕಾರ್ಯಾಗಾರದಲ್ಲಿ ಭಾಗವಹಿಸಿದ ದಂತ ವೈದ್ಯಕೀಯ ವಿದ್ಯಾರ್ಥಿಗಳು ಸಂಪನ್ಮೂಲ ವ್ಯಕ್ತಿಗಳ ಸಲಹೆಗಳನ್ನು ಪಡೆದುಕೊಂಡು ತಮ್ಮ ವೃತ್ತಿ ಜೀವನದಲ್ಲಿ ಅಳವಡಿಸಿಕೊಳ್ಳಲು ಸಲಹೆ ನೀಡಿದರು.
ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಹಾಗೂ ಕಾರ್ಯಾಗಾರದ ಸಂಪನ್ಮೂಲ ವ್ಯಕ್ತಿಗಳಾಗಿರುವ ಬೆಂಗಳೂರು ರಾಜರಾಜೇಶ್ವರಿ ದಂತ ವೈದ್ಯಕೀಯ ಮಹಾವಿದ್ಯಾಲಯದ ಡಾ ಮಹೇಶ್ ಕುಮಾರ್ ಟಿ ಎಸ್ ಉಪಸ್ಥಿತರಿದ್ದರ. ಕಾರ್ಯಕ್ರಮದ ಅಧ್ಯಕ್ಷತೆಯನ್ನು ದಂತ ಕಾಲೇಜಿನ ಪ್ರಾಚಾರ್ಯರಾದ ಡಾ ಜಯಶ್ರೀ ಮುದ್ದಾ ವಹಿಸಿದ್ದರು, ಕಾಲೇಜಿನ ಉಪ ಪ್ರಾಚಾರ್ಯರಾದ ಡಾ ವೀರೆಂದ್ರ ಪಾಟೀಲ್ ವೇದಿಕೆಯ ಮೇಲೆ ಉಪಸ್ಥಿತರಿದ್ದರು. ಡಾ ಶಿವಪ್ರಸಾದ್ ತೋರಣ ಪ್ರಾಸ್ತಾವಿಕವಾಗಿ ಮಾತನಾಡಿದರು
ಕಾರ್ಯಕ್ರಮದ ಸಂಘಟನಾ ಕಾರ್ಯದರ್ಶಿ ಓರಲ್ ಮೆಡಿಸಿನ್ ಮತ್ತು ರೇಡಿಯೋಲಾಜಿ ವಿಭಾಗದ ಮುಖ್ಯಸ್ಥೆ ಡಾ ಪಲ್ಲವಿ ದೇಶಮುಖ್ ಸ್ವಾಗತಿಸಿದರು. ವಿದ್ಯಾರ್ಥಿನಿ ಡಾ ಪೂರ್ವಿ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.ಮಹಾವಿದ್ಯಾಲಯದ ಎಲ್ಲ ವಿಭಾಗಗಳ ಮುಖ್ಯಸ್ಥರು ಹಾಗೂ ಪ್ರಾಧ್ಯಾಪಕರು ಹಾಜರಿದ್ದರು.