ಕಲಬುರಗಿ; ಕರ್ನಾಟಕ ಲೋಕಾಯುಕ್ತ ಸಂಸ್ಥೆಯ ಉಪ ಲೋಕಾಯುಕ್ತ ನ್ಯಾ.ಬಿ.ವೀರಪ್ಪ ಅವರು ನವೆಂಬರ್ 15 ರಂದು ಶುಕ್ರವಾರ ಕಲಬುರಗಿ ನಗರದ ಡಾ.ಎಸ್.ಎಂ. ಪಂಡಿತ್ ರಂಗಮಂದಿರದಲ್ಲಿ ಬೆಳಿಗ್ಗೆ 10 ರಿಂದ ಮಧ್ಯಾಹ್ನ 1.30 ಮತ್ತು ಮಧ್ಯಾಹ್ನ 2.30 ರಿಂದ ಸಂಜೆ 5 ಗಂಟೆ ವರೆಗೆ ಸಾರ್ವಜನಿಕ ಕುಂದುಕೊರತೆಗಳ ಅಹವಾಲು ಸ್ವೀಕಾರ ಮತ್ತು ವಿಚಾರಣೆ ನಡೆಸಲಿದ್ದಾರೆ. ಆದ್ದರಿಂದ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ತಮ್ಮ ಅಹವಾಲುಗಳಲ್ಲಿ ಸಲ್ಲಿಸಬೇಕೆಂದು ಕರ್ನಾಟಕ ಲೋಕಾಯುಕ್ತ ಕಲಬುರಗಿ ಎಸ್.ಪಿ. ಉಮೇಶ ಬಿ.ಕೆ. ಅವರು ತಿಳಿಸಿದ್ದಾರೆ.
ಅಹವಾಲು ಸ್ವೀಕಾರ ಕಾರ್ಯಕ್ರಮದಲ್ಲಿ ಜಿಲ್ಲೆಯಲ್ಲಿ ಯಾರಿಗಾದರು ಸರ್ಕಾರಿ ಅಧಿಕಾರಿ-ನೌಕರರಿಂದ ಕಾನೂನು ರೀತ್ಯಾ ಆಗಬೇಕಾದ ಕೆಲಸದಲ್ಲಿ ವಿಳಂಬವಾಗಿದಲ್ಲಿ ಅಥವಾ ಅಧಿಕಾರಿ/ನೌಕರರು ನ್ಯಾಯಯುತವಾಗಿ ಮಾಡಿಕೊಡಬೇಕಾದ ಕೆಲಸಗಳಲ್ಲಿ ವೃಥಾ ತೊಂದರೆ ಕೊಡುವುದು ಅಥವಾ ಇನ್ಯಾವುದೇ ತರಹದ ಭ್ರಷ್ಟಾಚಾರ ಮತ್ತು ದುರಾಡಳಿತದಲ್ಲಿ ತೊಡಗಿದ್ದರೆ ತೊಂದರೆಗೊಳಗಾದ ಸಾರ್ವಜನಿಕರು ಉಪ ಲೋಕಾಯುಕ್ತರ ಮುಂದೆ ತಮ್ಮ ಅಹವಾಲುಗಳನ್ನು ಲಿಖಿತ ರೂಪದಲ್ಲಿ ಸಲ್ಲಿಸಬಹುದಾಗಿದೆ ಎಂದು ಅವರು ತಿಳಿಸಿದ್ದಾರೆ.